ಕೋಲ್ಕತ್ತಾ ಜ 17, 2025 : ಕಳೆದ ವರ್ಷ ಆಗಸ್ಟ್‌ನಲ್ಲಿ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೀಲ್ದಾ ನ್ಯಾಯಾಲಯವು ಶನಿವಾರ ತನ್ನ ತೀರ್ಪನ್ನು ನೀಡಲಿದೆ. ಜನವರಿ 18 ರಂದು ನ್ಯಾಯಾಧೀಶರು ತೀರ್ಪು ನೀಡಲಿದ್ದಾರೆ. ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಆರ್‌ಜಿ ಕಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಕೊಲ್ಕತ್ತಾ ಹೈಕೋರ್ಟ್ ಕೊಲ್ಕತ್ತಾ ಪೊಲೀಸರಿಂದ ಕೇಂದ್ರೀಯ ತನಿಖಾ ದಳ (CBI) ಗೆ ಹಸ್ತಾಂತರಿಸಿತ್ತು.
ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿ ಸಂಜಯ್‌ಗೆ ಮರಣದಂಡನೆ ನೀಡುವಂತೆ ಸಿಬಿಐ ಕೋರಿದೆ. ಅತ್ಯಾಚಾರ ಪ್ರಕರಣದ ಜೊತೆಗೆ ಕಾಲೇಜಿನಲ್ಲಾದ ಅವ್ಯವಹಾರದ ವಿರುದ್ಧವೂ ತನಿಖೆ ನಡೆಯುತ್ತಿದೆ. ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಡಾ. ಆಶಿಶ್ ಕುಮಾರ್ ಪಾಂಡೆ, ಬಿಪ್ಲಬ್ ಸಿಂಘಾ, ಸುಮನ್ ಹಜ್ರಾ ಮತ್ತು ಅಫ್ಸರ್ ಅಲಿ ಖಾನ್ ಸೇರಿದಂತೆ ಇತರರನ್ನು ಹಣಕಾಸಿನ ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಈ ಕುರಿತಾಗಿಯೂ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ.
ಈ ಬಗ್ಗೆ ಮೃತ ಸಂತ್ರಸ್ತೆಯ ತಂದೆ ಮಾತನಾಡಿ ನ್ಯಾಯಯುತ ತೀರ್ಪು ಬರುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯವು ಸರಿಯಾದ ತನಿಖೆ ನಡೆಸಿ ತೀರ್ಪು ನೀಡುತ್ತದೆ. ಸಿಬಿಐ ಕೂಡ ತನಿಖೆ ನಡೆಸಿದೆ. ಆರೋಪಿ ಕೇವಲ ಒಬ್ಬ ಮಾತ್ರ ಅಲ್ಲ. ಇನ್ನೂ ಹಲವಾರು ಜನರು ಭಾಗಿಯಾಗಿರುವ ಶಂಕೆ ಇದೆ. ಅದು ಡಿಎನ್‌ಎ ವರದಿಯಲ್ಲೂ ಬಹಿರಂಗವಾಗಲಿದೆ. ನಮಗೆ ನನ್ನ ಮಗಳಿಗೆ ನಿಜವಾದ ನ್ಯಾಯ ಬೇಕು. ನಾವು ಎಲ್ಲಿ ಬೇಕಾದರೂ ಹೋಗುತ್ತೇವೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Sukhbir Singh Badal: ಸುಖಬೀರ್ ಬಾದಲ್ ಹತ್ಯೆ ಯತ್ನದ ಹಿಂದೆ ಖಲಿಸ್ತಾನಿಗಳ ಕೈವಾಡ! ಬಂಧಿತ ನರೇನ್ ಸಿಂಗ್ ಚೌರ ಯಾರು?
ಘಟನೆ ಏನು?
ಆಗಸ್ಟ್ 9 ರಂದು ಕೊಲ್ಕತ್ತಾದ ಆರ್‌ಜಿಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಕಿರಿಯ ವೈದ್ಯೆಯ ಶವ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆಯನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಆರ್‌ಜಿಕರ್ ಕಾಲೇಜಿನ ವೈದ್ಯರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದರು. ಕೊಲ್ಕತ್ತಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಭಟನಾ ನಿರತರರ ಜೊತೆಗೆ ಮಾತನಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದರು.