Stabbing: ಇಂದಿರಾನಗರದಲ್ಲಿ ರೌಡಿಶೀಟರ್ ಅಟ್ಟಹಾಸ, ಸಿಕ್ಕಸಿಕ್ಕವರಿಗೆ ಚೂರಿ ಇರಿತ
ಹಲ್ಲೆ, ಸುಲಿಗೆ ಕೃತ್ಯಗಳಲ್ಲಿ ಕುಖ್ಯಾತಿ ಗಳಿಸಿದ್ದ ಕದಂಬನ ವಿರುದ್ಧ 2024ರಲ್ಲಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು. ಜೈಲಿನಿಂದ ರಿಲೀಸ್ ಆಗಿ ಹೊರಗಡೆ ಬಂದಿರುವ ಕದಂಬನ ಸರಣಿ ಅಪರಾಧ ಕೃತ್ಯಗಳು ಆತಂಕಕ್ಕೆ ಎಡೆ ಮಾಡಿಕೊಟ್ಟಿವೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್‌ಗಳ (Rowdy Sheeter) ಪುಂಡಾಟ ಹೆಚ್ಚಾಗಿದ್ದು, ಪೊಲೀಸರ ಭಯವಿಲ್ಲದೆ ವರ್ತಿಸುತ್ತಿದ್ದಾರೆ. ಇಂದಿರಾನಗರದಲ್ಲಿ (Indiranagar) ರೌಡಿ ಶೀಟರ್ ಒಬ್ಬ ಸಿಕ್ಕ ಸಿಕ್ಕವರ ಮೇಲೆ ಚೂರಿಯಿಂದ ಹಲ್ಲೆ (Stabbing) ನಡೆಸಿ ಆತಂಕ ಮೂಡಿಸಿದ್ದಾನೆ. ಶನಿವಾರ ರಾತ್ರಿಯಿಂದ ಐದು ಗಂಟೆಗಳಲ್ಲಿ ನಾಲ್ವರ ಮೇಲೆ ದಾಳಿ (Assault Case) ನಡೆಸಲಾಗಿದೆ. ಹಲ್ಲೆಗೊಳಗಾದ ನಾಲ್ವರ ಪೈಕಿ ಇಬ್ಬರು ಪಾನಿಪುರಿ ಮಾರಾಟಗಾರರಾಗಿದ್ದರೆ, ಉಳಿದ ಇಬ್ಬರು ಲಿಫ್ಟ್ ನೀಡಲು ನಿರಾಕರಿಸಿದ ಹಿನ್ನೆಲೆ ದಾಳಿಗೊಳಗಾಗಿದ್ದಾರೆ.
ನಾಲ್ವರೂ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಿರುದ್ಧ ಪೊಲೀಸರು ಮೂರು ಕೊಲೆ ಯತ್ನ ಪ್ರಕರಣಗಳು ಮತ್ತು ದರೋಡೆ ಪ್ರಕರಣ ದಾಖಲಿಸಿದ್ದಾರೆ. ನಾಲ್ವರ ಮೇಲೆ ದಾಳಿ ನಡೆಸಿರುವ ಆರೋಪಿಯನ್ನು ಭಿನ್ನಮಂಗಲ ನಿವಾಸಿ ಕದಂಬ ಎಂದು ಗುರ್ತಿಸಲಾಗಿದೆ.
ಈತ ಹಲ್ಲೆ, ಸುಲಿಗೆ ಕೃತ್ಯಗಳಲ್ಲಿ ಕುಖ್ಯಾತಿ ಗಳಿಸಿದ್ದು, 2024ರಲ್ಲಿ ಇಂದಿರಾನಗರ ಠಾಣೆಯಲ್ಲಿ ಕದಂಬ ವಿರುದ್ಧ ರೌಡಿಶೀಟ್ ತೆರೆಯಲಾಗಿತ್ತು. ಜೈಲೂಟ ಮುಗಿಸಿ ಹೊರಗಡೆಯಿರುವ ಕದಂಬನ ಸರಣಿ ಕೃತ್ಯಗಳು ಆತಂಕಕ್ಕೆ ಎಡೆ ಮಾಡಿಕೊಟ್ಟಿವೆ. ಇಂದಿರಾನಗರದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಸ್ಥಳೀಯರು ಮತ್ತು ಅಂಗಡಿ ಮಾರಾಟಗಾರರನ್ನು ಬೆದರಿಸುವಲ್ಲಿ ತೊಡಗಿದ್ದ ಎಂದು ತಿಳಿದುಬಂದಿದೆ.
ಪ್ರಸ್ತುತ ದಾಳಿಗೊಳಗಾದ ನಾಲ್ವರನ್ನು ಇಂದಿರಾನಗರದ ಮೋಟಪ್ಪನಪಾಳ್ಯದ ನಿವಾಸಿ ಮತ್ತು ಪ್ರಯಾಗರಾಜ್‌ನ 24 ವರ್ಷದ ದೀಪಕ್ ಕುಮಾರ್ ವರ್ಮಾ, ಇಂದಿರಾನಗರದ ಅಪ್ಪಾ ರೆಡ್ಡಿ ಪಾಳ್ಯದ ನಿವಾಸಿ 44 ವರ್ಷದ ಎಂ. ತಮ್ಮಯ್ಯ, ಮಾಗಡಿ ರಸ್ತೆಯ ಚೋಳರಪಾಳ್ಯದ 24 ವರ್ಷದ ಎ. ಆದಿಲ್ ಮತ್ತು ಇಂದಿರಾನಗರದ ನಿವಾಸಿ 19 ವರ್ಷದ ಪಿ. ಜಸವಂತ್ ಎಂದು ಗುರುತಿಸಲಾಗಿದೆ. ವರ್ಮಾ ಮತ್ತು ತಮ್ಮಯ್ಯ ಪಾನಿ ಪುರಿ ಮಾರಾಟಗಾರರಾಗಿದ್ದಾರೆ.
ಶನಿವಾರ ರಾತ್ರಿ 9.30 ರ ಸುಮಾರಿಗೆ ಜಸ್ವಂತ್ ಎಂಬುವವರು, ಶುದ್ಧ ನೀರಿನ ಘಟಕದಿಂದ ನೀರು ತರಲು ದ್ವಿಚಕ್ರ ವಾಹನದಲ್ಲಿ ಇಂದಿರಾನಗರದ ಆರನೇ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯದಲ್ಲಿ ಅವರನ್ನು ತಡೆದಿದ್ದ ಆರೋಪಿ, ದ್ವಿಚಕ್ರ ವಾಹನದ ಹಿಂದೆ ಕುಳಿತು ವಾಹನವನ್ನು ಮುಂದಕ್ಕೆ ಚಲಿಸುವಂತೆ ಸೂಚಿಸಿದ್ದ. ಸ್ವಲ್ಪ ದೂರ ಹೋದ ಬಳಿಕ ನಾನು ಹೇಳಿದ ಕಡೆಗೆ ಹೋಗಬೇಕು ಎಂದಿದ್ದ. ಇದಕ್ಕೊಪ್ಪದ ಜಸ್ವಂತ್, ಕುತ್ತಿಗೆಗೆ ಇರಿದು ಬೈಕ್ ಇಳಿದು ಓಡಿದ್ದ.
ನಂತರ ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಪಾನಿಪೂರಿ ಅಂಗಡಿಗೆ ಬಂದ ಆರೋಪಿ, ಒಂದು ಪ್ಲೇಟ್ ಪಾನಿಪೂರಿ ನೀಡುವಂತೆ ಕೇಳಿದ್ದ. ‘ಪಾನಿಪೂರಿಯ ಮಸಾಲೆ ಖಾಲಿಯಾಗಿದೆ’ ಎಂದು ವರ್ಮಾ ಅವರು ಹೇಳಿದ್ದರು. ಗ್ರಾಹಕರು ಹೋದ ಬಳಿಕ ವರ್ಮಾ ಅವರ ಕುತ್ತಿಗೆಗೆ ಇರಿದಿದ್ದಾನೆ.
ಬಳಿಕ ಇಂದಿರಾನಗರ 100 ಅಡಿ ರಸ್ತೆಯಲ್ಲಿರುವ ತಮ್ಮಯ್ಯ ಅವರ ಅಂಗಡಿಗೆ ಹೋಗಿರುವ ಆರೋಪಿ, ಪಾನಿಪುರಿ ಕೇಳಿದ್ದಾನೆ. ಬಳಿಕ ‘ಹಣ ನೀಡಲು ಸ್ಕ್ಯಾನರ್ ಎಲ್ಲಿದೆ’ ಎಂದು ಕೇಳಿದ್ದಾನೆ. ಸ್ಕ್ಯಾನರ್ ಕೊಟ್ಟ ಬಳಿಕ, ಸುಮ್ಮನೆ ಹಿಡಿದುಕೊಂಡು ನಿಂತಿದ್ದ. ಪಾನಿಪೂರಿ ತಿಂದ ಬಳಿಕವೇ ಹಣ ನೀಡುವಂತೆ ತಮ್ಮಯ್ಯ ಹೇಳಿದ್ದರು. ಈ ಮಾತಿನಿಂದ ಕುಪಿತಗೊಂಡಿದ್ದ ಆರೋಪಿ, ‘ನಾನೇನು ಸುಮ್ಮನೇ ಪಾನಿಪೂರಿ ತಿನ್ನಲು ಬಂದಿಲ್ಲ’ ಎಂದು ಹೇಳಿ ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ’ ಎಂದು ಮೂಲಗಳು ಹೇಳಿವೆ.
ತಡರಾತ್ರಿ 2 ಗಂಟೆ ಸುಮಾರಿಗೆ 80 ಅಡಿ ರಸ್ತೆಯಲ್ಲಿ ಡೆಲಿವರಿ ಬಾಯ್ ಆದಿಲ್ ಬೈಕ್ ಅಡ್ಡಗಟ್ಟಿದ್ದ ಕದಂಬ, ಕೆ.ಆರ್. ಪುರ ರೈಲ್ವೆ ನಿಲ್ದಾಣಕ್ಕೆ ಬಿಡುವಂತೆ ಕೇಳಿದ್ದ. ಡ್ರಾಪ್ ಕೊಡಲು ನಿರಾಕರಿಸಿದ ಆದಿಲ್‌ಗೆ ಸ್ವಲ್ಪ ಹಿಂದೆ ನೋಡು ಎಂದಿದ್ದ. ಬಳಿಕ ಆದಿಲ್ ಕುತ್ತಿಗೆ ಹಾಗೂ ಕೈಗೆ ಇರಿದ ಕದಂಬ, ಮೊಬೈಲ್ ಕಸಿದು ಬೈಕ್ ಸಮೇತ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ.
ಘಟನೆ ಬೆನ್ನಲ್ಲೇ ಇಂದಿರಾನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ʼಸೀರಿಯಲ್ ಕಿಲ್ಲರ್ ಆಗಮಿಸಿದ್ದಾನೆ ಎಚ್ಚರ!ʼ ಎಂಬ ಬರಹದ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಇಂದಿರಾನಗರ ಪೊಲೀಸರು ಸ್ಪಷ್ಟನೆ ನೀಡಿದ್ದು, ನಗರದಲ್ಲಿ ಯಾವ ಸೀರಿಯಲ್ ಕಿಲ್ಲರೂ ಇಲ್ಲ. ಇದು ರೌಡಿಶೀಟರ್ ಕದಂಬನ ಕೃತ್ಯ ಎಂದು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಕ್ರಮ ವಹಿಸಲಾಗಿದೆ. ನಾಗರಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. ಚಾಕು ಇರಿತಕ್ಕೆ ಒಳಗಾದವರು ಚಿಕಿತ್ಸೆ ಪಡೆದುಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆರೋಪಿ ಕದಂಬನ ಬಂಧನಕ್ಕೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Kolkata Horrror: 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ: ಆರೋಪಿ ಅರೆಸ್ಟ್!