ಮುಂಬೈ : ನಟ ಸೈಫ್ ಅಲಿ ಖಾನ್ (Saif ali khan) ಅವರ ಮನೆ ಮೇಲೆ ದಾಳಿ ನಡೆಸಿ ಅವರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯನ್ನು ಭಾನುವಾರ ಬೆಳಗ್ಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಮೊಹಮ್ಮದ್ ಷರೀಫ್ ಉಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದ್ದು, ಆತ ಬಾಂಗ್ಲಾದೇಶದ ಪ್ರಜೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಸೈಫ್ ಅಲಿ ಖಾನ್ ಅವರ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಆರೋಪವೊಂದು ಭುಗಿಲೆದ್ದಿದ್ದು, ಸಿಸಿಟಿವಿಯಲ್ಲಿ ಇರುವ ವ್ಯಕ್ತಿಯೇ ಬೇರೆ, ಪೊಲೀಸರು ತಪ್ಪಾದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದ ವ್ಯಕ್ತಿಯ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಇದೀಗ ಬಂಧಿತನಾಗಿರುವ ಆರೋಪಿ ಆ ವ್ಯಕ್ತಿಗೆ ಹೋಲುವುದಿಲ್ಲ ಎಂಬ ಚರ್ಚೆ ಶುರುವಾಗಿದೆ. ಎಕ್ಸ್‌ನಲ್ಲಿ ಪರಸ್ಪರ ಪಕ್ಕದಲ್ಲಿರುವ ಎರಡೂ ಫೋಟೋಗಳನ್ನು ಪೋಸ್ಟ್ ಮಾಡಿದ ಬಳಕೆದಾರರು, ಸೈಫ್ ಅಲಿ ಖಾನ್ ಇರಿತ ಪ್ರಕರಣದಲ್ಲಿ ಮುಂಬೈ ಪೊಲೀಸರು ದಾಳಿಕೋರನನ್ನು ಬಂಧಿಸಲಿಲ್ಲ. ಆದರೆ ಬೇರೊಬ್ಬರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Saif Ali Khan: ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿದ್ದ ಆರೋಪಿಯ ಹಿನ್ನಲೆಯೇನು? ಯಾರೀತ ?
ಇದಕ್ಕೆ ಕಮೆಂಟ್ ಮಾಡಿರುವ ಕೆಲ ವ್ಯಕ್ತಿಗಳು ಮುಂಬೈ ಪೊಲೀಸರು ಗೊಂದಲಕ್ಕೊಳಗಾಗಿದ್ದಾರೆ! ಅವರಿಬ್ಬರೂ ಒಂದೇ ವ್ಯಕ್ತಿಯಲ್ಲ. ಯಾವುದೇ ಹೋಲಿಕೆ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಕಮೆಂಟ್ ಮಾಡಿ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳು ಎಂದು ಚಿಕ್ಕ ಮಗೂ ಕೂಡ ಹೇಳುತ್ತದೆ. ಆದರೆ ಅದು ಮುಂಬೈ ಪೊಲೀಸರಿಗೆ ಮಾತ್ರ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಜ.16 ರಂದು ನಟ ಸೈಫ್ ಅಲಿ ಖಾನ್ ಮನೆ ಮೇಲೆ ಸುಮಾರು ಮಧ್ಯರಾತ್ರಿ 2.30 ರ ಸಮಯಕ್ಕೆ ಆರೋಪಿ ದಾಳಿ ನಡೆಸಿದ್ದ. ಸೈಫ್ ಅವರ ಕಿರಿಯ ಮಗ ಜಹಾಂಗೀರ್ ಅವರ ಕೋಣೆಗೆ ನುಗ್ಗಲು ಪ್ರಯತ್ನಿಸಿದ್ದ. ನಂತರ ಸೈಫ್ ಅಲಿ ಖಾನ್ ಅವರಿಗೆ ಎಚ್ಚರವಾಗಿ ಆತನನ್ನು ತಡೆಯಲು ಪ್ರಯತ್ನಪಟ್ಟಿದ್ದರು. ಆ ವೇಳೆ ಆರೋಪಿ ನಟನಿಗೆ ಹರಿತವಾದ ಚಾಕುವಿನಿಂದ ಇರಿದಿದ್ದಾನೆ. ತಕ್ಷಣವೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಅವರು ಚೇತರಿಕೆ ಕಂಡಿದ್ದಾರೆ.