SDM Ayurvedic College: ಆಯುರ್ವೇದದಲ್ಲಿ ಎಲ್ಲಾ ರೋಗಗಳಿಗೂ ಔಷಧವಿದೆ - ಸುಬುಧೇಂದ್ರತೀರ್ಥ ಶ್ರೀಪಾದರು
ಉಡುಪಿ ಸಮೀಪದ ಉದ್ಯಾವರದ ಕುತ್ಪಾಡಿಯಲ್ಲಿರುವ ಎಸ್.ಡಿ.ಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕ್ಯಾಂಪಸ್ನಲ್ಲಿ ನೂತನ ಕಟ್ಟಡವನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠಾಧೀಶರಾದ ಸುಬುಧೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಉಡುಪಿ: ಆಯುರ್ವೇದದಲ್ಲಿ (Ayurveda) ಎಲ್ಲಾ ರೋಗಗಳಿಗೂ ಔಷಧವಿದೆ. ಆದರೆ ಆಧುನಿಕ ವೈದ್ಯ ಪದ್ಧತಿಯ ಮೋಹದಿಂದ ನಾವಿಂದು ಆಯುರ್ವೇದವನ್ನು ಮರೆತಿದ್ದೇವೆ. ಆದರೆ, ಎಸ್.ಡಿ.ಎಂ. ನಂತಹ (SDM) ಸಂಸ್ಥೆಗಳ ಮೂಲಕ ಆಯುರ್ವೇದ ಚಿಕಿತ್ಸಾ ಪದ್ಧತಿ ಇನ್ನಷ್ಟು ಜನಪ್ರಿಯತೆ ಪಡೆಯುತ್ತಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠಾಧೀಶರಾದ ಸುಬುಧೇಂದ್ರತೀರ್ಥ ಶ್ರೀಪಾದರು (Subudhendra Teertha Swamiji) ಹೇಳಿದರು.
ಅವರು, ಉದ್ಯಾವರ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕ್ಯಾಂಪಸ್‌ನಲ್ಲಿ ಜ.31ರಂದು ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಆಶಿರ್ವಚನ ನೀಡಿ ಮಾತನಾಡುತ್ತಿದ್ದರು.
ಶ್ರೀ ಕ್ಷೇತ್ರದ ಧರ್ಮಸ್ಥಳವು ಸಂಸ್ಕೃತಿ, ಧರ್ಮ, ಶಿಕ್ಷಣ ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿ ಸಹಿತ ಹಲವು ಆಯಾಮಗಳಲ್ಲಿ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಡಾ ಡಿ. ವೀರೇಂದ್ರ ಹೆಗ್ಗಡೆಯವರು ಮಾದರಿ ಶಿಕ್ಷಣ ಸಂಸ್ಥೆಯನ್ನು ಸಮಾಜಕ್ಕೆ ನೀಡಿದ್ದಾರೆ. ಆಯುರ್ವೇದ ಚಿಕಿತ್ಸಾ ಪದ್ಧತಿ ಅತಿ ಪುರಾತನವಾದುದು, ಇದರಿಂದ ಯಾವುದೇ ಅಡ್ಡ ಪರಿಣಾಮವೂ ಇಲ್ಲ ಮತ್ತು ಇದು ರೋಗವನ್ನು ಮೂಲದಿಂದಲೇ ವಾಸಿ ಮಾಡುತ್ತದೆ. ಶಾಸ್ತ್ರೀಯವಾಗಿ ಆಯುರ್ವೇದ ಪದ್ಧತಿಯ ಅಧ್ಯಯನ ಹೆಚ್ಚಾಗಬೇಕು ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivasa Poojari) ಮಾತನಾಡಿ, ಶಿಕ್ಷಣ, ಆರೋಗ್ಯ ಮತ್ತು ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಮಾಜದ ನಿರ್ಮಾಣ ಸಾಧ್ಯ ಎಂಬುದನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತೋರಿಸಿಕೊಟ್ಟಿದ್ದಾರೆ. ಧಾರ್ಮಿಕ, ಶೈಕ್ಷಣಿಕವಾಗಿ ಶಕ್ತಿಯುತ ಸಮಾಜ ನಿರ್ಮಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ಭಾರತೀಯ ವೈದ್ಯಕೀಯ ಪದ್ಧತಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಡಾ. ಶ್ರೀನಿವಾಸ ಪ್ರಸಾದ್ ಬುದೂರು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಡಾ ಧನಂಜಯ ಸರ್ಜಿ ಮಾತನಾಡಿ, ಎಸ್‌ಡಿಎಂ ಕಾರ್ಯಸಾಧನೆಯನ್ನು ಶ್ಲಾಘಿಸಿದರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಳುಹಿಸಿದ್ದ ಸಂದೇಶವನ್ನು ಸಭೆಯಲ್ಲಿ ಓದಲಾಯಿತು.
ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಡಿ. ವೀರೇಂದ್ರ ಹೆಗ್ಗಡೆ (Dr D Veerendra Heggade) ಅಧ್ಯಕ್ಷತೆ ವಹಿಸಿ ಮಾತನಾಡಿ, ಆಯುರ್ವೇದ ಅತ್ಯಂತ ಪ್ರಾಚೀನ ವೈದ್ಯ ಪದ್ಧತಿ. ಹಿಂದೆಲ್ಲ ಯುದ್ಧದ ಸಂದರ್ಭಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆಯನ್ನು ಇದೇ ಪದ್ಧತಿ ಮೂಲಕ ನೀಡುತ್ತಿದ್ದರು. ಆಯುರ್ವೇದವನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು. ಈ ಮೊದಲು ಆಯುರ್ವೇದವನ್ನು ಶೈಕ್ಷಣಿಕವಾಗಿ ಸರಿಯಾಗಿ ಕಲಿಯುವ ಅವಕಾಶ ಇರಲಿಲ್ಲ. ಈಗ ಯಾರು ಬೇಕಾದರೂ ಆಯುರ್ವೇದವನ್ನು ಕಲಿಯುವ ಅವಕಾಶಗಳಿವೆ. ಕೊರೊನಾ ಸಂದರ್ಭದಲ್ಲಿ ಆಯುರ್ವೇದ ಮಹತ್ತರ ಪಾತ್ರ ವಹಿಸಿತ್ತು. ಪ್ರಸ್ತುತ ಜನರಲ್ಲಿ ಆಯುರ್ವೇದದ ಬಗ್ಗೆ ಸಾಕಷ್ಟು ಅರಿವು ಮೂಡಿದೆ ಎಂದು ಹೇಳಿದರು.
ಇದನ್ನೂ ಓದಿ: Health tips: ತೂಕ ಇಳಿಸಬೇಕೇ? ಇಲ್ಲಿವೆ ರುಚಿಯಾದ ಚಟ್ನಿಗಳು!
ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ, ಶಿಕ್ಷಣ, ವೈದ್ಯಕೀಯ, ಯೋಗ, ಭಜನೆ ಹೀಗೆ ಎಲ್ಲ ಕ್ಷೇತ್ರಕ್ಕೂ ಶ್ರೀ ಕ್ಷೇತ್ರ ಧರ್ಮಸ್ಥಳ ಕೊಡುಗೆ ನೀಡುತ್ತಲೇ ಬಂದಿದೆ. ಇದರ ಸೂತ್ರಧಾರರು ಡಾ ಡಿ. ವೀರೇಂದ್ರ ಹೆಗ್ಗಡೆಯವರು. ನಮ್ಮ ಗುರುಗಳು ಸಂಸ್ಥೆಯನ್ನು ಆರಂಭಿಸಿ ಅದನ್ನು ಸಮರ್ಥ ವ್ಯಕ್ತಿಯ ಕೈಗೆ ನೀಡಿದ್ದರು. ಈಗ ಸಂಸ್ಥೆಯ ಏಳ್ಗೆ ನಮಗೆ ಅತ್ಯಂತ ಖುಷಿ ತಂದಿದೆ ಎಂದರು
ಇದೇ ವೇಳೆ, 150ಕ್ಕೂ ಅಧಿಕ ಔಷಧ ಸಸ್ಯಗಳ ಮಾಹಿತಿ ಹೊಂದಿರುವ ಎಸ್ಡಿಎಂ ಹರ್ಬಲ್ ಗಾರ್ಡನ್ ಪುಸ್ತಕವನ್ನು ಅತಿಥಿ ಗಣ್ಯರು ಬಿಡುಗಡೆಗೊಳಿಸಿದರು.
ಸಂಸ್ಥೆ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ನಿರ್ದೇಶಕ ಡಿ. ಶ್ರೇಯಸ್ ಕುಮಾರ್, ಆರ್ಥಿಕ ನಿರ್ದೇಶಕ ನಿಶ್ಚಲ್ ಡಿ., ಕಾಲೇಜಿನ ನಿರ್ದೇಶಕ ನಾಗರಾಜ್, ಆಯುರ್ವೇದ ಸಂಸ್ಥೆಯ ನಿರ್ದೇಶಕ ಡಾ. ಪ್ರಸನ್ನ ಎನ್. ರಾವ್, ಕಡೆಕಾರು ಗ್ರಾ.ಪಂ. ಅಧ್ಯಕ್ಷ ಜಯಕರ ಸೇರಿಗಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಡಾ ಸತೀಶ್ಚಂದ್ರ ಎಸ್. ಸ್ವಾಗತಿಸಿ, ಪ್ರಸ್ತಾವಿಸಿದರು. ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ವಂದಿಸಿದರು. ಸಹ ಪ್ರಾಧ್ಯಾಪಕ ಡಾ. ಅರುಣ್ ಕುಮಾರ್, ಸಹಾಯಕ ಪ್ರಾಧ್ಯಾಪಿಕೆ ಡಾ ಕಾವ್ಯಾ ನಿರೂಪಿಸಿದರು.