Snehamayi Krishna: ಮುಡಾ ಸ್ಕ್ಯಾಂ ದೂರುದಾರ ಸ್ನೇಹಮಯಿ ಕೃಷ್ಣಗೆ ಸಂಕಷ್ಟ; ಚೆಕ್ ಬೌನ್ಸ್ ಕೇಸ್‌ನಲ್ಲಿ 6 ತಿಂಗಳು ಜೈಲು
ಮುಡಾ ಹಗರಣದ ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಕುಮಾರ್ ಎಂಬುವವರು ದಾಖಲಿಸಿದ್ದ ದೂರಿನ ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು ಕೃಷ್ಣಗೆ 6 ತಿಂಗಳ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.


ಮೈಸೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna)ಅವರಿಗೆ ಮೈಸೂರು ನ್ಯಾಯಾಲಯ ಜೈಲು ಶಿಕ್ಷೆಯನ್ನು ವಿಧಿಸಿದೆ. ಕುಮಾರ್ ಎಂಬುವವರು ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು ಕೃಷ್ಣ ಅವರಿಗೆ 6 ತಿಂಗಳ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಪತ್ರಿಕೆ ನಡೆಸಲು ಹಾಗೂ ವಯಕ್ತಿಕ ಉಪಯೋಗಕ್ಕಾಗಿ ಕುಮಾರ್ ಎಂಬುವವರಿಂದ 2015ರಲ್ಲಿ ಕೃಷ್ಣ 1.75 ಲಕ್ಷ ರೂ ಸಾಲ ಪಡೆದಿದ್ದರು. ನಂತರ ಸಾಲ ಮರುಪಾವತಿಸುವಾಗ ಸ್ನೇಹಮಯಿ ಕೃಷ್ಣ ಅವರು ಕೋಅಪರೇಟಿವ್ ಬ್ಯಾಂಕ್ ಚೆಕ್ ನೀಡಿದ್ದರು. ಈ ಚೆಕ್ಅನ್ನು ಕುಮಾರ್ ಅವರು ಬ್ಯಾಂಕ್ಗೆ ಹಾಕಿದಾಗ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕುಮಾರ್ ಅವರು ಸ್ನೇಹಮಯಿ ಕೃಷ್ಣ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು, ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 1ರಂದು ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ವಿಚಾರಣೆಗೆ ಸ್ನೇಹಮಯಿ ಕೃಷ್ಣ ಗೈರು ಹಾಜರಾದ ಕಾರಣ ನ್ಯಾಯಾಲಯವು ಜಾಮೀನು ರಹಿತ ಬಂಧನ ಆದೇಶ ಹೊರಡಿಸಿತ್ತು. ಇದೀಗ ಆರೋಪ ಸಾಬೀತಾಗಿದ್ದರಿಂದ ಕೋರ್ಟ್ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೃಷ್ಣ ಕುಮಾರ್ ನನ್ನ ವಿರುದ್ಧ ಬೇಕು ಅಂತಲೇ ಚೆಕ್ ಬೌನ್ಸ್ ಕೇಸ್ ಹಾಕಿದ್ದಾರೆ. ಬೇಕಂತಲೇ ಚೆಕ್ ಮೇಲಿನ ದಿನಾಂಕ ತಿದ್ದಿ ಬೌನ್ಸ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ನ್ಯಾಯಾಲಯಕ್ಕೆ ಸಾಕ್ಷಿ ಒದಗಿಸಿದ್ದೆ. ಈಗ ಕೋರ್ಟ್ ತೀರ್ಪು ನೀಡಿದೆ ಎಂದಿದ್ದಾರೆ. ಚೆಕ್ ಬೌನ್ಸ್ ವಿಚಾರವಾಗಿ ನಾನು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಯಾರು ಈ ಸ್ನೇಹಮಯಿ ಕೃಷ್ಣ?
ಸ್ನೇಹಮಯಿ ಕೃಷ್ಣ ಅವರು ಮೈಸೂರಿನ ಬಂಡಿಪಾಳ್ಯ ನಿವಾಸಿಯಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಹೋರಾಟ ನಡೆಸುತ್ತಿದ್ದಾರೆ.