Stock Market: ಸ್ಟಾಕ್ ಮಾರ್ಕೆಟ್ ಮೇಲೆ ಬಜೆಟ್ ಬೀರಲಿದೆಯೇ ಪಾಸಿಟಿವ್ ಎಫೆಕ್ಟ್?
ಸಾಮಾನ್ಯವಾಗಿ ಸ್ಟಾಕ್ ಮಾರ್ಕೆಟ್ ಮೇಲೆ ಬಜೆಟ್ ಪಾಸಿಟಿವ್ ಪರಿಣಾಮ ಬೀರುತ್ತದೆ. ಏಕೆಂದರೆ ಬಜೆಟ್‌ನಲ್ಲಿ ಆರ್ಥಿಕ ಪ್ರಗತಿಗೆ ಪೂರಕವಾದ ಹಲವು ಘೋಷಣೆಗಳು ಇರುತ್ತವೆ. ಉಪಕ್ರಮಗಳು ಇರುತ್ತವೆ. ಇದು ಸಕಾರಾತ್ಮಕ ಪ್ರಭಾವ ಬೀರೋದು ಸಾಮಾನ್ಯ.

Stock Market

- ಕೇಶವ ಪ್ರಸಾದ್ ಬಿ.
ಮುಂಬಯಿ: ಈ ವಾರ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಹೀಗಾಗಿ ಸ್ಟಾಕ್ ಮಾರ್ಕೆಟ್ ಆರು ದಿನಗಳ ಕಾಲ ವಹಿವಾಟು ನಡೆಸಲಿದೆ. ಫೆಬ್ರವರಿ 1ರಂದು ಶನಿವಾರ ಸ್ಟಾಕ್ ಮಾರ್ಕೆಟ್ ತೆರೆಯಲಿದೆ. ಮತ್ತೊಂದು ಕಡೆ ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಸಭೆ ಸೇರಲಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರುಕಟ್ಟೆ(Stock Market)ಯಿಂದ ಹೂಡಿಕೆ ಹಿಂತೆಗೆತವನ್ನು ಮುಂದುವರಿಸಿದ್ದಾರೆ. ಇವೆಲ್ಲವೂ ಸ್ಟಾಕ್ ಮಾರ್ಕೆಟ್ ಮೇಲೆ ಈ ವಾರ ಪ್ರಭಾವ ಬೀರಲಿದೆ. ಜನವರಿಯಲ್ಲಿ ಇದುವರೆಗೆ ಕರಡಿ ಕುಣಿತವೇ ನಿಯಂತ್ರಿಸುತ್ತಿದೆ. ಗೂಳಿ ಯಾವಾಗ ಮತ್ತೆ ಅಬ್ಬರಿಸಲಿದೆ ಎಂಬ ಕಾತರ ಉಂಟಾಗಿದೆ.
ಸಾಮಾನ್ಯವಾಗಿ ಸ್ಟಾಕ್ ಮಾರ್ಕೆಟ್ ಮೇಲೆ ಬಜೆಟ್ ಪಾಸಿಟಿವ್ ಪರಿಣಾಮ ಬೀರುತ್ತದೆ. ಏಕೆಂದರೆ ಬಜೆಟ್‌ನಲ್ಲಿ ಆರ್ಥಿಕ ಪ್ರಗತಿಗೆ ಪೂರಕವಾದ ಹಲವು ಘೋಷಣೆಗಳು ಇರುತ್ತವೆ. ಉಪಕ್ರಮಗಳು ಇರುತ್ತವೆ. ಇದು ಸಕಾರಾತ್ಮಕ ಪ್ರಭಾವ ಬೀರೋದು ಸಾಮಾನ್ಯ.
ತೆರಿಗೆ ಕಡಿತದ ನಿರ್ಧಾರಗಳು, ಮೂಲಸೌಕರ್ಯ ವಲಯಕ್ಕೆ ಹೂಡಿಕೆ ಹೆಚ್ಚಳ, ಬಿಸಿನೆಸ್‌ಗಳಿಗೆ ಪ್ರೋತ್ಸಾಹ ಧನ, ಕ್ಷೇತ್ರಾವಾರು ಅನುದಾನಗಳ ಘೋಷಣೆಗಳು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಷೇರುಗಳ ಮೇಲೆ ಪ್ರಭಾವ ಬೀರುತ್ತವೆ.
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬಡ್ಡಿ ದರವನ್ನುಕಡಿಮೆ ಮಾಡಿದರೆ, ಷೇರು ಮಾರುಕಟ್ಟೆಗಳಲ್ಲಿ ಸಂಭ್ರಮ ಮನೆ ಮಾಡುತ್ತದೆ. ಏಕೆಂದರೆ ಇದರಿಂದ ಹಣದುಬ್ಬರ ಕಡಿಮೆಯಾಗುವ ವಿಶ್ವಾಸ ಮೂಡುತ್ತದೆ. ಬಿಸಿನೆಸ್ ವಲಯ ಚೇತರಿಸುವ ಸಾಧ್ಯತೆ ಹೆಚ್ಚುತ್ತದೆ. ಆಗ ಷೇರು ಮಾರುಕಟ್ಟೆಗೂ ಹೆಚ್ಚು ಹೂಡಿಕೆ ಹರಿದು ಬರುತ್ತದೆ. ಸೂಚ್ಯಂಕಗಳು ಜಿಗಿಯುತ್ತವೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಡ್ಡಿ ದರ ಇಳಿಕೆಯಾಗಬೇಕು ಎಂದು ನಿರೀಕ್ಷಿಸುತ್ತಿದ್ದಾರೆ. ತೈಲ ದರಗಳು ಇಳಿಕೆಯ ಹಾದಿಯಲ್ಲಿದ್ದು, ಬಡ್ಡಿ ದರಗಳೂ ಕೂಡಲೇ ಕಡಿಮೆಯಾಗಬೇಕು ಎಂದು ನಾನು ನಿರೀಕ್ಷಿಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ ಬಡ್ಡಿ ದರ ಇಳಿದರೆ ಮತ್ತು ಕಚ್ಚಾ ತೈಲ ದರ ಇಳಿದರೆ ಭಾರತಕ್ಕೆ ಒಳ್ಳೆಯದಾಗಲಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಜನವರಿಯಲ್ಲಿ 24ರ ತನಕ ಒಟ್ಟು 66,602 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಪ್ರಾಬಲ್ಯ ಮುಂದುವರಿದಿರುವುದು ಮತ್ತು ಅಮೆರಿಕದಲ್ಲಿ ಬಾಂಡ್ ಉತ್ಪತ್ತಿ ಹೆಚ್ಚುತ್ತಿರುವುದು ಇದಕ್ಕೆ ಕಾರಣವಾಗಿದೆ.ಇದರಿಂದ ಹಣಕಾಸು ವಲಯದ ಷೇರುಗಳ ಮೇಲೆ ನೆಗೆಟಿವ್ ಎಫೆಕ್ಟ್ ಆಗಿದೆ. ಹೀಗಿದ್ದರೂ ಐಟಿ ಷೇರುಗಳು ಚೇತರಿಸುತ್ತಿವೆ.
ಈ ಸುದ್ದಿಯನ್ನೂ ಓದಿ: Stock Market: ಟ್ರಂಪ್ ಟ್ರೇಡ್ ವಾರ್ ಎಫೆಕ್ಟ್ : ಸೆನ್ಸೆಕ್ಸ್ 1300 ಅಂಕ ಕುಸಿತ
ಬಜಾಜ್ ಹೌಸಿಂಗ್ ಫೈನಾನ್ಸ್, ವಾರಿ ಎಂಜಿನಿಯರ್ಸ್, ಒನ್ ಮೊಬಿಕ್ವಿಕ್ ಸಿಸ್ಟಮ್ಸ್, ಡಿಎಎಂ ಕ್ಯಾಪಿಟಲ್ ಅಡ್ವೈಸರ್ಸ್, ಪಿ.ಎನ್ ಗಾಡ್ಗೀಳ್ ಜ್ಯುವೆಲರ್ಸ್ ಇತ್ಯಾದಿ ಕಂಪನಿಗಳು ಇತ್ತೀಚೆಗೆ ಐಪಿಒ ನಡೆಸಿದ್ದವು. ಈ ಕಂಪನಿಗಳ ಷೇರುಗಳು ಈಗ ಇಳಿಕೆಯಾಗಿವೆ.
ಆರ್ಥಿಕ ಸವಾಲುಗಳಿದ್ದರೂ, ಹಣದುಬ್ಬರವಿದ್ದರೂ ಪ್ರಮುಖ ನಗರಗಳಲ್ಲಿ ಪ್ರೀಮಿಯಂ ಉತ್ಪನ್ನಗಳ ಮಾರಾಟ ಏರುಗತಿಯಲ್ಲಿದೆ. ಸ್ಪಿರಿಟ್ಸ್, ಜವಳಿ, ಶೂಗಳ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸಾರ್ವಜನಿಕ ವಲಯದ ವಿದ್ಯುತ್ ಉತ್ಪಾದಕ ದಿಗ್ಗಜ ಕಂಪನಿಯಾದ ಎನ್‌ಟಿಪಿಸಿ ಕಳೆದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. ಕಂಪನಿಯು 4711 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 4571 ಕೋಟಿ ರೂ. ಲಾಭ ಗಳಿಸಿತ್ತು. ಕಂಪನಿಯ ಅದಾಯದಲ್ಲೂ 5% ಏರಿಕೆಯಾಗಿದೆ. 39,455 ಕೋಟಿ ರೂ.ಗಳಿಂದ 41,352 ಕೋಟಿ ರೂ.ಗೆ ಹೆಚ್ಚಳವಾಗಿದೆ.