ಭಾರತ ತಂಡದ ವಿರುದ್ಧ ಕೊಂಕು ಮಾತನಾಡಿದವರಿಗೆ ಚಾಟಿ ಬೀಸಿದ ಗವಾಸ್ಕರ್
ಭಾರತವು ಸಮತೋಲಿತ ತಂಡವಾಗಿದ್ದ ಕಾರಣ ಕಪ್ ಗೆದ್ದಿದೆ. ಪಂದ್ಯಾವಳಿಯ ವಿವಿಧ ಸಮಯಗಳಲ್ಲಿ, ತಂಡದಲ್ಲಿದ್ದ ವಿಭಿನ್ನ ಆಟಗಾರರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ತಂಡ ಶ್ರಮಕ್ಕೆ ಈ ಗೆಲುವು ಒಲಿದಿದೆ ವಿನಃ ಒಂದೇ ತಾಣದಲ್ಲಿ ಆಡಿದ ಲಾಭದಿಂದಲ್ಲ ಎಂದು ಗವಾಸ್ಕರ್ ತಮ್ಮ ಸ್ಪೋರ್ಟ್ಸ್‌ಸ್ಟಾರ್ ಅಂಕಣದಲ್ಲಿ ಬರೆದುಕೊಂಡಿದ್ದಾರೆ.


ಮುಂಬಯಿ: ಭಾರತ ತಂಡ ಚಾಂಪಿಯನ್ಸ್ ಟ್ರೋಫಿ(Champions Trophy 2025) ಗೆಲ್ಲಲು ಪ್ರಮುಖ ಕಾರಣ ಒಂದೇ ತಾಣದಲ್ಲಿ(Dubai advantage) ಆಡಿದ್ದು ಎಂದು ಪದೇಪದೆ ಭಾರತ ತಂಡದ ಮೇಲೆ ಆರೋಪ ಮಾಡುತ್ತಿರುವ ಎಲ್ಲ ಟೀಕಾಕಾರರಿಗೆ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಸುನೀಲ್ ಗವಾಸ್ಕರ್(Sunil Gavaskar) ಮತ್ತೊಮ್ಮೆ ತಕ್ಕ ಉತ್ತರ ನೀಡಿದ್ದಾರೆ. ಅದರಲ್ಲೂ ಇಂಗ್ಲೆಂಡ್ ತಂಡದ ಮಾಜಿ ಆಟಗಾರರಿಗೆ ಮತ್ತಷ್ಟು ತಿರುಗೇಟು ಕೊಟ್ಟಿದ್ದಾರೆ. ಭಾರತಕ್ಕೆ ದುಬೈ ತಾಣ ಲಾಭ ತಂದುಕೊಟ್ಟಿದೆ ಎಂದರೆ ಇಂಗ್ಲೆಂಡ್ ಯಾಕೆ ಕಪ್ ಗೆಲ್ಲಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸ್ಪೋರ್ಟ್ಸ್‌ಸ್ಟಾರ್ ಅಂಕಣದಲ್ಲಿ ಸುದೀರ್ಘ ಲೇಖನವೊಂದನ್ನು ಬರೆಯುವ ಮೂಲಕ ಭಾರತ ತಂಡದ ಯಶಸ್ಸಿನ ಬಗ್ಗೆ ಕೊಂಕು ಮಾತನಾಡಿದವರಿಗೆಲ್ಲ ಸರಿಯಾಗಿ ಚಾಟಿ ಬೀಸಿದ್ದಾರೆ. 'ಭಾರತಕ್ಕೆ ಲಾಭವಾಗಿದೆ ಎಂದು ಮಾತನಾಡುವ ಟೀಕಾಕಾರರು ಇರುತ್ತಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಪ್ರಾರಂಭವಾಗುವ ಮೊದಲೇ ಐಸಿಸಿ ಭಾರತ ತಟಸ್ಥ ತಾಣದಲ್ಲಿ ಆಡಲಿದೆ ಎನ್ನುವುದನ್ನು ನಿರ್ಧರಿಸಿತ್ತು. ಹೀಗಾಗಿ, ಆ ಬಗ್ಗೆ ಯಾವುದೇ ನಕಾರಾತ್ಮಕ ಹೇಳಿಕೆಯು ಇದ್ದರೆ ಅದು ಆಗಲೇ ಬರಬೇಕಿತ್ತು. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಯಶಸ್ಸಿಗೆ 'ದುಬೈನಲ್ಲಿ ಆಡಿದ್ದು' ಕಾರಣವಾಗಿದ್ದರೆ, ಇಂಗ್ಲೆಂಡ್‌ನಲ್ಲಿ ಈ ಹಿಂದೆ ಹಲವು ಐಸಿಸಿ ಟೂರ್ನಿಗಳು ಅದರಲ್ಲೂ ಸತತವಾಗಿ ನಡೆದ ನಿದರ್ಶನ ನಮ್ಮ ಮುಂದಿದೆ. ಆದರೆ ಇಂಗ್ಲೆಂಡ್ ಏಕೆ ಕಪ್ ಗೆಲ್ಲಲು 2019ರನ ತನಕ ಕಾಯಬೇಕಿತ್ತು' ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ಉಂಟಾದ ಲಾಭವೇನೆಂದು ತಿಳಿಸಿದ ಸುನೀಲ್ ಗವಾಸ್ಕರ್!
'ಭಾರತವು ಸಮತೋಲಿತ ತಂಡವಾಗಿದ್ದ ಕಾರಣ ಕಪ್ ಗೆದ್ದಿದೆ. ಪಂದ್ಯಾವಳಿಯ ವಿವಿಧ ಸಮಯಗಳಲ್ಲಿ, ತಂಡದಲ್ಲಿದ್ದ ವಿಭಿನ್ನ ಆಟಗಾರರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ತಂಡ ಶ್ರಮಕ್ಕೆ ಈ ಗೆಲುವು ಒಲಿದಿದೆ ವಿನಃ ಒಂದೇ ತಾಣದಲ್ಲಿ ಆಡಿದ ಲಾಭದಿಂದಲ್ಲ' ಎಂದು ಗವಾಸ್ಕರ್ ಬರೆದುಕೊಂಡಿದ್ದಾರೆ.
ಈ ಟೂರ್ನಿಯ ಆತಿಥ್ಯ ವಹಿಸಿದ್ದ ಪಾಕಿಸ್ತಾನಕ್ಕೆ ತೆರಳಲು ಭದ್ರತೆ ಮತ್ತು ರಾಜಕೀಯ ಉದ್ವಿಗ್ನತೆಯ ಕಾರಣ ನೀಡಿ ಬಿಸಿಸಿಐ ನಿರಾಕರಿಸಿತ್ತು. ಇದರಿಂದ ಭಾರತ ತಂಡಕ್ಕೆ ಹೈಬ್ರಿಡ್ ಮಾದರಿಯಲ್ಲಿ ಆಡಲು ಅವಕಾಶ ನೀಡಲಾಗಿತ್ತು. ಭಾರತ ಎಲ್ಲ ಪಂದ್ಯಗಳನ್ನು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡುತ್ತಿದೆ. ಆದರೆ ಭಾರತ ತಂಡದ ಗೆಲುವನ್ನು ಕಂಡು ಕೆಲ ದೇಶದ ಮಾಜಿ ಆಟಗಾರರಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.