ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ಉಂಟಾದ ಲಾಭವೇನೆಂದು ತಿಳಿಸಿದ ಸುನೀಲ್ ಗವಾಸ್ಕರ್!
Sunil Gavaskar on Ranji Trophy Pay: ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಫಲವಾಗಿ ದೇಶಿ ಕ್ರಿಕೆಟ್‌ನಲ್ಲಿ ಸಂಭಾವನೆ ಹೆಚ್ಚಾಗಲಿದೆ ಎಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾರ್ಚ್ 9 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದ ಭಾರತ ತಂಡ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ಸುನೀಲ್ ಗವಾಸ್ಕರ್-ರೋಹಿತ್ ಶರ್ಮಾ

ನವದೆಹಲಿ: ದೇಶಿ ಕ್ರಿಕೆಟ್ ಪಂದ್ಯಗಳ ಸಂಭಾವನೆಯನ್ನು ಹೆಚ್ಚಿಸಬೇಕೆಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗಳಿಗೆ ಆಗ್ರಹಿಸಿದ್ದಾರೆ. ರಣಜಿ ಟ್ರೋಫಿ ಕ್ರಿಕೆಟ್ ಆಡುವವವ ಶುಲ್ಕವನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಕ್ರಿಕೆಟ್‌ನಲ್ಲಿ ಭವಿಷ್ಯವಿದೆ ಎಂದು ಪೋಷಕರು ಯೋಚಿಸಬೇಕಾಗಿದೆ ಎಂದು ಕ್ರಿಕೆಟ್ ಕಾಮೆಂಟೇಟರ್ ತಿಳಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಇತ್ತೀಚೆಗೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಮಾರ್ಚ್ 9 ರಂದು ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಭಾರತ ತಂಡ 4 ವಿಕೆಟ್‌ಗಳಿಂದ ಕಿವೀಸ್ ತಂಡವನ್ನು ಮಣಿಸಿತ್ತು.
"ಇಂಡಿಯನ್ ಪ್ರೀಮಿಯರ್ ಲೀಗ್ (IPL)ಟೂರ್ನಿಯಲ್ಲಿ ಆಡುವ ರಣಜಿ ಟ್ರೋಫಿ ಆಡದ ಆಟಗಾರ ಹಾಗೂ ಕೇವಲ ರಣಜಿ ಟ್ರೋಫಿ ಆಟಗಾರರ ನಡುವಣ ಸಂಭಾವನೆಯಲ್ಲಿ ನಾವು ವ್ಯತ್ಯಾಸವನ್ನು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಋತುವಿನಲ್ಲಿ ರಣಜಿ ಟ್ರೋಫಿ ಕಿಕೆಟ್‌ನಲ್ಲಿನ ಶುಲ್ಕವನ್ನು ಏರಿಸಬೇಕಾಗಿದೆ," ಎಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಸ್ಪೋರ್ಟ್ಸ್‌ಸ್ಟಾರ್‌ಗೆ ಬರೆದಿರುವ ತಮ್ಮ ಅಂಕಣದಲ್ಲಿ ತಿಳಿಸಿದ್ದಾರೆ.
IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!
"ಇತರೆ ರಾಜ್ಯ ತಂಡಗಳು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಮಾದರಿಯನ್ನು ಅನುಸರಿಸಿ ಬಿಸಿಸಿಐ ನೀಡುವ ಶುಲ್ಕಕ್ಕೆ ಸಮನಾದ ಮೊತ್ತವನ್ನು ನೀಡಿದರೆ, ಆಟಗಾರರು ಆಡುವ ದಿನಗಳ ಸಂಖ್ಯೆಗೆ ಅನುಗುಣವಾಗಿ ನಿಜವಾಗಿಯೂ ಉತ್ತಮ ಮೊತ್ತವನ್ನು ಪಡೆಯುತ್ತಾರೆ."
"ಪ್ರತಿಯೊಂದು ರಾಜ್ಯ ಕ್ರಿಕೆಟ್ ಮಂಡಳಿಯು ಬಿಸಿಸಿಐನಿಂದ ವಾರ್ಷಿಕವಾಗಿ ದೊಡ್ಡ ಮೊತ್ತದ ಸಬ್ಸಿಡಿಯನ್ನು ಪಡೆಯುತ್ತದೆ ಮತ್ತು ಅದರಲ್ಲಿ ಹೆಚ್ಚಿನ ಹಣವನ್ನು ಮೂಲಸೌಕರ್ಯ ನಿರ್ಮಾಣ ಮತ್ತು ಆಟದ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಬೇಕು ಹಾಗೂ ಈ ಕಾರಣದಿಂದಲೇ ಬಿಸಿಸಿಐ ದೊಡ್ಡ ಮೊತ್ತದ ಹಣವನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತದೆ. ಆದರೆ, ರಾಜ್ಯ ಕ್ರಿಕೆಟ್ ಮಂಡಳಿಗಳು ಈ ಮೊತ್ತವನ್ನು ಖರ್ಚು ಮಾಡದೆ ಬ್ಯಾಂಕಿನಲ್ಲಿ ಇಡುತ್ತವೆ. ಈ ಕಾರಣದಿಂದಲೇ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗಳು, ಬಿಸಿಸಿಐ ತನ್ನ ರಣಜಿ ಟ್ರೋಫಿ ತಂಡಗಳಿಗೆ ನೀಡುವ ಶುಲ್ಕವನ್ನು ಹೊಂದಿಸಲು ಶಕ್ತವಾಗಿವೆ. ಒಳ್ಳೆಯ ಸುದ್ದಿ ಏನೆಂದರೆ ಆಟವನ್ನು ಪ್ರೀತಿಸುವ ಮತ್ತು ತಮ್ಮ ತಂಡಗಳನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ಅಗತ್ಯತೆಯ ಬಗ್ಗೆ ಬಹಳ ತಿಳಿದಿರುವ ಹೆಚ್ಚು ಹೆಚ್ಚು ಆಡಳಿತಗಾರರು ಬರುತ್ತಿದ್ದಾರೆ," ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
ಪಾಕಿಸ್ತಾನವನ್ನು ಭಾರತ ಬಿ, ಸಿ ತಂಡಗಳು ಸೋಲಿಸಲಿದೆ ಎಂದಿದ್ದ ಸುನೀಲ್ ಗವಾಸ್ಕರ್‌ಗೆ ಜೇಸನ್ ಗಿಲೆಸ್ಪಿ ತಿರುಗೇಟು!
"ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಗೆದ್ದಿರುವ ಕಾರಣ ದೇಶಿ ಕ್ರಿಕೆಟ್‌ಗೆ ಇನ್ನಷ್ಟು ಬಲ ಬಂದಿದೆ. ಯಾರೇ ಆದರೂ ಕ್ರಿಕೆಟ್ ಅನ್ನು ಬಿಟ್ಟು ಬೇರೆ ವೃತ್ತಿ ಜೀವನದ ಕಡೆಗೆ ವಾಲಬಾರದು. ಅಷ್ಟರ ಮಟ್ಟಿಗೆ ದೇಶಿ ಕ್ರಿಕೆಟ್ ಆಟಗಾರರಿಗೆ ಸುರಕ್ಷಿತವನ್ನು ನೀಡಬೇಕಾಗಿದೆ. ದಿನದಿಂದ ದಿನಕ್ಕೆ ದೇಶಿ ಕಿಕೆಟ್ ಬಲಿಷ್ಠವಾಗಬೇಕು, ಆ ಮೂಲಕ ಒಳ್ಳೆಯ ಆಟಗಾರರು ಮೂಡಿಬರಬೇಕು. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲಬೇಕು," ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.