ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Terror attack: ಪಾಕ್‌ ಎಕ್ಸ್‌ಪ್ರೆಸ್‌ ರೈಲು ಹೈಜಾಕ್‌ ! 100ಕ್ಕೂ ಹೆಚ್ಚು ಸೈನಿಕರು ಉಗ್ರರ ವಶಕ್ಕೆ

Terror attack: ಬಲೂಚಿಸ್ತಾನದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಉಗ್ರರು ಗುಂಡಿನ ದಾಳಿ ನಡೆದಿದೆ. ರೈಲು ಚಾಲಕ ಗಾಯಗೊಂಡಿದ್ದು, ಪ್ರಯಾಣಿಕರನ್ನು ತಮ್ಮ ವಶದಲ್ಲಿಟ್ಟುಕೊಂಡಿರುವ ಬಗ್ಗೆ ರಾಯಿಟರ್ಸ್‌ ವರದಿ ಮಾಡಿದೆ. ಇನ್ನು ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ರೈಲಿನ ಮೇಲೆ ದಾಳಿ- ಪಾಕ್‌ ಸೈನಿಕರು ಉಗ್ರರ ವಶಕ್ಕೆ!

-

Rakshita Karkera Rakshita Karkera Mar 11, 2025 4:40 PM

ಖೈಬರ್ ಪಖ್ತುಂಖ್ವಾ: ಬಲೂಚಿಸ್ತಾನದಲ್ಲಿ ಉಗ್ರರು ಪಾಕಿಸ್ತಾನ ರೈಲನ್ನು ಗುರಿಯಾಗಿಸಿ ದಾಳಿ ನಡೆಸಿದ್ದು(Terror attack), ಪ್ರಯಾಣಿಕರು ಮತ್ತು ಭದ್ರತಾ ಸಿಬ್ಬಂದಿಯನ್ನು ವಶಕ್ಕೆ ಪಡೆದು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದಾರೆ. ನೈಋತ್ಯ ಪಾಕಿಸ್ತಾನದಲ್ಲಿ ಮಂಗಳವಾರ ಭಯೋತ್ಪಾದಕರು ಪ್ರಯಾಣಿಕ ರೈಲಿನ ಮೇಲೆ ಗುಂಡು ಹಾರಿಸಿದ್ದು, ರೈಲು ಚಾಲಕ ಗಾಯಗೊಂಡಿದ್ದು, ಪ್ರಯಾಣಿಕರನ್ನು ತಮ್ಮ ವಶದಲ್ಲಿಟ್ಟುಕೊಂಡಿರುವ ಬಗ್ಗೆ ರಾಯಿಟರ್ಸ್‌ ವರದಿ ಮಾಡಿದೆ. ಬಲೂಚಿಸ್ತಾನದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಈ ದಾಳಿ ಸಂಭವಿಸಿದೆ. ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎನ್ನಲಾಗಿದೆ.

ಇನ್ನು ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಬಿಎಲ್‌ಎ ಒಂದು ಹೇಳಿಕೆಯಲ್ಲಿ, ಭದ್ರತಾ ಸಿಬ್ಬಂದಿ ಸೇರಿದಂತೆ ರೈಲಿನಿಂದ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದಾಗಿ ಹೇಳಿಕೊಂಡಿದೆ. ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳನ್ನು ಕಳುಹಿಸಲಾಗಿದೆ ಮತ್ತು ದಾಳಿಯ ತನಿಖೆ ನಡೆಯುತ್ತಿದೆ. ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಸ್ಥಳೀಯ ಮಾಧ್ಯಮ ಸಂಸ್ಥೆ ಡಾನ್‌ಗೆ ಮಾಹಿತಿ ನೀಡಿದ್ದು, ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ [ರೈಲು] ಮೇಲೆ ತೀವ್ರ ಗುಂಡಿನ ದಾಳಿ ನಡೆದ ವರದಿಗಳಿವೆ ಎಂದು ತಿಳಿಸಿದ್ದಾರೆ.

ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಆದರೆ ಸಂಘರ್ಷಭರಿತ ಪ್ರಾಂತ್ಯವಾದ ಬಲೂಚಿಸ್ತಾನ್, ಸ್ವಾತಂತ್ರ್ಯ ಅಥವಾ ಹೆಚ್ಚಿನ ಸ್ವಾಯತ್ತತೆಯನ್ನು ಒತ್ತಾಯಿಸುವ ಪ್ರತ್ಯೇಕತಾವಾದಿ ಗುಂಪುಗಳಿಂದ ದೀರ್ಘಕಾಲದ ದಂಗೆಗೆ ಸಾಕ್ಷಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶವು ಭದ್ರತಾ ಪಡೆಗಳು, ಮೂಲಸೌಕರ್ಯ ಮತ್ತು ನಾಗರಿಕರ ಮೇಲೆ ಪದೇ ಪದೇ ದಾಳಿಗಳನ್ನು ಕಂಡಿದೆ.

ಈ ಸುದ್ದಿಯನ್ನೂ ಓದಿ: ಪಾಕಿಸ್ತಾನ ಮಿಲಿಟರಿ ಕ್ಯಾಂಪ್‌ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ; ಕನಿಷ್ಠ 9 ಸಾವು

ಕೆಲವು ದಿನಗಳ ಹಿಂದೆಯಷ್ಟೇ ವಾಯುವ್ಯ ಪಾಕಿಸ್ತಾನದಲ್ಲಿ ನಡೆದ 2 ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿದ್ದರು. ಬನ್ನು ಎಂಬಲ್ಲಿನ ಮಿಲಿಟರಿ ಕ್ಯಾಂಪ್ ಮೇಲೆ‌ ಈ ಆತ್ಮಾಹುತಿ ಬಾಂಬ್‌ ದಾಳಿ ನಡೆದಿತ್ತು. ಇಬ್ಬರು ಆತ್ಮಾಹುತಿ ದಾಳಿಕೋರರು ಸ್ಫೋಟಕಗಳನ್ನು ತುಂಬಿದ್ದ 2 ಕಾರುಗಳನ್ನು ಮಿಲಿಟರಿ ಕ್ಯಾಂಪ್‌ನ ಕಾಂಪೌಂಡ್‌ ಒಳಗೆ ನುಗ್ಗಿಸಿದ್ದರು. ಈ ದಾಳಿಯ ಹೊಣೆಯನ್ನು ಹಫೀಜ್ ಗುಲ್ ಬಹದ್ದೂರ್ ಹೆಸರಿನ ಸಶಸ್ತ್ರ ಗುಂಪು ಹೊತ್ತುಕೊಂಡಿದೆ. ಈ ಸಂಘಟನೆ 2001ರಿಂದ ಯುಎಸ್ ನೇತೃತ್ವದ ನ್ಯಾಟೋ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ, ಅಫ್ಘಾನಿಸ್ತಾನದ ತಾಲಿಬಾನ್‌ಗೆ ಬೆಂಬಲವಾಗಿ ನಿಂತಿದೆ. "ನಮ್ಮ ಹೋರಾಟಗಾರರು ನಿರ್ದಿಷ್ಟ ಕಾರ್ಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ" ಎಂದು ಹಫೀಜ್ ಗುಲ್ ಬಹದ್ದೂರ್ ಉಗ್ರ ಸಂಘಟನೆ ತಿಳಿಸಿದೆ. ಉಗ್ರರು ಈ ಹಿಂದೆಯೂ ಬನ್ನು ಪ್ರದೇಶವನ್ನು ಗುರಿಯಾಗಿಸಿಕೊಂಡು ಹಲವು ಬಾರಿ ದಾಳಿ ನಡೆಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಇಲ್ಲಿ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 12 ಯೋಧರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.