V.Somanna: ರೈಲ್ವೆ ಯೋಜನೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರದಿಂದ 2 ಸಾವಿರ ಕೋಟಿ ರೂ. ಅನುದಾನ; ವಿ.ಸೋಮಣ್ಣ
Dr. Shivakumara swamiji: ʼʼಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಸಮಗ್ರ ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತೇನೆ. ಜಿಲ್ಲೆಯ ಅಭಿವೃದ್ದಿ ಜತೆಗೆ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ 2 ಸಾವಿರ ಕೋಟಿ ರೂ. ಅನುದಾನ ನೀಡಿದೆ'' ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು. ಜತೆಗೆ ತುಮಕೂರು ರೈಲ್ವೆ ನಿಲ್ದಾಣಕ್ಕೆ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಇಡುವುದಾಗಿ ಹೇಳಿದರು.

ತಿಪಟೂರು ನಗರದ ಹಾಸನ ಸರ್ಕಲ್ ಶಾರದಾ ನಗರ ರೈಲ್ವೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ ವಿ.ಸೋಮಣ್ಣ.

ತುಮಕೂರು: ತಿಪಟೂರು ನಗರದ ಹಾಸನ ಸರ್ಕಲ್ ಶಾರದಾ ನಗರ ರೈಲ್ವೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ (V.Somanna) ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ʼʼಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಸಮಗ್ರ ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತೇನೆ. ಜಿಲ್ಲೆಯ ಅಭಿವೃದ್ದಿ ಜತೆಗೆ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ 2 ಸಾವಿರ ಕೋಟಿ ರೂ. ಅನುದಾನ ನೀಡಿದೆ. 2 ವರ್ಷದಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ದಿ ಪಡಿಸಿ, ನನ್ನ ಆರಾಧ್ಯ ದೈವ ಡಾ. ಶಿವಕುಮಾರ ಸ್ವಾಮೀಜಿ (Dr. Shivakumara swamiji) ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡಲಾಗುವುದುʼʼ ಎಂದು ತಿಳಿಸಿದರು.
ʼʼಜಿಲ್ಲೆಯಲ್ಲಿ ತುಮಕೂರು ಹೊರತುಪಡಿಸಿದರೆ ತಿಪಟೂರು ವೇಗವಾಗಿ ಬೆಳೆಯುತ್ತಿರುವ ತಾಲೂಕು. ತಿಪಟೂರಿನ ಜನ ನನ್ನ ಮೇಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅಭಿಮಾನ ವಿಟ್ಟು ಹೆಚ್ಚುಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿದ್ದಾರೆ. ನಿಮ್ಮ ಋಣ ಎಷ್ಟು ಜನ್ಮ ಎತ್ತಿದರು ತೀರಿಸಲು ಸಾಧ್ಯವಿಲ್ಲ, ಶೀಘ್ರವಾಗಿ ಹೊನ್ನವಳ್ಳಿ ರೋಡ್ ಮೇಲ್ಸೆತುವೆ, ಹಿಂಡಿಸ್ಕೆರೆ ರೈಲ್ವೆ ಕ್ರಾಸಿಂಗ್ ಮೇಲ್ಸೆತುವೆ ಕಾಮಗಾರಿ ಕೈಗೆತ್ತಿಕೊಂಡು, ಕೇವಲ ಒಂದೂವರೆ ವರ್ಷದಲ್ಲಿ ಜನರ ಉಪಯೋಗಕ್ಕೆ ನೀಡಲಾಗುವುದುʼʼ ಎಂದರು.
ಈ ಸುದ್ದಿಯನ್ನೂ ಓದಿ: Shivakumara Swamiji: ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು: ಪರಮೇಶ್ವರ್
ʼʼತಿಪಟೂರಿಗೆ ಅಗತ್ಯವಿರುವ ಕೈಗಾರಿಕೆಗಳ ಸ್ಥಾಪನೆಗೆ ಕೇಂದ್ರ ಕೈಗಾರಿಕ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ಕೈಗಾರಿಕೆಗೆಗಳ ಸ್ಥಾಪನೆಗೆ ಕ್ರಮ ಶೀಘ್ರವೇ ಕೈಗೊಳ್ಳುತ್ತೇವೆ. ತಿಪಟೂರು-ದುದ್ದ ರೈಲ್ವೆ ಮಾರ್ಗಕ್ಕೆ ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೆಂಗಳೂರು-ತುಮಕೂರು-ನೆಲಮಂಗಲ ರಸ್ತೆಯಲ್ಲಿ ವರ್ಷದಲ್ಲಿ ಸುಮಾರು 290 ಜನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ನಾನು ಇದೇ ಹೈವೆಯಲ್ಲಿ ಸಂಚರಿಸುತ್ತಿದ್ದಾಗ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ್ದನ್ನು ಕಣ್ಣಾರೆ ಕಂಡು ತಕ್ಷಣ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಮಾತನಾಡಿ 6 ಪಥದ ರಸ್ತೆ ಮಂಜೂರು ಮಾಡಿಸಿದ್ದೇನೆ. ಹಾಸನ ತಿಪಟೂರು ಹಿರಿಯೂರು ಮಾರ್ಗದ ಗ್ರೀನ್ ಹೈವೇ ಕಾರಿಡಾರ್ ಯೋಜನೆ ಮಂಜೂರಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು. ಹಾಸನ-ಅರಸೀಕೆರೆ-ತಿಪಟೂರಿಗೆ ಮೆಮೋ ರೈಲು ಹಾಗೂ ತುಮಕೂರು-ತಿಪಟೂರು ನಡುವೆ ಮೆಮೋ ರೈಲು ಸಂಚರಿಸುವುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲಿ ಈ ರೈಲುಗಳು ನಿಮ್ಮ ಸೇವೆಗೆ ಲಭ್ಯವಾಗಲಿವೆʼʼ ಎಂದು ಭರವಸೆ ನೀಡಿದರು.
ʼʼತಿಪಟೂರು ಶಾರದಾ ನಗರ ರೈಲ್ವೆ ಮೇಲ್ಸೆತುವೆ ಕಾಮಗಾರಿಯು 15 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನಮ್ಮ ಸರ್ಕಾರದಲ್ಲಿ ವೆಂಕಟ, ಸೀನನ ಲೆಕ್ಕಗಳಿಗೆ ಅವಕಾಶವಿಲ್ಲ. ಪಾರದರ್ಶಕವಾಗಿ ಯಾರು ಗುಣಮಟ್ಟದ ಕಾಮಗಾರಿ ನಿರ್ವಹಿಸುತ್ತಾರೊ ಅವರಿಗೆ ಬಿಲ್ ನೀಡುತ್ತೇವೆ. ನಾನು ಯಾವಾಗಲೂ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ಚುನಾವಣೆ ವೇಳೆಯಲ್ಲಿ ಮಾತ್ರ ರಾಜಕೀಯ ನಂತರ ಏನಿದರೂ ಅಭಿವೃದ್ದಿಗೆ ಮಾತ್ರ ಆದ್ಯತೆ ನೀಡುತ್ತೇವೆ. ತಿಪಟೂರು ಶಾಸಕ ಕೆ.ಷಡಕ್ಷರಿ ಅವರಿಗೆ ತಡವಾಗಿ ಆಹ್ವಾನ ತಲುಪಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಅವರ ಕ್ಷಮೆ ಕೋರುತ್ತೇನೆ. ನಾನು ಷಡಕ್ಷರಿ ಸ್ನೇಹಿತರು. ರಾಜಕೀಯವೇ ಬೇರೆ; ಅಭಿವೃದ್ದಿಯ ವಿಚಾರದಲ್ಲಿ ನಾವೆಲ್ಲ ಒಂದೇʼʼ ಎಂದರು.
ಮಾಜಿ ಸಚಿವ ಬಿ.ಸಿ.ನಾಗೇಶ್, ರೈಲ್ವೆ ಸಿಇಒ ಅಜಯ್ ಶರ್ಮ, ಡಿಆರ್‌ಎಂ ಮಿಥಲ್, ದಿಶಾ ಸಮಿತಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಆಯರಹಳ್ಳಿ ಶಂಕರಪ್ಪ, ಬಿಜೆಪಿ ಮುಖಂಡ ಲೋಕೇಶ್ವರ್, ಕೆ.ಟಿ. ಶಾಂತಕುಮಾರ್, ಜಕ್ಕನಹಳ್ಳಿ ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.