Chikkaballapur News: ಚಿಕ್ಕಬಳ್ಳಾಪುರಕ್ಕೆ ಅತ್ಯುತ್ತಮ ಪ್ರದರ್ಶನ ಜಿಲ್ಲೆ ಪ್ರಶಸ್ತಿ: ದೆಹಲಿಯ ಕಾರ್ಯಕ್ರಮದಲ್ಲಿ ಪ್ರಶಂಸಾ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಸಮುದಾಯದ ಸಬಲೀಕರಣಕ್ಕೆ ರೂಪಿಸಿರುವ ಆದಿ ಕರ್ಮಯೋಗಿ ಅಭಿಯಾನ ಮತ್ತು ಧರ್ತಿ ಆಬ ಜನ ಭಾಗೀದರಿ ಅಭಿಯಾನಗಳಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಉತ್ತಮ ಪ್ರದರ್ಶನ ತೋರಿದೆ

-

ಚಿಕ್ಕಬಳ್ಳಾಪುರ : ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಸಮುದಾಯದ ಸಬಲೀಕರಣಕ್ಕೆ ರೂಪಿಸಿರುವ ಆದಿ ಕರ್ಮಯೋಗಿ ಅಭಿಯಾನ ಮತ್ತು ಧರ್ತಿ ಆಬ ಜನಭಾಗೀದರಿ ಅಭಿಯಾನಗಳಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಉತ್ತಮ ಪ್ರದರ್ಶನ ತೋರಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಅತ್ಯುತ್ತಮ ಪ್ರದರ್ಶನ ಜಿಲ್ಲೆ ಎನ್ನುವ ಪ್ರಮಾಣ ಪತ್ರ ದೊರೆತಿದೆ.
ನವದೆಹಲಿಯಲ್ಲಿ ನಡೆದ ಆದಿ ಕರ್ಮಯೋಗಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಈ ಎರಡೂ ಪ್ರಶಂಸಾ ಪತ್ರಗಳನ್ನು ಸ್ವೀಕರಿಸಿದರು.
ಪರಿಶಿಷ್ಟ ಪಂಗಡಗಳು ಮತ್ತು ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸಿ, ಅವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸಲು ಆದಿ ಕರ್ಮಯೋಗಿ ಮತ್ತು ಧರ್ತಿ ಆಬ ಜನಭಾಗಿದರಿ ಅಭಿಯಾನವನ್ನು ಕೇಂದ್ರ ಸರ್ಕಾರವು ರೂಪಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು ೩೧ ಗ್ರಾಮಗಳನ್ನು ಆದಿ ಕರ್ಮಯೋಗಿ ಅಭಿಯಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಗ್ರಾಮಗಳ ಒಟ್ಟು ಜನಸಂಖ್ಯೆಯಲ್ಲಿ ಶೇ ೫೦ಕ್ಕಿಂತಲೂ ಹೆಚ್ಚು ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುತ್ತಾರೆ.
ಈ ಗ್ರಾಮಗಳಲ್ಲಿ ನಡೆಸಬೇಕಾದ ಅಭಿವೃದ್ಧಿ ಕಾಮಗಾರಿಗಳು, ಅವುಗಳಿಗೆ ಸಂಬAಧಿಸಿದ ಕ್ರಿಯಾ ಯೋಜನೆ ತಯಾರಿ ಸೇರಿದಂತೆ ಕಾರ್ಯಕ್ರಮ ರೂಪಿಸುವಲ್ಲಿ ಕೈಗೊಂಡಿರುವ ಕ್ರಮಗಳನ್ನು ಆಧರಿಸಿ ಈ ಪ್ರಶಂಸಾ ಪತ್ರವೂ ಚಿಕ್ಕಬಳ್ಳಾಪುರಕ್ಕೆ ದೊರೆತಿದೆ.
ಪರಿಶಿಷ್ಟ ಪಂಗಡದ ಶಿಕ್ಷಣ, ವಸತಿಶಾಲೆ, ವಸತಿ ಹಾಗೂ ಇನ್ನಿತರ ಸೌಲಭ್ಯಕ್ಕೆ ವಿವಿಧ ಯೋಜನೆ ಗಳನ್ನು ಈ ಅಭಿಯಾನದಡಿ ಹಮ್ಮಿಕೊಳ್ಳಲಾಗುತ್ತದೆ. ವಿಧವಾ ವಿವಾಹ, ಅಂತರ್ಜಾತಿ ವಿವಾಹ ಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಬುಡಕಟ್ಟು ಕಲ್ಯಾಣ ಇಲಾಖೆ ಜತೆಗೆ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನೂ ಅನುಷ್ಟಾನ ಗೊಳಿಸಿ ಆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ.
ಹೀಗೆ ಚಿಕ್ಕಬಳ್ಳಾಪುರ ಜಿಲ್ಲೆಯು ಆದಿ ಕರ್ಮಯೋಗಿ ಮತ್ತು ಧರ್ತಿ ಆಬ ಜನಭಾಗಿದರಿ ಅಭಿಯಾನದ ಮೊದಲ ಹೆಜ್ಜೆಗೆ ಪ್ರಶಂಸೆ ದೊರೆತಿದೆ. ಕೇಂದ್ರ ಸರ್ಕಾರವು ದೇಶದಲ್ಲಿ ಒಂದು ಲಕ್ಷ ಹಳ್ಳಿಗಳನ್ನು ಈ ಅಭಿಯಾನದಡಿ ಅಭಿವೃದ್ಧಿಗೊಳಿಸುವ ಗುರಿ ಹೊಂದಿದೆ. ಶೇ.೬೦ರಷ್ಟು ಅನುದಾನವು ಕೇಂದ್ರ ಸರ್ಕಾರದ್ದಾದರೆ, ಶೇ.೪೦ರಷ್ಟು ಅನುದಾನ ರಾಜ್ಯ ಸರ್ಕಾರದ್ದಾಗಿರುತ್ತದೆ.