ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali at Chikkaballapur: ದೀಪಾವಳಿ ಹಬ್ಬಕ್ಕೆ ಸಜ್ಜುಗೊಂಡ ಜಿಲ್ಲೆ : ಹಬ್ಬದ ಸಾಮಾನು ಖರೀದಿ ಜೋರು

ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಎಂಜಿರಸ್ತೆ,ಬಜಾರ್ ರಸ್ತೆ, ಬಿ.ಬಿ ರಸ್ತೆಗಳ ಇಕ್ಕೆಲಗಳಲ್ಲಿ ಅಡಿಕೆ, ನೋಮುದಾರ, ಬಾಳೆಕಂದು, ಎಲೆ-ಅಡಿಕೆ, ತೆಂಗಿನಕಾಯಿ ಹೂವು ಹಣ್ಣು ಕಾಯಿಗಳನ್ನು, ಮಣ್ಣಿನ ಹಣತೆಗಳನ್ನು ಕೊಳ್ಳಲು ಜನತೆ ಮುಂದಾಗಿದ್ದರು.ಸುಗಮ ಸಂಚಾರಕ್ಕಾಗಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು.

ದೀಪಾವಳಿ ಹಬ್ಬಕ್ಕೆ ಸಜ್ಜುಗೊಂಡ ಜಿಲ್ಲೆ : ಹಬ್ಬದ ಸಾಮಾನು ಖರೀದಿ ಜೋರು

-

Ashok Nayak Ashok Nayak Oct 19, 2025 11:14 PM

ಚಿಕ್ಕಬಳ್ಳಾಪುರ : ಬೆಳಕಿನ ಹಬ್ಬ ದೀಪಾವಳಿಗೆ ಜಿಲ್ಲೆಯು ಸಜ್ಜಾಗಿದ್ದು ಹಬ್ಬದ ಸಾಮಾನು ಸರಂಜಾಮು ಕೊಳ್ಳಲು ನಾಗರೀಕರು ಮುಂದಾಗಿದ್ದು ಎಲ್ಲೆಡೆ ಹಬ್ಬದ ಸಂಭ್ರಮವು ಮನೆ ಮಾಡಿತ್ತು.  

ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಎಂಜಿರಸ್ತೆ,ಬಜಾರ್ ರಸ್ತೆ, ಬಿ.ಬಿ ರಸ್ತೆಗಳ ಇಕ್ಕೆಲಗಳಲ್ಲಿ ಅಡಿಕೆ, ನೋಮುದಾರ, ಬಾಳೆಕಂದು, ಎಲೆ-ಅಡಿಕೆ, ತೆಂಗಿನಕಾಯಿ ಹೂವು ಹಣ್ಣು ಕಾಯಿಗಳನ್ನು, ಮಣ್ಣಿನ ಹಣತೆಗಳನ್ನು ಕೊಳ್ಳಲು ಜನತೆ ಮುಂದಾಗಿದ್ದರು.ಸುಗಮ ಸಂಚಾರಕ್ಕಾಗಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು.

ಹಣತೆಗಳಿಗೆ ಹೆಚ್ಚು ಬೇಡಿಕೆ

ದೀಪಾವಳಿ ಹಬ್ಬಕ್ಕೆ ಬಗೆ ಬಗೆಯ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲಿಯೂ ಮಣ್ಣಿನ ಹಾಗೂ ಪ್ಲಾಸ್ಟಿಕ್ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಹೆಚ್ಚಿನ ಜನರು ಈ ಬಾರಿ ಮಣ್ಣಿನ ದೀಪಗಳನ್ನು ಕೊಳ್ಳುವಲ್ಲಿ ಮುಂದಾಗಿದ್ದಾರೆ. ದೀಪದ ಮಾದರಿಯಲ್ಲಿರುವ ಡಜನ್ ಹಣತೆಗೆ ೧೦೦ ರಿಂದ ೨೫೦ ರೂ.ವರೆಗೆ ದರವನ್ನು ನಿಗದಿ ಪಡಿಸಿದ್ದರು. ಅಲಂಕಾರಿ ವಸ್ತುಗಳಿಗೆ ಮಾರುಹೋದ ಗೃಹಿಣಿಯರು ವುಗಳನ್ನು ಖರೀದಿಸಲು ಆಸಕ್ತಿ ತೋರಿದರು.

ಇದನ್ನೂ ಓದಿ: Deepavali Fashion 2025: ದೀಪಾವಳಿಯ ರಂಗು ಹೆಚ್ಚಿಸುವ ಡಿಸೈನರ್‌ವೇರ್‌ಗಳಿವು

ಪೂಜಾ ಸಾಮಾಗ್ರಿಗಳ ಖರೀದಿ

ದೀಪಾವಳಿಯನ್ನು ವಿವಿಧ ಸಮುದಾಯಗಳಲ್ಲಿ ತಮ್ಮದೇ ವಿಶೇಷ ಶೈಲಿಗಳಲ್ಲಿ ಆಚರಿಸಲಾಗುತ್ತದೆ. ಬಹುತೇಕರು ಹಿಂದಿನಿAದಲೂ ಈ ಹಬ್ಬಕ್ಕೆ ನೋಮುವ ಸಂಪ್ರದಾಯ ಉಳಿಸಿಕೊಂಡಿದ್ದಾರೆ. ಇದಕ್ಕೆಂದು ಕೈಗೆ ನೋಮುದಾರ ಕಟ್ಟಿಕೊಂಡು ಆಚರಣೆಯಲ್ಲಿ ತೊಡಗುತ್ತಾರೆ. ಪೂಜೆಯ ವೇಳೆ ನೋಮುದಾರ, ಅರಿಶಿನ-ಕುಂಕುಮ, ಅಡಿಕೆ, ವೀಳ್ಯದ ಎಲೆಗಳನ್ನು ಬಾಗಿನ ರೂಪದಲ್ಲಿ ಪ್ರಧಾನ ವಾಗಿ ಇಡುತ್ತಾರೆ. ಹಾಗಾಗಿ ಪೂಜಾ ಸಾಮಾಗ್ರಿಗಳ ಬಳಿಯೂ ಜನರು ಖರೀದಿಸಲು ಮುಂದಾಗಿದ್ದರು.

ಪಟಾಕಿ ಮಾರಾಟ ಜೋರು

ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಹಲವು ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ ಪಟ್ಟಣದಲ್ಲಿ ಪಟಾಕಿ ಎಂದಿನಂತೆ ಮಾರಾಟವಾಗುತ್ತಿದ್ದವು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ತಲೆಯೆತ್ತಿರುವ ಹತ್ತಾರು ಪಟಾಕಿ ಅಂಗಡಿಗಳಲ್ಲಿ ಖರೀದಿ ಜೋರಾಗಿತ್ತು. ಒಂದು ಪಟಾಕಿ ಬಾಕ್ಸ್ ಕನಿಷ್ಟ ೩೦೦ ರಿಂದ ೩ ಸಾವಿರ ರೂ.ವರೆಗೆ ಮಾರಾಟವಾಗುತ್ತಿದ್ದವು.ಪರಿಸರಸ್ನೇಹಿ ಪಟಾಕಿಗಳಿಗಿಂತ ಹಾನಿ ಮಾಡುವ ಪಟಾಕಿಗಳೇ ಹೆಚ್ಚು ಮಾರಾಟವಾಗುತ್ತಿರುವುದು ಮಾಲಿನ್ಯ ನಿಯಂತ್ರಣ ಇಲಾಖೆಗೆ ಗೊತ್ತಿಲ್ಲದ ಸಂಗತಿಯಲ್ಲ ಎನ್ನುವುದು ಸಾರ್ವಜನಿಕರ ಮಾತಾಗಿದೆ.

ಹೂವಿನ ಬೆಲೆಯಲ್ಲಿ ಕುಸಿತ
ಹಿಂದಿನ ವರ್ಷದ ದೀಪಾವಳಿ ಹಬ್ಬಕ್ಕೆ ಹೋಲಿಸಿದರೆ ಈ ವರ್ಷ ಮಳೆಯಿಂದಾಗಿ ಹಬ್ಬದಲ್ಲಿ ಹೂವಿನ ಬೆಲೆ ಕಡಿಮೆ ಇದೆ. ತರಕಾರಿಗಳ ಬೆಲೆಯಲ್ಲೂ ಕಡಿಮೆ ಕಂಡು ಬಂದಿದೆ ಎಂದು ಪಟ್ಟಣದ ಹೂವಿನ ವ್ಯಾಪಾರಿ ವೇಣುಗೋಪಾಲ್ ತಿಳಿಸಿದರು.
ಮಾರುಕಟ್ಟೆಯಲ್ಲಿ ಸೇವಂತಿಗೆ ೧೨೦ ರಿಂದ ೧೫೦ ರೂ, ಗುಲಾಬಿ ೧೫೦ ರಿಂದ ೨೦೦ ರೂ, ಚೆಂಡು ಹೂ ೫೦ ರಿಂದ ೬೦ ರೂ.ಗೆ ಮಾರಾಟವಾದರೆ, ಒಂದು ಜೊತೆ ನಾನಾ ಹೂವಿನ ಹಾರಗಳು ೧೦೦-೧೫೦೦ ರೂಗೆ, ಬಾಳೆಕಂಬ ಜೋಡಿಗೆ ೬೦ ರೂ, ಬೂದುಗುಂಬಳಕಾಯಿ ಕೆ.ಜಿಗೆ ೩೦ ರೂ. ಗೆ ಮಾರಾಟವಾಗುತ್ತಿದ್ದವು. ಸೇಬು ೨೦೦ ರೂ, ದಾಳಿಂಬೆ ೧೬೦ ರೂ, ಬಾಳೆಹಣ್ಣು ೧೨೦ ರೂ., ಕಿತ್ತಲೆ ೧೫೦ ರೂ. ಮಾರಾಟವಾಗುತ್ತಿದ್ದವು.

ಒಟ್ಟಾರೆ ದೀಪಾವಳಿ ಹಬ್ಬ ಎಂದರೆ ಸಾಕು ಅಬಾಲವೃದ್ಧರಾಧಿಯಾಗಿ ಎಲ್ಲರಿಗೂ ಮುದನೀಡುವ ಹಬ್ಬ ಬೆಳಕಿನಂತೆ ಸುಖಶಾಂತಿ ನೆಮ್ಮದಿ ನೀಡಲೆಂದು ಪತ್ರಿಕೆ ಹಾರೈಸುತ್ತದೆ. ಮಕ್ಕಳು ಪಟಾಕಿ ಹಚ್ಚುವಾಗ ಎಚ್ಚರವಹಿಸಿ,ಸಿಹಿಯಾದ ಬಾಳು ನಿಮ್ಮದಾಗಲಿ ಎಂದು ಶುಭಕೋರಲಿದೆ.