ಕೈ ತಪ್ಪಿದ ಟಿಕೆಟ್; ಲಾಲು ಪ್ರಸಾದ್ ಯಾದವ್ ಮನೆ ಮುಂದೆ ಕಣ್ಣೀರು ಹಾಕಿದ ಆರ್‌ಜೆಡಿ ಕಾರ್ಯಕರ್ತ
ಬಿಹಾರ ಚುನಾವಣೆಗೆ ಕೌಂಟ್‌ಡೌನ್ ಆರಂಭವಾಗಿದ್ದು, ಸೀಟ್ ಹಂಚಿಕೆ ಕುರಿತು ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಸಾಕಷ್ಟು ಸಮಸ್ಯೆ ಏರ್ಪಟ್ಟಿದೆ. ಈ ಎಲ್ಲ ಗೊಂದಲಗಳ ಮಧ್ಯೆ ಆರ್‌ಜೆಡಿ ಸೀಟು ಹಂಚಿಕೆ ವಿಚಾರದಲ್ಲಿ ಮೋಸ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

ಆರ್‌ಜೆಡಿ ಕಾರ್ಯಕರ್ತ ಮದನ್ ಷಾ -

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ (Bihar Election) ಮೊದಲ ಹಂತದ ನಾಮಪತ್ರ ಸಲ್ಲಿಕೆಯಾಗಿದೆ. ಆದರೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದ್ದು, ಗೊಂದಲವನ್ನು ಬಗೆಹರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂಟ್ರಿ ಕೊಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಆರ್‌ಜೆಡಿ (Rashtriya Janata Dal) ಹಿರಿಯ ನಾಯಕ ಲಾಲು ಪ್ರಸಾದ್ ಯಾದವ್ (Lalu Prasad Yadav) ಮನೆ ಎದುರು ದೊಡ್ಡ ಹೈಡ್ರಾಮಾವೇ ನಡೆದಿದ್ದು, ಟಿಕೆಟ್ ಕೈತಪ್ಪಿದ ಹತಾಶೆಯಲ್ಲಿ ನಾಯಕರೊಬ್ಬರು ರಸ್ತೆ ಮೇಲೆ ಉರುಳಿ, ಒದ್ದಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿದೆ. ಎಲೆಕ್ಷನ್‌ಗೆ ಕೆಲ ದಿನಗಳು ಬಾಕಿ ಇರುವಾಗಲೇ ಲಾಲು ನಿವಾಸದ ಮುಂದೆ ಭಾನುವಾರ)ನಾಟಕೀಯ ಘಟನೆ ನಡೆದಿದೆ. ಟಿಕೆಟ್ ಸಿಗದ ಹಿನ್ನಲೆ ಹತಾಶೆಗೊಂಡ ಆರ್‌ಜೆಡಿ ನಾಯಕ ಮದನ್ ಷಾ ತಮ್ಮ ಬಟ್ಟೆ ಹರಿದುಕೊಂಡು, ಗೋಳಾಡುತ್ತ, ರಸ್ತೆ ಮೇಲೆ ಹೊರಲಾಡುತ್ತ ಮೂಲಕ ಪಕ್ಷ ತೆಗೆದುಕೊಂಡ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದಾರೆ. ಘಟನೆಯ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಅಲ್ಲದೆ ಲಾಲು ಪ್ರಸಾದ್ ಯಾದವ್ ಸೇರಿದಂತೆ ಪಕ್ಷದ ಕೆಲ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದು, ಸೀಟ್ ನೀಡಲು 2.7 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.
ಮದನ್ ಷಾ ಅವರ ವೈರಲ್ ವಿಡಿಯೊ ಇಲ್ಲಿದೆ:
#WATCH | Bihar: RJD leader Madan Shah tries to chase after party president Lalu Prasad Yadav's car as the former CM arrives at his residence in Patna, over ticket distribution. pic.twitter.com/JbS4pXt4fu
— ANI (@ANI) October 19, 2025
ಈ ಸುದ್ದಿಯನ್ನು ಓದಿ: Viral News: 1.5 ಕೋಟಿ ರೂ. ಖರ್ಚು ಮಾಡಿ ಅದ್ದೂರಿ ವಿವಾಹವಾದ ಜೋಡಿ- ಆದರೆ ಫೋಟೋಗ್ರಾಫರ್‌ಗೆ ಹಣ ನೀಡದೇ ಎಸ್ಕೇಪ್!.
ಮದನ್ ಷಾ ಅವರು ಹಲವು ವರ್ಷಗಳಿಂದ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, 2020ರ ಚುನಾವಣೆಯಲ್ಲಿ ಮಧುಬಾನ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಆದರೆ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಷಾ ಟಿಕೆಟ್ ನೀಡದೇ ಪಕ್ಷ ಶಾಕ್ ನೀಡಿದ್ದು, ಪಕ್ಷದ ಈ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಲಾಲು ಮೇಲೆ ಬ್ರಷ್ಟಾಚಾರದ ಆರೋಪ
2025ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡುವುದಾಗಿ ಲಾಲು ಪ್ರಸಾದ್ ಯಾದವ್ ಅವರು ಭರವಸೆ ನೀಡಿದ್ದರು. ಜತೆಗೆ ಮಧುಬಾನ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿಯೂ ಆಶ್ವಾಸನೆ ನೀಡಿದ್ದರು. ಆದರೆ ಮಧ್ಯಪ್ರವೇಶಿಸಿದ ಸಂಜಯ್ ಯಾದವ್ ನನಗೆ ಟಿಕೆಟ್ ನೀಡಬೇಕಾದರೆ 2.7 ಕೋಟಿ ರೂ. ಹಣ ನೀಡುವಂತೆ ಬೇಡಿಕೆ ಇಟ್ಟರು. ಆದರೆ ನಾನು ಹಣ ನೀಡಲು ಒಪ್ಪದಿದ್ದಾಗ ನನಗೆ ಸಿಗಬೇಕಾಗಿದ್ದ ಟಿಕೆಟ್ ಅನ್ನು ಬೇರೆಯವರಿಗೆ ನೀಡಿದ್ದಾರೆ ಎಂದು ಮದನ್ ಶಾ ಆರೋಪಿಸಿದ್ದಾರೆ.
ಜತೆಗೆ ಸಂತೋಷ್ ಕುಶ್ವಾಹ ಅವರಿಗೆ ಟಿಕೆಟ್ ನೀಡಿರುವುದರ ಕುರಿತು ಅಸಮಾಧಾನ ಹೊರ ಹಾಕಿರುವ ಅವರು, ಅವರು ಬಿಜೆಪಿ ಏಜೆಂಟ್ ಆಗಿದ್ದು, ನನಗೆ ಸಂಜಯ್ ಯಾದವ್ ಹಾಗೂ ತೇಜಸ್ವಿ ಯಾದವ್ ಅವರಿಂದ ಮೋಸವಾಗಿದೆ. ನನಗೆ ಟಿಕೆಟ್ ತಪ್ಪಿಸಿ ಕಳ್ಳನಿಗೆ ಟಿಕೆಟ್ ನೀಡಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮದನ್ ಷಾ ಅವರ ವಿಡಿಯೊ ಹರಿದಾಡುತ್ತಿದ್ದು, ಟಿಕೆಟ್ ಹಂಚಿಕೆಯಲ್ಲಿ ಹಣದ ವ್ಯವಹಾರ ನಡೆದಿದೆಯೇ ಎಂಬ ಪ್ರಶ್ನೆ ಎದ್ದಿದೆ. ಇನ್ನು ಆರೋಪಗಳ ಕುರಿತು ಪಕ್ಷದ ಯಾವುದೇ ಮುಖಂಡರು ಪ್ರತಿಕ್ರಿಯೆ ನೀಡಿಲ್ಲ. ಸೋಮವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ಮಧುಬಾನ್ ಕ್ಷೇತ್ರದಿಂದ ಆರ್‌ಜೆಡಿ ಅಥವಾ ಅದರ ಮೈತ್ರಿ ಪಕ್ಷ ಸ್ಪರ್ಧಿಸಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.