Champions Trophy: 'ಅಭಿಮಾನಿಯಾಗಿ ತಾಳ್ಮೆಯಿಂದ ಇರುವುದು ಅಸಾಧ್ಯ'- ಎಂಎಸ್ ಧೋನಿ!
ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಅಂಗವಾಗಿ ಹೊರಬಂದಿರುವ ಪ್ರೋಮೋದಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಟೀಮ್ ಇಂಡಿಯಾವನ್ನು ಬೆಂಬಲಿಸಿದ್ದಾರೆ. ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ ರೋಹಿತ್ ಶರ್ಮಾ ಪಡೆ ತಮ್ಮ ಅಭಿಯಾನ ಆರಂಭಿಸಲಿದೆ.
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ (Champions Trophy) ಅಂಗವಾಗಿ ಸ್ಟಾರ್ ಸ್ಪೋರ್ಟ್ಸ್ ಹೊರತಂದಿರುವ ಪ್ರೋಮೋದಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಟೀಮ್ ಇಂಡಿಯಾಗೆ ಶುಭ ಹಾರೈಸಿದ್ದಾರೆ. ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ ಈ ಟೂರ್ನಿ ಆರಂಭವಾಗಲಿದ್ದು, ರೋಹಿತ್ ಶರ್ಮಾ (Rohit Sharma) ಬಳಗ ತನ್ನೆಲ್ಲಾ ಲೀಗ್ ಪಂದ್ಯಗಳನ್ನು ಯುಎಇಯಲ್ಲಿ ಆಡಲಿದೆ.
ಪ್ರೋಮೋದಲ್ಲಿ ಎಂಎಸ್ ಧೋನಿ ಅವರು ಒಬ್ಬ ನಾಯಕನಾಗಿ ತಾಳ್ಮೆಯಿಂದ ಇರಬಹುದು, ಆದರೆ ಅಭಿಮಾನಿಯಾಗಿ ಶಾಂತವಾಗಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 2013ರಲ್ಲಿ ತಮ್ಮ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ತಮಗಾದ ಅನುಭವಗಳ ಬಗ್ಗೆಯೂ ಧೋನಿ ಮಾತನಾಡಿದ್ದಾರೆ ಮತ್ತು ಒಂದೇ ಒಂದು ಸೋತರೂ ಕೂಡ ಟೂರ್ನಿಯಿಂದ ಹೊರಬೀಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ತಮ್ಮನ್ನು ಶಾಂತವಾಗಿ ಇರಿಸಿಕೊಳ್ಳಲು "ಧೋನಿ ರೆಫ್ರಿಜಿರೇಟರ್ ಸಿಸ್ಟಮ್" ಅನ್ನು ಅನುಸರಿಸುತ್ತೇನೆ ಎಂದು ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಅನುಮಾನ?; ಬದಲಿ ಬೌಲರ್ ಸಿದ್ಧಪಡಿಸಿದ ಬಿಸಿಸಿಐ!
ಭಾರತ ತಂಡ ಬಲಿಷ್ಠವಾಗಿದೆ: ಎಂ ಎಸ್ ಧೋನಿ
"ಯಾವಾಗ ನಾನು ನಾಯಕನಾಗಿ ತಂಡವನ್ನು ಮುನ್ನಡೆಸುತ್ತೇನೋ ಆಗ ತಾಳ್ಮೆಯಿಂದ ಇರುತ್ತೇನೆ, ಆದರೆ ಚಾಂಪಿಯನ್ಸ್ ಟ್ರೋಫಿಯನ್ನು ಅಭಿಮಾನಿಯಾಗಿ ವೀಕ್ಷಿಸುವಾಗ ಅದು ಸಾಧ್ಯವಿಲ್ಲ. ನಮ್ಮ ತಂಡ(ಭಾರತ) ಬಲಿಷ್ಠವಾಗಿದೆ. ಆದರೆ ಒಂದೇ ಒಂದು ಪಂದ್ಯದಲ್ಲಿ ಎಡವಿದರೂ ಟೂರ್ನಿಯಿಂದ ಹೊರಬೀಳುವ ಅಪಾಯವಿದೆ. ಆಗ ತಾಳ್ಮೆ ಕಳೆದುಕೊಳ್ಳುವುದರಿಂದ ಒತ್ತಡವೂ ಹೆಚ್ಚಾಗುತ್ತದೆ," ಎಂದು ಸ್ಟಾರ್ ಸ್ಪೋಟ್ಸ್‌ಗೆ ಎಂಎಸ್ ಧೋನಿ ತಿಳಿಸಿದ್ದಾರೆ.
ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದ ಎಂಎಸ್‌ಡಿ
ಟೀಮ್ ಇಂಡಿಯಾದ ಯಶಸ್ವಿ ನಾಯಕರಾಗಿದ್ದ ಧೋನಿ ತಮ್ಮ ನಾಯಕತ್ವದಲ್ಲಿ 2009 ಹಾಗೂ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ 2013ರಲ್ಲಿ ಯುವಕರ ತಂಡದೊಂದಿಗೆ ಅಜೇಯರಾಗಿ ಫೈನಲ್ ತಲುಪಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಅನುಭವಿ ಆಟಗಾರರಾದ ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್ ಹಾಗೂ ಗೌತಮ್ ಗಂಭೀರ್ ಅವರನ್ನು ತಂಡದಿಂದ ಹೊರಗಿಟ್ಟು ಯುವ ಆಟಗಾರರಿಗೆ ಧೋನಿ ಮಣೆ ಹಾಕುವ ಧೈರ್ಯ ತೋರಿದ್ದರು.
MS DHONI IN CHAMPIONS TROPHY PROMO.🐐
— Johns. (@CricCrazyJohns) January 29, 2025
- The Brand of Thala.....!!!! pic.twitter.com/YhzRQ16U9t
ಫಲ ನೀಡಿದ ರಣತಂತ್ರ
ಎಂಎಸ್ ಧೋನಿ ಮಾಡಿದ ರಣತಂತ್ರವು ಕೈಹಿಡಿದು ಯುವ ಆಟಗಾರರು ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಕೆಚ್ಚೆದೆಯ ಆಟ ತೋರಿಸಿ ಎದುರಾಳಿಗಳನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಆದರೆ 2017ರಲ್ಲಿ ಫೈನಲ್ ಹಂತಕ್ಕೆ ತಲುಪಿದ್ದ ಟೀಮ್ ಇಂಡಿಯಾ, ತಮ್ಮ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧ 160 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿತ್ತು. ಆ ಮೂಲಕ ಪಾಕಿಸ್ತಾನ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಗೆದ್ದು ಸಂಭ್ರಮಿಸಿತ್ತು.
ಫೆ.23 ರಂದು ಮಹಾಕದನ
2017ರ ಚಾಂಪಿಯನ್ಸ್ ಟ್ರೋಫಿಯ ಸೋಲಿನ ಪ್ರತೀಕಾರ ತೀರಿಸಿಕೊಳ್ಳಲು ಹೊರಟಿರುವ ಭಾರತ ತಂಡ ಫೆಬ್ರವರಿ 23 ರಂದು ದುಬೈನಲ್ಲಿ ಪಾಕಿಸ್ತಾನ ತಂಡದ ಸವಾಲು ಎದುರಿಸಲಿದೆ. ಅದಕ್ಕೂ ಮುನ್ನ ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ಸೆಣಸಾಟ ನಡೆಸುವ ಮೂಲಕ ರೋಹಿತ್ ಶರ್ಮಾ ಪಡೆ ತಮ್ಮ ಅಭಿಯಾನ ಆರಂಭಿಸಲಿದೆ.