ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಭೂಮಿಯ ಸುತ್ತ ಕ್ಲಾರ್ಕ್ ಕಕ್ಷೆ ಇದೆ, ಆ ಹೆಸರು ಏಕಿದೆ ?

ಎಲ್ಲಿಯವರೆಗೆಂದರೆ ನಮಗಿದೆಲ್ಲ ಒಂಥರ ಸಸಾರವೇ ಆಗಿಬಿಟ್ಟಿದೆ. ಆದರೆ 1964ರಲ್ಲಿ ಅದೊಂದು ಅದ್ಭುತ ವೆಂದೇ ಅನಿಸಿದ್ದಿರ ಬಹುದು. ಸೈನ್ಸ್ ಫಿಕ್ಷನ್ ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ಮಾತ್ರ ಇರುವಂಥದ್ದು ಸಾಕಾರಗೊಂಡ ಅನುಭವ ವಾಗಿರಬಹುದು. ಆಶ್ಚರ್ಯವೆಂದರೆ ನಿಜಕ್ಕೂ ಒಬ್ಬ ವಿಜ್ಞಾನ ಲೇಖಕನು ದಶಕಗಳ ಹಿಂದೆ- ಅಂತರಿಕ್ಷಕ್ಕೆ ಉಪಗ್ರಹಗಳನ್ನು ಹಾರಿಸುವುದೆಲ್ಲ ದೂರದ ಕನಸಿನ ಮಾತಾಗಿದ್ದ ಕಾಲದಲ್ಲಿ- ಬರೆದಿದ್ದ ಕಲ್ಪನೆಯೇ ಸಾಕಾರಗೊಂಡಿದ್ದಾಗಿತ್ತು.

ಭೂಮಿಯ ಸುತ್ತ ಕ್ಲಾರ್ಕ್ ಕಕ್ಷೆ ಇದೆ, ಆ ಹೆಸರು ಏಕಿದೆ ?

ಅಂಕಣಕಾರ ಶ್ರೀವತ್ಸ ಜೋಶಿ

ತಿಳಿರುತೋರಣ

srivathsajoshi@yahoo.com

ಅಟ್ಟ ಹತ್ತಿದ ಮೇಲೆ ಏಣಿಯನ್ನು ಮರೆಯಬಾರದು ಅಂತೊಂದು ಹಿತನುಡಿ. ಈಗ ಯಾರೋ ಏಣಿ ಮರೆತವರ ಉದಾಹರಣೆ ಸಿಕ್ಕಿತೆಂದು ಹೇಳುತ್ತಿರುವುದಲ್ಲ. ಅಟ್ಟದಲ್ಲೇ ಹುಟ್ಟಿದವರಿಗೆ- ಈ ಹಿಂದೆ ಏನು ಪರಿಸ್ಥಿತಿಯಿತ್ತು, ಇಲ್ಲಿಗೆ ಬರುವುದು ಹೇಗೆ ಸಾಧ್ಯವಾಯ್ತು, ಅದರಲ್ಲಿ ಏಣಿಯ ಪಾತ್ರ ಏನಿತ್ತು ಅಂತೆಲ್ಲ ಗೊತ್ತೇ ಇರುವುದಿಲ್ಲ!

ಅಂಥದೊಂದು ಏಣಿಯ ವಿಚಾರ ಈ ವಾರ. ಸಮಷ್ಟಿಯಾಗಿ ಮನುಕುಲವೆಲ್ಲ ನೆನಪಿಸಿಕೊಳ್ಳಬೇಕಾದ್ದು. ಆಗಸ್ಟ್ 19, 1964. ಅಮೆರಿಕದ ಕೇಪ್ ಕೆನ್ವೆರಾಲ್ ಉಡ್ಡಯನ ಕೇಂದ್ರದಿಂದ ಡೆಲ್ಟಾ-ಡಿ ರ‍್ಯಾಕೆಟ್ ಆಗಸಕ್ಕೆ ಚಿಮ್ಮಿತು. ಸಿಂಕಾಮ್-3 ಎಂಬ ಉಪಗ್ರಹವನ್ನು ಭೂತಲದಿಂದ 35784 ಕಿ.ಮೀ. ಎತ್ತರದಲ್ಲಿ ಸಮಭಾಜಕ ವೃತ್ತಕ್ಕೆ ಸಮಾಂತರವಾದ ಕಕ್ಷೆಯಲ್ಲಿ ಯಶಸ್ವಿ ಯಾಗಿ ಸ್ಥಾಪಿಸಿತು. ಆ ಎತ್ತರದಲ್ಲಿ ಉಪಗ್ರಹವು ಭೂಮಿ ತನ್ನ ಅಕ್ಷದಲ್ಲಿ ಸುತ್ತುವ ವೇಗದಷ್ಟೇ ವೇಗದಲ್ಲಿ ಸುತ್ತತೊಡ ಗಿತು, ಶಾಂತಸಾಗರಕ್ಕೆ ಮೇಲಿನ ಒಂದು ಬಿಂದುವಿನಲ್ಲಿ ನಿಶ್ಚಲವಾಗಿ ಇದೆಯೇನೋ ಎಂಬಂತಾಯ್ತು.

ಇದನ್ನೂ ಓದಿ: Srivathsa Joshi Column: ಅ.ರಾ.ಮಿತ್ರ ಅಜೇಯ 90; ಈವತ್ತು ‘ಮಿತ್ರಾರ್ಜಿತ’ ತುಂಬ್ಹೊತ್ತು !

ಹಾಗಿರಬೇಕೆಂದೇ ಅದನ್ನು ಕಳುಹಿಸಿದ್ದು. 1964ರ ಅಕ್ಟೋಬರ್‌ನಲ್ಲಿ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ ಪಂದ್ಯಗಳ ದೃಶ್ಯಾವಳಿಯನ್ನು ಅಮೆರಿಕದಲ್ಲಿ ಟಿವಿಯಲ್ಲಿ ತೋರಿಸುವುದು ಸಿಂಕಾಮ್-3 ಉಪಗ್ರಹದಿಂದಾಗಿ ಸಾಧ್ಯವಾಯಿತು. ತನ್ಮೂ ಲಕ ಜಾಗತಿಕ ದೂರಸಂಪರ್ಕದ ಹೊಸ ಅಧ್ಯಾಯವೊಂದು ತೆರೆಯಿತು. ಈಗ ತಂತ್ರಜ್ಞಾನದಲ್ಲಿ ನೂರು ಪಟ್ಟು ಸಾಮರ್ಥ್ಯದ 500ಕ್ಕೂ ಹೆಚ್ಚು ಉಪಗ್ರಹಗಳು ಭೂತಲದಿಂದ ಅಷ್ಟೇ ಎತ್ತರದ ಕಕ್ಷೆಯಲ್ಲಿ ಬೇರೆಬೇರೆ ಬಿಂದುಗಳಲ್ಲಿ ಸ್ಥಾಪಿತವಾಗಿವೆ; ಭೂಮಿಯ ಜತೆಜತೆಗೇ ನಿರಂತರ ಸುತ್ತುತ್ತಿವೆ; ಭೂಮಿಯ ಒಂದೊಂದು ಚದರ ಇಂಚಿಗೂ ಟೆಲಿವಿಷನ್, ರೇಡಿಯೊ, ಟೆಲಿಫೋನ್ ಮತ್ತಿತರ ದೂರಸಂಪರ್ಕ ಸೇವೆಗಳನ್ನು ಸಾಧ್ಯವಾಗಿಸಿವೆ.

ಎಲ್ಲಿಯವರೆಗೆಂದರೆ ನಮಗಿದೆಲ್ಲ ಒಂಥರ ಸಸಾರವೇ ಆಗಿಬಿಟ್ಟಿದೆ. ಆದರೆ 1964ರಲ್ಲಿ ಅದೊಂದು ಅದ್ಭುತ ವೆಂದೇ ಅನಿಸಿದ್ದಿರಬಹುದು. ಸೈನ್ಸ್ ಫಿಕ್ಷನ್ ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ಮಾತ್ರ ಇರುವಂಥದ್ದು ಸಾಕಾರಗೊಂಡ ಅನುಭವ ವಾಗಿರಬಹುದು. ಆಶ್ಚರ್ಯವೆಂದರೆ ನಿಜಕ್ಕೂ ಒಬ್ಬ ವಿಜ್ಞಾನ ಲೇಖಕನು ದಶಕಗಳ ಹಿಂದೆ- ಅಂತರಿಕ್ಷಕ್ಕೆ ಉಪಗ್ರಹಗಳನ್ನು ಹಾರಿಸುವುದೆಲ್ಲ ದೂರದ ಕನಸಿನ ಮಾತಾಗಿದ್ದ ಕಾಲದಲ್ಲಿ- ಬರೆದಿದ್ದ ಕಲ್ಪನೆಯೇ ಸಾಕಾರಗೊಂಡಿದ್ದಾಗಿತ್ತು.

2.2

ವಿಜ್ಞಾನ ಲೇಖಕನೊಬ್ಬ ದೂರಸಂಪರ್ಕ ಉಪಗ್ರಹಗಳ ಪಿತಾಮಹನೆನಿಸಿದ ಅದ್ಭುತರಮ್ಯ ಕಥೆಯಿದು. ಆ ಜಗತ್ಪ್ರಸಿದ್ಧ ವಿಜ್ಞಾನ ಲೇಖಕ ಸರ್ ಆರ್ಥರ್ ಚಾರ್ಲ್ಸ್ ಕ್ಲಾರ್ಕ್. 80ಕ್ಕೂ ಹೆಚ್ಚು ಪುಸ್ತಕಗಳು, 500ಕ್ಕೂ ಹೆಚ್ಚು ಲೇಖನಗಳು, ಸಣ್ಣಕತೆ ಗಳು ಅವರ ಲೇಖನಿಯಿಂದ ಮೂಡಿವೆ. ಭೂಮಿಯ ಸುತ್ತ ಕ್ಲಾರ್ಕ್ ಕಕ್ಷೆ ಇದೆ, ಆ ಹೆಸರು ಏಕಿದೆ? ಮುಂತಾದ ಕೃತಿಗಳಂತೂ ಪ್ರಖ್ಯಾತವಷ್ಟೇ ಅಲ್ಲ ಪ್ರಭಾವಶಾಲಿ ಎನಿಸಿದವು. ಇಂಗ್ಲೆಂಡ್‌ನ ಸೊಮರ್‌ಸೆಟ್ ಕೌಂಟಿಯ ಮೈನ್‌ಹೆಡ್ ಎಂಬಲ್ಲಿ ಡಿಸೆಂಬರ್ 16, 1917ರಂದು ಜನಿಸಿದ ಕ್ಲಾರ್ಕ್‌ಗೆ ಬಾಲ್ಯದಿಂದಲೇ ವಿಜ್ಞಾನದಲ್ಲಿ ಆಸಕ್ತಿ.

ಪಳೆಯುಳಿಕೆಗಳ ಸಂಗ್ರಹ, ಖಗೋಲಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿದುಕೊಳ್ಳುವುದು, ಅಮೆರಿಕದಿಂದ ಪ್ರಕಟವಾಗುವ ವಿಜ್ಞಾನ ಪತ್ರಿಕೆಗಳನ್ನು ತರಿಸಿ ಓದುವುದು ನೆಚ್ಚಿನ ಹವ್ಯಾಸಗಳು. ಬ್ರಿಟಿಷ್ ಇಂಟರ್‌ಪ್ಲಾನೆಟರಿ ಸೊಸೈಟಿಯ ಸದಸ್ಯತ್ವವೂ ಇತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಶಿಕ್ಷಣಕ್ಕೆ ಬೇಕಾದಷ್ಟು ಆರ್ಥಿಕ ಸ್ಥಿತಿ ಮನೆಯಲ್ಲಿರಲಿಲ್ಲ. ಹಾಗಾಗಿ 19 ವರ್ಷ ಪ್ರಾಯದಲ್ಲಿ ಯುಕೆ ಎಜುಕೇಷನ್ ಬೋರ್ಡ್‌ನಲ್ಲಿ ಪಿಂಚಣಿ ಲೆಕ್ಕಪರಿಶೋಧಕನಾಗಿ ಉದ್ಯೋಗಕ್ಕೆ ಸೇರ್ಪಡೆ.

ಆಗಲೇ ಎರಡನೇ ಪ್ರಪಂಚಯುದ್ಧ ಆರಂಭ. ಅದರಲ್ಲಿ ಪಾಲ್ಗೊಳ್ಳಲಿಕ್ಕಾಗುವಂಥ ಶಿಕ್ಷಣ ಪಡೆದು 1941ರಲ್ಲಿ ರಾಯಲ್ ಏರ್ ಫೋರ್ಸ್‌ನಲ್ಲಿ ರೇಡಾರ್ ಟೆಕ್ನಿಷಿಯನ್ ವೃತ್ತಿ. ಯುದ್ಧಸಮಯದಲ್ಲಿ ಗ್ರೌಂಡ್ ಕಂಟ್ರೋಲ್ಡ್ ಎಪ್ರೋಚ್ (ಜಿಸಿಎ) ರೇಡಾರ್ ನಿರ್ಮಾಣದಲ್ಲಿ ಸೇವೆ. ಯುದ್ಧವಿಮಾನಗಳು ಎಂಥ ಹವಾಮಾನದಲ್ಲಾದರೂ ಸುರಕ್ಷಿತವಾಗಿ ಇಳಿಯುವುದಕ್ಕೆ ಜಿಸಿಎ ರೇಡಾರ್ ಬಳಕೆಯಾಗುತ್ತದೆ. 1963ರಲ್ಲಿ ಕ್ಲಾರ್ಕ್ ಬರೆದ ‘ಗ್ಲೈಡ್ ಪಾಥ್’ ಕಾದಂಬರಿ ಆ ಅನುಭವದಿಂದಲೇ ಮೂಡಿದ್ದಂತೆ. ಅಕ್ಟೋಬರ್ 1945. ಪ್ರಪಂಚಯುದ್ಧಕ್ಕೆ ತೆರೆಬಿದ್ದು ಒಂದು ತಿಂಗಳಾಗಿತ್ತಷ್ಟೇ.

ಕ್ಲಾರ್ಕ್ ಮಹತ್ವಾಕಾಂಕ್ಷೆಯ ಪತ್ರವೊಂದನ್ನು ‘ವೈರ್‌ಲೆಸ್ ವರ್ಲ್ಡ್’ ಎಂಬ ಬ್ರಿಟಿಷ್ ಮ್ಯಾಗಝಿನ್‌ನಲ್ಲಿ ಪ್ರಕಟಿಸಿದರು. Extra-Terrestrial Relays – Can Rocket Stations Give World-Wide Radio Coverage? ಎಂದು ಪತ್ರದ ಶೀರ್ಷಿಕೆ. ಬಾಹ್ಯಾಕಾಶ ತಾಂತ್ರಿಕತೆಯನ್ನು ಬಳಸಿ ಜಾಗತಿಕ ದೂರಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿಕ್ಕೆ ಸವಿವರ ಯೋಜನೆಯೊಂದನ್ನು ಕ್ಲಾರ್ಕ್ ಅದರಲ್ಲಿ ಮಂಡಿಸಿದ್ದರು. ಪತ್ರದ ಒಕ್ಕಣೆ ಹೀಗಿತ್ತು: “ಭೂಮಿಯ ಮೇಲೆಯೇ ತಂತಿಗಳ ಬೃಹತ್ ಜಾಲವನ್ನು ಸ್ಥಾಪಿಸಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ದೂರವಾಣಿ ಸಂಪರ್ಕ ಸಾಧ್ಯವಿದೆಯಾದರೂ ದೂರ ಹೆಚ್ಚಿದಂತೆಲ್ಲ ದುಬಾರಿಯಾಗುತ್ತದೆ, ಗುಣಮಟ್ಟ ತಗ್ಗುತ್ತದೆ.

ಟೆಲಿವಿಷನ್ ಸಿಗ್ನಲ್‌ಗಳದಂತೂ ಇನ್ನೂ ದಾರುಣ ಅವಸ್ಥೆ. ಒಂದು ಟಿವಿ ಟ್ರಾನ್ಸ್‌ಮಿಟರ್‌ನ ಪ್ರಸಾರ ಹೆಚ್ಚೆಂದರೆ 100 ಮೈಲು ವ್ಯಾಪ್ತಿಯನ್ನು ತಲುಪೀತು. ಬ್ರಿಟನ್ ನಂಥ ದೇಶದೆಲ್ಲೆಡೆ ಪ್ರಸಾರವಾಗಬೇಕಿದ್ದರೆ ಪ್ರತಿ 50 ಮೈಲುಗಳಿಗೊಂದು ಟ್ರಾನ್ಸ್‌ ಮಿಟರ್ ಬೇಕು. ಅದಕ್ಕಿಂತ, ಬಾಹ್ಯಾಕಾಶದಲ್ಲಿ ರಿಲೇ ಘಟಕಗಳನ್ನು ಸ್ಥಾಪಿಸಿದರೆ ಬಹಳ ಪ್ರಯೋಜನ ವಾಗುತ್ತದೆ. ಭೂತಲ ದಿಂದ ಸುಮಾರು 36000 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಅಂಥ ಘಟಕವನ್ನಿಟ್ಟರೆ ಒಂದು ಸುತ್ತು ಬರಲಿಕ್ಕೆ 24 ಗಂಟೆ

ಬೇಕಾಗುತ್ತದೆ. ಅಷ್ಟು ಹೊತ್ತಿನಲ್ಲಿ ಭೂಮಿಯೂ ಒಂದಾವರ್ತಿ ಸುತ್ತುವುದರಿಂದ ರಿಲೇ ಘಟಕವು ಪ್ರತಿಕ್ಷಣವೂ ಭೂಮಿಯ ಮೇಲಿನ ನಿರ್ದಿಷ್ಟವಾದೊಂದು ಬಿಂದುವಿನತ್ತಲೇ ಮುಖ ಮಾಡಿರುತ್ತದೆ. ಭೂಮಿಯ ಮೇಲಿಂದ ಆ ಘಟಕಕ್ಕೆ ಸಂಜ್ಞೆಗಳನ್ನು ಕಳುಹಿಸಿದರೆ, ಅದರಲ್ಲಿರುವ ಗ್ರಾಹಕ ಮತ್ತು ಪ್ರೇಷಕಗಳು ಸಂಜ್ಞೆಗಳ ಮರುಪ್ರಸರಣ ಮಾಡಬಲ್ಲವು.

ವಾತಾವರಣವನ್ನು ಸಶಕ್ತವಾಗಿ ತೂರಿಕೊಂಡು ಹೋಗಬಲ್ಲ ಕಂಪನಾಂಕ ಅಳವಡಿಸಿದ ರಾಯ್ತು. ಕಕ್ಷೆಯಲ್ಲಿರುವ ಒಂದು ರಿಲೇ ಘಟಕವು ಸರಿಸುಮಾರು ಅರ್ಧ ಭೂಗೋಲವನ್ನು ವ್ಯಾಪಿಸಬಲ್ಲದು. ಮೂರು ಘಟಕಗಳನ್ನು ಮೂರು ಬಿಂದುಗಳಲ್ಲಿ ಸ್ಥಾಪಿಸಿದರೆ ಇಡೀ ಪ್ರಪಂಚವನ್ನು ವ್ಯಾಪ್ತಿಪ್ರದೇಶಕ್ಕೆ ಒಳಪಡಿಸಬಹುದು!" ಅಂಥ ರಿಲೇ ಘಟಕಗಳನ್ನು ಕಕ್ಷೆಯಲ್ಲಿ ಸ್ಥಾಪಿಸಿದರೆ ಅವುಗಳ ಶಕ್ತಿಸಾಮರ್ಥ್ಯ ಎಷ್ಟಿರಬೇಕು ಎಂಬ ಲೆಕ್ಕ ಸಹ ಮಾಡಿ, ಭೂಮಿ ಮೇಲೆ 50 ಮೈಲುಗಳಿಗೊಂದರಂತೆ ಟ್ರಾನ್ಸ್‌ ಮಿಟರ್‌ಗಳನ್ನು ಕಟ್ಟುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಸಾಽಸಬಹುದು ಎಂಬ ವಿವರಗಳನ್ನೂ ಕ್ಲಾರ್ಕ್ ಒದಗಿಸಿದ್ದರು. ಅವರ ದೂರದೃಷ್ಟಿ ಎಷ್ಟು ದಶಕಗಳ ಮುಂದಿನ ಚಿತ್ರಣ ಕಲ್ಪಿಸಿತ್ತು ಮತ್ತು ಅದಕ್ಕೆ ತಕ್ಕ ಆಲೋಚನೆ ಮಾಡಿತ್ತೆಂಬುದು ಗಮನಾರ್ಹ.

ಏಕೆಂದರೆ ವಾಣಿಜ್ಯಮಟ್ಟದಲ್ಲಿ ಟೆಲಿವಿಷನ್ ಪ್ರಸಾರ ಆಗಿನ್ನೂ ಪ್ರಾಯೋಗಿಕ ರೀತಿಯಲ್ಲಷ್ಟೇ ನಡೆದು ಶೈಶವಾವಸ್ಥೆಯಲ್ಲಿತ್ತು. ಯುದ್ಧದಿಂದಾಗಿ ಪ್ರಗತಿ ಕುಂಠಿತವಾಗಿತ್ತು. ಜರ್ಮನಿ ದೇಶದಿಂದ ವಿ-2 ಎಂಬೊಂದು ಕ್ಷಿಪಣಿಯನ್ನು ಆಗಸಕ್ಕೆ ಚಿಮ್ಮಿಸ ಲಾಗಿತ್ತು ಎನ್ನುವುದನ್ನು ಬಿಟ್ಟರೆ ಮನುಷ್ಯನಿರ್ಮಿತ ಉಪಕರಣ ಯಾವುದೂ ಬಾಹ್ಯಾಕಾಶವನ್ನು ಪ್ರವೇಶಿಸಿರಲಿಲ್ಲ. ಅಂಥದ್ರಲ್ಲಿ ಭೂಮಿಯಿಂದ ಕರಾರುವಾಕ್ಕಾಗಿ 36000 ಕಿ.ಮೀ. ದೂರದ ಕಕ್ಷೆಯಲ್ಲಿ ಉಪಗ್ರಹವನ್ನು ಸ್ಥಾಪಿಸುವಂಥ ವಿಚಾರವೆಲ್ಲ ಆಗೋದಲ್ಲ ಹೋಗೋದಲ್ಲ ಎಂದು ಪಕ್ಕಕ್ಕೆ ಸರಿಸುವ ಪರಿಸ್ಥಿತಿ. ಆದರೆ ಕ್ಲಾರ್ಕ್‌ಗೆ ಸ್ಪಷ್ಟ ಕಲ್ಪನೆ ಇತ್ತು.

ಡಿಸೆಂಬರ್ 18, 1958ರಂದು ಅಮೆರಿಕದ ಭೂಸೇನೆಯು Signal Communications by Orbital Relay Equipment (SCORE) ಎಂಬ ಖಂಡಾಂತರ ಕ್ಷಿಪಣಿಗೆ ರೇಡಿಯೊ ಪ್ರಸಾರಕ ಘಟಕವನ್ನು ಅಂಟಿಸಿ ಉಡಾವಣೆ ಮಾಡಿತು. ಅದೇನೂ ದೂರಸಂಪರ್ಕ ಉಪಗ್ರಹ ಆಗಿರಲಿಲ್ಲ; ಭೂಮಿಯಿಂದ ಕಳಿಸಿದ ಸಿಗ್ನಲ್‌ಗಳನ್ನು ಗ್ರಹಿಸುವುದು, ಮರು ಪ್ರಸಾರಿ ಸುವುದೆಲ್ಲ ಅದಕ್ಕೆ ಸಾಧ್ಯವಿರಲಿಲ್ಲ. ಆಗಿನ ಅಮೆರಿಕಾಧ್ಯಕ್ಷ ಡ್ವೈಟ್ ಐಸನ್ಹವರ್‌ರ ಧ್ವನಿಮುದ್ರಿತ ಶುಭಾಶಯ ಸಂದೇಶ ವೊಂದನ್ನು ಪ್ರಪಂಚಕ್ಕೆ ಬಿತ್ತರಿಸುವುದನ್ನು ಬಿಟ್ಟರೆ ಬೇರಾವ ಸಂಪರ್ಕಸಾಧ್ಯತೆಗಳೂ ಅದಕ್ಕಿರಲಿಲ್ಲ. ಐದು ವಾರಗಳೊಳಗೆ ಅದರ ಆಯುಷ್ಯ ತೀರಿತು. ಬೆಂಕಿಯುಂಡೆಯಾಗಿ ಅದು ಭೂಮಿಗೆ ಮರಳಿತು. .

ಉಪಗ್ರಹ ಆಧರಿತ ದೂರಸಂಪರ್ಕ ವ್ಯವಸ್ಥೆ ಬಗ್ಗೆ ಕ್ಲಾರ್ಕ್ ಅಷ್ಟೊಂದು ವಿವರವಾದ ಯೋಜನೆಯನ್ನು ಮಂಡಿಸಿದರು. ಅದನ್ನೆಲ್ಲ ಅಭಿವೃದ್ಧಿಪಡಿಸಲು 50 ವರ್ಷ ಬೇಕಾದೀತು ಎಂಬ ಅವರ ಅಂದಾಜು ಮಾತ್ರ ಅಡಿಮೇಲಾಯಿತು. 1957ರ ಅಕ್ಟೋಬರ್ 4ರಂದು, ಅಂದರೆ ವೈರ್‌ಲೆಸ್ ವರ್ಲ್ಡ್ ಮ್ಯಾಗಝಿನ್ ನಲ್ಲಿ ಕ್ಲಾರ್ಕ್ ಪತ್ರ ಪ್ರಕಟವಾಗಿ 12 ವರ್ಷಗಳ ತರು
ವಾಯ ಸೋವಿಯತ್ ಒಕ್ಕೂಟವು ಸ್ಪೂಟ್ನಿಕ್-1 ಉಪಗ್ರಹವನ್ನು ಅಂತರಿಕ್ಷಕ್ಕೆ ಹಾರಿಸಿತು. ಪ್ರಪಂಚದ ಮೊತ್ತಮೊದಲ ಕೃತಕ ಉಪಗ್ರಹವೆಂಬ ಖ್ಯಾತಿ ಅದರದಾಯಿತು. ಬಾಹ್ಯಾಕಾಶ ತಂತ್ರಜ್ಞಾನದ ಹೊಸ ಶಕೆಯೊಂದು ಆರಂಭವಾಯಿತು. ಮಿಲಿಟರಿ, ವೈಜ್ಞಾನಿಕ ಸಂಶೋಧನೆ, ವಾಣಿಜ್ಯ ಉದ್ದೇಶಗಳಿಗಾಗಿ ಕೃತಕ ಉಪಗ್ರಹಗಳನ್ನು ತಯಾರಿಸುವ ಬಗ್ಗೆ ಬೇರೆ ದೇಶಗಳೂ ಮನಸ್ಸು ಮಾಡಿದವು.

ಡಿಸೆಂಬರ್ 18, 1958ರಂದು ಅಮೆರಿಕದ ಭೂಸೇನೆಯು Signal Communications by Orbital Relay Equipment (SCORE) ಎಂಬ ಖಂಡಾಂತರ ಕ್ಷಿಪಣಿಗೆ ರೇಡಿಯೊ ಪ್ರಸಾರಕ ಘಟಕವನ್ನು ಅಂಟಿಸಿ ಉಡಾವಣೆ ಮಾಡಿತು. ಅದೇನೂ ದೂರಸಂಪರ್ಕ ಉಪಗ್ರಹ ಆಗಿರಲಿಲ್ಲ; ಭೂಮಿಯಿಂದ ಕಳಿಸಿದ ಸಿಗ್ನಲ್‌ಗಳನ್ನು ಗ್ರಹಿಸುವುದು, ಮರು ಪ್ರಸಾರಿಸುವುದೆಲ್ಲ ಅದಕ್ಕೆ ಸಾಧ್ಯವಿರಲಿಲ್ಲ. ಆಗಿನ ಅಮೆರಿಕಾಧ್ಯಕ್ಷ ಡ್ವೈಟ್ ಐಸನ್ಹವರ್‌ರ ಧ್ವನಿಮುದ್ರಿತ ಶುಭಾಶಯ ಸಂದೇಶವೊಂದನ್ನು ಪ್ರಪಂಚಕ್ಕೆ ಬಿತ್ತರಿಸುವುದನ್ನು ಬಿಟ್ಟರೆ ಬೇರಾವ ಸಂಪರ್ಕಸಾಧ್ಯತೆಗಳೂ ಅದಕ್ಕಿರಲಿಲ್ಲ. ಐದು ವಾರಗಳೊಳಗೆ ಅದರ ಆಯುಷ್ಯ ತೀರಿತು. ಬೆಂಕಿಯುಂಡೆಯಾಗಿ ಅದು ಭೂಮಿಗೆ ಮರಳಿತು.

ಆದರೆ ಉಪಗ್ರಹ ನಿರ್ಮಾಣದತ್ತ ಅದೊಂದು ಪ್ರಮುಖ ಹೆಜ್ಜೆಯೇ ಆಗಿತ್ತು. ಭವಿಷ್ಯದಲ್ಲಿ ಇನ್ನಷ್ಟು ಕೌಶಲವಿರುವ ಮತ್ತು ಸಂಕೀರ್ಣವಾದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಕ್ಕೆ ನಾಂದಿಯಾಯಿತು. ಆಮೇಲೆ ಎಕೊ-1 ಎಂಬ ಬಲೂನ್ ರೀತಿಯ ರಚನೆಯನ್ನು ಅಭಿವೃದ್ಧಿಪಡಿಸಲಾಯಿತು. 30 ಮೀಟರ್ ವ್ಯಾಸದ, ಅಲ್ಯುಮಿನಿಯಂ ಲೇಪವುಳ್ಳ ಪ್ಲಾಸ್ಟಿಕ್‌ನ ಗೋಲಾಕೃತಿ. ರೇಡಿಯೊ ಅಲೆಗಳನ್ನು ಭೂಮಿಯ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಕಳುಹಿಸು ವುದಕ್ಕೆ ಪ್ರತಿಫಲನದಂತೆ ಬಳಸುವ ಯೋಜನೆ. ಅಮೆರಿಕದ ಬೆಲ್ ಲ್ಯಾಬೊರೇಟರೀಸ್‌ನ ಎಂಜಿನಿಯರ್‌ಗಳು ಅದನ್ನು ತಯಾರಿಸಿದವರು. ಆಗಸ್ಟ್ 12, 1960ರಂದು ಎಕೊ-1 ಬಲೂನ್ ಉಡ್ಡಯನ.

ತಲುಪಿದ ಎತ್ತರ 1500 ಕಿ.ಮೀ. ಮಾತ್ರ. ಮುಂದಿನ ಒಂದೆರಡು ವರ್ಷಗಳಲ್ಲಿ ಎಕೊ-2 ಉಡ್ಡಯನ. ದೂರಸಂಪರ್ಕ ತಂತ್ರಜ್ಞಾನ, ಆಕಾಶಕಾಯಗಳ ಸರ್ವೇಕ್ಷಣ, ಒಟ್ಟಾರೆಯಾಗಿ ಬಾಹ್ಯಾಕಾಶದ ಅರಿವು ಗಳಿಸಲಿಕ್ಕೆ ಅವು ನೆರವಾದವು. ಆದರೆ ವಾಣಿಜ್ಯ ಉದ್ದೇಶಗಳನ್ನು ಈಡೇರಿಸುವುದಾಗಲಿಲ್ಲ. ಕೊನೆಗೂ ಜುಲೈ 10, 1962ರಂದು ನಾಸಾ ಮತ್ತು ಎಟಿ ಆಂಡ್ ಟಿ ಸಂಸ್ಥೆಗಳ ಜಂಟಿ ಪ್ರಯತ್ನದ ಫಲವಾಗಿ ಟೆಲ್‌ಸ್ಟಾರ್-1 ಎಂಬ, ಪ್ರಪಂಚದ ಮೊತ್ತಮೊದಲ ದೂರಸಂಪರ್ಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಎರಡು ವಾರಗಳ ಬಳಿಕ ಜುಲೈ 23ರಂದು ಅದರ ಮೂಲಕ ಮೊತ್ತಮೊದಲ ಬಾರಿಗೆ ಅಟ್ಲಾಂಟಿಕ್ ಸಮುದ್ರದ ಒಂದು ತೀರದಿಂದ ಇನ್ನೊಂದು ತೀರಕ್ಕೆ ಟೆಲಿವಿಷನ್ ಪ್ರಸರಣ ನಡೆಯಿತು.

ಆಗಿನ ಅಮೆರಿಕಾಧ್ಯಕ್ಷ ಜಾನ್ ಎಫ್.ಕೆನಡಿಯವರದೊಂದು ಸಂದೇಶ, ಬೇಸ್‌ಬಾಲ್ ಆಟದ ದೃಶ್ಯಾವಳಿ, ಕೇಪ್ ಕೆನ್ವೆರಾಲ್, ವಾಷಿಂಗ್ಟನ್ ಡಿಸಿ, ಕೆನಡಾದ ಕ್ಯೂಬೆಕ್ ಮತ್ತು ಸ್ಟ್ರಾಟ್ -ರ್ಡ್‌ನಲ್ಲಿ ಚಿತ್ರೀಕರಿಸಿದ ದೃಶ್ಯಗಳು, ಸಿಯಾಟಲ್‌ನಲ್ಲಿ ನಡೆದಿದ್ದ ಸೆಂಚುರಿ-21 ವಸ್ತುಪ್ರದರ್ಶನದ ನೋಟ- ಎಲ್ಲವೂ ಅದರಲ್ಲಿದ್ದವು. ಆವತ್ತೇ ಸಂಜೆ ಅಮೆರಿಕದ ಆಗಿನ ಉಪಾಧ್ಯಕ್ಷ ಲಿಂಡನ್ ಬಿ.ಜಾನ್ಸನ್ ಮತ್ತು ಎ.ಟಿ ಆಂಡ್ ಟಿ ಚೇರ್‌ಮನ್ ನಡುವೆ ಟೆಲಿಫೋನ್ ಕರೆಯೂ ನಡೆಯಿತು.

ಆಗಿನ ಕಾಲಕ್ಕೆ ದೂರಸಂಪರ್ಕದಲ್ಲಿ ಅದೊಂದು ಕ್ರಾಂತಿಯೇ. ಆದರೂ 1945ರಲ್ಲಿ ಕ್ಲಾರ್ಕ್ ಮಂಡಿಸಿದ್ದ ಯೋಜನೆಯಂತೆ ಟೆಲ್ ಸ್ಟಾರ್-1 ಕಾರ್ಯನಿರ್ವಹಿಸಿದ್ದಲ್ಲ. ಏಕೆಂದರೆ ಅದನ್ನು ಭೂತಲದಿಂದ 35,786 ಕಿ.ಮೀ. ದೂರದ ಕಕ್ಷೆಯಲ್ಲಿ ಸ್ಥಾಪಿಸಿದ್ದಲ್ಲ. ಕೇವಲ 6000 ಕಿ.ಮೀ. ದೂರದಲ್ಲಿ, ಅಂಡಾಕಾರದ ಕಕ್ಷೆಯಲ್ಲಿ ಅದು ಭೂಮಿಯನ್ನು ಸುತ್ತಿದ್ದು. ಅದರ ಮೇಲೆ ನಿಗಾ ಇಡಲಿಕ್ಕೆ, ಅದರಿಂದ ಪ್ರಯೋಜನ ಪಡೆಯಲಿಕ್ಕೆ ಸಂಕೀರ್ಣ ಉಪಕರಣಗಳನ್ನು ಬಳಸಬೇಕಿತ್ತು. ಆಮೇಲೆ ಬಂದಿದ್ದೇ ಸಿಂಕಾಮ್ ಉಪಗ್ರಹಗಳ ಸರಣಿ. ಫೆಬ್ರವರಿ 14, 1964ರಂದು ನಾಸಾದಿಂದ ಸಿಂಕಾಮ್-1 ಉಡಾವಣೆ.

ಕರಾರುವಾಕ್ಕಾಗಿ 35,786 ಕಿ.ಮೀ. ದೂರದ ಕಕ್ಷೆಯಲ್ಲಿ ಅದರ ಸ್ಥಾಪನೆ. ಮೊತ್ತಮೊದಲ ಜಿಯೊಸಿಂಕ್ರೊನಸ್ ಉಪಗ್ರಹ ವೆಂಬ ಅಗ್ಗಳಿಕೆ. ಕಕ್ಷೆಗೆ ಸೇರಿದ ಮೇಲೆ ಅದು ಹೆಚ್ಚೇನೂ ಕೆಲಸ ಮಾಡಲಿಲ್ಲವೆಂಬುದು ಬೇರೆ ಮಾತು. ಜುಲೈ 26, 1964 ರಂದು ಸಿಂಕಾಮ್-2ರ ಉಡ್ಡಯನ. ಆ ವರ್ಷದ ಆಗಸ್ಟ್‌ನಲ್ಲೊಂದು ದಿನ ಅಮೆರಿಕಾಧ್ಯಕ್ಷ ಜಾನ್ ಎಫ್.ಕೆನಡಿ ಮತ್ತು ನೈಜೀರಿಯಾದ ಆಗಿನ ಪ್ರಧಾನಿ ಅಬುಬಕರ್ ತಫಾವಾ ನಡುವೆ ದೂರವಾಣಿ ಸಂಭಾಷಣೆ.

ಸೆಪ್ಟೆಂಬರ್‌ನಲ್ಲಿ ಟೆಲಿವಿಷನ್ ಪ್ರಸಾರಕ್ಕೂ ಬಳಕೆ. ನ್ಯೂಜೆರ್ಸಿಯ ಫೋರ್ಟ್ ಡಿಕ್ಸ್‌ನಿಂದ ಮೇನ್ ಸಂಸ್ಥಾನದ ಆಂಡೊವರ್ ಎಂಬಲ್ಲಿಗೆ ಟೆಲಿವಿಷನ್ ಸಿಗ್ನಲ್‌ಗಳ ಯಶಸ್ವಿ ರವಾನೆ. ಸಿಂಕಾಮ್-1 ಮತ್ತು ಸಿಂಕಾಮ್-2 ‘ಜಿಯೊಸಿಂಕ್ರೊನಸ್’ ಆಗಿದ್ದವೇ ಹೊರತು ‘ಜಿಯೊಸ್ಟೇಷನರಿ’ ಅಲ್ಲ. ಏಕೆಂದರೆ ಅವುಗಳ ಕಕ್ಷೆ ಸಮಭಾಜಕ ವೃತ್ತಕ್ಕೆ 33 ಡಿಗ್ರಿ ಕೋನದಲ್ಲಿತ್ತು. ಆಗಸ್ಟ್ 19, 1964ರಂದು ಉಡಾವಣೆಯಾದ ಸಿಂಕಾಮ್-3 ಪ್ರಪ್ರಥಮ ಜಿಯೊಸ್ಟೇಷನರಿ ಉಪಗ್ರಹ. ಕ್ಲಾರ್ಕ್ ಮಂಡಿಸಿದ್ದ ಯೋಜ ನೆಯ ಪಕ್ಕಾ ಪ್ರತಿರೂಪ.

ಏಪ್ರಿಲ್ 6, 1965ರಂದು ಕಮ್ಯುನಿಕೇಷನ್ಸ್ ಸ್ಯಾಟಲೈಟ್ ಕಾರ್ಪೊರೇಷನ್ ಎಂಬ ಖಾಸಗಿ ಕಂಪನಿಯಿಂದ ಅರ್ಲಿ ಬರ್ಡ್ ಎಂಬ ಇನ್ನೊಂದು ಉಪಗ್ರಹದ ಉಡಾವಣೆ. ಅದಕ್ಕೆ ಇಂಟೆಲ್‌ಸ್ಯಾಟ್-1 ಎಂದು ಮರುನಾಮಕರಣ. ಅದು ವಾಣಿಜ್ಯ ಉದ್ದೇಶದ ಮೊದಲ ಉಪಗ್ರಹ. ಒಂದು ಸಲಕ್ಕೆ 240 ದೂರವಾಣಿ ಕರೆಗಳನ್ನು ನಿರ್ವಹಿಸುವ ಸಾಮರ್ಥ್ಯವುಳ್ಳದ್ದು. ಚಂದಾ ದಾರರು ತಿಂಗಳಿಗೆ ಸಾವಿರಗಟ್ಟಲೆ ಡಾಲರ್ ಸುರಿಯಬೇಕಿತ್ತು. ಅರ್ಧ ಗಂಟೆಯ ಟಿವಿ ಪ್ರಸಾರಕ್ಕೆ 2500 ಡಾಲರ್. ಸೀಮಿತ ಮತ್ತು ದುಬಾರಿ ಆದರೂ ಆಗಿನ ಕಾಲಕ್ಕೆ ದೊಡ್ಡ ಸಾಧನೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಆವಿಷ್ಕಾರಗಳಿಗೆ ಪ್ರೇರಣೆ. ಈಗ ಬಾಹ್ಯಾಕಾಶದಲ್ಲಿ 10000ಕ್ಕೂ ಹೆಚ್ಚು ಕೃತಕ ಉಪಗ್ರಹಗಳಿವೆ. ಅವುಗಳಲ್ಲಿ ಸುಮಾರು 500 ಉಪಗ್ರಹಗಳು ಭೂತಲದಿಂದ 35786 ಕಿ.ಮೀ. (ಭೂಕೇಂದ್ರದಿಂದ 42,164 ಕಿ.ಮೀ.) ದೂರದ ಕಕ್ಷೆಯಲ್ಲಿ ಸ್ಥಾಪಿತವಾಗಿವೆ. ಬಾಹ್ಯಾಕಾಶಕ್ಕೆ ಉಪಕರಣಗಳನ್ನು ಕಳುಹಿಸುವ, ದೂರಸಂಪರ್ಕ ಸಾಧ್ಯವಾಗಿಸುವ ಯೋಚನೆಗಳು ಕ್ಲಾರ್ಕ್‌ಗೇ ಮೊತ್ತ ಮೊದಲಿಗೆ ಹೊಳೆದದ್ದು ಎಂದೇನಿಲ್ಲ. ಅವರಿಗಿಂತ ಮೊದಲೂ ಆ ದಿಸೆಯಲ್ಲಿ ಚಿಂತನೆ ಮಾಡಿದವರು ಯುರೋಪ್‌ನಲ್ಲೂ ಅಮೆರಿಕದಲ್ಲೂ ಇದ್ದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಆವಿಷ್ಕಾರಗಳಿಗೆ ಪ್ರೇರಣೆ. ಈಗ ಬಾಹ್ಯಾಕಾಶದಲ್ಲಿ 10000ಕ್ಕೂ ಹೆಚ್ಚು ಕೃತಕ ಉಪಗ್ರಹ ಗಳಿವೆ. ಅವುಗಳಲ್ಲಿ ಸುಮಾರು 500 ಉಪಗ್ರಹಗಳು ಭೂತಲದಿಂದ 35786 ಕಿ.ಮೀ. (ಭೂಕೇಂದ್ರದಿಂದ 42,164 ಕಿ.ಮೀ.) ದೂರದ ಕಕ್ಷೆಯಲ್ಲಿ ಸ್ಥಾಪಿತವಾಗಿವೆ. ಬಾಹ್ಯಾಕಾಶಕ್ಕೆ ಉಪಕರಣಗಳನ್ನು ಕಳುಹಿಸುವ, ದೂರಸಂಪರ್ಕ ಸಾಧ್ಯವಾಗಿಸುವ ಯೋಚನೆಗಳು ಕ್ಲಾರ್ಕ್‌ಗೇ ಮೊತ್ತ ಮೊದಲಿಗೆ ಹೊಳೆದದ್ದು ಎಂದೇನಿಲ್ಲ. ಅವರಿಗಿಂತ ಮೊದಲೂ ಆ ದಿಸೆಯಲ್ಲಿ ಚಿಂತನೆ ಮಾಡಿದವರು ಯುರೋಪ್‌ನಲ್ಲೂ ಅಮೆರಿಕದಲ್ಲೂ ಇದ್ದರು. The Exploration of Space ಪುಸ್ತಕ.

ಅದನ್ನೋದಿಯೇ ಜರ್ಮನಿಯ ಎಂಜಿನಿಯರ್ ವೆರ್ನ್ಹರ್ ವೊನ್ ಬ್ರೌನ್ ಅಮೆರಿಕಾಧ್ಯಕ್ಷ ಕೆನಡಿಯನ್ನು ಚಂದ್ರನ ಮೇಲೆ ಮಾನವ ಪದಾರ್ಪಣೆಗೆ ಹೇತುವಾದ ಅಪೊಲೊ ಸರಣಿಯನ್ನು ಪ್ರೋತ್ಸಾಹಿಸುವಂತೆ ಮನದಟ್ಟು ಮಾಡಿದ್ದು. 1956ರಲ್ಲಿ ಕ್ಲಾರ್ಕ್ ಇಂಗ್ಲೆಂಡ್‌ನಿಂದ ಶ್ರೀಲಂಕಾಗೆ ವಲಸೆಯಾದರು. 90ರ ವಯಸ್ಸಿನಲ್ಲಿ ಮಾರ್ಚ್ 19, 2008ರಂದು ನಿಧನರಾಗು ವವರೆಗೂ ಕೊಲಂಬೊದಲ್ಲಿಯೇ ನೆಲೆಸಿದರು. 1945ರಲ್ಲಿ ತಾನು ಬರೆದ ಪತ್ರದ ಬಳಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಷ್ಟೆಲ್ಲ ಸಂಶೋಧನೆ ಸಾಧನೆಗಳು- ಮುಖ್ಯವಾಗಿ ಭಾರತದಲ್ಲಿ ಇಸ್ರೋದಿಂದಲೂ- ನಡೆದಿರುವುದನ್ನು ಬೆರಗುಗಣ್ಣಿಂದ ನೋಡಿದರು. “ಈಗಿನ ಕಾಲದವರು ಈ ಬಗ್ಗೆ ತಲೆಕೆಡಿಸಿಕೊಂಡಿದ್ದೇ ಇಲ್ಲವೆಂದು ಕಾಣುತ್ತದೆ.

ದೂರಸಂಪರ್ಕ ಕ್ರಾಂತಿಗೆ ಕಾರಣವಾದ ನೂರಾರು ಉಪಗ್ರಹಗಳ ನಿರ್ಮಾಣದ ಹಿಂದಿನ ಶ್ರಮ, ಜ್ಞಾನ, ಸಾಹಸ, ಧೈರ್ಯ ಎಷ್ಟಿರಬಹುದೆಂಬ ಅಂದಾಜಾದರೂ ನಿಮಗಿದೆಯೇ? ನೀವು ಮಾಡುವ ದೂರವಾಣಿ ಕರೆಗಳು, ನೀವು ವೀಕ್ಷಿಸಿ ಆನಂದಿಸುವ ಟಿವಿ ಕಾರ್ಯಕ್ರಮಗಳು... ಒಂದಲ್ಲ ಒಂದು ಉಪಗ್ರಹದ ಮೂಲಕವೇ ಬಂದಿರುತ್ತವೆಂದು ಎಂದಾದರೂ ಯೋಚಿಸಿದ್ದೀರಾ?" ಎಂದು ಒಂದೆರಡು ಸಂದರ್ಭಗಳಲ್ಲಿ ಕ್ಲಾರ್ಕ್ ಹೇಳಿದ್ದೂ ಇದೆ.

ಹೌದಲ್ಲ? ನಾವಾದರೂ ಈ ಬಗ್ಗೆ ಯೋಚಿಸಿದ್ದೇ ಇಲ್ಲವೇನೋ! ಈ ದಿನ ದುಬೈಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ-ನ್ಯೂಜಿಲ್ಯಾಂಡ್ ನಡುವೆ ಹಣಾಹಣಿ. ಸ್ಟೇಡಿಯಂನಲ್ಲೇ ಕುಳಿತು ಅಥವಾ ಅದಕ್ಕಿಂತಲೂ ಉತ್ತಮ ವ್ಯವಸ್ಥೆಯಲ್ಲಿ ವೀಕ್ಷಿಸುತ್ತಿದ್ದೇವೋ ಎಂಬಂತೆ ನಮ್ಮ ಮನೆಗಳ ಟಿವಿ ಪರದೆಯಲ್ಲಿ ಲೈವ್ ನೋಡಿ ಆನಂದಿಸುತ್ತೇವೆ. ಈ ಸೌಕರ್ಯ-ಸೌಲಭ್ಯಕ್ಕೆ ಕಾರಣವಾದ ಏಣಿಯೂ ಸ್ಮರಣೀಯ ಅಂತ ನಮಗೆ ನೆನಪಾದರೆ ಒಳ್ಳೆಯದಲ್ಲವೇ?