Rudraksh Mala: ರುದ್ರಾಕ್ಷಿ ಮಾಲೆಯ ಪ್ರಾಮುಖ್ಯತೆ ಬಗ್ಗೆ ನಿಮಗೆಷ್ಟು ಗೊತ್ತು..?
ಆಧ್ಯಾತ್ಮ ಸಾಧಕರ ನೆಚ್ಚಿನ ವಸ್ತುಗಳಲ್ಲಿ ರುದ್ರಾಕ್ಷಿಯೂ ಒಂದು. ಲಯಕರ್ತನಾದ ಪರಶಿವನಿಗೂ ಈ ರುದ್ರಾಕ್ಷಿಗೂ ಇದೆ ಒಂದು ಅಪೂರ್ವ ನಂಟು..!
![ಸಾಧು ಸಂತರು ಮತ್ತು ಆಧ್ಯಾತ್ಮಕ ಸಾಧಕರ ಕೊರಳನ್ನಲಂಕರಿಸುವ ರುದ್ರಾಕ್ಷಿಗಿದೆ ವಿಶೇಷ ಶಕ್ತಿ](https://cdn-vishwavani-prod.hindverse.com/media/original_images/Rudraksha_Mala.jpg)
ಸಾಂದರ್ಭಿಕ ಚಿತ್ರ
![Profile](https://vishwavani.news/static/img/user.png)
ನವದೆಹಲಿ: ಹಿಂದು ಆಸ್ತಿಕರಲ್ಲಿ, ಅದರಲ್ಲೂ ಶೈವ ಪಂಥೀಯರಲ್ಲಿ ಅತಿ ಪೂಜ್ಯ ಹಾಗು ಪವಿತ್ರ ಭಾವನೆಯನ್ನು ಹೊಂದಿರುವ ರುದ್ರಾಕ್ಷಿ ಕಾಯಿಗಳು (Rudraksha) ಇಲಾಯೊಕಾರ್ಪಸ್ ಗಯಾನಿಟ್ರಸ್ (Elaeocarpus ganitrus) ಎಂಬ ವೈಜ್ಞಾನಿಕ ಹೆಸರುಗಳುಲ್ಲ ರುದ್ರಾಕ್ಷ ಮರಗಳಲ್ಲಿ ಬಿಡುವ ಕಾಯಿಗಳಾಗಿವೆ. ರುದ್ರಾಕ್ಷಿ ಕಾಯಿಗಳನ್ನು ಪೋಣಿಸಿ ತಯಾರಿಸಿದ ರುದ್ರಾಕ್ಷಿ ಮಾಲೆಯನ್ನು (Rudraksh mala) ಸಾಧು ಸಂತರು ಮತ್ತು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುವವರು ಧರಿಸುತ್ತಾರೆ. ಇದಕ್ಕೆ ಧಾರ್ಮಿಕ ಆಚರಣೆಗಿಂತ ಹೊರತಾದ ಮಹತ್ವವಿದ್ದು ಇದನ್ನು ಕಾಸ್ಮಿಕ್ ಶಕ್ತಿಯೊಂದಿಗೆ (Cosmic Energy) ನಮ್ಮ ಶಕ್ತಿಯನ್ನು ಜೋಡಿಸುವ ಮಹತ್ವವಿದೆ ಎಂದು ನಂಬಲಾಗಿದೆ.
ರುದ್ರಾಕ್ಷಿಯ ಮಹತ್ವದ ಕುರಿತಾಗಿ ಖ್ಯಾತ ಜ್ಯೋತಿಷಿ, ಮೋಟಿವೇಶನಲ್ ಸ್ಪೀಕರ್ ಮತ್ತು ಜೀವನ ದರ್ಶನ ತಜ್ಞರಾಗಿರುವ ಡಾ. ಸಂದೀಪ್ ಕೊಚಾರದ ವಿವರವಾದ ಮಾಹಿತಿಯನ್ನು ನೀಡಿದ್ದು ಅವುಗಳನ್ನು ನಾವು ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ.
ಡಾ. ಕೊಚಾರ್ ಅವರ ಪ್ರಕಾರ, ರುದ್ರಾಕ್ಷಿ ಕಾಯಿಗಳು ಮಹಾದೇವನಿಗೆ ನಿಕಟ ಸಂಬಂಧವನ್ನು ಹೊಂದಿದೆ. ಶಿವನ ಅಶ್ರುಧಾರೆಯಿಂದ ರುದ್ರಾಕ್ಷ ಹುಟ್ಟಿತೆಂದು ಪ್ರತೀತಿಯಿದೆ. ಪರಶಿವ ಗಾಢ ಧ್ಯಾನದಿಂದ ಹೊರಬಂದು ಆತನ ಕಣ್ಣಿನಿಂದ ಇಳಿದ ಅಶ್ರುಧಾರೆ ರುದ್ರಾಕ್ಷಿ ಕಾಯಿಗಳಾದವು ಎಂದು ನಂಬಲಾಗುತ್ತದೆ.
‘ರುದ್ರಾಕ್ಷಿ ಮಾಲೆ ಪರಶಿವನ ದೈವತ್ವದ ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿದೆ. ಸಾಧುಗಳು ಈ ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ಶಿವನ ಕಡೆಗೆ ತಮ್ಮ ಶ್ರದ್ಧೆಯನ್ನು ವ್ಯಕ್ತಪಡಿಸುತ್ತಾರೆ ಹಾಗೂ ತಮ್ಮನ್ನು ತಾವು ಕಂಡುಕೊಳ್ಳುವ ನಿಟ್ಟಿನಲ್ಲಿ ಇದು ಅವರಿಗೆ ನೆರವಾಗಲಿದೆ’ ಎಂದು ಡಾ. ಕೊಚಾರ್ ಮಾಹಿತಿ ನೀಡಿದ್ದಾರೆ.
ಸಾಧು ಸಂತರು ಮತ್ತು ಆಧ್ಯಾತ್ಮ ಸಾಧಕರು ಈ ರುದ್ರಾಕ್ಷಿ ಮಾಲೆಯನ್ನು ಹಿಡಿದು ಧ್ಯಾನದಲ್ಲಿ ಮಗ್ನರಾಗಿರುವುದನ್ನು ನೀವು ನೋಡಿರುತ್ತೀರಿ. ಹೆಚ್ಚಾಗಿ ರುದ್ರಾಕ್ಷಿ ಮಾಲೆಗಳಲ್ಲಿ 108 ಕಾಯಿಗಳಿರುತ್ತವೆ. ‘ರುದ್ರಾಕ್ಷ ಮಾಲೆಯ ಮೂಲಕ ನಮ್ಮನ್ನು ನಾವು ಶಾಂತಗೊಳಿಸಿಕೊಳ್ಳಲು ಸಾಧ್ಯ ಹಾಗೂ ಏಕಾಗ್ರತೆಯ ಮೂಲಕ ನಮ್ಮ ಬುದ್ದಿ ತೀಕ್ಷ್ಣವಾಗುತ್ತದೆ’ ಎಂಬ ಅಭಿಮತವನ್ನು ಡಾ. ಕೊಚಾರ್ ನೀಡಿದ್ದಾರೆ.
‘ಜಪ ಮಾಡುವ ಸಂದರ್ಭದಲ್ಲಿ ರುದ್ರಾಕ್ಷಿ ಮಾಲೆಯನ್ನು ಬಳಸುವುದರಿಂದ, ಈ ಮಾಲೆಯಲ್ಲಿರುವ ರುದ್ರಾಕ್ಷಿ ಕಾಯಿಗಳು ನಮ್ಮೊಳಗಿರುವ ಶಕ್ತಿಯನ್ನು ಬಾಹ್ಯ ಜಗತ್ತಿನ ಶಕ್ತಿಯೊಂದಿಗೆ ಸಮತೋಲನಗೊಳಿಸುತ್ತದೆ’ ಎಂಬುದು ಅವರ ಅಭಿಪ್ರಾಯವಾಗಿದೆ.
ಶಕ್ತಿಯ ಸಮತೋಲನ ಮತ್ತು ಹೀಲಿಂಗ್ ಪ್ರಯೋಜನಗಳು:
ರುದ್ರಾಕ್ಷಿ ಕೇವಲ ಧಾರ್ಮಿಕ ಪ್ರಾಮುಖ್ಯತೆಯನ್ನು ಮಾತ್ರವೇ ಹೊಂದಿಲ್ಲ, ಬದಲಾಗಿ ಇದರಲ್ಲಿ ಹೀಲಿಂಗ್ ಪವರ್ ಇದೆ ಎಂದು ನಂಬಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಡಾ. ಕೊಚಾರ್ ಅವರು ಹೇಳುವಂತೆ, ರುದ್ರಾಕ್ಷಿಯ ಪ್ರತೀ ಕಾಯಿಗಳೂ ವೈಬ್ರೇಶನ್ ಅನ್ನು ಹೊರಹಾಕುವ ಕಾರಣ ಇದನ್ನು ಧರಿಸುವವರ ಭಾವನಾತ್ಮಕ ಸಮತೋಲನ ಸಾಧ್ಯವಾಗುತ್ತದೆ ಹಾಗೂ ದೈಹಿಕ ಅಸಮತೊಲನವನ್ನೂ ಸಹ ಇದರಿಂದ ಸರಿಪಡಿಸಬಹುದಾಗಿದೆ.
ಪ್ರತಿಕೂಲ ಹವಾಮಾನದಲ್ಲೂ ಗಂಟೆಗಟ್ಟಲೆ ಏಕಾಗ್ರತೆಯಿಂದ ಧ್ಯಾನ ಮಾಡುವ ಸಾಧುಗಳಿಗೆ ರುದ್ರಾಕ್ಷಿ ಮಾಲೆ ವಿಶೇಷ ಶಕ್ತಿಯನ್ನು ನೀಡುತ್ತದೆ.
ಇದನ್ನೂ ಓದಿ: Viral Video: ಮಹಾ ಕುಂಭಮೇಳದಲ್ಲಿ ಕೈಲಾಶ್ ಖೇರ್ ಧ್ವನಿಗೆ ಫಿದಾ ಆದ ನೆಟ್ಟಿಗರು
ರುದ್ರಾಕ್ಷಿ ಮಾಲೆ ಸಾಧುಗಳಿಗೆ ಮಾತ್ರ ಪ್ರಯೋಜನಕಾರಿಯಲ್ಲ, ಬದಲಾಗಿ ಸರಳ ಮತ್ತು ಸಮರ್ಪಿತ ಜೀವನವನ್ನು ನಡೆಸುವವರಿಗೂ ಇದು ವಿಶೇಷ ಶಕ್ತಿಯನ್ನು ಒದಗಿಸುತ್ತದೆ. ಲೌಕಿಕ ಜಗತ್ತಿನಿಂದ ದೂರವಾಗಿ ಆಧ್ಯಾತ್ಮದ ಸಾಧನೆಯ ಒಲವು ಇರುವವರಿಗೆ ಈ ರುದ್ರಾಕ್ಷಿ ಬಹಳ ಪ್ರಯೋಜನಕಾರಿಯಾಗಿದೆ.
ಹಿಂದು ಧರ್ಮಶಾಸ್ತ್ರದ ಪ್ರಕಾರ ರುದ್ರಾಕ್ಷಿ ಮಾಲೆ ಪಂಚಭೂತಗಳ ಪ್ರತೀಕವಾಗಿದೆ. ಭೂಮಿ, ನೀರು, ಅಗ್ನಿ ಮತ್ತು ಆಕಾಶಗಳೆಂಬ ಪಂಚಭೂತಗಳಿಗೂ ರುದ್ರಾಕ್ಷಿಗೂ ವಿಶೇಷ ಸಂಬಂಧವಿದೆ. ಇದರಿಂದಾಗಿಯೇ ಸಾಧುಗಳು ಹಾಗೂ ಸಂತರು ಪ್ರಕೃತಿ ಹಾಗೂ ಈ ವಿಶ್ವದೊಂದಿಗೆ ನಿಕಟ ಸಂಬಂಧವನ್ನು ಹೊಂದಿರುತ್ತಾರೆ.
ಇನ್ನು, ಕುಂಭ ಮೇಳದಂತಹ ಪವಿತ್ರ ಆಚರಣೆಗಳ ಸಂದರ್ಭದಲ್ಲೂ ರುದ್ರಾಕ್ಷಿಗೆ ವಿಶೇಷ ಸ್ಥಾನವಿದೆ. ಸಾವಿರಾರು ಸಾಧು ಸಂತರು ತಮ್ಮ ದೈವಿಕ ಬಂಧವನ್ನು ಸಂಭ್ರಮಿಸಲೆಂದು ಇಲ್ಲಿಗೆ ಆಗಮಿಸುತ್ತಾರೆ. ಹಾಗಾಗಿ ಇಲ್ಲೊಂದು ವಿಶೇಷ ಶಕ್ತಿ ಅವಿರ್ಭವಿಸುತ್ತದೆ ಎಂಬುದು ಧಾರ್ಮಿಕ ಪಂಡಿತರ ಅಭಿಪ್ರಾಯವಾಗಿದೆ.