Srivathsa Joshi Column: ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆಎಲೆ ಮೇಲೆ...
ವಾಚಕರ ಮನೋವ್ಯಾಪಾರಕ್ಕೂ ಹೆಚ್ಚಿನ ಪ್ರಚೋದನೆ ಸಿಗುತ್ತದೆ. ಆದರೆ ಕಥೆ, ಪಾತ್ರ, ರಸ ಮೊದಲಾದ ವುಗಳಲ್ಲಿ ಔಚಿತ್ಯದೃಷ್ಟಿಯನ್ನು ಮೀರಿ, ಅವುಗಳನ್ನು ಮರೆಮಾಚಿಸುವ ಮಟ್ಟಿಗೆ ವರ್ಣನೆಗಳ ಹಾವಳಿ ಯೇ ಹೆಚ್ಚಾಗಿ, ಅಂಥ ಮಹಾಕಾವ್ಯಗಳಲ್ಲಿ ಕವಿ ಅಷ್ಟಾದಶ ವರ್ಣನೆಗಳ ಕೋಟಲೆಗೆ ಒಳಗಾಗಿ ಕೃತಕ ವೆನಿಸುವ ಕಾವ್ಯಮಾರ್ಗವನ್ನು ಹಿಡಿದಿರುವುದು ಗೊತ್ತಾಗಿಬಿಡುತ್ತದೆ" ಎಂಬುದು ವಿದ್ವಾಂಸರ ಅಭಿಪ್ರಾಯ.

ಅಂಕಣಕಾರ ಶ್ರೀವತ್ಸ ಜೋಶಿ

ತಿಳಿರು ತೋರಣ
srivathsajoshi@yahoo.com
ಅಷ್ಟಾದಶ ವರ್ಣನೆಗಳು ಅಂತೊಂದು ಸಾಹಿತ್ಯಿಕ ಪರಿಕಲ್ಪನೆ ಇದೆ. ಒಂದು ಕಾವ್ಯವು ಮಹಾಕಾವ್ಯ ಎಂದೆನಿಸಬೇಕಿದ್ದರೆ ಅದರಲ್ಲಿ ಮುಖ್ಯ ಕಥಾಂಶಕ್ಕೆ ಪೂರಕವಾಗಿ ಹದಿನೆಂಟು ವಿಷಯಗಳ ವರ್ಣನೆ ಗಳಿರಬೇಕಂತೆ. ಸಹೃದಯಿ ಓದುಗರ ಗಮನ ಸೆಳೆದು ಹಿಡಿದಿಡಲಿಕ್ಕೆಂದೇ ಅವು ಇರುವುದು. ಕವಿ ತನ್ನ ಕಾವ್ಯದಲ್ಲಿ ಅಂಥ ವರ್ಣನೆಗಳನ್ನು ಯಥೋಚಿತ ಒದಗಿಸಿರುತ್ತಾನೆಂದು ರಸಜ್ಞ ಓದುಗರಿಗೂ ನಿರೀಕ್ಷೆ-ಅಪೇಕ್ಷೆಗಳಿರುತ್ತವೆ. ಹಾಗಂತ, ಎಲ್ಲ ಬಗೆಯ ವರ್ಣನೆಗಳು ಕಡ್ಡಾಯವಾಗಿ ಇರಲೇಬೇ ಕೆಂದು ಕಟ್ಟುನಿಟ್ಟಿನ ನಿಯಮ ಅಲ್ಲ. ಹದಿನೆಂಟೂ ಇದ್ದರೆ ಒಳ್ಳೆಯದೇ, ಕೆಲವು ಕಡಿಮೆಯಿದ್ದರೂ ಮಹಾಕಾವ್ಯತ್ವಕ್ಕೆ ದೋಷ ವಿಲ್ಲ, ಕವಿ ವರ್ಣಿಸಿರುವಷ್ಟು ಅಂಗಗಳು ತಮ್ಮ ಕಾವ್ಯಗುಣಗಳಿಂದ ಓದುಗರನ್ನು ಸಂತೋಷ ಪಡಿಸುವಂತಿದ್ದರೆ ಸಾಕು ಎನ್ನುತ್ತಾರೆ. ಎಷ್ಟೆಂದರೂ “ಕಾವ್ಯ ಮೈಗೊಳ್ಳು ವುದು ಕಥೆಯಿಂದ; ಕಥೆ ವರ್ಣನೆಗಳ ಪರಿಪೋಷಣೆಯಿಂದ; ವರ್ಣನಾಂಗಗಳು ಕಥಾರೀತಿ ಮತ್ತು ಕಥೆಯ ಆವಶ್ಯಕತೆಗೆ ಅನುಗುಣವಾಗಿ ಸಹಜವಾಗಿ ವರ್ಣಿತವಾಗಿದ್ದರೆ ಕಾವ್ಯದ ಸೊಬಗು ಹೆಚ್ಚುತ್ತದೆ.
ವಾಚಕರ ಮನೋವ್ಯಾಪಾರಕ್ಕೂ ಹೆಚ್ಚಿನ ಪ್ರಚೋದನೆ ಸಿಗುತ್ತದೆ. ಆದರೆ ಕಥೆ, ಪಾತ್ರ, ರಸ ಮೊದ ಲಾದವುಗಳಲ್ಲಿ ಔಚಿತ್ಯದೃಷ್ಟಿಯನ್ನು ಮೀರಿ, ಅವುಗಳನ್ನು ಮರೆಮಾಚಿಸುವ ಮಟ್ಟಿಗೆ ವರ್ಣನೆಗಳ ಹಾವಳಿಯೇ ಹೆಚ್ಚಾಗಿ, ಅಂಥ ಮಹಾಕಾವ್ಯಗಳಲ್ಲಿ ಕವಿ ಅಷ್ಟಾದಶ ವರ್ಣನೆಗಳ ಕೋಟಲೆಗೆ ಒಳಗಾಗಿ ಕೃತಕವೆನಿಸುವ ಕಾವ್ಯಮಾರ್ಗವನ್ನು ಹಿಡಿದಿರುವುದು ಗೊತ್ತಾಗಿಬಿಡುತ್ತದೆ" ಎಂಬುದು ವಿದ್ವಾಂಸರ ಅಭಿಪ್ರಾಯ.
Srivathsa Joshi Column: ಬಾಲ್ಯದ ನೆನಪುಗಳು ಮಧುರಾನುಭೂತಿಯನ್ನೇ ತರುತ್ತವೇಕೆ ?
ಊಟದ ರುಚಿ ಹೆಚ್ಚಿಸಲಿಕ್ಕೆ ಉಪ್ಪಿನಕಾಯಿ ಬೇಕು, ಆದರೆ ಉಪ್ಪಿನಕಾಯಿಯೇ ಊಟ ಆಗದು ಮತ್ತು ಆಗಬಾರದು ಎಂದು ಈ ಮಾತಿನ ಇಂಗಿತ. ಸರಿ, ಯಾವುವು ಆ ಹದಿನೆಂಟು ವರ್ಣನೆಗಳು? ಕ್ರಿಸ್ತಶಕ 7 ಅಥವಾ 8ನೆಯ ಶತಮಾನದಲ್ಲಿ ಬಾಳಿದ್ದನೆನ್ನಲಾದ ದಂಡಿಯು ಬರೆದ ‘ಕಾವ್ಯಾದರ್ಶ’ ಎಂಬ ಅಲಂಕಾರ ಶಾಸ್ತ್ರಗ್ರಂಥದಲ್ಲಿ ಅವುಗಳ ಪಟ್ಟಿ ಇದೆ, ಶ್ಲೋಕ ರೂಪದಲ್ಲಿ: “ನಗರಾರ್ಣವಶೈಲರ್ತು ಚಂದ್ರಾರ್ಕೋದಯವರ್ಣನೈಃ| ಉದ್ಯಾನಸಲಿಲಕ್ರೀಡಾ ಮಧುಪಾನರತೋತ್ಸವೈಃ| ವಿಪ್ರಲಂಭೈರ್ವಿವಾಹೈಶ್ಚ ಕುಮಾರೋದಯವರ್ಣನೈಃ| ಮಂತ್ರದೂತಪ್ರಯಾಣಾಜಿ ನಾಯಕಾ ಭ್ಯುದಯೈರಪಿ||" ಇದನ್ನು ಬಿಡಿಸಿ ಹೇಳುವುದಾದರೆ- ನಗರ ವರ್ಣನೆ, ಅರ್ಣವ(ಸಮುದ್ರ) ವರ್ಣನೆ, ಶೈಲ(ಪರ್ವತ) ವರ್ಣನೆ, ಋತು ವರ್ಣನೆ, ಚಂದ್ರೋದಯ ವರ್ಣನೆ, ಅರ್ಕ(ಸೂರ್ಯ) ಉದಯದ ವರ್ಣನೆ, ಉದ್ಯಾನ ವರ್ಣನೆ, ಸಲಿಲ(ಜಲ)ಕ್ರೀಡೆಯ ವರ್ಣನೆ, ಮಧುಪಾನ ವರ್ಣನೆ, ರತೋತ್ಸವ( ಹೆಣ್ಣು-ಗಂಡುಗಳ ಮಿಲನ) ವರ್ಣನೆ, ವಿಪ್ರಲಂಭ(ಮಿಲನಕ್ಕಾಗಿ ಹಾತೊರೆಯುವ ನಾಯಕ-ನಾಯಿಕೆಯರ ಶೃಂಗಾರ) ವರ್ಣನೆ, ವಿವಾಹ ವರ್ಣನೆ, ಕುಮಾರೋದಯ(ಸಂತಾನ ಪ್ರಾಪ್ತಿ) ವರ್ಣನೆ, ಮಂತ್ರ ವರ್ಣನೆ, ದೂತ ವರ್ಣನೆ, ಪ್ರಯಾಣ ವರ್ಣನೆ, ಅಜಿ(ಸಂಚಾರ) ವರ್ಣನೆ, ಮತ್ತು ನಾಯಕನ ಅಭ್ಯುದಯದ ವರ್ಣನೆ. ಕಾವ್ಯಾದರ್ಶ ಗ್ರಂಥಕ್ಕೆ ಬೇರೆಬೇರೆ ವಿದ್ವಾಂಸರು ಬರೆದ ವ್ಯಾಖ್ಯಾನಗಳಲ್ಲಿ ಈ ಒಂದೊಂದು ವರ್ಣನೆಗೂ- ಕಾಳಿದಾಸನ ರಘುವಂಶ ಮತ್ತು ಕುಮಾರ ಸಂಭವ, ಮಾಘಕವಿಯ ಶಿಶುಪಾಲವಧ, ಭಾರವಿಯ ಕಿರಾತಾರ್ಜುನೀಯ, ಮತ್ತು ಶ್ರೀಹರ್ಷನ ನೈಷಧಿಯ ಚರಿತ- ಈ ಐದು ಪ್ರಾಚೀನ ಸಂಸ್ಕೃತ ಮಹಾಕಾವ್ಯಗಳಿಂದ ಉದಾಹರಣೆಗಳನ್ನು ಕೊಟ್ಟಿದ್ದಾರೆ.
ಅಂದಮಾತ್ರಕ್ಕೇ ಇದು ಸಂಸ್ಕೃತ ಸಾಹಿತ್ಯಕ್ಕಷ್ಟೇ ಸೀಮಿತವೆಂದಲ್ಲ, ‘ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಅಷ್ಟಾದಶ ವರ್ಣನೆಗಳು’ ಎಂಬೊಂದು ಪುಸ್ತಕ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಪ್ರಕಟಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಅಷ್ಟಾದಶ ವರ್ಣನೆಗಳ ಪೈಕಿ ಬಹುಶಃ ಕವಿಗಳಿಗೆ ತುಸು ಹೆಚ್ಚೇ ಪ್ರಿಯವೆನಿಸುವುದು, ಬಹುತೇಕ ಕವಿಗಳ ಕಲ್ಪನಾವಿಲಾಸಗಳು ಗರಿಗೆದರುವುದಕ್ಕೆ ಹೇತುವಾಗುವುದು, ಋತು ವರ್ಣನೆ ಎಂದು ನನ್ನ ಅಂದಾಜು. ಅದರಲ್ಲೂ ವಸಂತ ಋತುವಿನ ವರ್ಣನೆ. “ಋತೂನಾಂ ಕುಸುಮಾಕರಃ" (ಋತುಗಳ ಪೈಕಿ ತಾನು ವಸಂತ ಋತು) ಎಂದು ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನೇ ಹೇಳಿದ್ದಾನೆಂದಮೇಲೆ ಕೇಳಬೇಕೇ! “ಕಾಲದೊಳಗೆ ವಸಂತ ವಿದ್ಯಾ| ಜಾಲದೊಳಗೆ ಕವಿತ್ವ ಗಜ ವೈ| ಹಾಳಿಯಲಿ ದೇವೇಂದ್ರ ಮಿತ್ರ ಶ್ರೇಣಿಯೊಳು ವಾಣಿ" ಎಂದು ವಿದುರನ ಬಾಯಿಯಿಂದ ಕೃಷ್ಣಭಕ್ತ ಕುಮಾರವ್ಯಾಸನೂ ಹೇಳಿಸಿದ್ದಾನೆ. ಮಿಕ್ಕ ಋತುಗಳಿಗೆ ಹೋಲಿಸಿದರೆ ವಸಂತ ಋತುವಿನಲ್ಲಿ ಎಲ್ಲ ಜೀವಿಗಳ ಪಂಚೇಂ ದ್ರಿಯಗಳೂ ಅತಿ ಹೆಚ್ಚು ಸಂವೇದನಾಶೀಲವಾಗಿರುತ್ತವೆ.
ದೇಹ ಮತ್ತು ಮನಸ್ಸು ಹೆಚ್ಚು ಚೈತನ್ಯ ಪಡೆದಿರುತ್ತವೆ. ಆದ್ದರಿಂದಲೇ ವಸಂತ ಕಾಲದಲ್ಲಿ ಪ್ರಪಂಚ ವನ್ನು ಅತ್ಯಧಿಕ ಪ್ರಮಾಣದಲ್ಲಿ ಆಸ್ವಾದಿಸುವುದು ಜೀವಿಗಳಿಗೆ ಸಾಧ್ಯವಾಗುತ್ತದೆ. ಜೀವಿಗಳ ಅಸಲಿ ಯತ್ತು ಗೊತ್ತಾಗುವುದೂ ವಸಂತ ಋತುವಿನಲ್ಲೇ. ಹಾಗಾಗಿಯೇ ಕಾಗೆ-ಕೋಗಿಲೆಗಳ ಹೋಲಿಕೆಯ ಅದೊಂದು ಸುಭಾಷಿತ ಇರುವುದು: “ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದಃ ಪಿಕಕಾಕಯೋಃ| ವಸಂತ ಸಮಯೇ ಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ||" (ಕಾಗೆಯೂ ಕಪ್ಪು ಕೋಗಿಲೆಯೂ ಕಪ್ಪು. ಕೋಗಿಲೆಗೂ ಕಾಗೆಗೂ ಭೇದವೆಲ್ಲಿದೆ? ವಸಂತ ಕಾಲ ಬಂದಾಗಲೇ ಗೊತ್ತಾಗುವುದು ಕೋಗಿಲೆ ಯಾವುದು ಕಾಗೆ ಯಾವುದು ಎಂದು). ಹೀಗೆ ವಸಂತ ಋತುವಿನಲ್ಲಿ ಸಮಸ್ತ ಲೋಕವೇ ತೀವ್ರತರ ಭಾವೋದ್ವೇಗವನ್ನು ಅನುಭವಿಸುತ್ತಿರಬೇಕಾದರೆ ಮತ್ತಷ್ಟು ಭಾವಜೀವಿಗಳಾದ ಕವಿಗಳು ಸುಮ್ಮನಿರುತ್ತಾರೆಯೇ! “ವಸಂತ ಬಂದ ಋತುಗಳ ರಾಜ ತಾ ಬಂದ..." ಎಂದು ಹಿಗ್ಗದಿರುತ್ತಾರೆಯೇ! ಆದ್ದರಿಂದಲೇ ವಸಂತಕಾಲದ ಬಗ್ಗೆ ಬರೆಯದ ಕವಿಗಳಿಲ್ಲ, ಹಾಡದ ಕೋಗಿಲೆಗಳಿಲ್ಲ.
ನಮ್ಮ ಕನ್ನಡದ ಕವಿಶ್ರೇಷ್ಠ ಕುಮಾರವ್ಯಾಸನಿಗಂತೂ ಋತು ವರ್ಣನೆಗೋಸ್ಕರವಷ್ಟೇ ವಸಂತನ ನೆನಪಾಗುವುದಲ್ಲ. ದ್ರೌಪದಿಯ ಯೌವನಭರಿತ ಸೊಬಗನ್ನು ಬಣ್ಣಿಸಲಿಕ್ಕೂ ಆತ ವಸಂತ ಋತುವಿ ನಲ್ಲಿ ಕಾಣಸಿಗುವ ವಿದ್ಯಮಾನಗಳ ಹೋಲಿಕೆ ನೀಡಬಲ್ಲ! ಆದಿಪರ್ವದಲ್ಲಿ ಬರುವ ಒಂದು ಪದ್ಯ: “ವರವಸಂತನ ಬರವು ಜಾಜಿಯ| ಬರಿಮುಗುಳು ಮರಿದುಂಬಿಗಳ ನಯ| ಸರದ ದನಿ ಕರಿಕಳಭಲೀಲೆ ನವೇಕ್ಷುರಸಧಾರೆ| ಮೆರೆವವೋಲ್ ಹೊಸ ಹೊಗರಜವ್ವನ| ಸಿರಿಯಜೋಡಣೆ ಜನಮನವನಾ| ವರಿಸಿದುದು ನಿಪ್ಪಸರದಲಿ ಪಾಂಚಾಲನಂದನೆಯ||" ಚಳಿಗಾಳಿಯಿಂದ ಹೊರಹೊಮ್ಮುವ ಸಕಲ ಜೀವರಾಶಿಗಳ ಚೆಲುವನ್ನು ಹೆಚ್ಚಿಸುವ ವಸಂತ ಋತುವಿನ ಹಾಗೆ, ಪರಿಮಳಯುಕ್ತ ಜಾಜಿಯ ಮೊಗ್ಗಿನ ಹಾಗೆ, ಮರಿದುಂಬಿಗಳ ಝೇಂಕಾರದ ಹಾಗೆ, ಮರಿಯಾನೆಗಳ ಆಟದ ಹಾಗೆ, ಹೊಸದಾಗಿ ಮುರಿದ ಕಬ್ಬಿನಜಲ್ಲೆಯ ಹಾಲಿನ ಹಾಗೆ, ದ್ರೌಪದಿಯ ನೂತನ ಯೌವನದ ಸಂಪತ್ತು ಜನರ ಮನಸ್ಸನ್ನು ಅತಿಶಯವಾಗಿ ಆಕರ್ಷಿಸಿತ್ತಂತೆ!
ವಸಂತ ಋತುವು ಎಲ್ಲರಲ್ಲೂ ಸೊಬಗಿನ ಆಹ್ಲಾದಿಸುವಿಕೆಗೆ ಪ್ರೇರಣೆ ಆಗುತ್ತದೆ. ಒಮ್ಮೆ ವಸಂತ ಸಮಯದಲ್ಲಿ ಮಾದ್ರಿದೇವಿಯು ಪಾಂಡುವಿಗೆ ಹೇಗೆ ಕಂಡಳೆಂಬ ಬಣ್ಣನೆ: “ಆ ವಸಂತದೊಳೊಮ್ಮೆ ಮಾದ್ರೀ| ದೇವಿ ವನದೊಳಗಾಡುತಿರ್ದಳು| ಹೂವಿನಲಿ ಸರ್ವಾಂಗ ಶೃಂಗಾರದ ವಿಲಾಸದಲಿ| ಆವಳಿವಳೂರ್ವಶಿಯೊ ರಂಭೆಯೊ| ದೇವವಧುಗಳ ಸುಳಿವೊ ತಾನೆನ| ಲಾವ ಚೆಲುವಿಕೆ ಶಿವ ಶಿವಾಯೆಂದರಸ ಬೆರಗಾದ||" ವಸಂತಕಾಲದಲ್ಲಿ ಮಾದ್ರಿಯು ವನದಲ್ಲಿ ವಿಹಾರಚಲನದಲ್ಲಿ ಒಬ್ಬಳೇ ಆಡುತ್ತಿದ್ದಳು.
ಅವಳ ಆ ನಡೆಯನ್ನು ಗಮನಿಸಿದ ಪಾಂಡು ಒಮ್ಮೆಲೇ ಆಹಾ ಇವಳಾರು ದೇವಲೋಕದ ರಂಭೆ ಯೋ, ಊರ್ವಶಿಯೋ, ದೇವಾಂಗನೆಯೋ, ಶಿವ ಶಿವಾ! ಎಂಥ ಚೆಲುವಿನ ಖಣಿಯಿವಳು ಎಂದು ಬೆರಗಾದನಂತೆ. ವಸಂತವೈಭವವನ್ನೇ ವಿವರಿಸುವ ಕುಮಾರವ್ಯಾಸನ ಪದ್ಯಗಳಂತೂ ಮತ್ತೂ ಸೊಗಸು. ವಸಂತ ಋತುವಿನ ಆಗಮನದ ಸೂಚನೆ ಹೇಗಿರುತ್ತದೆಂದು ಬಣ್ಣಿಸುವ ಒಂದು ಪದ್ಯ: “-ಲಿತ ಚೂತದ ಬಿಣ್ಪುಗಳ ನೆರೆ| ತಳಿತಶೋಕೆಯ ಕೆಂಪುಗಳ ಪರಿ| ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ| ಎಳಲತೆಯ ನುಣ್ಪುಗಳ ನವ ಪರಿ| ಮಳದ ಪವನನ ಸೊಂಪುಗಳ ವೆ| ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ||" ಈ ಷಟ್ಪದಿಯಲ್ಲಿ ಮಾಮೂಲಿ ಆದಿಪ್ರಾಸ ವಷ್ಟೇ ಅಲ್ಲದೆ ಬಿಣ್ಪು, ಕೆಂಪು, ಕಂಪು, ಗುಂಪು, ನುಣ್ಪು, ಸೊಂಪು ಎಂದು ಮತ್ತಷ್ಟು ಶಬ್ದಶೃಂಗಾರ ವಸಂತನಿಗೆ.
ಮಾವಿನ ಮರಗಳಲ್ಲಿ ಹಣ್ಣುಗಳು ಭಾರವಾಗಿ ತೂಗಾಡುತ್ತಿದ್ದವು. ಅಶೋಕ ವೃಕ್ಷದಲ್ಲಿ ಕೆಂಪಾದ ಚಿಗುರುಗಳು ಕಾಣಿಸಿಕೊಂಡವು. ಅರಳಿದ ಕಮಲಗಳ ಸುವಾಸನೆ ಹರಡುತ್ತಿತ್ತು. ಚಿಗುರಿದ, -ಲಿಸಿದ, ಹೂಬಿಟ್ಟ ವನಗಳು ಮನೋಹರವಾಗಿದ್ದವು. ಕೋಮಲವಾದ ಲತೆಗಳು ಎಲ್ಲ ಕಡೆಯೂ ಚಿಗುರಿ ಬೆಳೆದಿದ್ದವು. ಗಾಳಿಯಲ್ಲಿ ಸುಗಂಧವು ತೇಲಿ ಬಂತು.
ವಸಂತ ಋತುವಿನ ಈ ಹೆಗ್ಗಳಿಕೆಯಿಂದ ಜನರ ಕಣ್ಮನಗಳು ಸೂರೆಹೋದವಂತೆ. ದುಂಬಿಗಳು ಮತ್ತು ಇತರ ಪಕ್ಷಿಗಳು ಹೇಗೆ ನಲಿದಾಡಿದವು ಎಂಬ ಚಿತ್ರಣ ಒಂದು ಪದ್ಯದಲ್ಲಿ: “ಪಸರಿಸಿತು ಮಧು ಮಾಸ ತಾವರೆ| ಯೆಸಳ ದೋಣಿಯ ಮೇಲೆ ಹಾಯ್ದವು| ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು| ಒಸರ್ವ ಮಕರಂದದ ತುಷಾರದ| ಕೆಸರೊಳದ್ದವು ಕೊಂಚೆಗಳು ಹಗ| ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು" ವಸಂತ ಋತುವು ಮುಂದುವರಿದಂತೆಲ್ಲ ನೀರಿನ ಮೇಲೆ ದೋಣಿ ತೇಲುವ ಹಾಗೆ ತಾವರೆ ಹೂವಿನ ಮೇಲೆ ದುಂಬಿಗಳು ಮಕರಂದವನ್ನು ಹೀರಲು ಸೇರಿದವು.
ಜಿನುಗುತ್ತಿರುವ ಹೂಗಳ ಮಕರಂದದ ಹಿಮಸದೃಶ ತುಂತುರಿನಲ್ಲಿ ಕ್ರೌಂಚಪಕ್ಷಿ, ಚಕ್ರವಾಕ, ರಾಜ ಹಂಸಗಳು ತೋಯ್ದು ಹೋದವು! ವಸಂತ ಋತುರಾಜನ ಪರಿವಾರದ ಗಾಯಕರು, ಸೈನಿಕರು, ಪಂಡಿತರು ಯಾರೆಂಬ ಬಣ್ಣನೆ ಇನ್ನೊಂದು ಪದ್ಯದಲ್ಲಿ: “ಮೊರೆವ ತುಂಬಿಯ ಗಾಯಕರ ನಯ| ಸರದ ಕೋಕಿಲ ಪಾಠಕರ ಬಂ| ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ| ಅರಳಿದಂಬುಜ ಸತ್ತಿಗೆಯ ಮಂ| ಜರಿಯ ಕುಸುಮದ ಚಾಮರದ ಚಾ| ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ||" ವಸಂತನಿಗೆ ದುಂಬಿಗಳೇ ಗಾಯಕರು.
ಸೊಗಸಾಗಿ ಹಾಡುವ ಕೋಗಿಲೆಗಳೇ ವಾಚಕರು. ಅರಗಿಳಿಗಳೇ ಪಂಡಿತರು. ಮಾವಿನ ಮರಗಳೇ ಸೈನ್ಯದ ಆನೆಗಳು. ಅರಳಿದ ಕಮಲಗಳೇ ಛತ್ರಿಗಳು. ಹೂಗುಚ್ಛಗಳೇ ಅವನಿಗೆ ಬೀಸುವ ಚಾಮರಗಳು. ಇಂಥ ವೈಭೋಗದಿಂದ ಕೂಡಿದ ಋತುರಾಜನು ಪಾಂಡುವಿನ ಮೇಲೆ ದಾಳಿಮಾಡಿದನು. ದಾಳಿ ಮಾಡಿದ್ದೆಂದರೆ ಮೋಹಪರವಶನನ್ನಾಗಿಸಿದ್ದು. ರಾಘವಾಂಕನ ‘ಹರಿಶ್ಚಂದ್ರಕಾವ್ಯ’ ಸಹ ನನಗೆ ತುಂಬ ಇಷ್ಟ.
ಆದರೆ ಹಳಗನ್ನಡದ ಆ ಪದ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಕುಮಾರವ್ಯಾಸನ ಪದ್ಯಗಳನ್ನು ಅರ್ಥಮಾಡಿಕೊಂಡಷ್ಟು ಸುಲಭವಲ್ಲ. ಅಲ್ಲದೇ ಅವು ಭಾಮಿನಿ ಷಟ್ಪದಿಗಳಾಗಿರದೆ ವಾರ್ಧಕ ಷಟ್ಪದಿಗಳಾದ್ದರಿಂದ ಗುನುಗುನಿಸಿಕೊಂಡು ಓದುವುದಕ್ಕೂ ಕಷ್ಟ. ಹಾಗಾಗಿ ನಾನು ಹರಿಶ್ಚಂದ್ರ ಕಾವ್ಯವನ್ನು ಸವಿಯಲಿಕ್ಕೆ ಶತಾವಧಾನಿ ಡಾ. ಆರ್. ಗಣೇಶರ ಉಪನ್ಯಾಸಮಾಲಿಕೆಯ ಧ್ವನಿ ಮುದ್ರಣವನ್ನೋ, ವಿದ್ವಾನ್ ಎನ್. ರಂಗನಾಥ ಶರ್ಮರ ರಾಘವಾಂಕನ ಹರಿಶ್ಚಂದ್ರ ಚರಿತೆ ಗದ್ಯಾನುವಾದವನ್ನೋ ಅವಲಂಬಿಸುತ್ತೇನೆ.
ಹರಿಶ್ಚಂದ್ರ-ಚಂದ್ರಮತಿ-ಲೋಹಿತಾಶ್ವರದು ಕರುಣಾಜನಕ ಗೋಳಿನ ಕಥೆಯಾದರೂ ಅಷ್ಟಾದಶ ವರ್ಣನೆಗಳಿಗೋಸ್ಕರ ರಾಘವಾಂಕನು ತರುವ ವಸಂತ ವರ್ಣನೆಯಂಥದ್ದನ್ನು ಆಗಾಗ ಓದಿ ಚಪ್ಪರಿಸುತ್ತೇನೆ. ರಂಗನಾಥ ಶರ್ಮರ ಗದ್ಯಾನುವಾದದಲ್ಲಿ ‘ವಸಂತವಿಹಾರ’ ಎಂದೇ ಒಂದು ಅಧ್ಯಾಯವಿದೆ. ಅದರಿಂದಾಯ್ದ ಕೆಲವು ಭಾಗಗಳು: ಹರಿಶ್ಚಂದ್ರನ ಉದ್ಯಾನಪಾಲಕನು ವಸಂತಾ ಗಮನವನ್ನು ತನ್ನೊಡೆಯನಿಗೆ ತಿಳಿಸುವ ಸಂದರ್ಭ. ನಳನಳಿಸುವ ಅಶೋಕ ವೃಕ್ಷದ ತಳಿರ ಗೊಂಚಲನ್ನೂ ಹೊಸ ಹೂವಿನ ಮಾಲೆಯನ್ನೂ ಪ್ರಭುವಿಗರ್ಪಿಸಿ ವಂದಿಸಿ ಹೀಗೆಂದನು- “ಮಹಾಪ್ರಭು, ವಸಂತ ಋತು ಆಗಮಿಸಿತು!
ಎಳೆಯ ಬಳ್ಳಿಗಳಿಗೆ ಲಾವಣ್ಯವನ್ನೀಯುತ್ತ, ಮಾವಿನ ಗಿಡಗಳ ಮಂಗಳರೂಪವನ್ನು ವರ್ಧಿಸುತ್ತ, ಕೋಗಿಲೆಗಳ ಕೊರಳಲ್ಲಿ ಪುಣ್ಯವನ್ನು ತುಂಬುತ್ತ, ದುಂಬಿಗಳ ಮೂಗಿಗೆ ನಲಿವನ್ನು ಎರೆಯುತ್ತ, ನವಿಲುಗಳನ್ನು ಕುಣಿಸುತ್ತ ವಸಂತ ಬಂದಿದ್ದಾನೆ. ಜನರಿಗೆ ಸುಖದ ಸುಗ್ಗಿಯಾಗಿ, ಗಿಳಿವಿಂಡುಗಳ ಸವಿಯ ಸಾಮ್ರಾಜ್ಯವಾಗಿ, ಚಂದ್ರನ ಬೆಳದಿಂಗಳಿಗೆ ಬೆಂಬಲವಾಗಿ, ರತಿಪತಿಯ ಭುಜಬಲದ ವೀರ ಸಿರಿಯಾಗಿ ವಸಂತಕಾಲ ಬಂದಿದೆ. ಕಮಲವನವು ವಸಂತನ ಬರುವಿಕೆಯನ್ನು ಬಯಸುವಂತೆ, ಉದ್ಯಾನವನವು ನಿಮ್ಮ ಆಗಮನವನ್ನು ಪ್ರತೀಕ್ಷಿಸುತ್ತಿದೆ!" ಆ ಉದ್ಯಾನವಾದರೋ ಮನ್ಮಥನ ಅರಮನೆ.
ವಸಂತನ ಬೀಡು. ಎಳೆಲತೆಗಳ ಗೂಡು. ಮರಗಳ ಆಕರ. ಚಿಗುರಿನ ತಾಣ. ಹೂಗಳ ನೆಲ. ಹಣ್ಣುಗಳ ಮನೆ. ಕೋಗಿಲೆಗಳ ಚಾವಡಿ. ದುಂಬಿಗಳು ಆಡುವ ಹೊಲ. ಗಿಳಿಗಳು ಓದುವ ಶಾಲೆ. ಮಲಯ ಮಾರುತನ ಜನ್ಮಭೂಮಿ. ಪುಳಿನಗಳ ಆಲಯ. ಕೊಳಗಳ ನಿಲಯ. ನವಿಲುಗಳ ನಂದನವನ. ಉಪವನದ ಸುತ್ತಲೂ ಇದ್ದ ತೆಂಗಿನಮರಗಳಲ್ಲಿ ಹೊರೆಹೊರೆಯಾಗಿ ತೆಂಗಿನಕಾಯಿಗಳು ಫಲಿಸಿದ್ದವು.
ಪಡೆದ ಉಪಕಾರವನ್ನು ತೀರಿಸುವುದಕ್ಕಾಗಿ ಭೂದೇವಿಯು ಮೇಘಗಳಿಗೆ ಕೈಯೆತ್ತಿಕೊಡುವ ಅಮೃತಕಲಶಗಳೋ, ಗಗನಾಂಗಣದಲ್ಲಿ ಸಂಚರಿಸುವ ವಿದ್ಯಾಧರರಿಗೋಸ್ಕರ ವಸಂತನು ಏರ್ಪ ಡಿಸಿದ ಅರವಟ್ಟಿಗೆಗಳೋ, ಕ್ಷೀರಸಾಗರವನ್ನು ಕಡೆದಾಗ ಜನಿಸಿದ ಪದಾರ್ಥಗಳನ್ನು ದೇವತೆಗಳು ಒಯ್ಯುವಾಗ ಭೂದೇವಿಯು ತನಗೆ ಬೇಕೆಂದು ತೆಗೆದಿರಿಸಿಕೊಂಡಿದ್ದ ರಸರತ್ನಗಳೋ ಎಂಬಂತೆ ಆ ತೆಂಗಿನಕಾಯಿಗಳು ಶೋಭಿಸುತ್ತಿದ್ದವಂತೆ!
ಜನರ ಪಂಚೇಂದ್ರಿಯಗಳ ಲಾಲನೆಯಿಂದ ಬೆಳೆದ ಮಾವು, ವನಿತೆಯರು ಸಾಕಿ ಬೆಳೆಸಿದ ವನಲತೆ, ಮನ್ಮಥವಾಣಿಗಳು ಹರಿಸಿದ ಮುತ್ತಿನ ಸೇಸೆಯಂತಿರುವ ಮೊಗ್ಗುಮಲ್ಲಿಗೆ, ಅನುರಾಗಿಗಳು ಸಲಹಿದ ದಾಳಿಂಬೆ, ಭೂಮಿಯೆಂಬ ಕಾಮಿನಿ ಸಾಕಿದ ಸಂಪಿಗೆ- ಇವು ಆ ವನದಲ್ಲಿ ಬಗೆಬಗೆಯಿಂದ ಒಪ್ಪುತ್ತಿದ್ದವು.
ಅಂಕುರ, ಕೊನರು, ಕೆಂದಳಿರು, ಚಿಗುರು, ಹಸುರೆಲೆ, ಮೊಗ್ಗು, ನನೆಮೊಗ್ಗು, ಹೂ, ಮಿಡಿಗಾಯಿ, ಬಲಿತಕಾಯಿ, ದೋರಹಣ್ಣುಗಳಿಂದೊಪ್ಪುವ ಮಾವು, ನೇರಿಳೆ, ಕದಳಿ, ಹೇರಳೆ, ಕಿತ್ತಳೆ ಮರಗಳಿಂ ದಲೂ, ಗೋರಂಟಿ, ದಾಸವಾಳ, ಬನ್ನಾಳಿ, ಗೇರುಹೂಗಳಿಂದಲೂ ಉದ್ಯಾನವು ಮನೋಹರ ವಾಗಿತ್ತು. ಉಪವನದಲ್ಲಿ ನವಿಲುಗಳ ನೃತ್ಯ. ಗಿಳಿಗಳ ಚಿಲಿಪಿಲಿಯೇ ನೃತ್ಯೋತ್ಸವದ ಘೋಷಣೆ. ಕೋಗಿಲೆಗಳ ಪಂಚಮದ ಇಂಚರವೇ ಕಹಳೆ.
ಫಲಿಸಿದ ಹಲಸು ಮದ್ದಳೆ. ಝೇಂಕರಿಸುವ ದುಂಬಿಗಳು ಹೊಗಳುವ ವಂದಿಗಳು. ನೆಲದವರೆಗೆ ಒಲೆದ ಅಶೋಕೆಯ ತಳಿರು ಜವನಿಕೆ. ಕುಸುಮಲತೆಗಳು ಪ್ರೇಕ್ಷಕರಾದ ವನಿತೆಯರು. ಎಲೆಗಳ ಮರ್ಮರಧ್ವನಿಯು ಸಂಗೀತ. ಕಂಚುವಾಳ ಮರಗಳ ತೂಗಾಟ ಮೆಚ್ಚುಗೆಯ ತಲೆದೂಗು.
ಹಣ್ಣೆಲೆಗಳ ನಿಶ್ಚಲತೆಯೇ ನೃತ್ಯದ ಮೆಚ್ಚಿನ ತನ್ಮಯತೆ! ಅಲ್ಲಿ ತಿರುಗಾಡುವ ತರುಣಿಯರು ತೊಟ್ಟಿದ್ದ ಚಿನ್ನದೊಡವೆಗಳ ಹೊಂಬಿಸಿಲಿನಿಂದಲೇ ತಾವರೆಗಳು ಬಿರಿಯುತ್ತಿದ್ದವು. ಅವರ ನಸುನಗೆಯ ಬೆಳದಿಂಗಳಿಂದಲೇ ಕುಮುದಗಳು ಅರಳುತ್ತಿದ್ದವು.
ಅಂಥ ಚಿತ್ತಾಕರ್ಷಕ ಉದ್ಯಾನ ವನದಲ್ಲಿ ಹರಿಶ್ಚಂದ್ರನು ರಾಣೀವಾಸದವರೊಡನೆ ಒಮ್ಮೆ ಎಳೆಲತೆಗಳನ್ನು ನೋಡುತ್ತ, ಒಮ್ಮೆ ಕ್ರೀಡಾಶೈಲದಲ್ಲಿ ಸಂಚರಿಸುತ್ತ, ಒಮ್ಮೆ ಪುಳಿನಸ್ಥಳದಲ್ಲಿ ವಿಹರಿಸುತ್ತ, ಒಮ್ಮೆ ಹೂಗಳನ್ನು ಕೀಳುತ್ತ, ಒಮ್ಮೆ ಜಲಕ್ರೀಡೆಯನ್ನಾಡುತ್ತ, ಒಮ್ಮೆ ಇನಿವಣ್ಣು ಗಳನ್ನು ಮೆಲ್ಲುತ್ತ, ಒಮ್ಮೆ ಪಂಡಿತಗೋಷ್ಠಿಯನ್ನು ಸೇರಿಸುತ್ತ ವಸಂತಸುಖವನ್ನು ಸವಿಯು ತ್ತಿದ್ದನು... ಆಹಾ! ರವಿ ಕಾಣದ್ದನ್ನು ಕವಿ ಕಂಡನೆಂಬ ನುಡಿ ಹುಸಿಯಲ್ಲ.
ಅದು ಬೇಂದ್ರೆಯವರ ‘ಹೊಂಗೆಹೂವ ತೊಂಗಲಲ್ಲಿ ಕೇಳಿಬರುವ ಭೃಂಗದ ಸಂಗೀತಕೇಲಿ’ ಆದರೂ ಸರಿ; ಬಿಎಂಶ್ರೀಯವರ ‘ಇನಿಯರ ಬೇಟ ಬನದಲಿ ಬೆಳದಿಂಗಳೂಟ ಹೊಸಹೊಸ ನೋಟ ಹಕ್ಕಿಗೆ ನಲಿವಿನ ಪಾಠ’ ಆದರೂ ಸರಿ; ಶಿವರುದ್ರಪ್ಪನವರ ‘ಕೊಂಬೆ ಕೊಂಬೆಯ ತುಂಬ ಪುಟಿದಿದೆ ಅಂತರಂಗದ ನಂಬಿಕೆ, ಚಿಗುರು ಹೂವಿನ ಬಣ್ಣದಾರತಿ ಯಾವುದೋ ಆನಂದಕೆ’ ಆದರೂ ಸರಿ; ನರಸಿಂಹ ಸ್ವಾಮಿಯವರ ‘ಎಳೆಬಿಸಿಲ ಹೊದಿಕೆಯಲಿ ನಗಲು ಚಿಗುರಿದ ತೋಟ ಬಗೆಬಗೆಯ ಪರಿಮಳದ ಜ್ವಾಲೆ’ ಆದರೂ ಸರಿ; ವಿಜಯನಾರಸಿಂಹರ ‘ಯಾವುದೋ ಮೋಡಿಯ ಮಾದಕ ನಿಶೆಯಲಿ ಎಲ್ಲವೂ ಇಂದ್ರಜಾಲ... ಮಾಯೆಯ ಅಪ್ಪುಗೆ ಕೈಸೆರೆಯಲ್ಲಿ ಅಳಿಯದ ವಸಂತ ಕಾಲ’ ಆದರೂ ಸರಿಯೇ.
ಕವಿಕಲ್ಪನೆ ಕಾಣುವ ಚೆಲುವಿನ ಜಾಲವು ವಸಂತನನ್ನೂ, ವಸಂತನಿಂದಾಗಿ ನಳನಳಿಸುವ ಪ್ರಕೃತಿ ಯನ್ನೂ ಆವರಿಸುವ ರೀತಿಯೇ ಅಮೋಘ. ಅದನ್ನು ಕಸ್ತೂರಿಕನ್ನಡದ ಸುಂದರ ಶಬ್ದಗಳಲ್ಲಿ ಆಸ್ವಾದಿಸುವುದು ಕೂಡ ವರ್ಣನಾತೀತ ರೋಮಾಂಚನದ ಅನುಭವ! ವಸಂತ ಋತುವಿನ ಆಗಮನ ಸಂದರ್ಭದಲ್ಲಿ, ವಾಚಕ ಬಂಧು ಮಿತ್ರರೆಲ್ಲರಿಗೂ, ವಿಶ್ವಾವಸು ನಾಮ ಸಂವತ್ಸರ ಚಾಂದ್ರಮಾನ ಹೊಸ ವರ್ಷಾರಂಭದ ಯುಗಾದಿ ಹಬ್ಬಕ್ಕೆ ಶುಭಾಶಯಗಳು.
ಬದುಕಿನಲ್ಲಿ ಅನಿವಾರ್ಯವಾಗುವ ಬೇವನ್ನು ಸಹಿಸಿಕೊಳ್ಳುತ್ತಲೇ ಹಿತಮಿತವಾಗಿ ಬೆಲ್ಲವನ್ನು ಸವಿಯೋಣ. ಬೇವು-ಬೆಲ್ಲಗಳ ಅವಿನಾಭಾವ ಅಸ್ತಿತ್ವವನ್ನು ಅರ್ಥಮಾಡಿಕೊಳ್ಳೋಣ. ಎಲೆಎಲೆಯ ಮೇಲೆ ಬರೆದಿರುವ ವಸಂತನ ಒಲವಿನೋಲೆಯ ಒಸಗೆಯನ್ನು ಎಲ್ಲೆಡೆಗೂ ಎಲ್ಲರೊಡನೆಯೂ ಹಂಚಿಕೊಳ್ಳೋಣ.