Actor Anant Nag: ಪದ್ಮ ಭೂಷಣ ಪ್ರಶಸ್ತಿ ಘೋಷಣೆ; ಹಿರಿಯ ನಟ ಅನಂತ್ ನಾಗ್ ಹೇಳಿದ್ದೇನು?
ಮನೋಜ್ಞ ಅಭಿನಯದಿಂದಲೇ ಪ್ರೇಕ್ಷಕರ ಗಮನ ಸೆಳೆದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತ್ ನಾಗ್ ಅವರಿಗೆ ಕೇಂದ್ರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ಘೋಷಿಸಿದೆ. 76 ವರ್ಷದ ಅನಂತ್ ನಾಗ್ ಸುಮಾರು 50 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರಿಗೆ ಪದ್ಮ ಪ್ರಶಸ್ತಿ ಘೋಷಣೆಯಾಗಬೇಕೆಂಬ ಹಲವು ವರ್ಷಗಳ ಕನಸು ಇದೀಗ ನನಸಾಗಿದೆ.
ಬೆಂಗಳೂರು: ಸ್ಯಾಂಡಲ್‌ವುಡ್ ಸಿನಿ ರಸಿಕರ ಬಹು ವರ್ಷಗಳ ಕನಸು ಕೊನೆಗೂ ನನಸಾಗಿದೆ. ಕನ್ನಡ ಮೂಲದ ಹಿರಿಯ ನಟ, ಬಹುಭಾಷಾ ಕಲಾವಿದ ಅನಂತ್ ನಾಗ್ (Actor Anant Nag) ಅವರಿಗೆ ಪದ್ಮ ಭೂಷಣ (Padma Bhushan) ಪ್ರಶಸ್ತಿ ಘೋಷಿಸಲಾಗಿದೆ. ಗಣರಾಜ್ಯೋತ್ಸವ ಮುನ್ನಾ ದಿನವಾದ ಜ. 25ರಂದು ಕೇಂದ್ರ ಸರ್ಕಾರ ಈ ಸಾಲಿನ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಿದೆ. ಈ ಪೈಕಿ ಕರ್ನಾಟಕಕ್ಕೆ ಒಟ್ಟು 9 ಪದ್ಮ ಪ್ರಶಸ್ತಿ ಲಭಿಸಿದ್ದು, ಇದರಲ್ಲಿ1 ಪದ್ಮ ವಿಭೂಷಣ, 2 ಪದ್ಮ ಭೂಷಣ ಮತ್ತು 6 ಪದ್ಮ ಶ್ರೀ ಸೇರಿದೆ. ಈ ಪೈಕಿ ಕನ್ನಡಿಗರ ಬಹು ಕಾಲದ ಬೇಡಿಕೆಯಂತೆ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಲಭಿಸಿದ್ದು, ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ʼʼನನಗೆ ಪ್ರಶಸ್ತಿ ಘೋಷಣೆಯಾಗಿದ್ದು ಸಂತಸ ತಂದಿದೆ. ಪದ್ಮ ಪ್ರಶಸ್ತಿ ಆಯ್ಕೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸುವಂತಾಗಬೇಕು ಎಂದು ಪ್ರಧಾನಿ ಮೋದಿ ಕೆಲವು ವರ್ಷಗಳ ಹಿಂದೆ ಹೇಳಿದ್ದರು. ಪ್ರಶಸ್ತಿ ಯಾರಿಗೆ ನೀಡಬೇಕೆಂದು ಸಾರ್ವಜನಿಕರು ಹೆಸರು ಸೂಚಿಸುವಂತೆ ಅವರು ಕರೆ ನೀಡಿದ್ದರು. ಅಂದಿನಿಂದ ನೂರಾರು, ಸಾವಿರಾರು, ಲಕ್ಷಾಂತರ ಕನ್ನಡಿಗರು ನನ್ನ ಹೆಸರನ್ನು ಪ್ರಧಾನಿ ಕಚೇರಿಗೆ ಕಳುಹಿಸಿದ್ದಾರೆ. ನನಗೆ ಯಾವುದಾದರೂ ಪದ್ಮ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ ಮತ್ತು ಇದೀಗ ಪದ್ಮ ಭೂಷಣ ಪ್ರಶಸ್ತಿ ಬಂದಿದೆ. ಇದಕ್ಕಾಗಿ ನಾನು ಪ್ರಧಾನಿ ಮೋದಿ ಮತ್ತು ಭಾರತ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ" ಎಂದು ಅನಂತ್ ನಾಗ್ ಹೇಳಿದ್ದಾರೆ. ಜತೆಗೆ ʼʼಈ ಪ್ರಶಸ್ತಿಯನ್ನು ನಾನು ಕರ್ನಾಟಕದ ಜನರಿಗೆ ಅರ್ಪಿಸುತ್ತೇನೆʼʼ ಎಂದಿದ್ದಾರೆ.
ಗಣ್ಯರು, ಅಭಿಮಾನಿಗಳಿಂದ ಅಭಿನಂದನೆ
ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಅನೇಕ ಗಣ್ಯರು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ʼʼಪ್ರಶಸ್ತಿಗೆ ಈಗ ತೂಕ ಬಂತುʼʼ, ʼʼಅನಂತ್ ನಾಗ್ ಅವರಿಗೆ ಕೆಲವು ವರ್ಷಗಳ ಹಿಂದೆಯೇ ಈ ಪ್ರಶಸ್ತಿ ಬರಬೇಕಿತ್ತುʼʼ, ʼʼಕೊನೆಗೂ ಅನಂತ್ ನಾಗ್‌ಗೆ ಪ್ರಶಸ್ತಿ ಘೋಷಣೆಯಾಗಿದೆʼʼ ಎಂದು ಹಲವು ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಚಿತ್ರ ನಟ ಅನಂತ್ ನಾಗ್ ಸೇರಿದಂತೆ ಇಬ್ಬರು ಕನ್ನಡಿಗರಿಗೆ ಪದ್ಮ ಭೂಷಣ!
5 ದಶಕಗಳಿಂದ ಕಲಾಸೇವೆ
ಅನಂತ್ ನಾಗ್ ಕಳೆದ 50 ವರ್ಷಗಳಿಂದ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ್ದಾರೆ.1973ರಲ್ಲಿ ತೆರೆಕಂಡ ʼಸಂಕಲ್ಪʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಅನಂತ್ ನಾಗ್ ಸುಮಾರು 4 ಬಾರಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜತೆಗೆ ವಿವಿಧ ಪುರಸ್ಕಾರಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ಹೀಗಾಗಿ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕೆಂಬ ಕೂಗು ಕೇಳಿ ಬಂದಿತ್ತು. ಸದ್ಯ ಈ ಕನಸು ನನಸಾಗಿದೆ.