Vinay Somaiah death: ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ: ಕಾಂಗ್ರೆಸ್ ಶಾಸಕ ಸೇರಿ ಮೂವರ ಮೇಲೆ ಎಫ್‌ಐಆರ್
ಕೊಡಗಿನ ಕಾಂಗ್ರೆಸ್ ಶಾಸಕರಾದ ಎ.ಎಸ್. ಪೊನ್ನಣ್ಣ, ಮಂಥರ್ ಗೌಡ ಹಾಗೂ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತನ್ನೀರಾ ಮೈನಾ ಅವರ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇವರ ಹೆಸರು ವಿನಯ್ ಡೆತ್‌ನೋಟ್‌ನಲ್ಲಿ ಬರೆದಿದ್ದರು.

ವಿನಯ್ ಸೋಮಯ್ಯ

ಬೆಂಗಳೂರು: ಕೊಡಗು (Coorg news) ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಗ್ರಾಮದ ನಿವಾಸಿ, ಬಿಜೆಪಿ ಕಾರ್ಯಕರ್ತ (BJP Worker) ವಿನಯ್ ಸೋಮಯ್ಯ (Vinay Somaiah death) ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ಇದೀಗ ಮೂವರ ವಿರುದ್ಧ ದೂರು ದಾಖಲಾಗಿದೆ. ಕೊಡಗಿನ ಕಾಂಗ್ರೆಸ್ ಶಾಸಕರಾದ ಎ.ಎಸ್. ಪೊನ್ನಣ್ಣ, ಮಂಥರ್ ಗೌಡ ಹಾಗೂ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತನ್ನೀರಾ ಮೈನಾ ಅವರ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮೂವರ ಕಿರುಕುಳದಿಂದ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ವಿನಯ್ ಸೋಮಯ್ಯ ಅವರ ಸಹೋದರ ಜೀವನ್ ಸೋಮಯ್ಯ ದೂರಿನಂತೆ ಪ್ರಕರಣ ದಾಖಲಾಗಿದೆ.
ಕೊಡಗು ಸಮಸ್ಯೆಗಳು ಎನ್ನುವ ವಾಟ್ಸ್‌ಆ್ಯಪ್ ಗ್ರೂಪ್ ಅಡ್ಮಿನ್ ಸಹ ಆಗಿದ್ದ ವಿನಯ್ ಅವರು ಮರಣ ಪತ್ರ ಬರೆದಿಟ್ಟು ನಾಗವಾರದ ಬಿಜೆಪಿ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ವಿರುದ್ಧ ಈ ಹಿಂದೆ ಒಂದು ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದು ಹಾಗೂ ಅದನ್ನು ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದುದರಿಂದ ಮನನೊಂದು ನಾಗವಾರದ ಕಚೇರಿಯಲ್ಲಿಯೇ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಶಾಸಕರೇ ಕಾರಣ ಎಂದು ಬಿಜೆಪಿ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಗೋಣಿಮಾರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡುಂಡಿ ಗ್ರಾಮದ ವಿನಯ್, ದೇವತಿ, ಸೋಮಯ್ಯ ದಂಪತಿಯ 3ನೇ ಪುತ್ರ. 15 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ವಾಸವಾಗಿದ್ದರು. ವಿನಯ್ ಸೋಮಯ್ಯ ಈಗಾಗಲೇ ಮದುವೆಯಾಗಿದ್ದು, ಓರ್ವ ಮಗಳು ಇದ್ದಾಳೆ. ಬೆಂಗಳೂರಿನಲ್ಲಿ ಮ್ಯಾನ್ಪವರ್ ಆಪರೇಟಿಂಗ್ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ವಿನಯ್ ಸೋಮಯ್ಯ ಬಿಜೆಪಿ ಕಾರ್ಯಕರ್ತನಾಗಿದ್ದರು. 12 ವರ್ಷಗಳ ಹಿಂದೆ ಬಿಜೆಪಿ ಹೋಬಳಿ ಅಧ್ಯಕ್ಷರಾಗಿದ್ದರು. ಅಷ್ಟೇ ಅಲ್ಲದೇ ಇವರ ತಂದೆ ಸೋಮಯ್ಯ ಸಹ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.
ವಿನಯ್ ‘ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು’ ಎಂಬ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್ನ ಅಡ್ಮಿನ್ ಆಗಿದ್ದರು. ಇತ್ತೀಚೆಗೆ ಇದೇ ಗ್ರೂಪ್ ಮೂಲಕ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರ ಆಕ್ಷೇಪಾರ್ಹ ಫೋಸ್ಟ್ ವೈರಲ್ ಆಗಿತ್ತು. ಈ ಸಂಬಂಧ ಅಡ್ಮಿನ್ ಆಗಿದ್ದ ವಿನಯ್ ವಿರುದ್ಧವೇ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಸೋಮಯ್ಯ ಅವರನ್ನು ಎರಡು ತಿಂಗಳ ಹಿಂದೆ ಬಂಧಿಸಲಾಗಿತ್ತು. ಬಂಧನದ ಬಳಿಕ ಬಹಳ ಮನನೊಂದಿದ್ದ ವಿನಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿನಯ್ ಅವರು ಆತ್ಮಹತ್ಯೆಗೆ ಮುನ್ನ ಡೆತ್‌ನೋಟ್‌ನಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಹಾಗೂ ಸಿಎಂ ಕಾನೂನು ಸಲಹೆಗಾರ, ಶಾಸಕ ಪೊನ್ನಣ್ಣ ಹಾಗೂ ಮಂಥರ್ ಗೌಡ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತುರ ನಾಯಕರು ಸಿಡಿದೆದ್ದಿದ್ದು, ಕೊಡಗಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೊಂದೆಡೆ ತಮ್ಮ ಕಾರ್ಯಕರ್ತನ ಸಾವಿಗೆ ನ್ಯಾಯ ಕೊಡಿ ಎಂದು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ. ʼಕಾಂಗ್ರೆಸ್ ನಾಯಕರ ದ್ವೇಷ ರಾಜಕಾರಣಕ್ಕೆ ವಿನಯ್ ಬಲಿಯಾಗಿದ್ದಾರೆʼ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಇದನ್ನೂ ಓದಿ: Chalavadi Narayanaswamy: ವಿನಯ್ ಸೋಮಯ್ಯ ಸಾವಿನ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ