Chalavadi Narayanaswamy: ವಿನಯ್ ಸೋಮಯ್ಯ ಸಾವಿನ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ
Chalavadi Narayanaswamy: ವಿನಯ್ ಸೋಮಯ್ಯ ಅವರ ಸಾವಿನ ಪ್ರಕರಣದಲ್ಲಿ ಎಸ್.ಪಿ. ನೇರ ಹೊಣೆ ಎಂಬುದು ಗೊತ್ತಾಗಿದೆ. ಎಸ್‍ಪಿಯವರನ್ನು ಅಮಾನತು ಮಾಡಬೇಕು. ಪ್ರಕರಣದಲ್ಲಿ ಒಳಗೊಂಡ ಆರೋಪಿತರಾದ ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಆರೋಪಿತ ತನ್ನೀರ್ ಮೈನಾ ಅವರನ್ನು ಎಫ್‍ಐಆರ್‌ನಲ್ಲಿ ಸೇರಿಸಿ ತನಿಖೆ ನಡೆಸಬೇಕು. ಅವರನ್ನು ಬಂಧಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ವಿನಯ್ ಸೋಮಯ್ಯ ಅವರ ಸಾವಿನ ಪ್ರಕರಣದಲ್ಲಿ ಎಸ್.ಪಿ. ನೇರ ಹೊಣೆ ಎಂಬುದು ಗೊತ್ತಾಗಿದೆ. ಎಸ್‍ಪಿಯವರನ್ನು ಅಮಾನತು ಮಾಡಬೇಕು. ಪ್ರಕರಣದಲ್ಲಿ ಒಳಗೊಂಡ ಆರೋಪಿತರಾದ ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಆರೋಪಿತ ತನ್ನೀರ್ ಮೈನಾ ಅವರನ್ನು ಎಫ್‍ಐಆರ್‌ನಲ್ಲಿ ಸೇರಿಸಿ ತನಿಖೆ ನಡೆಸಬೇಕು. ಅವರನ್ನು ಬಂಧಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ. ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಅಕಾಲಿಕ ನಿಧನರಾಗಿದ್ದು, ಅವರಿಗೆ ಅಂತಿಮ ನಮನ ಸಲ್ಲಿಸಲು ಬೆಂಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ʼಆತ್ಮಹತ್ಯೆ ಹಿಂದೆ ಶಾಸಕ ಪೊನ್ನಣ್ಣ ಅವರು ಇದ್ದಾರೆ ಎಂದು ವಿನಯ್ ಸೋಮಯ್ಯ ಡೆತ್ ನೋಟಿನಲ್ಲಿ ಬರೆದುಕೊಂಡಿದ್ದಾರೆʼ. ತಡಮಾಡದೇ ಈ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಪ್ರಕರಣದಲ್ಲಿ ಪೊಲೀಸರು ನೇರವಾಗಿ ಭಾಗವಹಿಸಿದ್ದಾರೆ. ಜಾಮೀನು ಪಡೆದರೂ ಯಾಕೆ ಅವರನ್ನು ಹುಡುಕುತ್ತಿದ್ದರು? ಅವರೇನು ರೌಡಿಯೇ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ಸಿನ ಅಟ್ಟಹಾಸ ಮೆಟ್ಟಿ ನಿಲ್ಲುವ ಶಕ್ತಿ ನಮಗಿದೆ. ಯಾವುದೇ ಕಾರಣಕ್ಕೆ ಜೀವತ್ಯಾಗ ಮಾಡಬಾರದು. ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರ ಮತ್ತು ನಾಯಕರ ಅಧಿಕಾರದ ಅಟ್ಟಹಾಸ ಬಹಳ ಹೆಚ್ಚಾಗಿದೆ. ಯಾದಗಿರಿಯಲ್ಲಿ ಎಸ್‍ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಾಗ ಅಲ್ಲಿ ಶಾಸಕ ಚೆನ್ನಾರೆಡ್ಡಿ ಹೆಸರು ಬರೆಯಲಾಗಿತ್ತು. ಜಾತಿ ನಿಂದನೆ, ಹಣ ಕೇಳಿದ ಆರೋಪವಿತ್ತು ಎಂದು ಆರೋಪಿಸಿದ ಅವರು ಅಲ್ಲಿ ಶಾಸಕರನ್ನು ಬಂಧಿಸಿಲ್ಲ. ಗುಲ್ಬರ್ಗದಲ್ಲಿ ಸಚಿನ್ ಪಾಂಚಾಳ್ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆಯವರ ಹೆಸರು ಬರೆದಿತ್ತು. ಅವರ ಸಹಚರರ ಹೆಸರಿದ್ದರೂ ಕೇಸ್ ಏನಾಗಿದೆ ಎಂದು ಪ್ರಶ್ನಿಸಿದರು.
ಬೆಳಗಾವಿಯ ತಹಸೀಲ್ದಾರ್ ಕಚೇರಿಯಲ್ಲಿ ರುದ್ರಣ್ಣ ಯಡವಣ್ಣ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪಿ.ಎ. ಹೆಸರು ಹೇಳಿ ತೀರಿಕೊಂಡರು. ಏನಾದ್ರೂ ಕ್ರಮ ಆಯ್ತ? ಇಲ್ಲ ಎಂದು ತಿಳಿಸಿದರು. ‘ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್, ಡೆತ್ ನೋಟಿನಲ್ಲಿ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ದದ್ದಲ್ ಅವರ ಹೆಸರು ಬರೆದಿಟ್ಟಿದ್ದರು. ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Cabs price hike: ಮತ್ತೊಂದು ದರ ಏರಿಕೆ ಬರೆ, ಡೀಸೆಲ್ ದುಬಾರಿ ಹಿಂದೆಯೇ ಕ್ಯಾಬ್ ದರವೂ ಹೆಚ್ಚಳ
ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ್, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಇದ್ದರು.