ಟೋಕಿಯೊ: ಜನ ಉದ್ಯೋಗ ಹಾಗೂ ಇತರೆ ಕಾರಣಕ್ಕೆ ಬೇರೆ ದೇಶ, ರಾಜ್ಯದಲ್ಲಿ ನೆಲೆಸಿರುತ್ತಾರೆ. ಆದರೆ ಎಲ್ಲೆ ಹೋದರು, ನಮ್ಮೂರು, ನಮ್ಮೂರಿನ ತಿಂಡಿ, ನಮ್ಮೂರಿನ ಜನರು ಎಂಬ ಭಾವವೊಂದು ಸದಾ ಮನಸ್ಸಿನ ಮೂಲೆಯಲ್ಲಿರುತ್ತದೆ. ಯಾರಾದರು ಊರಿನವರು ಸಿಕ್ಕರೆ ಆಗುವ ಖುಷಿ ಅಷ್ಟಿಷ್ಟಲ್ಲ! ಇದೀಗ ಜಪಾನ್‍ನ ಟೋಕಿಯೊದಲ್ಲಿರುವ ಮೈಸೂರು ಮೂಲದ ಕೆಫೆಯೊಂದು ಗಮನ ಸೆಳೆದಿದ್ದು, ಕನ್ನಡತಿ ಶ್ವೇತಾ ಆರಾಧ್ಯ ಅವರು ಈ ಕೆಫೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ.
"ಮೈಸೂರು ಕೆಫೆ" ಎಂದು ಹೆಸರಿನ ಈ ಕೆಫೆಯಲ್ಲಿ ಲೆಮನ್ ರೈಸ್, ಚಿಕ್ಕಮಗಳೂರು ಫಿಲ್ಟರ್ ಕಾಫಿ ಹೀಗೆ ಸಾಂಪ್ರದಾಯಿಕ ಭಕ್ಷ್ಯಗಳು ಹಾಗೂ ಮೈಸೂರು ಶೈಲಿಯ ಅಡುಗೆಗಳು ಇವೆಯಂತೆ. ಈ ವಿಶಿಷ್ಟ ರುಚಿಗಳ ಖಾದ್ಯವು ಜಪಾನಿಗರ ಮೆಚ್ಚುಗೆ ಕೂಡ ಗಳಿಸಿದೆಯಂತೆ!
ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಶಿಲ್ಪಾ ಆರಾಧ್ಯ ಕೆಫೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಜಪಾನಿನ ರಾಜಧಾನಿಯಲ್ಲಿ ಕರ್ನಾಟಕದ ಕೆಫೆಯನ್ನು ಕಂಡು ಅವರಿಗೆ ಸಿಕ್ಕಾಪಟ್ಟೆ ಖುಷಿಯಾಗಿತ್ತಂತೆ. ಹಾಗೇ ಇಲ್ಲಿ ಸಿಗುವ ಲೆಮನ್ ರೈಸ್, ಸಲಾಡ್ ಹಾಗೂ ಕಾಫಿಯ ರುಚಿಯೂ ಅದ್ಭುತವಾಗಿದೆ ಎಂದು ಆಕೆ ಹೊಗಳಿದ್ದಾರೆ. ಕರ್ನಾಟಕದ ಶ್ರೀಮಂತ ಪಾಕಶಾಲೆಯ ಪರಂಪರೆಯು ವಿಶ್ವಾದ್ಯಂತ ಹೃದಯಗಳನ್ನು ಗೆಲ್ಲುತ್ತಿದೆ ಎಂದು ಅವರು ಸಿಕ್ಕಾಪಟ್ಟೆ ಖುಷಿ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊ ವೈರಲ್ ಆಗಿದ್ದು, ಸಾವಿರಾರು ಮೈಲಿ ದೂರದಲ್ಲಿದ್ದು, ಕರ್ನಾಟಕದ ಶ್ರೀಮಂತ ಪಾಕಶಾಲೆಯ ಸಂಪ್ರದಾಯಗಳನ್ನು ಪಾಲಿಸುವ ಕೆಫೆಯ ಪ್ರಯತ್ನವನ್ನು ನೆಟ್ಟಿಗರು ಹೊಗಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: 1 ಬಾಳೆ ಹಣ್ಣಿನ ಬೆಲೆ ಕೇಳಿ ಬೆಚ್ಚಿಬಿದ್ದ ವಿದೇಶಿ ವ್ಲಾಗರ್; ವಿಡಿಯೊ ವೈರಲ್
ವೆಜಿಟೇರಿಯನ್ ಆಹಾರಕ್ಕೆ ಮೀಸಲಾಗಿರುವ ಜಪಾನಿನ ವೆಬ್‌ಸೈಟ್ ವೆಜ್ವೆಲ್‍ನಲ್ಲಿ ಕೂಡ ಈ ಮೈಸೂರು ಕೆಫೆ ಕಾಣಿಸಿಕೊಂಡಿದೆ. ಫಿಲ್ಟರ್ ಕಾಫಿ ಮತ್ತು ಚಹಾದ ಜತೆಗೆ, ಈ ಕೆಫೆ ದಕ್ಷಿಣ ಭಾರತದ ಮೈಸೂರಿನ ಪಾಕಶಾಲೆಯ ಪರಂಪರೆಯಿಂದ ಪ್ರೇರಿತವಾದ ಸಾಂಪ್ರದಾಯಿಕ ಊಟದ ಸೇವೆಗಳನ್ನು ನೀಡುತ್ತದೆ.