Viral Video: ರೈಲಿನಲ್ಲಿ ತನ್ನೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕನಿಗೆ ‘ಸ್ಮಾರ್ಟ್ ರಿಪ್ಲೈ’ ನೀಡಿದ ವಿದೇಶಿ ಮಹಿಳೆ
ವಿದೇಶಿಯರು ಭಾರತಕ್ಕೆ ಪ್ರವಾಸಕ್ಕೆಂದು ಬಂದಾಗ ಅವರಿಗೆ ಕೆಲವೊಂದು ಕಡೆಗಳಲ್ಲಿ ಕಹಿ ಅನುಭವಗಳು ಉಂಟಾಗುತ್ತವೆ. ಅಂತಹ ಒಂದು ಘಟನೆಯ ವಿಡಿಯೋ ಸುದ್ದಿ ಇಲ್ಲಿದೆ...
Source : www.freepressjournal.in
ನವದೆಹಲಿ: ದೆಹಲಿಯಿಂದ (Delhi) ಆಗ್ರಾಕ್ಕೆ (Agra) ರೈಲಿನಲ್ಲಿ (Indian Railways) ಸಂಚರಿಸುತ್ತಿದ್ದ ನೆದರ್ಲ್ಯಾಂಡ್ (Netherland) ಮೂಲದ ಮಹಿಳಾ ಪ್ರವಾಸಿಯೊಬ್ಬರಿಗೆ ಅವರ ಪಕ್ಕದಲ್ಲಿ ಕುಳಿತಿದ್ದ ಭಾರತೀಯ ಸಹ ಪ್ರಯಾಣಿಕ ಉಪಟಳ ನೀಡಿದ ಘಟನೆ ಮತ್ತು ಅದನ್ನು ಆಕೆ ಉಪಾಯವಾಗಿ ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ತನ್ನ ನೋವನ್ನು ತೋಡಿಕೊಂಡ ಘಟನೆಯೊಂದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ (Viral Video) ಆಗುತ್ತಿದೆ.
ರೈಲಿನಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ಭಾರತೀಯ ವ್ಯಕ್ತಿ ಪದೇ ಪದೇ ಈ ವಿದೇಶಿ ಪ್ರವಾಸಿಯಲ್ಲಿ ಆಕೆಯ ಫೊಟೋವನ್ನು ದರ್ಪದಿಂದ ಕೇಳಿದ್ದಾನೆ. ಈತನ ವರ್ತನೆಯಿಂದ ಬೇಸರಗೊಂಡ ಆ ಮಹಿಳೆ ಇದನ್ನು ರೈಲ್ವೇ ಪೊಲೀಸರ ಗಮನಕ್ಕೆ ತರುವ ಬದಲು ಆತನ ವರ್ತನೆಯ ಮಾದರಿಯಲ್ಲೇ ಆತನಿಗೆ ಪ್ರತಿಕ್ರಿಯೆ ನೀಡಿರುವುದು ಇದೀಗ ನೆಟ್ಟಿಗರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನೆದರ್ಲ್ಯಾಂಡ್ ದೇಶದವರಾಗಿರುವ ಆಂಡಿ ಅವೊಕಾಡೋ ಎನ್ನುವ ಮಹಿಳೆ ಏಕಾಂಗಿಯಾಗಿ ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ರೈಲಿನಲ್ಲಿ ತನ್ನ ಸಹ ಪ್ರಯಾಣಿಕ ತೊರಿದ ಈ ಅಸಹಜ ವರ್ತನೆಯಿಂದ ಕಿರಿಕಿರಿ ಅನುಭವಿಸಿದ ಆಂಡಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿ ತನಗಾದ ಅನುಭವವನ್ನು ಇಂಗ್ಲಿಷ್ ನಲ್ಲಿ ಹೇಳುತ್ತಾ ಹೋಗಿದ್ದಾಳೆ.
ಆದರೆ ವಿಚಿತ್ರವೆಂದರೆ, ಪಕ್ಕದಲ್ಲಿ ಕುಳಿತಿದ್ದ ಆ ಯುವಕ ಈಕೆ ಆತನ ಬಗ್ಗೆ ಕಂಪ್ಲೇಟ್ ಮಾಡುತ್ತಿದ್ದಾಳೆ ಎಂಬುದನ್ನು ಅರಿಯದೇ, ಈಕೆಯ ಮಾತಿಗೆ ನಗುತ್ತಾ ಪ್ರತಿಕ್ರಿಯಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಈ ಯುವಕನ ವರ್ತನೆಯ ಬಗ್ಗೆ ಇಂಗ್ಲಿಷ್ ನಲ್ಲಿ ಹೇಳುತ್ತಲೇ ಆ ಮಹಿಳೆ ಉಪಾಯವಾಗಿ ತನ್ನ ಮೊಬೈಲನ್ನು ಯುವಕನತ್ತ ತಿರುಗಿಸಿ ಆತನ ಮುಖವನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ.
‘ನಾನು ಭಾರತದಲ್ಲಿ ಒಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ, ಮತ್ತು ನನ್ನ ಪಕ್ಕದಲ್ಲಿರುವ ಈ ಯುವಕ ನನ್ನ ಫೊಟೋಗಳನ್ನು ಕ್ಲಿಕ್ಕಿಸುತ್ತಿದ್ದಾನೆ ಮತ್ತು ಈತನ ಈ ದರ್ಪದ ವರ್ತನೆ ನನಗೆ ಸಿಟ್ಟು ತರಿಸುತ್ತಿದೆ. ಇದೀಗ ನಾನೂ ಸಹ ಆತ ಮಾಡಿದ್ದನ್ನೇ ಮಾಡುತ್ತಿದ್ದೆನೆ..’ ಎಂದು ಆಕೆ ಇಂಗ್ಲಿಷ್ ನಲ್ಲಿ ಹೇಳಿಕೊಂಡಿದ್ದಾಳೆ.
‘ಇಲ್ನೋಡಿ, ಇವನೇ ಆ ಯುವಕ. ಇಂತವರು ನಿಮ್ಮ ಪಕ್ಕ ಕುಳಿತಿದ್ದರೂ ನೀವೂ ಹೀಗೇ ಮಾಡಿ. ನಿಮ್ಮ ಮೊಬೈಲ್ ಕೆಮರಾವನ್ನು ಅಂತವರ ಮುಖಕ್ಕೆ ಹಿಡಿಯಿರಿ’ ಎಂದು ಹೇಳಿತ್ತಿರುವಾಗ, ಆಕೆ ಏನು ಮಾತನಾಡುತ್ತಿದ್ದಾಳೆಂದು ಅರ್ಥವಾಗದೇ ಆತ ನಗುತ್ತಾ ಆಕೆಯ ವಿಡಿಯೋಗೆ ಪೋಸ್ ನೀಡಿದ್ದಾನೆ!
ಇದನ್ನೂ ಓದಿ: Viral Video: ದೇಹಕ್ಕೆ ಮುಪ್ಪಾದರೂ ಪ್ರೀತಿಗೆ ಮುಪ್ಪಿಲ್ಲ...ವೃದ್ಧ ದಂಪತಿಯ ವಿಡಿಯೊ ನೋಡಿ ನೆಟ್ಟಿಗರು ಫಿದಾ!!
ಈ ಘಟನೆ ತನಗೆ ಕಿರಿಕಿರಿ ಉಂಟು ಮಾಡಿದೆ ಎಂದು ಆ ಮಹಿಳೆ ಹೇಳಿಕೊಂಡಿದ್ದು, ಆದರೆ ಈ ಘಟನೆ ತನ್ನ ಭಾರತ ಭೇಟಿಯ ಉದ್ದೆಶವನ್ನು ಹಾಳು ಮಾಡಿಲ್ಲ ಎಂದೂ ಹೇಳಿಕೊಂಡಿದ್ದಾಳೆ. ‘ನಾನು ಭಾರತವನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಈ ಒಂದು ಕೆಟ್ಟ ಅನುಭವ ನನ್ನ ಭಾರತ ದರ್ಶನ ಉದ್ದೇಶಕ್ಕೆ ಅಡ್ಡಿಯಾಗಲಾರದು’ ಎಂದು ಆಕೆ ಹೇಳಿಕೊಂಡಿದ್ದಾರೆ.
ವಿದೇಶಿ ಪ್ರವಾಸಿ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆ ನೆಟ್ಟಿಗರು ಆ ಮಹಿಳೆಯ ಬೆಂಬಲಕ್ಕೆ ನಿಂತಿದ್ದು, ಯುವಕನ ವರ್ತನೆಯನ್ನು ಖಂಡಿಸಿದ್ದಾರೆ.