ಕೋಲ್ಕತ್ತಾ : ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿರುವ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಕಾನ್‌ಸ್ಟೇಬಲ್ ಪಲ್ಲಬಿ ಬಿಸ್ವಾಸ್ ಅವರು ಪುರುಲಿಯಾ ನಿಲ್ದಾಣದಲ್ಲಿ ಚಲಿಸುವ ರೈಲು ಮತ್ತು ಪ್ಲಾಟ್ ಫಾರ್ಮ್ ನಡುವೆ ಬೀಳುತ್ತಿದ್ದ 65 ವರ್ಷದ ಪ್ರಯಾಣಿಕನನ್ನು ರಕ್ಷಿಸಿ ತಮ್ಮ ಧೈರ್ಯ ಮತ್ತು ಕರ್ತವ್ಯ ಪ್ರಜ್ಞೆಯನ್ನು ಪ್ರದರ್ಶಿಸಿದ್ದಾರೆ. ಅವರ ಈ ಅಸಾಧಾರಣ ಶೌರ್ಯಕ್ಕಾಗಿ ಅವರಿಗೆ ಪ್ರತಿಷ್ಠಿತ ‘ಜೀವನ್ ರಕ್ಷಾ ಪದಕ 2024’ ಅನ್ನು ನೀಡಿ ಗೌರವಿಸಲಾಗಿದೆ. ಕಾನ್‌ಸ್ಟೇಬಲ್ ಪಲ್ಲಬಿ ಬಿಸ್ವಾಸ್ ಅವರ ಸಮಯಪ್ರಜ್ಞೆಯು ಸಂಭವಿಸಬಹುದಾದ ದುರಂತವನ್ನು ತಪ್ಪಿಸಿದೆ ಮತ್ತು ವೃದ್ಧ ಪ್ರಯಾಣಿಕರ ಪ್ರಾಣವನ್ನು ರಕ್ಷಿಸಿದೆ. ಈ ಘಟನೆಗೆ ಸಂಬಂಧಪಟ್ಟ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್ ಇಂಡಿಯಾ) ಎಕ್ಸ್‌ನಲ್ಲಿ ಈ ವೈರಲ್ ವಿಡಿಯೊ ಹಂಚಿಕೊಂಡಿದ್ದು, ಕಾನ್‌ಸ್ಟೇಬಲ್ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಾ ಎಡವಿ ಬಿದ್ದ ವ್ಯಕ್ತಿಯನ್ನು ರಕ್ಷಿಸಲು ಅವನ ಕಡೆಗೆ ಧಾವಿಸುವುದು ಸೆರೆಯಾಗಿದೆ. ಕಾನ್‌ಸ್ಟೇಬಲ್ ಪಲ್ಲಬಿ ಆ ವ್ಯಕ್ತಿಗೆ ಸಹಾಯ ಮಾಡುವುದನ್ನು ಗಮನಿಸಿದ ನಂತರ ಇತರ ಪೊಲೀಸರು ಅವರ ಸಹಾಯಕ್ಕೆ ಬಂದಿದ್ದಾರೆ. ಅದೃಷ್ಟವಶಾತ್ ವೃದ್ಧ ಮತ್ತು ಕಾನ್‌ಸ್ಟೇಬಲ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೀವನ್ ರಕ್ಷಾ ಪದಕದ ಕುರಿತು
ರಾಷ್ಟ್ರೀಯ ಗೌರವವಾದ ಜೀವನ್ ರಕ್ಷಾ ಪದಕವನ್ನು ಇತರರನ್ನು ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಪಲ್ಲಬಿ ಅವರ ನಿಸ್ವಾರ್ಥತೆ ಮತ್ತು ಕರ್ತವ್ಯ ಸಮರ್ಪಣೆಯ ಕಾರ್ಯವು ಆರ್‌ಪಿಎಫ್‍ಗೆ ಹೆಮ್ಮೆ ತಂದಿದೆ ಮತ್ತು ಅನೇಕರಿಗೆ ಸ್ಫೂರ್ತಿ ನೀಡಿದೆ. ಹಾಗಾಗಿ ಅವರಿಗೆ ಈ ಗೌರವವನ್ನು ನೀಡಲಾಗಿದೆ. ಉತ್ತರ ಪ್ರದೇಶದ ನೈನಿ ನಿಲ್ದಾಣದಲ್ಲಿ ಮಂಗಳವಾರ ಇದೇ ರೀತಿಯ ಘಟನೆ ನಡೆದಿದ್ದು, ಅಲ್ಲಿ ವ್ಯಕ್ತಿಯೊಬ್ಬ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ಈ ಪ್ರಯತ್ನದಲ್ಲಿ, ಕೆಳಗೆ ಬಿದ್ದು ಕೈಗೆ ತೀವ್ರ ಗಾಯವಾಗಿದೆ. ನಂತರ ಆ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ.
ಈ ಸುದ್ದಿಯನ್ನೂ ಓದಿ:Mahakumbh 2025: ಮಹಾಕುಂಭ ಮೇಳದ ವಿಶೇಷ ರೈಲಿನ ಮೇಲೆ ಕಲ್ಲು ತೂರಾಟ; ವಿಡಿಯೊ ವೈರಲ್
ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದನ್ನು ಗಮನಿಸಿದ ಆರ್‌ಪಿಎಫ್, ಇಂತಹ ಚಟುವಟಿಕೆಗಳನ್ನು ತಪ್ಪಿಸುವಂತೆ ಜನರಿಗೆ ಮನವಿ ಮಾಡಿದೆ, "ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುವುದು ಗಂಭೀರ ಗಾಯಗಳಿಗೆ ಅಥವಾ ಪ್ರಾಣಾಪಾಯಕ್ಕೆ ಕಾರಣವಾಗಬಹುದು. ಹಾಗಾಗಿ ಸುರಕ್ಷಿತವಾಗಿ ರೈಲು ಹತ್ತಿ!" ಎಂದು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.