ಲಖನೌ: ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಮದುವೆಯಾಗಲು ಹಲವು ಶಾಸ್ತ್ರ ಸಂಪ್ರದಾಯಗಳು ಇವೆ. ಮದುವೆಯಲ್ಲಿ ನಡೆಯುವ ಪೂಜೆ ವಿಧಿ ವಿಧಾನಗಳನ್ನು ಪುರೋಹಿತರೇ ನಡೆಸಿಕೊಡುವ ಸಂಪ್ರದಾಯ ಇದೆ. ಆದರೆ ಇಲ್ಲೊಂದು ಕಡೆ ವರ ತಾನೇ ಮಂತ್ರ ಹೇಳುತ್ತಾ , ತನ್ನ ಮದುವೆಯನ್ನು ಅರ್ಚಕರಿಲ್ಲದೆ ತಾನೇ ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾನೆ. ಈ ಮದುವೆಯ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗುತ್ತಿದೆ.
ವರನನ್ನು ವಿವೇಕ್ ಕುಮಾರ್ ಎಂದು ಗುರುತಿಸಲಾಗಿದ್ದು ಮದುಮಗನೇ ಅರ್ಚಕನಾಗಿ ಮದುವೆ ನೆರವೇರಿಸಿಕೊಂಡಿದ್ದಾನೆ. ಉತ್ತರ ಪ್ರದೇಶದ ಹರಿದ್ವಾರದ ಸಹರಾನ್‌ಪುರ ಎಂಬಲ್ಲಿ ಇತ್ತೀಚಿಗೆ ಈ ಮದುವೆ ನಡೆದಿದ್ದು, ವರನು ತನ್ನ ಮದುವೆಯ ಪೌರೋಹಿತ್ಯವನ್ನು ತಾನೇ ನಡೆಸಿದ್ದಾನೆ. ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರೇ ಶಾಕ್ ಆಗಿದ್ದಾರೆ.
ವಧುವಿನೊಂದಿಗೆ ಅಗ್ನಿ ಕುಂಡದ ಮುಂದೆ ಕುಳಿತ ವರ, ಮಂತ್ರ ಗಳನ್ನು ಪಠಿಸುತ್ತಾ ವೈವಾಹಿಕ ಬದುಕಿಗೆ ಕಾಲಿಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಮೈಕ್‌ನಲ್ಲಿ ಸ್ವತಃ ತಾನೇ ಮಂತ್ರ ಘೋಷಗಳನ್ನು ಪಠಿಸುತ್ತಿದ್ದಾನೆ. ಇದಕ್ಕೆ ವಧು ಕೂಡ ಸಾಥ್ ನೀಡಿದ್ದಾಳೆ.
Genzofficial ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದ್ದು ಅರ್ಚಕನಾದ ವರ! ತನ್ನ ವಿವಾಹ ಶಾಸ್ತ್ರವನ್ನು ತಾನೇ ನಡೆಸಿಕೊಂಡ ವರ ಎಂದು ಶೀರ್ಷಿಕೆ ನೀಡಲಾಗಿದ್ದು ಈ ವಿಡಿಯೊ ಇದೀಗ ಬಹಳಷ್ಟು ವೈರಲ್ ಆಗುತ್ತಿದೆ. ಮೊದಲಿನಿಂದಲೂ ಪೂಜೆ ವಿಧಿ ವಿಧಾನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ವರ ವಿವೇಕ್ ಕುಮಾರ್ ಮಂತ್ರ ಪಠಣದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಪ್ರಸ್ತುತ ಗುರುಕುಲ ಕಾಂಗ್ರಿ ವಿಶ್ವ ವಿದ್ಯಾನಿಲಯದಲ್ಲಿ ಓದುತ್ತಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ: Viral Video: ಮಹಾ ಕುಂಭಮೇಳದಲ್ಲಿ ಕೈಲಾಶ್ ಖೇರ್ ಧ್ವನಿಗೆ ಫಿದಾ ಆದ ನೆಟ್ಟಿಗರು
ಈ ವಿಡಿಯೊ ಇದೀಗ ಬಹಳಷ್ಟು ವೈರಲ್ ಆಗುತ್ತಿದ್ದು ಬಳಕೆದಾರರು ನಾನಾ ಬಗೆಯ ಕಾಮೆಂಟ್ ಹಾಕಿದ್ದಾರೆ. ನೆಟ್ಟಿಗರು ವರನ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನೆಟ್ಟಿಗೆರು ಅರ್ಚಕ ರಿಲ್ಲದೆ ಶಾಸ್ತ್ರೋ ಕ್ತವಾಗಿ ಮದುವೆ ನೆರವೇರಿಸಿದ ವರ ಎಂದು ಕಾಮೆಂಟ್ ಮಾಡಿದ್ದಾರೆ. ಈ ಜೋಡಿ ವಿವಾಹ ಅತ್ಯಂತ ವಿಶೇಷವಾಗಿ ಮಾಡಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.