Viral Video: ತರಕಾರಿ ಮಾರುವ ಶತಾಯಷಿ ಅಜ್ಜನ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ..!
ದುಡಿಮೆಗೆ ಪ್ರಾಯದ ಹಂಗಿಲ್ಲವೆಂಬುದನ್ನು ಇಲ್ಲೊಬ್ಬರು ಶತಾಯುಷಿ ಅಜ್ಜ ಸಾಬೀತುಪಡಿಸಿದ್ದಾರೆ. ಹಾಗಾದ್ರೆ ಯಾರು ಈ ಅಜ್ಜ? ಏನಿವರ ಕಥೆ? ತಿಳಿದುಕೊಳ್ಳೋಣ ಬನ್ನಿ..

ಶತಾಯುಷಿ ಅಜ್ಜ

ಅಮೃತಸರ: ದುಡಿಮೆಗೆ ಪ್ರಾಯ ಎಂಬುದಿಲ್ಲ! ಕೈಕಾಲು ಗಟ್ಟಿಯಿದ್ದು ದುಡಿಯಬೇಕೆಂಬ ಮನಸ್ಸಿದ್ದರೆ ಯಾವುದಾದರೂ ಕೆಲಸ ಸಿಗುತ್ತದೆ ಎಂಬ ತತ್ವದಲ್ಲಿ ಬಾಳುವ ಹಲವರಿದ್ದಾರೆ. ಅಂತಹ ಒಂದು ಕಾಯಕ ಯೋಗಿಯ ಬಗ್ಗೆ ಟ್ರಾವೆಲರ್ ಮಣಿ ಎಂಬಾತ ತನ್ನ ಇನ್ ಸ್ಟಾಗ್ರಾಂನಲ್ಲಿ (Instagram) ಹಾಕಿರುವ ಪೋಸ್ಟ್ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಹವಾ ಎಬ್ಬಿಸಿದ್ದು ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಅಂದಹಾಗೆ, ಈ ಕಾಯಕ ಯೋಗಿ ಅಜ್ಜನಿಗೆ ಈಗ 108 ವಯಸ್ಸಂತೆ! ಇವರು ಈಗಲೂ ತಳ್ಳುಗಾಡಿಯಲ್ಲಿ ತರಕಾರಿಯನ್ನು ತುಂಬಿಸಿಕೊಂಡು ಪಂಜಾಬ್ ನ ಮೋಘಾದ (Moga) ಸ್ಥಳೀಯ ಬೀದಿಗಳಲ್ಲಿ ಆ ತರಕಾರಿಯನ್ನು ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. ಹಾಗಾದರೆ ಈ ಶತಾಯುಷಿ ಅಜ್ಜನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ ಬನ್ನಿ.
ಈ ಶತಾಯುಷಿ ಅಜ್ಜ ತನ್ನ ತರಕಾರಿ ಗಾಡಿಯಲ್ಲಿ ಬಟಾಟೆ ಮತ್ತು ನೀರುಳ್ಳಿಯನ್ನು ಮಾರುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಒಂದು ಕಡೆ ಕುಳಿತುಕೊಂಡು ಈ ಅಜ್ಜ ‘ಆಲೂ.. ಪ್ಯಾಜ್..’ ಎಂದು ಗಟ್ಟಿಯಾಗಿ ಕೂಗುತ್ತಾ ತರಕಾರಿಯನ್ನು ಮಾರುತ್ತಿದ್ದಾರೆ.
ಪಂಜಾಬ್ ನ ಬೀದಿಗಳಲ್ಲಿ ಈ ವಿಡಿಯೋ ಸೆರೆ ಸಿಕ್ಕಿದ್ದು, ಈ ವಿಡಿಯೋದಲ್ಲಿರುವಂತೆ ಬಿಳಿ ಗಡ್ಡದ ಅಜ್ಜ ತಲೆಗೆ ಟರ್ಬನ್ ಸುತ್ತಿಕೊಂಡು ತನ್ನ ತರಕಾರಿ ಗಾಡಿಯ ಪಕ್ಕದಲ್ಲಿ ಕುಳಿತಿರುತ್ತಾರೆ. ತನ್ನ ಗಾಡಿಯಲ್ಲಿರುವ ಬಟಾಟೆ ಮತ್ತು ಆಲೂಗಡ್ಡೆಯ ಹೆಸರನ್ನು ಜೋರಾಗಿ ಕುಗುತ್ತಾ ಈ ಅಜ್ಜ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿರುವುದನ್ನೂ ಸಹ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: Viral Video: ಮುಂಬೈ ಪೊಲೀಸ್ ಕೊಳಲಿನ ಮಾಧುರ್ಯಕ್ಕೆ ಮನಸೋಲದವರೇ ಇಲ್ಲ- ವಿಡಿಯೊ ವೈರಲ್
ಈ ವಿಡಿಯೋವನ್ನು ಮಾಡಿರುವ ಟ್ರಾವೆಲರ್ ಮಣಿ (_manithind_) ಈ ವಿಡಿಯೋದಲ್ಲಿ ಹೇಳಿಕೊಂಡಿರುವಂತೆ, ‘ನಾನಿಂದು ಒಂದು ಅಮೂಲ್ಯ ಜೀವವನ್ನು ಭೇಟಿ ಮಾಡಿದೆ, ಅವರಿಗೆ ಈಗ 108 ವರ್ಷ ವಯಸ್ಸು. ಬೀದಿ ವ್ಯಾಪಾರಿಯಾಗಿರುವ ಇವರು ಇವತ್ತೂ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ಧಾರೆ.’ ಎಂದು ಮಣಿ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ‘ಪ್ರತಿಸ್ಪಂದನೆ, ಕಠಿಣ ದುಡಿಮೆ ಮತ್ತು ವಿನೀತನಾಗಿ ಬದುಕುವುದಕ್ಕೆ ಇವರ ಜೀವನವೇ ಒಂದು ಮಾದರಿಯಾಗಿದೆ’ ಎಂದು ಮಣಿ ತನ್ನ ಪೋಸ್ಟ್ ನಲ್ಲಿ ಈ ಶತಾಯುಷಿ ತಾತನ ಬಗ್ಗೆ ಬರೆದುಕೊಂಡಿದ್ದಾರೆ.
ಈ ವಿಡಿಯೋದ ನಿಜವಾದ ಕತೃ ಸಹ ಈ ತಾತನೊಂದಿಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದ್ದು, ಈ ಸಂದರ್ಭದಲ್ಲಿ ಈ ತಾತ ತನ್ನ ಪ್ರಾಯ 108 ವರ್ಷ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿಕೊಂಡಿದ್ದಾರೆ.
ಮಣಿ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊವನ್ನು ಜ.23ರಂದು ಅಪ್ಲೋಡ್ ಮಾಡಿದ್ದು ಈಗಾಗಲೇ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದುವರೆಗೆ ಈ ವಿಡಿಯೋ 3.14 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ ಮತ್ತು ಸಿಕ್ಕಾಪಟ್ಟೆ ಕಮೆಂಟ್ ಗಳನ್ನು ಪಡೆದುಕೊಂಡಿದೆ. ಈ ಶತಾಯುಷಿ ಅಜ್ಜನನ್ನು ನೆಟ್ಟಿಗರು ‘ಲೆಜೆಂಡ್’ ಎಂದು ಹೊಗಳಿದ್ದು, ಈ ಪ್ರಾಯದಲ್ಲೂ ಅಜ್ಜನ ಜೀವನೋತ್ಸಾಹ ಮತ್ತು ಕೆಲಸದ ಮೇಲಿನ ಪ್ರೀತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.