ಪುಣೆ: ಜನವರಿ 26ರಂದು ದೇಶದೆಲ್ಲೆಡೆ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು(Republic Day) ಆಚರಿಸಿದ್ದಾರೆ. ಗಣರಾಜ್ಯೋತ್ಸವದ ಮೆರವಣಿಗೆಯ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲೆಡೆ ಟ್ರೆಂಡಿಂಗ್ ಆಗಿದ್ದವು. ಆದರೆ ಈ ನಡುವೆ ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಎತ್ತಿ ತೋರಿಸುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಪುಣೆ ಪಲ್ಸ್ ಎಂಬ ಎಕ್ಸ್ ಹ್ಯಾಂಡಲ್ ಪುಣೆಯ ಐಟಿ ಕಂಪನಿಯ ಹೊರಗೆ ವಾಕ್-ಇನ್ ಸಂದರ್ಶನಕ್ಕಾಗಿ ಉದ್ಯೋಗಾಕಾಂಕ್ಷಿಗಳು ಬಹಳ ದೂರದವರೆಗೆ ಸಾಲುಗಟ್ಟಿ ನಿಂತಿರುವ ವಿಡಿಯೊವನ್ನು ಹಂಚಿಕೊಂಡಿದೆ. ವರದಿಗಳ ಪ್ರಕಾರ, ಕಂಪನಿಯು 100 ಹುದ್ದೆಗಳಿಗೆ ವಾಕ್-ಇನ್ ಸಂದರ್ಶನವನ್ನು ಘೋಷಿಸಿತ್ತು. ಹೀಗಾಗಿ ಮಗರ್ಪಟ್ಟಾದ ಯುಪಿಎಸ್‍ನಲ್ಲಿ ವಾಕ್-ಇನ್ ಸಂದರ್ಶನಕ್ಕಾಗಿ 3,000 ಎಂಜಿನಿಯರ್‌ಗಳು ಜಮಾಯಿಸಿದ್ದರು ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಈ ವಿಡಿಯೊ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳೊಂದಿಗೆ ಅದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಅಪ್ಲೋಡ್ ಆದ 24 ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 2 ಸಾವಿರ ಲೈಕ್‍ಗಳನ್ನು ಗಳಿಸಿದೆ ಎನ್ನಲಾಗಿದೆ. ಹಾಗೇ ಈ ವಿಡಿಯೊಗೆ ಹಲವರು ಕಾಮೆಂಟ್ ಮಾಡಿದ್ದಾರೆ. "ವಿದ್ಯಾವಂತ ಯುವಕರಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಅವರಿಗೆ ಭವಿಷ್ಯವಿಲ್ಲ. ಪೋಷಕರು ತಮ್ಮ ಶಿಕ್ಷಣಕ್ಕಾಗಿ ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಿದ್ದಾರೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಹೊಸ ಐಟಿ ವೃತ್ತಿಪರರಿಗೆ ಉದ್ಯೋಗ ಮಾರುಕಟ್ಟೆ ನಿರ್ದಯವಾಗಿದೆ. ಮಧ್ಯಮ ವರ್ಗದ ಕನಸಿನ ವೃತ್ತಿಯಾಗಿದ್ದ ಐಟಿ ದಿನಗಳು ಎಐ ಆಗಮನದೊಂದಿಗೆ ಕೊನೆಗೊಂಡಿವೆ. ಕಂಪನಿಗಳು ಈಗ ಎಐ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುತ್ತಿವೆ" ಎಂದು ಮತ್ತೊಬ್ಬ ನೆಟ್ಟಿಗ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Nelamangala News: ವಿಎಒ ಹಣಕ್ಕೆ ಬೇಡಿಕೆ ಇಡುವ ಹಳೇ ವಿಡಿಯೊ ವೈರಲ್; ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದ ತಹಸೀಲ್ದಾರ್
"ಅವರಲ್ಲಿ ಹೆಚ್ಚಿನವರು ಬಹುಶಃ ಕೇವಲ ಉದ್ಯೋಗಾಕಾಂಕ್ಷಿಗಳು. ಸರಿಯಾದ ಯೋಜನೆ ಮತ್ತು ಅವರ ಕೌಶಲ್ಯಗಳನ್ನು ರೂಢಿಸಿಕೊಳ್ಳದೇ, ಆ ಸರದಿಯಲ್ಲಿ ನಿಲ್ಲುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಮೂರನೇಯವರು ಪ್ರತಿಕ್ರಿಯಿಸಿದ್ದಾರೆ.