ನವದೆಹಲಿ: 12 ವರ್ಷದ ಬಳಿಕ ರಣಜಿ ಟ್ರೋಫಿ(Ranji Trophy) ಪಂದ್ಯದಲ್ಲಿ ಆಡಲಿರುವ ಕೊಹ್ಲಿ(Virat Kohli ), ಮಂಗಳವಾರದಿಂದ ದೆಹಲಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ. ಈ ವೇಳೆ ತಮ್ಮ ಬಾಲ್ಯದ ಗೆಳೆಯ ಶಾವೇಜ್ ಖಾನ್ ಅವರ 8 ವರ್ಷದ ಪುತ್ರ ಕಬೀರ್‌ಗೆ ಕೊಹ್ಲಿ ನೀಡಿದ ಕ್ರಿಕೆಟ್ ಸಲಹೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ಅಭ್ಯಾಸದ ವೇಳೆ ಕೊಹ್ಲಿ ಮೊದಲು ತಂಡದ ಸಹ ಆಟಗಾರರೊಂದಿಗೆ 45 ನಿಮಿಷ ಕಾಲ ವಾರ್ಮ್ ಅಪ್ ಮಾಡಿ ಬಳಿಕ 15 ನಿಮಿಷ ಫುಟ್ಬಾಲ್ ಆಡಿದರು. ಆನಂತರ 1 ಗಂಟೆಗೂ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬ್ಯಾಟ್ ಮಾಡಿದರು. ಇದೇ ವೇಳೆ ಶಾವೇಜ್ ಖಾನ್ ಪುತ್ರ ಕಬೀರ್, ಕೊಹ್ಲಿ ಬಳಿ ಬಂದು ಭಾರತ ತಂಡದ ಪರ ಆಡಬೇಕಾದರೆ ಏನೆಲ್ಲ ಮಾಡಬೇಕು ಎಂದು ಪ್ರಶ್ನಿಸಿದ್ದಾನೆ.
ಕಬೀರ್ ಪ್ರಶ್ನೆಗೆ ತಾಳ್ಮೆ ಮತ್ತು ಸಹನೆಯಿಂದ ಉತ್ತರಿಸಿದ ಕೊಹ್ಲಿ, 'ಕಠಿಣ ಅಭ್ಯಾಸ ಮಾಡಬೇಕು. ಎಲ್ಲರೂ ಒಂದು ಗಂಟೆ ಅಭ್ಯಾಸ ಮಾಡಿದರೆ ನೀನು ಎರಡು ಗಂಟೆ ಅಭ್ಯಾಸ ಮಾಡಬೇಕು. ನಿನ್ನ ತಂಡದ ಆಟಗಾರರು 50 ರನ್ ಗಳಿಸಿದರೆ, ನೀನು 100 ರನ್ ಗಳಿಸಲು ಪ್ರಯತ್ನಿಸಬೇಕು. ಬೆಂಚ್ ಮಾರ್ಕ್ ಡಬಲ್ ಮಾಡಬೇಕು. ಕಠಿಣ ಪರಿಶ್ರಮದ ಜತೆಗೆ ಆಟವನ್ನು ಎಂಜಾಯ್ ಮಾಡಬೇಕು' ಎಂದು ಕೊಹ್ಲಿ ಸಲಹೆ ನೀಡಿದರು.
ಇದನ್ನೂ ಓದಿ Ranji Trophy: ರಣಜಿಯಲ್ಲೂ ರೋಹಿತ್, ಜೈಸ್ವಾಲ್, ಗಿಲ್ ವಿಫಲ
'ಪೋಷಕರ ಒತ್ತಾಯಕ್ಕೆ ಅಭ್ಯಾಸ ನಡೆಸಬಾರದು. ಸ್ವ ಇಚ್ಛೆಯಿಂದ ನಾವೇ ಕ್ರಿಕೆಟ್ ಅಭ್ಯಾಸ ನಡೆಸಬೇಕು. ಆಗ ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಾಧಿಸುತ್ತೇವೆ' ಎಂದು ಕಬೀರ್‌ಗೆ ಕೊಹ್ಲಿ ಅಮೂಲ್ಯ ಸಲಹೆ ನೀಡಿದರು. ಬಳಿಕ ಆಟೋಗ್ರಾಫ್ ನೀಡಿದರು. ಆ ಬಳಿಕ ಗೆಳೆಯ ಶಾವೇಜ್ ಜತೆ ಕೊಹ್ಲಿ ಕೆಲ ಕಾಲ ಆತ್ಮೀಯ ಮಾತುಕತೆ ನಡೆಸಿದರು.
ಜ.30ರಿಂದ ಆರಂಭವಾಗುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುವಂತೆ ದೆಹಲಿ ಕ್ರಿಕೆಟ್ ಸಂಸ್ಥೆ ಕೊಹ್ಲಿಯನ್ನು ಕೇಳಿಕೊಂಡರೂ ಕೊಹ್ಲಿ, ಯುವ ಆಟಗಾರ ಬದೋನಿ ನಾಯಕತ್ವದಲ್ಲಿ ತಮಗೆ ಆಡಲು ಯಾವುದೇ ಮುಜುಗರವಿಲ್ಲ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.