ಮುಂಬಯಿ: ಚಾಂಪಿಯನ್ಸ್ ಟ್ರೋಫಿಗೆ(Champions Trophy) ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನದ ಹೆಸರನ್ನು ಭಾರತ ತಂಡದ ಜೆರ್ಸಿಯಲ್ಲಿ(Champions Trophy jersey) ಮುದ್ರಿಸಲು ಬಿಸಿಸಿಐ ಒಪ್ಪಿಕೊಂಡಿದೆ. ಹೀಗಾಗಿ ಟೂರ್ನಿ ಆರಂಭಕ್ಕೂ ಮುನ್ನ ತಲೆದೋರಿದ್ದ ಭಿನ್ನಾಭಿಪ್ರಾಯ ಕೊನೆಗೂ ಶಮನಗೊಂಡಿದೆ.
ಬಿಸಿಸಿಐ ನೂತನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿ ಐಸಿಸಿಯ ಎಲ್ಲಾ ನಿಯಮಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳುವ ಮೂಲಕ ಜೆರ್ಸಿಯಲ್ಲಿ ಪಾಕಿಸ್ತಾನ ಹೆಸರು ಮುದ್ರಿಸಲು ನಮಗೆ ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಉದ್ಘಾಟನ ಸಮಾರಂಭಕ್ಕೆ ಪಾಕಿಸ್ತಾನಕ್ಕೆ ಪ್ರಯಾಣಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ, ಆ ವಿಚಾರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಐಸಿಸಿ ನಿಯಮದಂತೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು ಕೂಡ ಆತಿಥೇಯ ದೇಶದ ಹೆಸರು ಮತ್ತು ಲೋಗೊವನ್ನು ಮುದ್ರಿಸುವುದು ಕಡ್ಡಾಯ. ಆದರೆ ಬಿಸಿಸಿಐ ಮಾತ್ರ ಭಾರತ ತನ್ನ ಪಂದ್ಯಗಳನ್ನು ತಟಸ್ಥ ತಾಣವಾದ ದುಬೈನಲ್ಲಿ ಆಡುವ ಕಾರಣ ನೀಡಿ ಪಾಕ್ ಹೆಸರು ಮುದ್ರಿಸಲು ನಿರಾಕರಿಸಿತ್ತು. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಐಸಿಸಿಗೆ ದೂರು ನೀಡಿತ್ತು. ಇದೀಗ ಬಿಸಿಸಿಐ ಜೆರ್ಸಿಯಲ್ಲಿ ಪಾಕ್ ಹೆಸರು ಹಾಕಲು ಒಪ್ಪಿಕೊಂಡಿದೆ.
ಇದನ್ನೂ ಓದಿ IND vs ENG: ಯುಜ್ವೇಂದ್ರ ಚಹಲ್‌ರ ಟಿ20ಐ ದಾಖಲೆ ಮುರಿದ ಅರ್ಷದೀಪ್ ಸಿಂಗ್!
ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕಿಸ್ಥಾನ ನಡುವಿನ ಪಂದ್ಯವು ದುಬೈನಲ್ಲಿ ಫೆ. 23 ರಂದು ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಫೆ.20ರಂದು ಬಾಂಗ್ಲಾದೇಶ ಎದುರು ಸೆಣಸಾಡಲಿದೆ. ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ಮಾ.4 ಮತ್ತು ಮಾ.5ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಎರಡೂ ಸೆಮಿಫೈನಲ್‌ಗಳಿಗೂ ಮೀಸಲು ದಿನ ಹೊಂದಿದ್ದು, ಮಾ.9ರಂದು ಫೈನಲ್ ಪಂದ್ಯ ನಿಗದಿಯಾಗಿದ್ದು, ಮೀಸಲು ದಿನವೂ ಇರಲಿದೆ. ಸೆಮಿಫೈನಲ್‌ಗೆ ಭಾರತ ಅರ್ಹತೆ ಪಡೆದರೆ ಆ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಆದರೆ, ಒಂದೊಮ್ಮೆ ಟೀಂ ಇಂಡಿಯಾ ಫೈನಲ್‌ಗೆ ಅರ್ಹತೆ ಪಡೆಯದಿದ್ದರೆ ಪಾಕಿಸ್ತಾನದ ಲಾಹೋರ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತ ತಂಡವು ಫೈನಲ್ ಪ್ರವೇಶಿಸಿದರೆ ದುಬೈಯಲ್ಲಿ ನಡೆಯಲಿದೆ.