ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಸಂತೋಷವಾಗಿರಲು ಏನು ಮಾಡಬೇಕು ?

ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಲೌಕಿಕ ಸುಖ ಸಾಧನಗಳು ಎಷ್ಟೇ ಇದ್ದರೂ, ಅವು ಸುಖವನ್ನು, ಶಾಂತಿಯನ್ನೂ ತರಲಾರವು. ಇವಾವುವೂ ಅಗತ್ಯವಾದಷ್ಟು ಮಟ್ಟದಲ್ಲಿ ಇಲ್ಲದಿ ದ್ದರೂ, ಅವರು ಸುಖ ಸಂತೋಷದಿಂದ ಇದ್ದರು. ಹೇಗೆ? ಅವರು ಸದಾ ತಮ್ಮ ಮನಸ್ಸನ್ನು ಅಂಕುಶದಲ್ಲಿ ಇಟ್ಟಿದ್ದರು.

ಸಂತೋಷವಾಗಿರಲು ಏನು ಮಾಡಬೇಕು ?

ಒಂದೊಳ್ಳೆ ಮಾತು

ತಮ್ಮ ಪ್ರಥಮ ಸಂಚಾರ ಕಾಲದಲ್ಲಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮಿಗಳು ತಂಗಿದ್ದ ಒಂದು ಗ್ರಾಮದಲ್ಲಿ ಅಲ್ಲಿನ ಮುಖ್ಯಸ್ಥರು ಗುರುದೇವರ ದರ್ಶನಕ್ಕಾಗಿ ಬಂದರು. ಅವರಲ್ಲಿ ಆ ಸ್ಥಳದ ಎಲ್ಲಾ ಪ್ರಮುಖರೂ ಇದ್ದರು. ಅವರು ಗುರುಗಳಿಗೆ ಫಲ ಪುಷ್ಪಗಳನ್ನರ್ಪಿಸಿ, ಸಾಷ್ಟಾಂಗ ವಂದನೆಗಳನ್ನು ಸಮರ್ಪಸಿ, ತಮ್ಮ ಗ್ರಾಮದಲ್ಲಿ ಇರುವ ಎಲ್ಲರಿಗೂ ಸುಖ ನೆಮ್ಮದಿಗಳು ದೊರಕುವಂತೆ ಆಶೀರ್ವದಿಸಬೇಕೆಂದು ಗುರುವನ್ನು ಪ್ರಾರ್ಥಿಸಿದರು. ಶ್ರೀ ಶ್ರೀಗಳವರು ಅವರನ್ನೆಲ್ಲಾ ಕುಳಿತುಕೊಳ್ಳುವಂತೆ ಸೂಚಿಸಿ, ಅವರ ವೇಷಭೂಷಣ ಗಳನ್ನು ನೋಡಿ ಪ್ರಶ್ನಿಸಿದರು. “ಏಕೆ? ನೀವೆಲ್ಲರೂ ಸುಖವಾಗಿ ಇರಲೇಬೇಕಲ್ಲ ?" “ಇಲ್ಲಾ ಸ್ವಾಮೀ, ಏನೋ ಅತೃಪ್ತಿ, ಆತಂಕ ಚಿಂತೆಗಳು ನಮ್ಮನ್ನು ಕಾಡುತ್ತಿವೆ " “ಏಕೆ? ನಿಮ್ಮ ಪೂರ್ವಿಕರು. ನಿಮ್ಮ ಹಿಂದಿನ ತಲೆಮಾರಿನವರು ಸುಖ ಸಂತೋಷದಿಂದ ಇರಲಿಲ್ಲವೇ?" “ಇದ್ದರು ಸ್ವಾಮೀ, ಎಲ್ಲರೂ ಸಾಮಾನ್ಯವಾಗಿ ಸಂತೋಷ, ಶಾಂತಿಯಿಂದಲೇ ಇದ್ದರು" “ಇದೇ ಗ್ರಾಮದಲ್ಲಿದ್ದ ನಿಮ್ಮ ತಂದೆ, ಅಜ್ಜ ಇತ್ಯಾದಿ ಪೂರ್ವಿಕರು ನಿಮಗಿಂತ ತೃಪ್ತರಾಗಿದ್ದು ಸಂತೋಷವಾಗಿದ್ದರು.

ಈಗ ನಿಮಗಿರುವ ನಾಗರಿಕ ಸೌಲಭ್ಯಗಳಿಗೆ ಹೋಲಿಸಿದರೆ, ನಿಮ್ಮ ಹಿರಿಯರ ಕಾಲದಲ್ಲಿ ಈ ಗ್ರಾಮ ಹೀಗಿರಲಿಲ್ಲ. ತುಂಬಾ ಹಿಂದುಳಿದಿತ್ತು. ಚೆನ್ನಾದ ರಸ್ತೆಗಳು ಇರಲಿಲ್ಲ. ವಿದ್ಯುತ್ ದೀಪದ ಸೌಕರ್ಯ ಇರಲಿಲ್ಲ. ಮಣ್ಣಿನ ಹೆಂಚಿನಮನೆಗಳಲ್ಲಿ ಅವರು ವಾಸಿಸುತ್ತಿದ್ದರು. ನೀರಿಗಾಗಿ ಅವರು ದೂರದ ಕೆರೆ ಕಟ್ಟೆಗಳಿಗೆ ಹೋಗ ಬೇಕಾಗುತ್ತಿತ್ತು. ಅಂಗಡಿ ಮುಂಗಟ್ಟು ಗಳ ಸೌಕರ್ಯ ಹೀಗಿರಲಿಲ್ಲ.

ಇದನ್ನೂ ಓದಿ: Roopa Gururaj Column: ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ !

ಈಗಿನಂತೆ ಶಾಲೆಗಳಿರಲಿಲ್ಲ. ಇಷ್ಟೆಲ್ಲಾ ಅನಾನುಕೂಲಗಳಿದ್ದರೂ ಅವರು ತೃಪ್ತರಾಗಿದ್ದರು. ಈಗ ನಿಮಗೆ ಇವೆಲ್ಲ ಸುಖ ಸಾಧನಗಳು ಇದ್ದೂ, ಇನ್ನೂ ಅಧಿಕ ತರವಾದ ಸಾಧನ ಸೌಕರ್ಯಗಳಿದ್ದೂ ನೀವು ಸುಖವಾಗಿಲ್ಲ ಎನ್ನುತ್ತೀರಿ ಏಕೆ?" “ದಿಟ, ಮಹಾ ಸ್ವಾಮೀ, ನಾವು ನಮ್ಮ ಹಿಂದಿನವರಿಗಿಂತ ಹೆಚ್ಚು ಲೌಕಿಕ ಸೌಲಭ್ಯಗಳನ್ನು ಪಡೆದಿದ್ದೇವೆ.

ಸಂಪಾದನೆಯನ್ನು ಮಾಡುತ್ತಿದ್ದೇವೆ. ಆದರೂ ಅವರ ಮುಖದಲ್ಲಿದ್ದ ಸಂತೋಷಭಾವ, ತೃಪ್ತಭಾವ ನಮಗೆ ದೊರಕುತ್ತಿಲ್ಲ ’. ‘ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಲೌಕಿಕ ಸುಖ ಸಾಧನಗಳು ಎಷ್ಟೇ ಇದ್ದರೂ, ಅವು ಸುಖವನ್ನು, ಶಾಂತಿಯನ್ನೂ ತರಲಾರವು. ಇವಾವುವೂ ಅಗತ್ಯವಾದಷ್ಟು ಮಟ್ಟದಲ್ಲಿ ಇಲ್ಲದಿದ್ದರೂ, ಅವರು ಸುಖ ಸಂತೋಷದಿಂದ ಇದ್ದರು. ಹೇಗೆ? ಅವರು ಸದಾ ತಮ್ಮ ಮನಸ್ಸನ್ನು ಅಂಕುಶದಲ್ಲಿ ಇಟ್ಟಿದ್ದರು.

ತಮ್ಮ ಬಾಳಿನ ಗುರಿಯೇನು, ಅದನ್ನು ಸಾಧಿಸುವ ಬಗೆ ಹೇಗೆ ಎಂಬುದು ಅವರಿಗೆ ಸ್ಪಷ್ಟ ವಾಗಿ ತಿಳಿದಿತ್ತು. ಪುರುಷಾರ್ಥಗಳಲ್ಲಿ ಮೊದಲನೆಯದಾದ ಧರ್ಮವನ್ನು ಅವಲಂಬಿಸಿ ದ್ದರು. ಕಾಮ ಕ್ರೋಧಗಳನ್ನು ದೂರವಿಟ್ಟಿದ್ದರು. ಧರ್ಮ ಸಮ್ಮತವಾದ ಅರ್ಥ ಸಂಪಾದನೆ, ಆಸೆಗಳನ್ನು ಆರಿಸಿಕೊಂಡಿದ್ದರು. ಅವು ಅವರಿಗೆ ತೃಪ್ತಿ ಸಂತೋಷಗಳನ್ನು ಕೊಡುತ್ತಿದ್ದವು ’.

‘ಈಗ ನೀವು ಲೌಕಿಕ ಸುಖಾನ್ವೇವೇಷಣೆಯಲ್ಲಿ ಇಂದ್ರಿಯ ತೃಪ್ತಿಯೇ ಸುಖವೆಂದು ಭ್ರಮಿಸಿದ್ದೀರಿ, ಆಂತರಿಕ ನೆಮ್ಮದಿಯನ್ನು ಕೆಡೆಸಿಕೊಂಡಿದ್ದೀರಿ. ಪ್ರಾಪಂಚಿಕ ವಸ್ತುಗಳು ಸುಖವನ್ನು ಕೊಡಲಾರದು. ಅವುಗಳ ಸಂಗ್ರಹವು ಹೆಚ್ಚಿದಷ್ಟು ಇನ್ನೂ ಬೇಕೆಂಬ ಹಾಹಾ ಕಾರ ಉಂಟಾಗುತ್ತದೆ.

ಹಣವಾಗಲಿ, ವಸ್ತುಗಳಾಗಲೀ ತಕ್ಕಮಟ್ಟಿನ ಪ್ರಾಪಂಚಿಕ ಸೌಲಭ್ಯವನ್ನು ತರಬಲ್ಲವೇ ವಿನಾ ಸುಖ ಶಾಂತಿಗಳನ್ನು ತರಲಾರವು. ಅವುಗಳ ಸಂಗ್ರಹ ಮಿತಿಮೀರಿದಾಗ ಮನಸ್ಸು ಕ್ಷೋಭೆಗೆ ಒಳಗಾಗಿ ಇದ್ದ ನೆಮ್ಮದಿಯೂ ನಾಶವಾಗುತ್ತದೆ .’

‘ನಿಮ್ಮ ಪೂರ್ವಿಕರು ಈ ಗುಟ್ಟನ್ನು ಅರಿತಿದ್ದರು. ಅವರು ಕಾಮ ಕ್ರೋಧಗಳನ್ನು ದೂರ ವಿರಿಸಿ ತೃಪ್ತಿ, ಪ್ರೀತಿಗಳ ಸ್ನೇಹವನ್ನು ಸಂಪಾದಿಸಿದ್ದರು. ಸುಖ ನೆಮ್ಮದಿಗಳು ಅವರನ್ನು ಎಡಬಿಡದೆ ಅನುಸರಿಸುತ್ತಿವೆ. ನೀವೂ ಅವರಂತೆಯೇ “ಧರ್ಮ"ವನ್ನು ಅವಲಂಬಿಸಿದರೆ, ಆ ಸುಖ ನೆಮ್ಮದಿಗಳು ನಿಮಗೂ ಲಭ್ಯವಾಗುತ್ತವೆ’ ಎಂದು ಉಪದೇಶವಿತ್ತರು. ನಿಜವೇ ಅಲ್ಲವೇ? ಇಂದು ಎಲ್ಲಾ ಸೌಲಭ್ಯಗಳಿದ್ದರೂ ನಾವು ಒಳಗಿನಿಂದ ಸಂತೋಷವಾಗಿಲ್ಲ. ಅದೆಷ್ಟು ಹೊಸ ಬಟ್ಟೆ, ಹೊಸ ವಸ್ತುಗಳು, ಊಟ, ಓಡಾಟ ಯಾವುದರಿಂದಲೂ ನಮಗೆ ಸಂತೃಪ್ತಿ ಇಲ್ಲ. ಆದ್ದರಿಂದಲೇ ನಮ್ಮ ಮನಸ್ಸನ್ನು ಹಿಡಿತದಲ್ಲಿರಿಸಿಕೊಂಡು ಧ್ಯಾನ, ಯೋಗ, ಒಳ್ಳೆಯ ಓದುವಿಕೆ, ಸಜ್ಜನರ ಸಹವಾಸ ಇವುಗಳಿಂದ ಆಂತರಿಕವಾಗಿ ಹದಗೊಳ್ಳಬೇಕು.

ಸಂತೃಪ್ತಿ ಸಮಾಧಾನ ನಮಗೆ ಹೊರಗೆಲ್ಲೋ ಸಿಗುವ ವಸ್ತುವಲ್ಲ. ಅದು ನಮ್ಮೊಳಗೆ ಹುಟ್ಟಿ ಬಿಡಬೇಕು ಆಗ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಸಂತೋಷವಾಗಿರುತ್ತೇವೆ.