Budget 2025: 2025ರಲ್ಲಿ ಜನ ಸಾಮಾನ್ಯರಿಗೆ ಯಾವೆಲ್ಲ ಪ್ರಯೋಜನ ಸಿಗಬಹುದು? ಸಿಮೆಂಟ್, ಉಕ್ಕು ದರ ಇಳಿಯುತ್ತಾ? ತೆರಿಗೆ ಕಡಿಮೆಯಾಗುತ್ತಾ?
2025ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ. 1ರಂದು ಬಜೆಟ್ ಮಂಡಿಸಲಿದ್ದಾರೆ. ಈ ಮುಂಗಡಪತ್ರ ಯಾವೆಲ್ಲ ಅಂಶಗಳನ್ನು ಒಳಗೊಂಡಿರಬಹುದು? ಜನ ಸಾಮಾನ್ಯರಿಗೆ ಯಾವ ಕೊಡುಗೆ ಲಭ್ಯ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸಾಂದರ್ಭಿಕ ಚಿತ್ರ (ಒಳಚಿತ್ರದಲ್ಲಿ ನಿರ್ಮಲಾ ಸೀತಾರಾಮನ್).

-ಕೇಶವ ಪ್ರಸಾದ್ ಬಿ.
ಹೊಸದಿಲ್ಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಫೆ. 1ರಂದು 2025ರ ಬಜೆಟ್ ಮಂಡಿಸಲಿದ್ದಾರೆ (Budget 2025). ಹಾಗಾದರೆ ದೇಶದ ಕೋಟ್ಯಂತರ ಜನ ಸಾಮಾನ್ಯರು ಮತ್ತು ಮಧ್ಯಮ ವರ್ಗದ ಜನತೆಗೆ ಈ ಮುಂಗಡಪತ್ರದಿಂದ ಯಾವೆಲ್ಲ ಪ್ರಯೋಜನಗಳು ಸಿಕ್ಕಿದರೆ ಒಳ್ಳೆಯದು ಎಂಬುದನ್ನು ನೋಡೋಣ.
ಈ ಸಲದ ಬಜೆಟ್ ಮೇಲೆ ರಿಯಲ್ ಎಸ್ಟೇಟ್ ಸೆಕ್ಟರ್ ಹಲವು ನಿರೀಕ್ಷೆಗಳನ್ನು ಒಳಗೊಂಡಿದೆ. ದೇಶದ ಮಧ್ಯಮ ವರ್ಗದ ಜನತೆಗೆ ಒಂದು ಮನೆಯನ್ನು ಖರೀದಿಸುವುದು ಅಥವಾ ಸೈಟ್ ತೆಗೆದುಕೊಂಡು ಮನೆ ಕಟ್ಟುವುದು ಜೀವಮಾನದ ಕನಸಾಗಿರುತ್ತದೆ. ಇನ್ನೂ ಸ್ವಲ್ಪ ಉಳ್ಳವರು ಎರಡನೇ ಮನೆಯನ್ನು ಹೊಂದಲು ಬಯಸುತ್ತಾರೆ. ಮತ್ತೆ ಕೆಲವರು ಬಾಡಿಗೆ ಮನೆಯನ್ನು ಕಟ್ಟಿ, ಇಳಿಗಾಲದಲ್ಲಿ ಆದಾಯದ ಮತ್ತೊಂದು ಮೂಲ ಇರಲಿ ಎಂದು ಬಯಸುತ್ತಾರೆ. ಹೀಗಾಗಿ ರಿಯಾಲ್ಟಿ ಕ್ಷೇತ್ರದ ಚೇತರಿಕೆಗೆ ಬಜೆಟ್ ಏನೆಲ್ಲ ಕೊಡುಗೆ ನೀಡಲಿದೆ ಎಂಬ ಕುತೂಹಲ ಉಂಟಾಗಿದೆ.
ವಿಶಾಲಾರ್ಥದಲ್ಲಿ ನೋಡುವುದಿದ್ದರೆ ಮೂಲ ಸೌಕರ್ಯ ಅಭಿವೃದ್ಧಿ, ಮೆಟ್ರೊ, ರೈಲ್ವೆ ನೆಟ್ ವರ್ಕ್, ಮಲ್ಟಿ ಮಾಡೆಲ್ ಕಾರಿಡಾರ್‌ಗಳು ನಗರ ಮತ್ತು ನಗರಗಳು ಸುತ್ತುಮುತ್ತಲು ವಾಣಿಜ್ಯೋದ್ದೇಶದ ರಿಯಾಲ್ಟಿ ಚಟುವಟಿಕೆಗಳನ್ನು ಪುಷ್ಟಿಗೊಳಿಸುತ್ತದೆ. ಇದು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳನ್ನೂ ಸೃಷ್ಟಿಸುತ್ತದೆ.
ಸಿಮೆಂಟ್, ಉಕ್ಕಿನ ಜಿಎಸ್‌ಟಿ ಕಡಿಮೆ ಆಗುತ್ತಾ?
ಮನೆ ಕಟ್ಟುವಾಗ ಮುಖ್ಯವಾಗಿ ಬೇಕಾಗುವ ಸಿಮೆಂಟ್ ಮೇಲೆ ಈಗ ಬರೋಬ್ಬರಿ 28% ಜಿಎಸ್‌ಟಿ ಇದೆ. ಇದನ್ನು 18% ಗೆ ಇಳಿಸಿದರೆ ಮಧ್ಯಮ ವರ್ಗದ ಜನತೆಗೆ ಮತ್ತು ಜನ ಸಾಮಾನ್ಯರಿಗೆ ಸ್ವಂತ ಸೂರು ಕಟ್ಟುವ ಕನಸಿಗೆ ಪುಷ್ಟಿ ನೀಡಿದಂತಾಗುತ್ತದೆ. ಸಿಮೆಂಟ್ ಕಂಪನಿಗಳೂ ಈ ಬೇಡಿಕೆಯನ್ನು ಮುಂದಿಟ್ಟಿವೆ.
ಆರ್ಥಿಕತೆಯನ್ನು ಚುರುಕುಗೊಳಿಸಬಲ್ಲ ವಸ್ತುಗಳಲ್ಲಿ ಸಿಮೆಂಟ್ ಕೂಡ ನಿರ್ಣಯಕ. ಕಾಂಕ್ರಿಟ್ ರಸ್ತೆಗಳೂ ದೀರ್ಘಕಾಲ ಬಾಳಿಕೆ ಬರುತ್ತವೆ. ಉಕ್ಕು, ಕಬ್ಬಿಣ ಕೂಡ ನಿರ್ಮಾಣ ಕ್ಷೇತ್ರದಲ್ಲಿ ಅಗತ್ಯ. ಇವುಗಳ ಮೇಲೆ 18% ಜಿಎಸ್ ಟಿ ಇದ್ದು, ಇದು ಕಡಿಮೆಯಾದರೆ ಅನುಕೂಲವಾಗಲಿದೆ.
ಪ್ರಧಾನ ಮಂತ್ರಿ ಆವಾಸ್ ಸ್ಕೀಮ್ ಇರುವುದರಿಂದ ಮಧ್ಯಮ ವರ್ಗದ ಜನರಿಗೂ ಇವತ್ತು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್‌ನ ಪ್ರಯೋಜನ ಸಿಗುವಂತಾಗಿದೆ. ಆದರೆ ಇದರ ಜತೆಗೆ ಮನೆ ನಿರ್ಮಾಣದ ಕಚ್ಚಾ ವಸ್ತುಗಳ ಮೇಲಿನ ಜಿಎಸ್‌ಟಿ ಇಳಿದರೆ ಉತ್ತಮ. ವಸತಿ ಮತ್ತು ವಾಣಿಜ್ಯೋದ್ದೇಶದ ರಿಯಾಲ್ಟಿ ಪ್ರಾಜೆಕ್ಟ್‌ಗಳ ಜಿಎಸ್‌ಟಿ ಮತ್ತು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಏಕರೂಪಗೊಳಿಸುವುದರಿಂದ ವೆಚ್ಚ ಕಡಿಮೆಯಾಗಲಿದೆ.
ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಅಫರ್ಡಬಲ್ ಬಾಡಿಗೆ ಅಪಾರ್ಟ್‌ಮೆಂಟ್‌ಗಳನ್ನು ಸರ್ಕಾರವೇ ನಿರ್ಮಿಸಿಕೊಟ್ಟರೆ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ. ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಬರುವ ಜನರಿಗೆ ಸಂಬಳದಲ್ಲಿ ಬಾಡಿಗೆ ಖರ್ಚಿನಲ್ಲಿ ಉಳಿತಾಯಕ್ಕೆ ಅವಕಾಶ ಸಿಕ್ಕಂತಾಗುತ್ತದೆ.
ಆದಾಯ ತೆರಿಗೆ ವಿನಾಯಿತಿ ಮಿತಿ ವಿಸ್ತರಣೆಯಾಗಲಿದೆಯೇ?
ಮಧ್ಯಮ ವರ್ಗದ ವೇತನದಾರರು ಪ್ರತಿ ಸಲ ಕೇಂದ್ರ ಬಜೆಟ್‌ನಲ್ಲಿ ನಿರೀಕ್ಷಿಸುವ ಬೇಡಿಕೆ ಇದಾಗಿದೆ. ಪ್ರಸ್ತುತ ಆದಾಯ ತೆರಿಗೆಯ ಶ್ರೇಣಿ ಈ ರೀತಿ ಇದೆ. ಸಂಬಳದಾರರಿಗೆ ಅವರ ಆದಾಯದ ಮೇಲೆ ನಿರ್ದಿಷ್ಟ ಮಿತಿಯ ಬಳಿಕ ನೇರ ತೆರಿಗೆಯೂ ಇರುತ್ತದೆ. ಮಾತ್ರವಲ್ಲದೆ ಮಾಡುವ ಖರ್ಚುಗಳ ಮೇಲೆಯೂ ಪರೋಕ್ಷ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಎರಡು ತೆರಿಗೆಗಳ ಹೊರೆ ಅವರ ಮೇಲೆ ಬೀಳುತ್ತದೆ. ಹೀಗಾಗಿ ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳವನ್ನು ಹಅಗೂ ತೆರಿಗೆ ದರದ ಶ್ರೇಣಿಯಲ್ಲಿ ಸುಧಾರಣೆಯನ್ನು ಮಧ್ಯಮ ವರ್ಗದ ವೇತನದಾರರು ನಿರೀಕ್ಷಿಸುತ್ತಿದ್ದಾರೆ.
ಈಗ ವಾರ್ಷಿಕ 3 ಲಕ್ಷ ರೂ. ತನಕ ಆದಾಯ ತೆರಿಗೆ ಇರುವುದಿಲ್ಲ. 3-7 ಲಕ್ಷ ರೂಪಾಯಿ ಆದಾಯಕ್ಕೆ 5% ತೆರಿಗೆ ದರ ಇದೆ. 7-10 ಲಕ್ಷ ರೂಪಾಯಿ ಅದಾಯಕ್ಕೆ 10%, 10-12 ಲಕ್ಷ ರೂಪಾಯಿಗೆ 15%, 12-15 ಲಕ್ಷ ರೂಪಾಯಿ ಆದಾಯಕ್ಕೆ 20% ಮತ್ತು 15 ಲಕ್ಷ ರೂಪಾಯಿ ಆದಾಯಕ್ಕೆ 30% ತೆರಿಗೆ ಇದೆ.
ಹೀಗಾಗಿ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಏರಿಸಿದರೆ ಅಥವಾ ಹೊಸ ಅದಾಯ ತೆರಿಗೆ ಸ್ಲ್ಯಾಬ್ ಅನ್ನು ಜಾರಿಗೊಳಿಸಿದರೆ ಮಧ್ಯಮ ವರ್ಗದ ಜನರ ಕೈಯಲ್ಲಿ ಹಣ ಉಳಿತಾಯವಾಗಲಿದೆ. ಅವರ ಖರೀದಿ ಸಾಮರ್ಥ್ಯ ಹೆಚ್ಚಲಿದೆ.
ಈಗ ತೆರಿಗೆ ರಿಬೇಟ್ ಸೇರಿದಾಗ ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ 7 ಲಕ್ಷ ರೂ. ತನಕ ಆದಾಯ ಇರುವವರು ತೆರಿಗೆ ಮುಕ್ತರಾಗಬಹುದು. ಹಳೆ ತೆರಿಗೆ ಪದ್ಧತಿಯಲ್ಲಿ 5 ಲಕ್ಷ ರೂ. ತನಕ ತೆರಿಗೆ ಕಟ್ಟದೆ ಇರಬಹುದು. ಈ ಸಲ ವಾರ್ಷಿಕ 10-15 ಲಕ್ಷ ರೂ. ಆದಾಯದ ತನಕ ತೆರಿಗೆ ಮುಕ್ತಗೊಳಿಸಬೇಕು ಎಂಬ ಬೇಡಿಕೆ ಇದೆ. ಆದರೆ ಈ ಬಂಪರ್ ಘೋಷಣೆ ನಿಜಕ್ಕೂ ಆಗಲಿದೆಯೇ ಎಂಬುದು ಅನುಮಾನಾಸ್ಪದ.
ವಾರ್ಷಿಕ 15 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ ಏಕಾಏಕಿ 30% ತೆರಿಗೆ ಕಟ್ಟಬೇಕಾಗುತ್ತದೆ. ಈ ವರ್ಗದ ಜನತೆಗೆ ಆದಾಯ ತೆರಿಗೆಯ ಹೊರೆ ಇಳಿಸಬೇಕಾಗಿದೆ.
ಹೊಸ ತೆರಿಗೆ ಪದ್ಧತಿಯಲ್ಲಿ ಕೆಲವಾದರೂ ವಿನಾಯಿತಿಗಳನ್ನು ಜನ ನಿರೀಕ್ಷಿಸುತ್ತಿದ್ದಾರೆ. ಉದಾಹರಣೆಗೆ ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು ಈಗಿನ 75,000 ರೂ.ಗಳಿಂದ ಏರಿಸಬೇಕೆಂಬ ಬೇಡಿಕೆಯೂ ಇದೆ. ( ಸ್ಟಾಂಡರ್ಡ್ ಡಿಡಕ್ಷನ್ ಎಂದರೆ, ತೆರಿಗೆಗೆ ಅರ್ಹ ಆದಾಯದಲ್ಲಿ ನಿರ್ದಿಷ್ಟ ಮೊತ್ತವನ್ನು ಸಾರಾಸಗಟಾಗಿ ಕಳೆಯುವುದು) ತೆರಿಗೆ ಸ್ಲ್ಯಾಬ್ ಪರಿಷ್ಕರಣೆ ಮಾತ್ರವಲ್ಲದೆ, ಆರೋಗ್ಯ ವಿಮೆ ಪ್ರೀಮಿಯಂ ಪಾವತಿಗೆ ತೆರಿಗೆ ಅನುಕೂಲ, ಮೊದಲ ಸಲ ಮನೆ ಖರೀದಿಸುವವರಿಗೆ ಟ್ಯಾಕ್ಸ್ ಹೊರೆ ಇಳಿಕೆ ನಿರೀಕ್ಷಿಸಲಾಗಿದೆ.
ಗೃಹ ಸಾಲಗಾರರಿಗೆ ಹೋಮ್‌ಲೋನ್ ಬಡ್ಡಿಯ ಮೇಲಿನ ಟ್ಯಾಕ್ಸ್ ರಿಬೇಟ್ ಅನ್ನು ಕನಿಷ್ಠ 5 ಲಕ್ಷ ರೂ.ಗೆ ಏರಿಸಬೇಕು ಎಂಮ ಬೇಡಿಕೆಯೂ ಇದೆ. ಒಂದು ವೇಳೆ ಹಾಗೆ ಮಾಡಿದರೆ ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಹೊಂದಲು ಅನುಕೂಲವಾಗಲಿದೆ.
ಪ್ರಸ್ತುತ ಹಿರಿಯ ನಾಗರಿಕರಿಗೆ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆಯು ತೆರಿಗೆ ಮುಕ್ತವಾಗಿದೆ. ಹೀಗಿದ್ದರೂ, ಪಿಂಚಣಿ ಯೋಜನೆಗಳಲ್ಲಿನ ಹೂಡಿಕೆಯಿಂದ ಸಿಗುವ ಆದಾಯಕ್ಕೆ ತೆರಿಗೆ ಇದೆ. ಇಡಿಯಾಗಿ ವಿತ್ ಡ್ರಾವಲ್ ಮಾಡಿದರೆ 60% ಮೊತ್ತಕ್ಕೆ ಮಾತ್ರ ತೆರಿಗೆ ವಿನಾಯಿತಿ ಇದೆ. ಹೀಗಾಗಿ ಬರುವ ಆದಾಯಕ್ಕೆ ಪೂರ್ಣವಾಗಿ ತೆರಿಗೆ ಮುಕ್ತಗೊಳಿಸಬೇಕೆಂಬ ಬೇಡಿಕೆ ಇದೆ.
ಈ ಸುದ್ದಿಯನ್ನೂ ಓದಿ: Budget 2025: ಧಾರ್ಮಿಕ, ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಬಜೆಟ್‌ನಲ್ಲಿ ನೆರವು ನಿರೀಕ್ಷೆ
ರಸಗೊಬ್ಬರ, ಬೀಜ, ವಿದ್ಯುತ್ ಸಬ್ಸಿಡಿ ಹೆಚ್ಚಳ?
ಹಣದುಬ್ಬರದ ಸವಾಲು ಕೇಂದ್ರ ಸರ್ಕಾರದ ಮುಂದಿದೆ. ಇದರ ಪರಿಣಾಮ ನಗರ-ಹಳ್ಳಿಗಳಲ್ಲಿ ಉಂಟಾಗಿದೆ. ರೈತರಿಗೆ ಕೃಷಿ ಉತ್ಪಾದನೆಗೆ ತಗಲುತ್ತಿರುವ ವೆಚ್ಚ ಹೆಚ್ಚಳವಾಗಿದೆ. ಜನರ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ರೈತರ ಆದಾಯ ವೃದ್ಧಿಗೆ, ಉಳಿತಾಯಕ್ಕೆ ಪೂರಕವಾಗಿ ರಸಗೊಬ್ಬರ, ಬೀಜ, ವಿದ್ಯುತ್ ಸಬ್ಸಿಡಿಯನ್ನು ಬಜೆಟ್‌ನಲ್ಲಿ ಹೆಚ್ಚಿಸುವ ನಿರೀಕ್ಷೆ ಇದೆ. ಬೆಳೆಗಳ ವೈವಿಧ್ಯತೆಗೆ ಉತ್ತೇಜನ ಸಾಧ್ಯತೆ ಇದೆ. ಆಹಾರ ಹಣದುಬ್ಬರ ಕೂಡ ಸಮಸ್ಯೆಯಾಗಿ ಪರಿಣಮಿಸಿದ್ದು, ಕೃಷಿ ಉತ್ಪಾದನೆಗೆ ಬೆಂಬಲ ನೀಡಬೇಕಾಗಿದೆ. 2024-25ರಲ್ಲಿ ಇದುವರೆಗೆ 4.15 ಲಕ್ಷ ಕೋಟಿ ರೂ.ಗಳನ್ನು ನೇರ ನಗದು ವಿತರಣೆಯ ಮೂಲಕ ಜನತೆಗೆ ವಿತರಿಸಲಾಗಿದೆ. ಈ ಮೊತ್ತವನ್ನು ಏರಿಸುವ ಸಾಧ್ಯತೆ ಇದೆ.