ಬೆಂಗಳೂರು: ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಯ(ICC Champions Trophy) 9ನೇ ಆವೃತ್ತಿ ಫೆ.19ರಿಂದ ಮಾ.9ರ ವರೆಗೂ ನಿಗದಿಯಾಗಿದೆ. 8 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಚಾಂಪಿಯನ್ಸ್ ಟ್ರೋಫಿ ಆರಂಭಗೊಂಡದ್ದು ಯಾವಾಗ? ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ ಯಾವುದು? ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಇಲ್ಲಿದೆ.
ಚಾಂಪಿಯನ್ಸ್ ಟ್ರೋಫಿ ಎಂದು ಕರೆಸಿಕೊಳ್ಳುವ ಟೂರ್ನಿ ಆರಂಭ ಆಗಿದ್ದು 1998ರಲ್ಲಿ(1998 ICC KnockOut Trophy ). ಐಸಿಸಿ ನಾಕೌಟ್ ಮಾದರಿಯಲ್ಲಿ ನಡೆದ ಈ ಟೂರ್ನಿಗೆ 'ವಿಲ್ಸ್ ಇಂಟರ್‌ನ್ಯಾಶನಲ್ ಕಪ್' ಎಂದು ಕರೆಯಲಾಗುತ್ತಿತ್ತು. ಚೊಚ್ಚಲ ಆವೃತ್ತಿಯ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಿಕೊಂಡಿತ್ತು. ಆತಿಥ್ಯ ವಹಿಸಿಕೊಂಡರೂ ಬಾಂಗ್ಲಾದೇಶಕ್ಕೆ ಈ ಆವೃತ್ತಿಯಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. 2002ರ ಮೂರನೇ ಆವೃತ್ತಿಯ ವೇಳೆಗೆ ಟೂರ್ನಿಗೆ ಚಾಂಪಿಯನ್ಸ್ ಟ್ರೋಫಿ ಎಂದು ಮರುನಾಮಕರಣ ಮಾಡಲಾಯಿತು.
ಕೇವಲ 8 ಪಂದ್ಯ
ಮೊದಲ ಆವೃತ್ತಿಯಲ್ಲಿ 9 ತಂಡಗಳು ಪಾಲ್ಗೊಂಡಿದ್ದವು. 1 ಪ್ರಿ ಕ್ವಾರ್ಟರ್, 4 ಕ್ವಾರ್ಟರ್ ಫೈನಲ್, 2 ಸೆಮಿಫೈನಲ್, 1 ಫೈನಲ್ ಸೇರಿ ಒಟ್ಟು 8 ಪಂದ್ಯಗಳು ಮಾತ್ರ ಟೂರ್ನಿಯಲ್ಲಿ ನಡೆದಿದ್ದವು. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ, ಶ್ರೀಲಂಕಾ, ಇಂಗ್ಲೆಂಡ್ ಪಾಲ್ಗೊಂಡ ದೇಶಗಳು.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್‌ಗಳು ಯಾರು?
ಸೆಮಿಯಲ್ಲಿ ಭಾರತಕ್ಕೆ ಸೋಲು
ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಆಡಲಿಳಿದಿದ್ದ ಭಾರತ ತಂಡ ಸೆಮಿಫೈನಲ್‌ನಲ್ಲಿ ತನ್ನ ಅಭಿಯಾನ ಮುಗಿಸಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಸೆಮಿ ಪಂದ್ಯದಲ್ಲಿ ಭಾರತ 6 ವಿಕೆಟ್ ಅಂತರದ ಸೋಲು ಕಂಡಿತ್ತು.
ದಕ್ಷಿಣ ಆಫ್ರಿಕಾ ಚಾಂಪಿಯನ್
ಪ್ರತಿ ಬಾರಿಯೂ ಐಸಿಸಿ ಟೂರ್ನಿಯಲ್ಲಿ 'ಚೋಕರ್' ಎಂದೇ ಗುರುತಿಸಲ್ಪಡುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್‌ನಲ್ಲಿ ಲಾರಾ ಪಡೆಯನ್ನು 4 ವಿಕೆಟ್‌ಗಳಿಂದ ಮಣಿಸಿದ ಹ್ಯಾನ್ಸಿ ಕ್ರೋನಿಯೆ ನಾಯಕತ್ವದ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿ ಮೂಡಿಬಂದಿತ್ತು. ವಿಂಡೀಸ್ 49.3 ಓವರ್‌ಗಳಲ್ಲಿ 245ಕ್ಕೆ ಆಲೌಟಾಯಿತು. ದಕ್ಷಿಣ ಆಫ್ರಿಕಾ 47 ಓವರ್‌ಗಳಲ್ಲಿ 6ಕ್ಕೆ 248 ರನ್ ಬಾರಿಸಿತು. ಕೆರಿಬಿಯನ್ ಆರಂಭಕಾರ ಫಿಲೊ ವ್ಯಾಲೇಸ್(103) ಬಾರಿಸಿದ ಶತಕ ವ್ಯರ್ಥವಾಯಿತು.