Delhi CM: ದೆಹಲಿಯ ಮುಂದಿನ ಸಿಎಂ ಯಾರು? ನಾಳೆ ಶಾಸಕಾಂಗ ಪಕ್ಷದ ಸಭೆ
ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ಸಭೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ನೂತನ ಸಿಎಂ ಯಾರೆಂಬ ಬಗ್ಗೆ ನಾಳಿನ ಸಭೆಯಲ್ಲಿ ನಿರ್ಧಾರವಾಗಲಿದೆ. ಹೊಸದಾಗಿ ಆಯ್ಕೆಯಾದ ಎಲ್ಲಾ 48 ಬಿಜೆಪಿ ಶಾಸಕರು ದೆಹಲಿ ಬಿಜೆಪಿ ಕಚೇರಿಯಲ್ಲಿ ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.


ನವದೆಹಲಿ: ದೆಹಲಿಯಲ್ಲಿ ಚುನಾವಣಾ (Delhi Election 2025) ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಸದ್ಯ ದೆಹಲಿಯ ಮುಖ್ಯಮಂತ್ರಿ (Delhi CM) ಯಾರೆಂಬ ಚರ್ಚೆ ನಡೆಯುತ್ತಿದ್ದು, ಹಲವರು ರೇಸ್‌ನಲ್ಲಿದ್ದಾರೆ. ಭಾರತೀಯ ಜನತಾ ಪಕ್ಷದ ಶಾಸಕಾಂಗ ಪಕ್ಷದ ಸಭೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ನೂತನ ಸಿಎಂ ಯಾರೆಂಬ ಬಗ್ಗೆ ನಾಳೆಯ ಸಭೆಯಲ್ಲಿ ನಿರ್ಧಾರವಾಗಲಿದೆ. ಹೊಸದಾಗಿ ಆಯ್ಕೆಯಾದ ಎಲ್ಲಾ 48 ಬಿಜೆಪಿ ಶಾಸಕರು ದೆಹಲಿ ಬಿಜೆಪಿ ಕಚೇರಿಯಲ್ಲಿ ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೂಲಗಳ ಪ್ರಕಾರ, ಬಿಜೆಪಿಯು ಅದ್ಧೂರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಆಯೋಜಿಸಲಿದ್ದು, ಇದರಲ್ಲಿ ಎಲ್ಲಾ ಉನ್ನತ ಎನ್‌ಡಿಎ ನಾಯಕರು ಮತ್ತು ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿದು ಬಂದಿದೆ. ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ, ಮುಖ್ಯಮಂತ್ರಿಯ ಹೆಸರಿಗೆ ರಾಷ್ಟ್ರಪತಿಗಳ ಅನುಮೋದನೆ ಅಗತ್ಯವಿದೆ. ಪಕ್ಷವು ಮುಖ್ಯಮಂತ್ರಿ ಹೆಸರನ್ನು ನಿರ್ಧರಿಸಿದ ನಂತರ, ರಾಷ್ಟ್ರಪತಿಗಳು ಲೆಫ್ಟಿನೆಂಟ್ ಗವರ್ನರ್ ಸಲಹೆಯ ಮೇರೆಗೆ ಮುಖ್ಯಮಂತ್ರಿಯನ್ನು ನೇಮಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸ ಕಾರಣ ದೆಹಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ವಿಳಂಬವಾಗಿತ್ತು. ಈ ಬಗ್ಗೆ ಶುಕ್ರವಾರ, ಬಿಜೆಪಿ ವಕ್ತಾರ ಅಜಯ್ ಅಲೋಕ್ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿಯೊಳಗೆ (ತಮ್ಮ ವಿದೇಶ ಪ್ರವಾಸದಿಂದ) ಹಿಂತಿರುಗಿದ ನಂತರ ನೂತನ ಸಿಎಂ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ಇದೀಗ ಪ್ರಧಾನಿಮೋದಿ ಪ್ರವಾಸ ಪೂರ್ಣಗೊಂಡಿದ್ದು, ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಮಹತ್ವದ ತೀರ್ಮಾಣ ಹೊರಬೀಳಲಿದೆ.
Oath ceremony : ದೆಹಲಿಯ ನೂತನ ಸಿಎಂ ಪ್ರಮಾಣವಚನ ಯಾವಾಗ? ಇಲ್ಲಿದೆ ಮಾಹಿತಿ
ಸಿಎಂ ರೇಸ್‌ನಲ್ಲಿ ಯಾರಿದ್ದಾರೆ?
ಹೊಸದಾಗಿ ಆಯ್ಕೆಯಾದ ಶಾಸಕರಲ್ಲಿ, ನವದೆಹಲಿ ಸ್ಥಾನದಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ ರಾಜಧಾನಿಯಲ್ಲಿ ಬಿಜೆಪಿಯ ಜಾಟ್ ಮುಖ ಪರ್ವೇಶ್ ವರ್ಮಾ ಮತ್ತು ದೆಹಲಿ ಬಿಜೆಪಿಯ ಮಾಜಿ ಅಧ್ಯಕ್ಷರಾದ ವಿಜೇಂದರ್ ಗುಪ್ತಾ ಮತ್ತು ಸತೀಶ್ ಉಪಾಧ್ಯಾಯ ಅವರ ಹೆಸರುಗಳನ್ನು ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿದೆ.
ಫೆ.5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು (AAP) ಸೋಲಿಸಿತ್ತು. ಆ ಮೂಲಕ ಬರೋಬ್ಬರಿ 26 ವರ್ಷಗಳ ನಂತರ ಬಿಜೆಪಿ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದೆ. 10 ವರ್ಷಗಳಿಗೂ ಹೆಚ್ಚು ಕಾಲ ದೆಹಲಿಯನ್ನು ಆಳಿದ ಎಎಪಿ, ಫೆಬ್ರವರಿ 8 ರಂದು ಪ್ರಕಟವಾದ ತೀವ್ರ ಪೈಪೋಟಿಯ ಚುನಾವಣೆಯಲ್ಲಿ ಕೇವಲ 22 ಸ್ಥಾನಗಳನ್ನು ಗೆದ್ದಿತು. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ಎಎಪಿ ನಾಯಕರು ತಮ್ಮ ಭದ್ರಕೋಟೆಗಳಲ್ಲಿ ಸೋತರು, ಆದರೆ ನಿರ್ಗಮಿತ ಮುಖ್ಯಮಂತ್ರಿ ಅತಿಶಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. 15 ವರ್ಷಗಳ ಕಾಲ (1998-2013) ದೆಹಲಿಯನ್ನು ಆಳಿದ ಕಾಂಗ್ರೆಸ್ ಮತ್ತೊಮ್ಮೆ ಒಂದೇ ಒಂದು ಶೂನ್ಯ ಸಾಧನೆ ಮಾಡಿದೆ.