ಅಮೆರಿಕ- ಇಸ್ರೇಲ್ ಜಂಟಿ ದಾಳಿ; ಪತ್ನಿ, ಪುತ್ರ ಸೇರಿ ಸಂಪೂರ್ಣ ಕುಟುಂಬವನ್ನು ಕಳೆದುಕೊಂಡ ಇರಾನ್ ಸುಪ್ರೀಂ ಲೀಡರ್
ಅಮೆರಿಕ- ಇಸ್ರೇಲ್- ಇರಾನ್ ಯುದ್ಧ ಮುಂದುವರಿದಿದ್ದು, ದಾಳಿಗಳು ನಡೆಯುತ್ತಿವೆ . ತಂದೆ ಅಲಿ ಖಮೇನಿ ಸಾವಿನ ಬಳಿಕ ಇರಾನ್ ಸುಪ್ರೀಂ ಲೀಡರ್ ಆಗಿ ನೇಮಕಗೊಂಡಿರುವ ಇಸ್ಲಾಮಿಕ್ ರಾಷ್ಟ್ರದ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ತನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾರೆ.
ಸಂಗ್ರಹ ಚಿತ್ರ -
ಟೆಹ್ರಾನ್: ಅಮೆರಿಕ- ಇಸ್ರೇಲ್- ಇರಾನ್ ಯುದ್ಧ ಮುಂದುವರಿದಿದ್ದು, ದಾಳಿಗಳು ನಡೆಯುತ್ತಿವೆ . ತಂದೆ ಅಲಿ ಖಮೇನಿ ಸಾವಿನ ಬಳಿಕ ಇರಾನ್ ಸುಪ್ರೀಂ ಲೀಡರ್ ಆಗಿ ನೇಮಕಗೊಂಡಿರುವ ಇಸ್ಲಾಮಿಕ್ ರಾಷ್ಟ್ರದ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ತನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಎರಡು ವಾರಗಳ ಹಿಂದೆ ಪ್ರಾರಂಭವಾದ ವೈಮಾನಿಕ ದಾಳಿಯಲ್ಲಿ ಅವರ ಪತ್ನಿ ಜಹ್ರಾ ಹದ್ದಾದ್-ಅಡೆಲ್ ಮತ್ತು ಅವರ ಇಬ್ಬರು ಪುತ್ರರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಮಾಧ್ಯಮ ವರದಿಗಳು ತಿಳಿಸಿವೆ.
ಮೊಜ್ತಬಾ ಖಮೇನಿ ಅವರ ತಂದೆ ಅಲಿ ಖಮೇನಿ, ಯುದ್ಧದಲ್ಲಿ ಸಾವನ್ನಪ್ಪಿದ ಮೊದಲ ಕುಟುಂಬ ಸದಸ್ಯರಾಗಿದ್ದರು. ಮೊಜ್ತಬಾ ಖಮೇನಿ ಅವರ ತಾಯಿ ಮನ್ಸೌರೆ ಖೋಜಸ್ತೆ ಬಘರ್ಜಾದೆ ಅವರು ವೈಮಾನಿಕ ದಾಳಿಯೊಂದರಲ್ಲಿ ಕೊಲ್ಲಲ್ಪಟ್ಟರು ಎಂಬ ವರದಿಗಳೂ ಇವೆ. ಅಷ್ಟೇ ಅಲ್ಲದೇ ಖಮೇನಿ ಸಹೋದರಿ, ಸೋದರಳಿಯ, ಸೊಸೆ ಮತ್ತು ಸೋದರ ಮಾವ ಸಹ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಅಧಿಕೃತ ಮಾಹಿತಿ ಹೊರ ಬರಬೇಕಾಗಿದೆ.
ಅಲಿ ಖಮೇನಿ ಅವರು ಟೆಹ್ರಾನ್ ನಲ್ಲಿರುವ ತಮ್ಮ ನಿವಾಸದಲ್ಲಿ ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ಮೊದಲ ದಾಳಿ ವೇಳೆ ಹತ್ಯೆಗೀಡಾಗಿದ್ದರು. ಇಸ್ರೇಲ್ ಈಗಾಗಲೇ ಇರಾನ್ ಗೆ ಎಚ್ಚರಿಕೆ ನೀಡಿದ್ದು, ಹೊಸ ಉತ್ತರಾಧಿಕಾರಿಯನ್ನು ನಾವು ಬಿಡುವುದಿಲ್ಲ, ದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಇದೇ ವೇಳೆ, ಯುಎಇಯಲ್ಲಿ ಇರಾನ್ ನಡೆಸಿದ ದಾಳಿಗಳು ನಿನ್ನೆ ಸಹ ಅಬುಧಾಬಿಯನ್ನು ಗುರಿಯಾಗಿಸಿಕೊಂಡು ಮುಂದುವರಿದವು, ಆದರೆ ಕ್ಷಿಪಣಿಗಳನ್ನು ಮಧ್ಯದಲ್ಲೇ ತಡೆಹಿಡಿಯಲಾಯಿತು. ಅಲಿ ಖಮೇನಿ ಸ್ಥಾನಕ್ಕೆ ಹೊಸ ನಾಯಕನನ್ನು ನೇಮಿಸಿದರೆ ಅವನನ್ನೂ ಹತ್ಯೆ ಮಾಡುತ್ತೇವೆ ಎಂದು ಎಚ್ಚರಿಸಿದ್ದ ಇಸ್ರೇಲ್, ಆ ಜಾಗಕ್ಕೆ ಮೊಜ್ತಬಾ ಖಮೇನಿ ಆಯ್ಕೆಯಾಗುತ್ತಿದ್ದಂತೆ ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ.ಈ ಬಗ್ಗೆ ಇಸ್ರೇಲ್ ಸೇನೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಇರಾನ್‌ನ ಟೆಹ್ರಾನ್, ಇಸ್ಫಹಾನ್, ದಕ್ಷಿಣ ಇರಾನ್‌ನಲ್ಲಿರುವ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಭೀಕರ ದಾಳಿಯನ್ನು ಆರಂಭಿಸಿದ್ದೇವೆ’ ಎಂದು ಹೇಳಿದೆ. ಅತ್ತ ಇರಾನ್‌ನ ಬೀದಿಗಳಲ್ಲಿ ಸಾಗರೋಪಾದಿಯಲ್ಲಿ ಸೇರಿದ ಜನ ಮೊಜ್ತಬಾರ ಫೋಟೋ ಹಿಡಿದು ತಮ್ಮ ನೂತನ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಸೇನೆ ಇರಾನ್ ನಾಗರಿಕರು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಿದ್ದು, ಟೆಹ್ರಾನ್ ನಲ್ಲಿ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಿಂದ ಇರಾನ್ ಡ್ರೋನ್ ಮತ್ತು ಕ್ಷಿಪಣಿಗಳನ್ನು ಉಡಾಯಿಸುತ್ತಿದೆ ಎಂದು ಆರೋಪಿಸಿದೆ. ಇದರಿಂದ ಆ ಪ್ರದೇಶಗಳು ದಾಳಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.