ಭಾರತದ ವಿರುದ್ಧ ಪಾಕ್ ಸುಳ್ಳು ಸುದ್ದಿ; ಇರಾನ್ ಹಡಗಿನ ಮಾಹಿತಿ ಹಂಚಿಕೆಯ ಆರೋಪ ತಳ್ಳಿಹಾಕಿದ ಕೇಂದ್ರ
ಇರಾನ್‌ನ ‘ಐಆರ್‌ಐಎಸ್ ದೆನಾ’ ಯುದ್ಧನೌಕೆಯ ಸ್ಥಳದ ಮಾಹಿತಿಯನ್ನು ಭಾರತವು ಇಸ್ರೇಲ್‌ಗೆ ಸೋರಿಕೆ ಮಾಡಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಸೈನ್ಯ ಮುಖ್ಯಸ್ಥರ ಹೆಸರಿನಲ್ಲಿ ಹರಡಿದ ವಿಡಿಯೋ ‘ಡೀಪ್‌ಫೇಕ್’ ಆಗಿದ್ದು ಜನರನ್ನು ದಾರಿ ತಪ್ಪಿಸಲು ಸೃಷ್ಟಿಸಲಾಗಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತಿಳಿಸಿದೆ. ಈ ಘಟನೆ ನಂತರ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆ, ಭಾರತ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ.
ಐಆರ್‌ಐಎಸ್ ದೆನಾ -
ನವದೆಹಲಿ: ಇರಾನ್ (Iran)ನ ನೌಕಾಪಡೆಗೆ ಸೇರಿದ 'ಐಆರ್‌ಐಎಸ್ ದೆನಾ' (IRIS Dena) ಯುದ್ಧನೌಕೆಯ ಸ್ಥಳದ ಮಾಹಿತಿಯನ್ನು ಭಾರತ (India)ವು ಇಸ್ರೇಲ್‌ಗೆ ಸೋರಿಕೆ ಮಾಡಿದೆ ಎಂಬ ಪಾಕಿಸ್ತಾನ (Pakistani)ದ ಮೂಲಗಳ ಆರೋಪವನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ಇದು ಭಾರತದ ವಿಶ್ವಾಸಾರ್ಹತೆಗೆ ಧಕ್ಕೆ ತರಲು ನಡೆಸುತ್ತಿರುವ ವ್ಯವಸ್ಥಿತ ಅಪಪ್ರಚಾರ ಮತ್ತು ಸುಳ್ಳು ಸುದ್ದಿಯ ಹರುಡುವ ಭಾಗವಾಗಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಮಾರ್ಚ್ 4 ರಂದು ಶ್ರೀಲಂಕಾ (Sri Lanka) ಕರಾವಳಿಯ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ದಾಳಿಯಿಂದ ಇರಾನ್ ಯುದ್ಧನೌಕೆ (Iranian warship)ಯು ಮುಳುಗಡೆಯಾಗಿದ್ದು, ಈ ಘಟನೆಯಲ್ಲಿ ಕನಿಷ್ಠ 87 ನಾವಿಕರು ಮೃತಪಟ್ಟಿದ್ದರು. ಈ ದಾಳಿಯ ಬೆನ್ನಲ್ಲೇ ಈ ವಿವಾದಾತ್ಮಕ ಆರೋಪಗಳು ಕೇಳಿಬಂದಿವೆ.
ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಹಡಗಿನ ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂಬಂತೆ ಬಿಂಬಿಸುವ ವಿಡಿಯೋವನ್ನು ಪಿಐಬಿ (PIB) ಫ್ಯಾಕ್ಟ್-ಚೆಕ್ ಘಟಕವು 'ಡೀಪ್‌ಫೇಕ್' ಎಂದು ಗುರುತಿಸಿದೆ. ಈ ಎಐ (AI) ನಿರ್ಮಿತ ವಿಡಿಯೋ ಜನರನ್ನು ದಾರಿ ತಪ್ಪಿಸಲು ಹರಡಲಾಗುತ್ತಿದೆ ಎಂದು ಎಚ್ಚರಿಸಿರುವ ಸರ್ಕಾರ, ಜನರಲ್ ದ್ವಿವೇದಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಆಯೋಜಿಸಿದ್ದ 'ಮಿಲನ್ ಅಂತರಾಷ್ಟ್ರೀಯ ಫ್ಲೀಟ್ ರಿವ್ಯೂ 2026' ರಲ್ಲಿ ಭಾಗವಹಿಸಿ ಮರಳುತ್ತಿದ್ದಾಗ ಈ ಹಡಗಿನ ಮೇಲೆ ದಾಳಿ ನಡೆದಿತ್ತು. ಡಿಜಿಟಲ್ ವೇದಿಕೆಗಳಲ್ಲಿ ಎಐ ನಿರ್ಮಿತ ಕಂಟೆಂಟ್‌ಗಳನ್ನು ಲೇಬಲ್ ಮಾಡುವುದನ್ನು ಕಡ್ಡಾಯಗೊಳಿಸಿರುವ ನಿಯಮಗಳನ್ನು ಸರ್ಕಾರ ಈ ಸಂದರ್ಭದಲ್ಲಿ ನೆನಪಿಸಿದೆ.
ಯಾವುದೇ ಸಮಸ್ಯೆಗೆ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಸುಮಾರು 130 ಸಿಬ್ಬಂದಿಯನ್ನು ಹೊಂದಿದ್ದ ಈ ಹಡಗಿನಿಂದ ಶ್ರೀಲಂಕಾ ಪಡೆಗಳು 30 ನಾವಿಕರನ್ನು ರಕ್ಷಿಸಿವೆ. ಈ ಘಟನೆಯನ್ನು ಇರಾನ್ ತೀವ್ರವಾಗಿ ಖಂಡಿಸಿದ್ದು, ಅಮೆರಿಕವು ಈ ದಾಳಿಗಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದೆ. ರಕ್ಷಣಾ ವಿಶ್ಲೇಷಕ ನಿತಿನ್ ಗೋಖಲೆ ಅವರು ಈ ಬೆಳವಣಿಗೆಯಿಂದಾಗಿ ಪ್ರಾದೇಶಿಕ ಉದ್ವಿಗ್ನತೆಯು ಈಗ ಹಿಂದೂ ಮಹಾಸಾಗರಕ್ಕೂ ವ್ಯಾಪಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುದ್ಧನೌಕೆಯಿಂದ ಅಪಾಯದ ಕರೆ ಬಂದಾಗ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಿದ್ದಾಗಿ ಭಾರತದ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ, ದಾಳಿಯಲ್ಲಿ ತನ್ನ ಪಾತ್ರವಿದೆ ಅಥವಾ ಇಸ್ರೇಲ್‌ಗೆ ಗುಪ್ತಚರ ಮಾಹಿತಿ ನೀಡಿದೆ ಎಂಬ ಯಾವುದೇ ಸುಳ್ಳು ಕಥೆಗಳನ್ನು ಭಾರತ ಸರ್ಕಾರವು ಸಂಪೂರ್ಣವಾಗಿ ತಿರಸ್ಕರಿಸಿದೆ.