Basanagouda Patil Yatnal: ಬಿಎಸ್‌ವೈ ಕುಟುಂಬದ ವಿರುದ್ಧ ಹೋರಾಟ ಮುಂದುವರಿಸುವೆ: ಗುಡುಗಿದ ಯತ್ನಾಳ್
ಬೇರೆ ಪಕ್ಷ ಕಟ್ಟುವುದಿಲ್ಲ. ಗೌರವಯುತವಾಗಿ ನನ್ನನ್ನು ವಾಪಸ್ ಕರೆಸಿಕೊಳ್ಳುತ್ತಾರೆ. ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ. ನಾಳೆಯಿಂದ ಆ ಕುಟುಂಬದ ಅಂತ್ಯದ ಆರಂಭ ಎಂದು ಉಚ್ಚಾಟಿತ ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಇಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.

ಬಸವನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು: ಭಾರತೀಯ ಜನತಾ ಪಕ್ಷದಿಂದ (BJP) 6 ವರ್ಷಗಳ ಕಾಲ ಉಚ್ಚಾಟನೆ (expulsion) ಆಗಿರುವ ವಿಜಯಪುರ (Vijayapura) ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (basanagouda patil yatnal) ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಕುಟುಂಬದ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ. ನಾಳೆಯಿಂದ ರಾಜ್ಯದಲ್ಲಿ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹಾಗು ಹೊಂದಾಣಿಕೆ ರಾಜಕಾರಣ ವಿರುದ್ಧ ಮತ್ತೆ ಹೋರಾಟ ಆರಂಭ ಮಾಡುತ್ತೇನೆ. ಇಂದಿನಿಂದ ಯಡಿಯೂರಪ್ಪನವರ ಕುಟುಂಬದ ಅಂತ್ಯ ಆರಂಭವಾದಂತೆ ಎಂದು ಮತ್ತೆ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಚ್ಚಾಟನೆ ವಾಪಸ್ ಪಡೆಯುವಂತೆ ನಾನು ಹೈಕಮಾಂಡ್‌ಗೆ ಮನವಿ ಮಾಡಲ್ಲ. ನಾಳೆಯಿಂದ ಹೊಸದಾಗಿ ಹೋರಾಟವನ್ನು ಆರಂಭ ಮಾಡುತ್ತೇನೆ. ನಾನು ಯಾವುದೇ ರೀತಿಯಾದ ಹೊಸ ಪಕ್ಷ ಕಟ್ಟುವುದಿಲ್ಲ. ನಮ್ಮ ತಂಡದವರು ಹೈಕಮಾಂಡ್‌ಗೆ ಉಚ್ಚಾಟನೆ ಬಗ್ಗೆ ಮನವಿ ಮಾಡುತ್ತಾರೆ. ನಾನು ಬಿಜೆಪಿಗೆ ವಾಪಸ್ ಬಂದೇ ಬರುತ್ತೇನೆ. ನನ್ನನ್ನು ಗೌರವಯುತವಾಗಿ ವಾಪಸ್ ಕರೆಸಿಕೊಳ್ಳುತ್ತಾರೆ. ಸನಾತನ ಹಿಂದು ಧರ್ಮದ ಬಿಜೆಪಿ ಕಟ್ಟುವುದೇ ನನ್ನ ಗುರಿಯಾಗಿದೆ. ನಾಳೆಯಿಂದ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.
ಉಚ್ಚಾಟನೆ ಬಳಿಕವೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮುಂದುವರಿಸಿದ ಶಾಸಕ ಯತ್ನಾಳ್, ನಾಳೆಯಿಂದ ಸನಾತನ ಹಿಂದೂ ಧರ್ಮದ ಸಂಪ್ರದಾಯದಂತೆ ಹೊಸ ವರ್ಷ ಆರಂಭ. ರಾಜ್ಯದಲ್ಲಿ ನಾಳೆಯಿಂದ ಕುಟುಂಬ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭ ಮಾಡುತ್ತೇವೆ. ಯಡಿಯೂರಪ್ಪ ಕುಟುಂಬ ರಾಜಕಾರಣದಿಂದ ಪಕ್ಷಕ್ಕೆ ಹಾನಿಯಾಗಿದೆ. ಹೋರಾಟದ ಮೂಲಕ ಪಕ್ಷದ ರಿಪೇರಿ ಮಾಡುವ ಕೆಲಸ ಮಾಡುತ್ತೇನೆ. ಇಂದಿನಿಂದ ಯಡಿಯೂರಪ್ಪನವರ ಕುಟುಂಬದ ಅಂತ್ಯ ಆರಂಭ ಎಂದು ಬೆಂಗಳೂರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಹಿಂಪಡೆಯದಿದ್ದರೆ ಉಗ್ರ ಹೋರಾಟ; ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ