ಯತ್ನಾಳ್ ಉಚ್ಚಾಟನೆ ಹಿಂಪಡೆಯದಿದ್ದರೆ ಉಗ್ರ ಹೋರಾಟ; ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಯತ್ನಾಳ್ ಉಚ್ಚಾಟನೆ ಹಿಂದೆ ದುಷ್ಟ ಶಕ್ತಿಗಳ ಕೈವಾಡ ಇದೆ. ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲರಂತೆ ಯತ್ನಾಳರಿಗೂ ಮಾಡುತ್ತಿದ್ದಾರೆ. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಬಿಜೆಪಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದು, ಇದು ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.


ಧಾರವಾಡ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda patil yatnal) ಅವರನ್ನು ಬಿಜೆಪಿ ಪಕ್ಷವು (BJP Karnataka) ಉಚ್ಚಾಟನೆ ಮಾಡಿದ್ದು, ಈ ಉಚ್ಚಾಟನೆ ಹಿಂಪಡೆಯದಿದ್ದರೆ ಎಲ್ಲ ಲಿಂಗಾಯತ ಶಾಸಕರು (Lingayat MLAs) ಬಿಜೆಪಿ ಬಿಟ್ಟು ಹೊರ ಬರಬೇಕು. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಬಿಜೆಪಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದು, ಯತ್ನಾಳ್ ಉಚ್ಚಾಟನೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯತ್ನಾಳ್ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಚಾಟನೆ ಮಾಡುವಂತೆ ಮಾಡಿವೆ. ಬಿಜೆಪಿ ಪಕ್ಷದ ವರಿಷ್ಠರು ಯತ್ನಾಳ್ ಅವರ ಉಚ್ಚಾಟನೆ ಆದೇಶವನ್ನು ವಾಪಸ್ ಪಡೆಯದೇ ಹೋದರೆ ಲಿಂಗಾಯತ ಸಮುದಾಯದ ಎಲ್ಲ ಶಾಸಕರು ಬಿಜೆಪಿ ಬಿಟ್ಟು ಹೊರಬರಬೇಕು ಎಂದು ತಿಳಿಸಿದರು.
ಮೋದಿ ಹಾಗೂ ಅಮಿತ್ ಶಾ ಅವರಿಗೆ ಗೊತ್ತಿರದೇ ಇರುವ ಅಂಶಗಳು ಇಲ್ಲಿವೆ. ಇದರಿಂದ ಯಾರೂ ಧೃತಿಗೆಡಬಾರದು. ನಮ್ಮ ಸಮಾಜಕ್ಕೆ ನಾನು ಕರೆ ಕೊಡುತ್ತೇನೆ. ಬೆಳಗಾವಿಯಲ್ಲಿ ಗುರುವಾರ ಸಭೆ ಕರೆಯುತ್ತೇನೆ. ಮುಂದೆ ಒಂದು ದಿನ ರಾಜ್ಯದಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಇದು ಪ್ರಧಾನಿ ವಿರುದ್ಧದ ಹೋರಾಟ ಅಲ್ಲ. ಯಾರು ಅಟ್ಟಹಾಸ ಮೆರೆದಿದ್ದಾರೋ ಅವರ ವಿರುದ್ಧ ಹೋರಾಟ. ಬಿಜೆಪಿ ಹೈಕಮಾಂಡ್ ಕೂಡಲೇ ಈ ಆದೇಶ ವಾಪಸ್ ಪಡೆದು ಆದ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿಯ ಗಾಂಧಿ ಭವನದಲ್ಲಿ ಎಲ್ಲ ಪದಾಧಿಕಾರಿಗಳ ಯುವ ಘಟಕ, ರೈತ ಘಟಕದ ಸಭೆ ಕರೆಯುತ್ತೇನೆ. ಯತ್ನಾಳ್ ಉಚ್ಚಾಟನೆ ಹಿಂದೆ ದುಷ್ಟ ಶಕ್ತಿಗಳ ಕೈವಾಡ ಇದೆ. ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲರಂತೆ ಯತ್ನಾಳರಿಗೂ ಮಾಡುತ್ತಿದ್ದಾರೆ. ಹೈಕಮಾಂಡ್ ನಮಗೆ ಕುಟುಂಬ ರಾಜಕಾರಣ ಬೇಕು ಎಂಬುದಾಗಿ ನೇರವಾಗಿ ಹೇಳಲಿ ಎಂದ ಸ್ವಾಮೀಜಿ, ಈ ಬಗ್ಗೆ ಎಲ್ಲವನ್ನೂ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕುಟುಂಬ ರಾಜಕಾರಣ ಬೇಡ ಎನ್ನುವುದು ತಪ್ಪೇ? ಯತ್ನಾಳ್ ಏನೇ ಮಾತನಾಡಿದರೂ ಅವರು ಉತ್ತರ ಕರ್ನಾಟಕ, ಹಿಂದುತ್ವದ ಬಗ್ಗೆಯೇ ಮಾತನಾಡಿದ್ದಾರೆ. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಬಿಜೆಪಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದು, ಇದು ಪಕ್ಷಕ್ಕೆ ಹಿನ್ನಡೆ. ಈಗ ಬಿಜೆಪಿ 60 ಸ್ಥಾನ ಬಂದಿದ್ದು, ಮುಂದೆ 30 ಸ್ಥಾನ ಕೂಡ ಬರೋದಿಲ್ಲ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Basangouda Patil Yatnal: ಯತ್ನಾಳ್ ಉಚ್ಛಾಟನೆ ವಿರೋಧಿಸಿ ಲಿಂಗಾಯತ ಶಾಸಕರು ಬಿಜೆಪಿಯಿಂದ ಹೊರಬರಲು ಮಠಾಧೀಶರ ಕರೆ