WPL 2025: ಗುಜರಾತ್ ಗೆಲುವಿನಿಂದ ತೀವ್ರಗೊಂಡ ನಾಕೌಟ್ ಲೆಕ್ಕಾಚಾರ
ಆರ್‌ಸಿಬಿಗೆ ಇನ್ನು ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ ಮಾತ್ರ ನಾಕೌಟ್ ಟಿಕೆಟ್ ಪಡೆಯಲಿದೆ. ಒಂದು ಪಂದ್ಯ ಸೋತರೂ ಟೂರ್ನಿಯಿಂದ ಹೊರಬೀಳಲಿದೆ. ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಮೂರು ಪಂದ್ಯಗಳು ಬಾಕಿ ಉಳಿದಿವೆ ಈ ಪೈಕಿ 2 ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶಿಸಲಿದೆ.


ಲಕ್ನೋ: ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್(WPL 2025) ಟೂರ್ನಿಯಲ್ಲಿ ನಾಕೌಟ್ ಲೆಕ್ಕಾಚಾರದ ಪೈಪೋಟಿ ಆರಂಭವಾಗಿದೆ. ಎರಡು ಬಾರಿಯ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈಗಾಗಲೇ ನಾಕೌಟ್ ಪ್ರವೇಶಿಸಿದೆ. ಉಳಿದ ಎರಡು ಸ್ಥಾನಕ್ಕೆ ನಾಲ್ಕು ತಂಡಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. 5ನೇ ಸ್ಥಾನಿಯಾಗಿದ್ದ ಗುಜರಾತ್ ಜೈಂಟ್ಸ್ ತಂಡ ಸೋಮವಾರ ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ 2ನೇ ಸ್ಥಾನಕ್ಕೇರಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಮುಂಬೈ ತಂಡ ಮೂರನೇ ಸ್ಥಾನಿಯಾಗಿದೆ. ಯುಪಿ ತಂಡ ಕೊನೆಯ ಸ್ಥಾನದಲ್ಲಿದೆ.
ಆರ್‌ಸಿಬಿಗೆ ಇನ್ನು ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೆ ಮಾತ್ರ ನಾಕೌಟ್ ಟಿಕೆಟ್ ಪಡೆಯಲಿದೆ. ಒಂದು ಪಂದ್ಯ ಸೋತರೂ ಟೂರ್ನಿಯಿಂದ ಹೊರಬೀಳಲಿದೆ. ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಮೂರು ಪಂದ್ಯಗಳು ಬಾಕಿ ಉಳಿದಿವೆ ಈ ಪೈಕಿ 2 ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶಿಸಲಿದೆ. ಒಂದೊಮ್ಮೆ ಗುಜರಾತ್ ಮತ್ತು ಮುಂಬೈ ತಂಡಗಳು ಮುಂದಿನ ಎರಡು ಪಂದ್ಯ ಗೆದ್ದರೆ ಆಗ ಆರ್‌ಸಿಬಿ ಉಳಿದಿರುವ ಎರಡು ಪಂದ್ಯ ಗೆದ್ದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಗುಜರಾತ್ ಮುಂದಿನ ಪಂದ್ಯ ಸೋತರೆ ಮಾತ್ರ ಆರ್‌ಸಿಬಿಗೆ ಪ್ಲೇ ಆಫ್ ಆಸೆ ಜೀವಂತವಾಗಿರಲಿದೆ.
ಸೋಮವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್‌ತಂಡವು ಬೆತ್ ಮೂನಿ(ಅಜೇಯ 96) ಅವರ ಅಬ್ಬರದ ಆಟದ ಬಲದಿಂದ 5 ವಿಕೆಟ್‌ಗಳಿಗೆ 186 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಯುಪಿ ತಂಡ 105 ರನ್‌ಗೆ ಸರ್ವಪತನ ಕಂಡು 81 ರನ್‌ಗಳ ಸೋಲಿಗೆ ತುತ್ತಾಯಿತು.
ಚೇಸಿಂಗ್ ವೇಳೆ ವಿಂಡೀಸ್ ವೇಗಿ ಡಿಯಾಂಡ್ರ ಡಾಟಿನ್ ಮೊದಲ ಓವರ್‌ನಲ್ಲೇ ವಾರಿಯರ್ಸ್‌ಗೆ ಅವಳಿ ಆಘಾತವಿಕ್ಕಿದರು. ಅಪಾಯಕಾರಿ ಕಿರಣ್ ನವಗಿರೆ (0) ಮತ್ತು ಜಾರ್ಜಿಯಾ ವೋಲ್ (0) ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಅಟ್ಟಿದರು. ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ (25)ಮತ್ತು ಷಿನೆಲ್ ಹೆನ್ರಿ (28) ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಬ್ಯಾಟಿಂಗ್ ಕಂಡು ಬಾರದೆ ತಂಡ ಸೋಲಿಗೆ ತುತ್ತಾಯಿತು. ಡಾಟಿನ್ 14 ಕ್ಕೆ 2 ವಿಕೆಟ್ ಕಿತ್ತರೆ, ವೇಗಿ ಕಶ್ವಿ ಗೌತಮ್ ಮತ್ತು ತನುಜಾ ಕನ್ವರ್ ತಲಾ 3 ವಿಕೆಟ್ ಪಡೆದು ಮಿಂಚಿದರು.