ಖಮೇನಿ ನಿಧನಕ್ಕೆ ಸಂತಾಪ ಸೂಚಿಸಿದ ಭಾರತ; ಇರಾನ್ ಬಗ್ಗೆ ಕೇಂದ್ರದ ನಿಲುವು ಬದಲಾಗಿದ್ದೇಕೆ?
ಅಮರಿಕ-ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಅವರಿಗೆ ಭಾರತ ಕೊನೆಗೂ ಸಂತಾಪ ಸೂಚಿಸಿದೆ. ಇರಾನ್ ರಾಯಭಾರಿಯನ್ನು ದೆಹಲಿಯಲ್ಲಿ ಭೇಟಿಯಾದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ದುಃಖ ವ್ಯಕ್ತಪಡಿಸಿದರು. ಜತೆಗೆ ಖಮೇನಿ ಅವರ ನಿಧನಕ್ಕೆ ಸಂತಾಪ ಸೂಚಿಸುವ ಪುಸ್ತಕದಲ್ಲಿ ಸಹಿ ಹಾಕಿದರು.
ಇರಾನ್ ರಾಯಭಾರಿ ಜತೆ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾತುಕತೆ -
ದೆಹಲಿ, ಮಾ. 5: ಅಮರಿಕ-ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ (Ayatollah Ali Khamenei) ಅವರಿಗೆ ಭಾರತ ಕೊನೆಗೂ ಸಂತಾಪ ಸೂಚಿಸಿದೆ. ಮಾರ್ಚ್ 5ರಂದು ಇರಾನ್ ರಾಯಭಾರಿಯನ್ನು ದೆಹಲಿಯಲ್ಲಿ ಭೇಟಿಯಾದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ (Vikram Misri) ದುಃಖ ವ್ಯಕ್ತಪಡಿಸಿದರು. ಜತೆಗೆ ಖಮೇನಿ ಅವರ ನಿಧನಕ್ಕೆ ಸಂತಾಪ ಸೂಚಿಸುವ ಪುಸ್ತಕದಲ್ಲಿ ಸಹಿ ಹಾಕಿದರು. ಫೆಬ್ರವರಿ 28ರ ದಾಳಿಯಲ್ಲಿ ಖಮೇನಿ ಹತರಾದ ಸುಮಾರು 6 ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಅಮೆರಿಕ, ಇಸ್ರೇಲ್ ಮತ್ತು ಯುರೋಪಿಯನ್ ಒಕ್ಕೂಟದ ಹಡಗುಗಳನ್ನು ಹೊರತುಪಡಿಸಿ ಎಲ್ಲ ಹಡಗುಗಳಿಗೆ ಹೊರ್ಮುಜ್ ಜಲಸಂಧಿಯನ್ನು ತೆರೆಯುವುದಾಗಿ ಇರಾನ್ ಘೋಷಿಸಿದ ಕೆಲವೇ ಹೊತ್ತಲ್ಲಿ ಭಾರತ ಸಂತಾಪ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡು, ಗುರುವಾರ ಮಧ್ಯಾಹ್ನ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾಗಿ ತಿಳಿಸಿದರು.
ಈ ನಡೆ ಭಾರತ ತಳೆದಿರುವ ನಿಲುವಿನ ಸೂಕ್ಷ್ಮ ಬದಲಾವಣೆಯನ್ನು ಸೂಚಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದಾಗ್ಯೂ ಭಾರತ ಖಮೇನಿ ಹತರಾದ ವಾಯುದಾಳಿಯನ್ನು ಖಂಡಿಸಿಲ್ಲ. ಈ ಬಗ್ಗೆ ವಿಪಕ್ಷಗಳು ಆಗ್ರಹಿಸಿದರೂ ಮೌನ ಕಾಯ್ದುಕೊಂಡಿದೆ ಎನ್ನುವುದು ಗಮನಾರ್ಹ.
ಎಸ್. ಜೈಶಂಕರ್ ಎಕ್ಸ್ ಅವರ ಎಕ್ಸ್ ಪೋಸ್ಟ್:
Had a telecon with Iranian FM Seyed Abbas Araghchi this afternoon. @araghchi
— Dr. S. Jaishankar (@DrSJaishankar) March 5, 2026
ಮೋದಿ ಕಳವಳ
ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರಾಚ್ಯದ ಪರಿಸ್ಥಿತಿಯ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. "ವಿವಾದಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಭಾರತ ಯಾವಾಗಲೂ ಸಂವಾದ ಮತ್ತು ರಾಜತಾಂತ್ರಿಕತೆ ಮಾರ್ಗಕ್ಕೆ ಕರೆ ನೀಡುತ್ತದೆ" ಎಂದು ಅವರು ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯ ಮೂಲಕ ಸಾಗಲು ಅಮೆರಿಕ, ಇಸ್ರೇಲ್, ಯುರೋಪ್ ಮತ್ತು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಹಡಗುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಈಗಾಗಲೇ ಘೋಷಿಸಿದೆ. ಈ ಜಲಮಾರ್ಗದಲ್ಲಿ ಕಂಡುಬರುವ ಅಮೆರಿಕ, ಇಸ್ರೇಲ್, ಯುರೋಪ್ ಮತ್ತು ಬೆಂಬಲಿಗರಿಗೆ ಸೇರಿದ ಯಾವುದೇ ಹಡಗನ್ನು ಖಂಡಿತವಾಗಿಯೂ ಹೊಡೆದುರುಳಿಸಲಾಗುವುದು ಎಂದು ಎಚ್ಚರಿಸಿದೆ.
ಖಮೇನಿ ಸಾವಿಗೆ ಸಂತಾಪ ಸೂಚಿಸುವ ಪುಸ್ತಕಕ್ಕೆ ಸಹಿ:
Foreign Secretary Vikram Misri, on behalf of Government of India, signed the Condolence Book at the Embassy of Iran in New Delhi today, and offered condolences to the slain Supreme Leader of Iran Ayatollah Ali Khamenei.
— ANI (@ANI) March 5, 2026
(Pics Source: XPD Division, MEA) pic.twitter.com/IvDEjWgp3u
ವಿಪಕ್ಷಗಳಿಂದ ತರಾಟೆ
ಖಮೇನಿ ಹತ್ಯೆಯನ್ನು ಖಂಡಿಸದ ಭಾರತದ ನಿಲುವನ್ನು ಕಾಂಗ್ರೆಸ್ ಸೇರಿದಂತೆ ದೇಶದ ವಿಪಕ್ಷಗಳು ಖಂಡಿಸಿದ್ದವು. ಇರಾನ್‌ನೊಂದಿಗಿನ ಭಾರತದ ದೀರ್ಘಕಾಲದ ಸಂಬಂಧವನ್ನು ಉಲ್ಲೇಖಿಸಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಒಂದು ಹಂತದಲ್ಲಿ ಭಾರತವು ತನ್ನ ತೈಲದ ಶೇಕಡಾ 13ರಷ್ಟು ಇರಾನ್‌ನಿಂದ ಖರೀದಿಸುತ್ತಿತ್ತು. ಜತೆಗೆ ಬೃಹತ್ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿತ್ತು. 2018ರಲ್ಲಿ ಇರಾನ್ ಪರಮಾಣು ಒಪ್ಪಂದದಿಂದ ಹಿಂದೆ ಸರಿದ ನಂತರ, ಅಮೆರಿಕ ನಿರ್ಬಂಧಗಳನ್ನು ಹೇರಿದ ನಂತರ ಇದು ತೀವ್ರವಾಗಿ ಕುಸಿದಿತ್ತು.
ಖಮೇನಿಯ ಮಗನೇ ಉತ್ತರಾಧಿಕಾರಿಯಾಗಬೇಕೆಂದು ಇರಾನ್‌ನ ಎಲೈಟ್ ಫೋರ್ಸ್ ಬಯಸಿದ್ದು ಏಕೆ?
ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸುತ್ತ, ಮೌನವಾಗಿರುವುದು ತಟಸ್ಥ ಧೋರಣೆಯಲ್ಲ, ಬದಲಾಗಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಎಂದು ಟೀಕಿಸಿದ್ದರು. ʼʼವಿದೇಶಿ ನಾಯಕರನ್ನು ಹತ್ಯೆ ಮಾಡಿದಂತಹ ಘಟನೆಗೆ ಸಂಬಂಧಿಸಿ, ನಮ್ಮ ದೇಶದಿಂದ ಅಂತಾರಾಷ್ಟ್ರೀಯ ಕಾನೂನುಗಳ ಬಗ್ಗೆ ಸ್ಪಷ್ಟವಾದ ರಕ್ಷಣಾತ್ಮಕ ನಿಲುವು ವ್ಯಕ್ತವಾಗದಿದ್ದಾಗ ಮತ್ತು ತಟಸ್ಥತೆ ಕಳೆದುಹೋದಾಗ, ಅದು ನಮ್ಮ ವಿದೇಶಾಂಗ ನೀತಿಯ ದಿಕ್ಕು ಹಾಗೂ ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಅನುಮಾನಗಳನ್ನು ಎಬ್ಬಿಸುತ್ತದೆʼʼ ಎಂದು ಸೋನಿಯಾ ಗಾಂಧಿ ಹೇಳಿದ್ದರು.