Zameer Ahmed: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ; ಮಾಲೀಕನಿಗೆ ಮೂರು ಹಸು ಕೊಡಿಸಿದ ಸಚಿವ ಜಮೀರ್ ಅಹ್ಮದ್
Zameer Ahmed: 3 ಲಕ್ಷ ರೂಪಾಯಿ ವೆಚ್ಚದ ಹಸುಗಳನ್ನು ಸಚಿವ ಜಮೀರ್ ಅಹ್ಮದ್ ಕೊಡಿಸಿದ್ದಾರೆ. ಮಾಲೀಕ ಕರ್ಣ ಕುಟುಂಬಕ್ಕೆ ಹಸುಗಳನ್ನು ಹಸ್ತಾಂತರಿಸಲಾಗಿದೆ. ಸಚಿವ ಜಮೀರ್ ಅಹ್ಮದ್ ಅವರ ಅಧಿಕೃತ ನಿವಾಸದಲ್ಲಿ ಹಸುಗಳ ಹಸ್ತಾಂತರ ಮಾಡಲಾಗಿದೆ.
ಬೆಂಗಳೂರು, ಜನವರಿ 15: ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಪ್ರಕರಣದಲ್ಲಿ ಹಸು ಮಾಲೀಕ ಕರ್ಣ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಅವರು 3 ಹಸುಗಳನ್ನು ಕೊಡಿಸಿದ್ದಾರೆ. ಕರ್ಣ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾಗೆ ಹಸು ಹಸ್ತಾಂತರ ಮಾಡಿದ್ದಾರೆ.
3 ಲಕ್ಷ ರೂಪಾಯಿ ವೆಚ್ಚದಲ್ಲಿ ಹಸುಗಳನ್ನು ಸಚಿವ ಜಮೀರ್ ಅಹ್ಮದ್ ಕೊಡಿಸಿದ್ದಾರೆ. ಜಮೀರ್ ಅಹ್ಮದ್ ಅವರಿಂದ ಹಸು ಪಡೆಯಲು ಮಾಲೀಕ ಕರ್ಣ ನಿರಾಕರಿಸಿದ್ದಾರೆ. ಆದರೆ, ಕರ್ಣ ಬದಲಾಗಿ ಆತನ ಸೋದರಿ ಅಮುದಾ ಹಸುಗಳನ್ನು ಸ್ವೀಕರಿಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರ ಅಧಿಕೃತ ನಿವಾಸದಲ್ಲಿ ಹಸುಗಳ ಹಸ್ತಾಂತರ ಮಾಡಲಾಗಿದೆ.
ಏನಿದು ಪ್ರಕರಣ?
ರಸ್ತೆ ಬದಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಭಾನುವಾರ ನಡೆದಿತ್ತು. ಹಸುಗಳ ಮಾಲೀಕ ಕರ್ಣ ನೀಡಿದ ದೂರಿನ ಅನ್ವಯ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 325 (ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಠಾಣೆ ಪೊಲೀಸರು, ಬಿಹಾರ ಮೂಲದ ಶೇಕ್ ನಸ್ರು (30) ಎಂಬಾತನನ್ನ ಬಂಧಿಸಿದ್ದರು.
ಹಸುಗಳ ಮೇಲಿನ ಅಮಾನವೀಯ ಮತ್ತು ಹೇಯ ಕೃತ್ಯವನ್ನು ಬಿಜೆಪಿ ತೀವ್ರವಾಗಿ ಖಂಡಿಸಿತ್ತು. ಜತೆಗೆ ಹಸುಗಳ ಮಾಲೀಕರಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು 1 ಲಕ್ಷ ರೂ ಪರಿಹಾರ ಘೋಷಿಸಿದ್ದರು.
ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಬೆದರಿಕೆ ಕರೆ; ಆರೋಪಿ ವಶಕ್ಕೆ
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ (Rameshwaram Cafe) ರೀತಿಯಲ್ಲಿ ಗಣರಾಜ್ಯೋತ್ಸವದಂದು 6 ಗಣ್ಯರ ಮನೆ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಐದು ಜನರ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಬೆದರಿಕೆ (Hoax Homb threat) ಹಾಕಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ.
ಆರೋಪಿ ಸೈಯದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಧಾನಿಯಲ್ಲಿ ಕಳೆದ ವರ್ಷ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದಂತೆ ಬೆಂಗಳೂರಿನ ವಿವಿಧೆಡೆ ಬಾಂಬ್ ಸ್ಫೋಟ ನಡೆಸುವುದಾಗಿ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಇದೀಗ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದ, ವಿಚಾರಣೆ ನಡೆಸುತ್ತಿದ್ದಾರೆ.
ಗಣರಾಜೋತ್ಸವದ ಸಂದರ್ಭದಲ್ಲಿ ನಗರದ ವಿವಿಧೆಡೆ ಬಾಂಬ್ ಸ್ಫೋಟವಾಗಲಿದೆ ಎಂದು ಜನವರಿ 9ರಂದು ಸಂಜೆ 5:30ರ ಸುಮಾರಿಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೊಲ್ ರೂಮ್‌ಗೆ ಅಪರಿಚಿತನೊಬ್ಬ ಕರೆ ಮಾಡಿದ್ದ. ಈತ 6 ಜನರ ಹೆಸರು ಹಾಗೂ ವಿಳಾಸಗಳನ್ನು ತಿಳಿಸಿ ರಾಮೇಶ್ವರಂ ಕೆಫೆಯಲ್ಲಿ ಈ ಹಿಂದೆ ಬಾಂಬ್ ಸ್ಫೋಟವಾದಂತೆ ಆರು ಜನರು ಮನೆಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸ್ ಕಂಟ್ರೋಲ್ ರೂಮ್ ಪಿಎಸ್ಐ ನೀಡಿರುವ ದೂರಿನನ್ವಯ ಅಪರಿಚಿತನ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪೊಲೀಸರ ವಿಚಾರಣೆ ಬಳಿಕ ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಬಂಧಿತ ಆರೋಪಿ ಸೈಯದ್, ಸೇಡು ತೀರಿಸಿಕೊಳ್ಳಲು ಈ ರೀತಿ ಹುಸಿ ಬಾಂಬ್ ಕರೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ವ್ಯವಹಾರದಲ್ಲಿ ನಷ್ಟ ಆಗಿದ್ದಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಸೈಯದ್, ನಗರದಲ್ಲಿ ಸ್ಫೋಟಗಳನ್ನು ನಡೆಸಲು ಇಸ್ಮಾಯಿಲ್, ಅಲ್ತಾಫ್, ನಹಿದ್, ಅಮ್ಜಾದ್ ಮತ್ತು ಹುಮಾಯೂನ್ ಎಂಬುವವರು ಸಂಚು ರೂಪಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದ. ಬಾಂಬ್ ಕರೆಯ ವೇಳೆ ಕೆ.ಆರ್. ಮಾರ್ಕೆಟ್‌ನ ಇಸ್ಮಾಯಿಲ್, ಬೊಮ್ಮನಹಳ್ಳಿ ಅಲ್ತಾಫ್, ಜೆಸಿನಗರದ ನಾಹೀದ್, ಹೆಚ್.ಬಿ.ಆರ್ ಲೇಔಟ್ ನ ಅಮ್ಜದ್, ನೀಲಸಂದ್ರದ ಹುಮಾಯೂನ್ ಹಾಗೂ ತಬ್ರೇಜ್ ಹೆಸರು ಹಾಗೂ ಮೊಬೈಲ್ ನಂಬರನ್ನು ಆರೋಪಿ ನೀಡಿದ್ದ ಎಂದು ತಿಳಿದುಬಂದಿದೆ. ಆದರೆ ವಿಚಾರಣೆ ವೇಳೆ ಐದು ಜನರ ಮೇಲೆ ಸೇಡು ತೀರಿಸಿಕೊಳ್ಳಲು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾಗಿ ಹೇಳಿಕೆ ನೀಡಿದ್ದಾನೆ.
ಈ ಸುದ್ದಿಯನ್ನೂ ಓದಿ | ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ, ಟ್ರಕ್ ಚಾಲಕನ ಮೇಲೆ ಹಿಟ್ ಆಂಡ್ ರನ್ ಕೇಸು