ʻಐಪಿಎಲ್ಗೆ ಮಜಾ ಮಾಡಲು ಬರುತ್ತಾರೆʼ-ಮ್ಯಾಕ್ಸ್ವೆಲ್, ಲಿವಿಂಗ್ಸ್ಟೋನ್ ವಿರುದ್ದ ವೀರೇಂದ್ರ ಸೆಹ್ವಾಗ್ ಕಿಡಿ!
Virender Sehwag on Maxwell, Livingstone: ಪ್ರಸ್ತುತ ನಡಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತುರುವ ಪಂಜಾಬ್ ಕಿಂಗ್ಸ್ನ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಹ್ ಟೀಕಿಸಿದ್ದಾರೆ.



ಬೆಂಗಳೂರು vs ಪಂಜಾಬ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಏಪ್ರಿಲ್ 21 ರಂದು ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 37ನೇ ಪಂದ್ಯದಲ್ಲಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆರ್ಸಿಬಿ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಮ್ಯಾಕ್ಸ್ವೆಲ್-ಲಿವಿಂಗ್ಸ್ಟೋನ್ ಔಟ್
2025ರ ಐಪಿಎಲ್ 37ನೇ ಪಂದ್ಯದಲ್ಲಿ ಆರ್ಸಿಬಿ ಪ್ಲೇಯಿಂಗ್ XIನಿಂದ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಕೈ ಬಿಟ್ಟು, ಇವರ ಸ್ಥಾನಕ್ಕೆ ವೆಸ್ಟ್ ಇಂಡೀಸ್ನ ಆಲ್ರೌಂಡರ್ ರೊಮ್ಯಾರಿಯೊ ಶೆಫರ್ಡ್ಗೆ ಸ್ಥಾನ ನೀಡಲಾಗಿತ್ತು. ಅದೇ ರೀತಿ ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XIನಿಂದ ಗ್ಲೆನ್ ಮ್ಯಾಕ್ಸ್ವೆಲ್ರನ್ನು ಕೈ ಬಿಟ್ಟು ಅವರ ಸ್ಥಾನಕ್ಕೆ ಜಾಶ್ ಇಂಗ್ಲಿಸ್ಗೆ ಅವಕಾಶ ನೀಡಲಾಗಿತ್ತು.

ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ
ಈ ಇಬ್ಬರೂ ಆಟಗಾರರನ್ನು ಪಂದ್ಯದ ಪ್ಲೇಯಿಂಗ್ XIನಿಂದ ಕೈ ಬಿಟ್ಟಿದ್ದ ಬಗ್ಗೆ ಭಾರತ ತಂಡದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ವಿದೇಶಿ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಆಡಲು ಬರುವುದು ತಮ್ಮ ರಜಾ ದಿನಗಳನ್ನು ಸಂಭ್ರಮಿಸಲು ಎಂದು ಮಾಜಿ ಓಪನರ್ ಗಂಭೀರ ಆರೋಪ ಮಾಡಿದ್ದಾರೆ.

ಮ್ಯಾಕ್ಸ್ವೆಲ್-ಲಿವಿಂಗ್ಸ್ಟೋನ್ಗೆ ಆಡುವ ಹಸಿವಿಲ್ಲ
ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಅವರಲ್ಲಿ ಆಡಬೇಕೆಂಬ ಹಸಿವು ಮಾಯವಾಗಿದೆ. ಐಪಿಎಲ್ಗೆ ಅವರು ಬರುವುದು ರಜಾ ದಿನಗಳನ್ನು ಸಂಭ್ರಮಿಸಲು. ಅವರವರ ತಂಡಗಳಲ್ಲಿ ಅವರು ಯಾವುದೇ ಪ್ರಭಾವವನ್ನು ಬೀರುತ್ತಿಲ್ಲ. ಅವರ ತಂಡವನ್ನು ಗೆಲ್ಲಿಸುವ ಅರ್ಹತೆ ಕೂಡ ಅವರಿಗೆ ಸದ್ಯ ಇಲ್ಲ ಎಂದು ಸೆಹ್ವಾಗ್ ಗುಡುಗಿದ್ದಾರೆ.

ಎಬಿಡಿ, ಮೆಗ್ರಾಥ್,ವಾರ್ನರ್ಗೆ ವೀರು ಮೆಚ್ಚುಗೆ
ಐಪಿಎಲ್ ಟೂರ್ನಿಯಲ್ಲಿ ವೀರೇಂದ್ರ ಸೆಹ್ವಾಗ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳನ್ನು ಮುನ್ನಡೆಸಿದ್ದಾರೆ. ಇವರ ನಾಯಕತ್ವದ ಅಡಿಯಲ್ಲಿ ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರು ಆಡಿದ್ದಾರೆ. ಆದರೆ, ಎಬಿ ಡಿ ವಿಲಿಯರ್ಸ್, ಗ್ಲೆನ್ ಮೆಗ್ರಾಥ್ ಹಾಗೂ ಡೇವಿಡ್ ವಾರ್ನರ್ ಬದ್ದತೆಯನ್ನು ಸೆಹ್ವಾಗ್ ಶ್ಲಾಘಿಸಿದ್ದಾರೆ.

ಮೆಗ್ರಾಥ್ ನನ್ನನ್ನು ಪ್ರಶ್ನೆ ಮಾಡಿದ್ದರು
ತಂಡದಲ್ಲಿ ನನ್ನನ್ನು ಏಕೆ ಆಡಿಸುತ್ತಿಲ್ಲ. ನನಗೆ ಅವಕಾಶ ನೀಡಿ ನಿಮಗಾಗಿ ಪಂದ್ಯವನ್ನು ಗೆಲ್ಲಿಸುತ್ತೇನೆ ಎಂದು ಗ್ಲೆನ್ ಮೆಗ್ರಾಥ್ ನನ್ನನ್ನು ಕೇಳುತ್ತಿದ್ದರು. ಈ ವೇಳೆ ನಾನು ಡರ್ಕ್ ನ್ಯಾನಿಸ್ ಹಾಗೂ ಮೆಗ್ರಾಥ್ ಪೈಕಿ ಒಬ್ಬರನ್ನು ಆಡಿಸಬೇಕಾದ ಪರಿಸ್ಥಿತಿ ಇತ್ತು. ಎಬಿಡಿ, ವಾರ್ನರ್, ಮೆಗ್ರಾಥ್ ಬಿಟ್ಟು ಅನೇಕ ವಿದೇಶಿ ಆಟಗಾರರು ಆಡಿ ಹೋಗಿದ್ದಾರೆ. ಇದರಲ್ಲಿ ಕೆಲವರು ಪ್ಲೇಆಫ್ಸ್ ಅಥವಾ ನಾಕ್ಔಟ್ ಹಂತದಲ್ಲಿ ಸೋತಾಗ ನನ್ನನ್ನು ಪಾರ್ಟಿ ಕೇಳುತ್ತಿದ್ದರು. ಅವರಿಗೆ ಸೋಲಿನ ಬಗ್ಗೆ ಬೇಸರ ಇರಲಿಲ್ಲ ಎಂದು ಸೆಹ್ವಾಗ್ ದೂರಿದ್ದಾರೆ