ಬೆಂಗಳೂರು: ಚಾಣಕ್ಯ ನೀತಿ (Chanakya Niti) ನಮ್ಮ ಜೀವನದ ಎಲ್ಲ ಆಯಾಮಗಳಿಗೂ ಮಾರ್ಗದರ್ಶನ ನೀಡುವಂತಿದೆ. ಶತಮಾನಗಳ ಹಿಂದೆಯೇ ಚಾಣಕ್ಯ (Chanakya) ತಮ್ಮ ದೂರದೃಷ್ಟಿಯ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ವೈಯಕ್ತಿಕ ಬದುಕಿಗೆ ಎಲ್ಲ ಕಾಲದಲ್ಲೂ ಅನ್ವಯಿಸುವ ನೀತಿಯೊಂದನ್ನು ರೂಪಿಸಿಟ್ಟಿದ್ದರು ಎಂಬುದೇ ಭಾರತೀಯರಾದ ನಾವೆಲ್ಲರೂ ಹೆಮ್ಮೆ ಪಡುವ ವಿಚಾರ.
ಈ ಆಧುನಿಕ ಕಾಲಘಟ್ಟದಲ್ಲಿ ಉದ್ಭವಿಸುವ ಆಧುನಿಕ ಸಮಸ್ಯೆಗಳಿಗೂ ಕೂಡ ಚಾಣಕ್ಯ ನೀತಿಯಲ್ಲಿ ಪರಿಣಾಮಕಾರಿ ಪರಿಹಾರ ಲಭ್ಯವಿದೆ ಎಂದರೆ ನೀವು ನಂಬಲೇಬೇಕು. ಹಾಗಾದರೆ ಇಂದಿನ ಒತ್ತಡದ ಜಗತ್ತಿನಲ್ಲಿ ಸಂಕೀರ್ಣವಾಗುತ್ತಿರುವ ವೈವಾಹಿಕ ಜೀವನವನ್ನು
ಪರಿಣಾಮಕಾರಿಯಾಗಿ ನಿಭಾಯಿಸುವ ಬಗ್ಗೆ ಚಾಣಕ್ಯ ನೀತಿಯಲ್ಲಿ ಏನು ಹೇಳಲಾಗಿದೆ ಎಂಬುದನ್ನು ನಾವಿಂದು ನೋಡಿಕೊಂಡು ಬರೋಣ.
ನಮ್ಮ ಬದುಕಿಗೊಂದು ಸೂಕ್ತ ಸಂಗಾತಿಯನ್ನು ಆರಿಸುವುದು ಎಷ್ಟು ಕಷ್ಟವೋ ಆ ಬಳಿಕ ವೈವಾಹಿಕ ಜೀವನದಲ್ಲಿ ಸಂಗಾತಿಗಳು ಇಗೋ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸುಂದರ ಸಂಸಾರ ನಡೆಸುವುದೂ ಅಷ್ಟೇ ಸವಾಲಿನ ಕೆಲಸವೇ ಸರಿ. ದಂಪತಿ ನಡುವಿನ ಇಗೋ ಮತ್ತು ಹೊಂದಾಣಿಕೆಯ ಸಮಸ್ಯೆಯಿಂದಲೇ ಇಂದು ಅದೆಷ್ಟೋ ಸಂಬಂಧಗಳು ವಿಚ್ಛೇದನದ ಹಂತಕ್ಕೆ ಬಂದು ಮುಟ್ಟುತ್ತಿವೆ.
ಪತಿ ಮತ್ತು ಪತ್ನಿ ನಡುವಿನ ಸಂಬಂಧದ ಕುರಿತು ಚಾಣಕ್ಯ ನೀತಿಯಲ್ಲಿ ಏನು ಹೇಳಲಾಗಿದೆ ಎನ್ನುವ ವಿವರ ಇಲ್ಲಿದೆ. ಚಾಣಕ್ಯನ ಪ್ರಕಾರ ಪತಿ-ಪತ್ನಿ ನಡುವಿನ ಸಂಬಂಧ ನಂಬಿಕೆ ಮತ್ತು ವಿಶ್ವಾಸದ ಮೇಲೆ ನಿಂತಿದೆ. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಆ ಸಂಬಂಧ ಅಪಾಯದ ಮಟ್ಟಕ್ಕೆ ಬಂದು ನಿಲ್ಲುತ್ತದೆ. ವೈವಾಹಿಕ ಜೀವನ ಸಂತೋಷವಾಗಿದ್ದಲ್ಲಿ ಮಾತ್ರವೇ ವ್ಯಕ್ತಿಯೊಬ್ಬನಿಗೆ ಜೀವನದಲ್ಲಿ ಯಶಸ್ಸು ಲಭಿಸಲು ಸಾಧ್ಯ. ಮಾತ್ರವಲ್ಲದೇ ಆತ ತಾನು ಮಾಡುವ ವೃತ್ತಿ, ಪ್ರವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂಬುದು ಚಾಣಕ್ಯ ನೀತಿಯ ಪ್ರಮುಖ ಅಂಶ.
ಮನೆಯ ಸಂತೋಷ, ಸಂಪತ್ತು ವೃದ್ಧಿಯಾಗಬೇಕಾ? ಅರಿಶಿನವನ್ನು ಹೀಗೆ ಬಳಸಿ
ಪತಿ, ಪತ್ನಿ ನಡುವಿನ ಸಂಬಂಧವನ್ನು ಹಾಳು ಮಾಡುವುದು ಕೆಲವೊಂದು ಹವ್ಯಾಸಗಳು ಎಂಬುದು ಚಾಣಕ್ಯ ನೀತಿಯ ಅಭಿಪ್ರಾಯ. ಇದನ್ನು ಸುಧಾರಿಸಿಕೊಂಡರೆ ದಾಂಪತ್ಯ ಜೀವನದಲ್ಲಿ ಒಡಕು ಬರಲಾರದು ಎಂಬುದು ಚಾಣಕ್ಯ ನೀತಿಯಲ್ಲಿ ಹೇಳಲ್ಪಟ್ಟಿದೆ.
ಕೋಪ ಮನುಷ್ಯನ ಸಹಜ ಗುಣ. ಆದರೆ ಸಿಟ್ಟಿನ ಕೈಯಲ್ಲಿ ನಮ್ಮ ಬುದ್ಧಿಯನ್ನು ಕೊಡಬಾರದು. ನಮ್ಮ ನಿಯಂತ್ರಣಕ್ಕೆ ಸಿಗದ ಸಿಟ್ಟು ದಾಂಪತ್ಯ ಜೀವನದ ಮೇಲೆ ಖಂಡಿತವಾಗಿಯೂ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.
ಇನ್ನು, ದಾಂಪತ್ಯ ಜೀವನದ ಬಹುದೊಡ್ಡ ಶತ್ರು ಎಂದರೆ ಅದು ಸುಳ್ಳು! ಹೌದು, ದಂಪತಿಯ ನಡುವೆ ಸುಳ್ಳಿನ ಬೇಲಿ ಕಟ್ಟಲ್ಪಟ್ಟರೆ ಅಂತಹ ದಾಂಪತ್ಯ ಜೀವನಕ್ಕೆ ಹೆಚ್ಚು ಸಮಯ ಉಳಿಗಾಲವಿಲ್ಲ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಸುಳ್ಳಿನ ಮೇಲೆ ಕಟ್ಟುವ ಸಂಬಂಧದಿಂದ ಪತಿ-ಪತ್ನಿಯ ನಡುವಿನ ವಿಶ್ವಾಸದ ಗೋಡೆ ಸವೆಯುತ್ತ ಬರಬಹುದು.
ಪತಿ-ಪತ್ನಿಗೆ ಸಂಬಂಧದಲ್ಲಿ ಸಮಾನ ಹಕ್ಕಿದೆ. ಆದರೆ ಈ ಹಕ್ಕು ಅಹಂಕಾರವನ್ನು ತರಬಾರದು. ಪತಿ ಅಥವಾ ಪತ್ನಿಯ ಅಂಹ ಭಾವನೆ ಆ ದಾಂಪತ್ಯ ಜೀವನವನ್ನ್ನು ಶಿಥಿಲಗೊಳಿಸುತ್ತ ಸಾಗುತ್ತದೆ. ಅಹಂ ಎಂಬುದು ಯಾರಿಗೂ ಒಳ್ಳೆಯದಲ್ಲ. ಅದರಲ್ಲೂ ಗಂಡ-ಹೆಂಡತಿಯ ನಡುವೆ ಅಹಂ ಕಾಲಿಟ್ಟರೆ ಆ ಸಂಬಂಧ ಹೆಚ್ಚು ಸಮಯ ಬಾಳಿಕೆ ಬರಲು ಸಾಧ್ಯವೇ ಇಲ್ಲ ಎಂಬುದು ಚಾಣಕ್ಯ ನೀತಿಯ ಸ್ಪಷ್ಟ ಮಾತು.