Vastu Tips: ಮನೆಯ ಸಂತೋಷ, ಸಂಪತ್ತು ವೃದ್ಧಿಯಾಗಬೇಕಾ? ಅರಿಶಿನವನ್ನು ಹೀಗೆ ಬಳಸಿ
ವಾಸ್ತು ದೋಷ, ಹಣಕಾಸಿನ ಸಮಸ್ಯೆ, ಗುರುದೋಷ ಸಮಸ್ಯೆ ನಿವಾರಣೆಗೆ ಅರಿಶಿನದಿಂದ ಪರಿಹಾರ ದೊರೆಯಲಿದೆ. ವಾಸ್ತು ಶಾಸ್ತ್ರದ ಪ್ರಕಾರ ಅರಿಶಿನವನ್ನು ಮನೆಯಲ್ಲಿ ಸೂಕ್ತ ರೀತಿಯಲ್ಲಿ ಬಳಸಿದರೆ ಸಂಪತ್ತು ಹಾಗೂ ಸಂತೋಷ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ.
ಅರಿಶಿನ -
ಬೆಂಗಳೂರು: ಶತಮಾನಗಳಿಂದ ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಬಳಸುವ ಅಮೂಲ್ಯವಾದ ವಸ್ತುಗಳಲ್ಲಿ ಅರಿಶಿನವೂ ಒಂದು. ಆರೋಗ್ಯವನ್ನು ಹೆಚ್ಚಿಸುವ ಸಾಮರ್ಥ್ಯವಿರುವ ಅರಿಶಿನ (Turmeric) ಭಾರತೀಯ ಮಸಾಲೆಗಳ ಪೈಕಿ ಪ್ರಮುಖವಾದುದು. ಇದು ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದ್ದು, ನೈಸರ್ಗಿಕ ನಂಜುನಿರೋಧಕ ಗುಣವನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಅರಿಶಿನವು ಭಾರತೀಯ ಸಂಪ್ರದಾಯದಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ. ಆಹಾರ ತಯಾರಿಕೆಯಿಂದ ಹಿಡಿದು, ಪೂಜಾ ಕಾರ್ಯಗಳಲ್ಲಿ ಹಾಗೂ ವಿವಾಹ ಸಮಾರಂಭಗಳಲ್ಲಿ ಅರಿಶಿನದ ಬಳಕೆ ಕಡ್ಡಾಯ. ಇಷ್ಟೆಲ್ಲ ಪ್ರಾಮುಖ್ಯತೆಯನ್ನು ಪಡೆದಿರುವ ಅರಿಶಿನಕ್ಕೆ ವಾಸ್ತು ಶಾಸ್ತ್ರದಲ್ಲಿಯೂ(Vastu Shastra) ವಿಶೇಷ ಸ್ಥಾನವಿದೆ. ಅದರ ಪ್ರಕಾರ ಅರಿಶಿನವು ಗುರು ಗ್ರಹದ ಸಕಾರಾತ್ಮಕ ಶಕ್ತಿಯನ್ನು ಹೊಂದಿದೆ. ಇದನ್ನು ಸೂಕ್ತವಾಗಿ ಬಳಸಿದರೆ, ಕೆಲವು ವಾಸ್ತು ದೋಷ, ಹಣಕಾಸು ಮತ್ತು ಗುರುದೋಷಕ್ಕೆ ಪರಿಹಾರ ಸಿಗಲಿದೆ.
ಹೌದು, ಹಿಂದೂ ಸಂಪ್ರದಾಯ ಮತ್ತು ಜ್ಯೋತಿಷ್ಯದಲ್ಲಿ ಅರಿಶಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪುರಾತನ ಕಾಲದಿಂದಲ್ಲೂ ಆರೋಗ್ಯ, ಶಾಂತಿ ಮತ್ತು ಆರ್ಥಿಕ ಸುಸ್ಥಿರತೆಗಾಗಿ ಇದರ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಜ್ಯೋತಿಷ್ಯ ತಜ್ಞರ ಪ್ರಕಾರ, ವಾಸ್ತು ನಿಯಮದಂತೆ ಅರಿಶಿನವನ್ನು ಬಳಸುವುದರಿಂದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗಲಿದೆ. ಮನೆಯಲ್ಲಿ ಸುಖ- ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಗಳ ವೃದ್ಧಿ ಆಗಲಿದೆ. ಅಲ್ಲದೆ ಅನೇಕ ರೀತಿಯ ಸಮಸ್ಯೆಗಳಿಗೆ ಅರಿಶಿನ ಪರಿಹಾರ ನೀಡಲಿದೆ. ಜೀವನದಲ್ಲಿ ನಾನಾ ಶುಭಫಲ ನೀಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಸೂರ್ಯ ಮುಳುಗಿದ ನಂತರ ಮಾಡುವ ಈ ಕೆಲಸಗಳು ನಿಮ್ಮ ಮನೆಗೆ ದಾರಿದ್ರ್ಯ ತರಲಿವೆ
ಹಾಗಾದ್ರೆ ಮನೆಯ ಸಂತೋಷ- ಸಂಪತ್ತು ವೃದ್ಧಿಯಾಗಬೇಕಾದ್ರೆ ಅರಿಶಿಣವನ್ನು ಹೇಗೆ ಬಳಸಬೇಕು? ಅರಿಶಿನದ ಕುರಿತು ವಾಸ್ತುಶಾಸ್ತ್ರದಲ್ಲಿ ಹೇಳಲಾದ ಪರಿಹಾರ ಕ್ರಮಗಳೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ದೇವರ ಮನೆಯಲ್ಲಿ ಅರಿಶಿನವನ್ನು ಇರಿಸುವುದು ಶುಭಕರವೆಂದು ವಾಸ್ತು ಶಾಸ್ತ್ರ ಹೇಳಿದ್ದು, ವಿಶೇಷವಾಗಿ, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಒಂದು ರೂಪಾಯಿಯ ನಾಣ್ಯವನ್ನು ಐದು ಅರಿಶಿನದ ಕೊಂಬು ಅಥವಾ ತುಂಡುಗಳೊಂದಿಗೆ ಹಳದಿ ಬಟ್ಟೆಯಲ್ಲಿ ಕಟ್ಟಿಕೊಂಡು, ಅದನ್ನು ದೇವರ ಸಾನ್ನಿಧ್ಯವಿರುವ ಪೂಜಾ ಸ್ಥಳದಲ್ಲಿ ಇಡುವುದು ಒಳ್ಳೆಯದು ಎಂಬ ನಂಬಿಕೆ ಇದೆ. ಈ ಪರಿಹಾರ ಕ್ರಮವು ಮನೆಯಲ್ಲಿ ಹಣಕಾಸಿನ ಸಮಸ್ಯೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಲಕ್ಷ್ಮೀ ದೇವಿಯ ಅನುಗ್ರಹ ದೊರೆತು ಮನೆಯ ಸಂಪತ್ತು ವೃದ್ಧಿಯಾಗುತ್ತದೆ.
ಇದೇ ರೀತಿ, ಜಾತಕದಲ್ಲಿ ಗುರುದೋಷ ಇರುವವರಿಗೆ ವಿಷ್ಣುವಿಗೆ ಅರಿಶಿನ ಉಂಡೆಗಳನ್ನು ಅರ್ಪಿಸುವುದು ಅತ್ಯಂತ ಶುಭವೆಂದು ವಾಸ್ತು ಶಾಸ್ತ್ರ ಸೂಚಿಸಿದ್ದು, ಇದು ಗುರುಗ್ರಹದ ಕೋಪವನ್ನು ಶಮನಗೊಳಿಸಿ, ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸುತ್ತದೆ ಎನ್ನಲಾಗುತ್ತದೆ.
ಇದರೊಂದಿಗೆ ಅರಿಶಿನ ಗಿಡಗಳನ್ನು ಮನೆಯಲ್ಲಿ ನೆಡುವುದರಿಂದ ಶುಭಫಲಗಳು ದೊರೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದ್ದು, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಇದು ಹೆಚ್ಚಿಸಲಿದೆ. ಜತೆಗೆ ಮನೆಯ ಸದಸ್ಯರ ಸಂಬಂಧವೂ ಗಟ್ಟಿಯಾಗಲಿದ್ದು, ಕೌಟುಂಬಿಕ ಕಲಹ-ಮನಸ್ತಾಪಗಳಿಗೆ ಇದು ಕಡಿವಾಣ ಹಾಕಲಿದೆ.