ನವದೆಹಲಿ: ಚಾಣಕ್ಯ ನೀತಿ (Chanakya Niti) ಎಂಬುದು ಸಾರ್ವಕಾಲಿಕ ಮತ್ತು ಸರ್ವರಿಗೂ ಸಲ್ಲುವ ಒಂದು ಮಹತ್ವದ ಅಂಶವಾಗಿದೆ. ಶತ-ಶತಮಾನಗಳಿಗೂ ಹಿಂದೆ ಆಚಾರ್ಯ ಚಾಣಕ್ಯರು ಹೇಳಿರುವ ನೀತಿ ಮಾರ್ಗಗಳು ಇಂದಿಗೂ ಪ್ರಸ್ತುತವಾಗಿರುವುದಕ್ಕೆ ಅದರಲ್ಲಿರುವ ಸತ್ಯಾಂಶಗಳೇ ಕಾರಣವೆಂದರೆ ತಪ್ಪಾಗಲಾರದು. ನೀವು ಯಶಸ್ವಿ ಮತ್ತು ಸಂತೋಷದ ಜೀವನವನ್ನು ಹೇಗೆ ನಡೆಸಹುದೆಂಬ ಮಾಹಿತಿಯನ್ನು ಚಾಣಕ್ಯ ನೀತಿ ನಮಗೆ ಕೊಡುತ್ತದೆ.
ಇನ್ನು, ಚಾಣಕ್ಯ ನೀತಿಯ ಪ್ರಕಾರ, ನಾವು ಕೆಲವೊಂದು ವಿಚಾರಗಳನ್ನು ನಾವು ಯಾವತ್ತೂ ರಹಸ್ಯವಾಗಿಟ್ಟುಕೊಳ್ಳಬೇಕು.ಇದರಿಂದ ಮುಂದೊಂದು ದಿನ ನಮಗೆ ಪ್ರಯೋಜನವಾಗಲಿದೆ. ಹಾಗಾದ್ರೆ ನಾವು ನಮ್ಮ ಜೀವನದಲ್ಲಿ ಯಾವೆಲ್ಲಾ ವಿಚಾರಗಳನ್ನು ರಹಸ್ಯವಾಗಿರಿಸಿಕೊಳ್ಳಬೇಕೆಂಬ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.
ಚಾಣಕ್ಯ ನೀತಿಯ ಪ್ರಕಾರ, ನಾವು ನಮ್ಮ ಯೋಜನೆಗಳನ್ನು ಯಾವತ್ತೂ ರಹಸ್ಯವಾಗಿರಿಸಿಕೊಳ್ಳಬೇಕು. ಒಂದುವೇಳೆ ನೀವು ನಿಮ್ಮ ಯೋಜನೆಗಳ ಬಗ್ಗೆ ಇತರರಿಗೆ ಹೇಳಿದರೆ, ಅವರು ನಿಮಗಿಂತ ಮೊದಲೇ ಅದನ್ನು ಕಾರ್ಯರೂಪಕ್ಕೆ ತಂದರೆ ಆಗ ನಿಮಗೇ ತೊಂದರೆ. ಅಥವಾ ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಅಥವಾ ನಿಮ್ಮ ಯೋಜನೆಯನ್ನು ಹಾಳು ಮಾಡಲು ಪ್ರಯತ್ನಿಸಬಹುದು.
ಚಾಣಕ್ಯ ನೀತಿಯ ಪ್ರಕಾರ, ನಾವು ನಮ್ಮ ದೌರ್ಬಲ್ಯಗಳನ್ನು ಯಾವಾಗಲೂ ಇತರಿಗೆ ಹೇಳಬಾರದು. ಅವರು ನಿಮಗೆ ಎಷ್ಟೇ ಆಪ್ತರಾದರೂ ಸರಿ, ಅವರಿಂದ ಇಂತಹ ವಿಚಾರಗಳನ್ನು ಸಾಧ್ಯವಾದಷ್ಟು ರಹಸ್ಯವಾಗಿಡಿ. ನಿಮ್ಮ ದೌರ್ಬಲ್ಯಗಳನ್ನು ನೀವು ಇತರರಿಗೆ ಹೇಳಿದರೆ, ಅವರು ಅದರ ಲಾಭವನ್ನು ಪಡೆದುಕೊಳ್ಳಬಹುದು. ಹಾಗೂ ನಿಮ್ಮ ದೌರ್ಬಲ್ಯಗಳೇ ಅವರಿಗೆ ವರವಾಗಬಹುದು.
ಚಾಣಕ್ಯ ನೀತಿಯ ಪ್ರಕಾರ, ನಾವು ನಮ್ಮ ತಪ್ಪುಗಳನ್ನು ಇತರರಿಂದ ಮರೆಮಾಡಬೇಕು. ನಮ್ಮ ತಪ್ಪುಗಳ ಬಗ್ಗೆ ನಾವು ಇತರರಿಗೆ ಹೇಳಿದರೆ, ಅವರು ನಮ್ಮನ್ನು ಟೀಕಿಸಬಹುದು ಮತ್ತು ನಮ್ಮನ್ನು ಹತಾಶಗೊಳಿಸಬಹುದು.
Vastu Tips: ಮನೆಯಲ್ಲಿ ಯಾವ ರೀತಿಯ ಲಕ್ಷ್ಮೀ ದೇವಿಯ ಈ ಫೋಟೊ ಇಡಬೇಕು? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
ಇನ್ನೊಂದು ಪ್ರಮುಖ ಅಂಶವೆಂದರೆ ನಾವೆಂದೂ ನಮ್ಮ ಆದಾಯದ ಮೂಲ ಅಥವಾ ಆದಾಯದ ವಿವರವನ್ನು ಇನ್ನೊಬ್ಬರಿಗೆ ಬಿಟ್ಟುಕೊಡಬಾರದು. ನಮ್ಮ ಆದಾಯದ ಬಗ್ಗೆ ಇತರರಿಗೆ ಮಾಹಿತಿ ನೀಡಿದರೆ ಅದು ಸಾಲ ಕೇಳಲು ದಾರಿಯಾಗಬಹುದು ಅಥವಾ ನಮ್ಮ ಆದಾಯದ ಮಾಹಿತಿ ತಿಳಿದು ಅವರು ಕರುಬಬಹುದು.
ಚಾಣಕ್ಯ ನೀತಿಯ ಪ್ರಕಾರ, ನಾವು ನಮ್ಮ ಹೆಂಡತಿಯೊಂದಿಗೆ ಜಗಳವಾಡುವುದನ್ನು ಇತರರಿಂದ ರಹಸ್ಯವಾಗಿಡಬೇಕು. ಗಂಡ-ಹೆಂಡಿರ ಜಗಳದಲ್ಲಿ ಮೂರನೆಯವರ ಹಸ್ತಕ್ಷೇಪ, ಆ ಕುಟುಂಬದ ಒಡಕಿಗೆ ಕಾರಣವಾಗಿ, ನೆಮ್ಮದಿಗೆ ಭಂಗ ತರಬಹುದು.
ಚಾಣಕ್ಯ ನೀತಿಯ ಪ್ರಕಾರ, ನಾವು ಮಾಡುವ ದಾನದ ಬಗ್ಗೆ ನಾವು ಯಾರಲ್ಲೂ ಹೇಳಿಕೊಳ್ಳಬಾರದು. ನಾವು ಮಾಡುವ ದಾನದ ಬಗ್ಗೆ ಇತರರಿಗೆ ಹೇಳಿದರೆ, ಅವರು ನಮ್ಮಿಂದ ಸಾಲ ಪಡೆದುಕೊಳ್ಳಲು ಪ್ರಯತ್ನಿಸಬಹುದು ಮಾತ್ರವಲ್ಲದೇ ನಮ್ಮ ಉದ್ದೇಶವನ್ನು ಅವರು ಟೀಕಿಸಬಹುದು. ಧಾರ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ ನಾವು ಒಂದು ಕೈಯಿಂದ ಮಾಡಿದ ದಾನ ಇನ್ನೊಂದು ಕೈಗೆ ತಿಳಿಯದಂತಿರಬೇಕು. ಆಗ ಮಾತ್ರ ನಾವು ಮಾಡಿದ ದಾನದ ಫಲ ನಮಗೆ ಸಿಗುತ್ತದೆ.
ಇನ್ನೊಂದು ಪ್ರಮುಖ ವಿಚಾರವೆಂದರೆ, ನಾವು ನಮ್ಮ ಸಮಸ್ಯೆಗಳನ್ನು ಇತರರಿಂದ ಮರೆಮಾಡಬೇಕು. ನಮ್ಮ ಸಮಸ್ಯೆಗಳನ್ನು ನಾವು ಹಂಚಿಕೊಂಡರೆ, ಅವರು ನಮ್ಮ ಬಗ್ಗೆ ಚಿಂತಿಸಬಹುದು ಮತ್ತು ನಮ್ಮನ್ನು ಆಡಿಕೊಳ್ಳಬಹುದು.
ಚಾಣಕ್ಯ ನೀತಿಯ ಪ್ರಕಾರ, ನಾವು ನಮ್ಮ ಯಶಸ್ಸನ್ನು ಇತರರಿಂದ ಮರೆಮಾಡಬೇಕು. ನಿಮ್ಮ ಯಶಸ್ಸಿನ ಬಗ್ಗೆ ನೀವು ಇತರರಿಗೆ ಹೇಳಿದರೆ, ಅವರು ನಿಮ್ಮ ಬಗ್ಗೆ ಅಸೂಯೆ ಹೊಂದಬಹುದು ಮತ್ತು ನಿಮ್ಮ ವಿರುದ್ಧ ಪಿತೂರಿ ಮಾಡುವ ಮೂಲಕ ನೀವು ಯಶಸ್ಸನ್ನು ಸಾಧಿಸದಂತೆ ಮಾಡಬಹುದು.
ಚಾಣಕ್ಯ ನೀತಿಯ ಪ್ರಕಾರ, ನಾವು ನಮ್ಮ ಶತ್ರುಗಳ ಮಾಹಿತಿಯನ್ನು ಯಾರಿಗೂ ಹೇಳಬಾರದು. ಹೀಗೆ ಮಾಡುವುದರಿಂದ ಶತ್ರುಗಳು ನಮ್ಮ ಬಗ್ಗೆ ಎಚ್ಚರ ತಾಳುವ ಸಾಧ್ಯತೆಗಳಿರುತ್ತವೆ. ಅಥವಾ ನಮ್ಮ ಶತ್ರುಗಳೆಲ್ಲರೂ ಒಂದಾಗಿ ನಮ್ಮ ವಿರುದ್ಧ ಕತ್ತಿ ಮಸೆಯುವ ಸಾಧ್ಯತೆಗಳಿರುತ್ತವೆ.