ನವದೆಹಲಿ: ಬೇಸಿಗೆಯಲ್ಲಿ ನಮ್ಮ ವಸ್ತ್ರಗಳು ಮಾತ್ರವೇ ಬದಲಾಗುವುದಲ್ಲ, ನಮ್ಮ ಶರೀರವನ್ನು ಬೇರ್ಪಡಿಸಲಾಗದ ವಸ್ತ್ರದಂತೆ ಸುತ್ತಿಕೊಂಡಿರುವ ಚರ್ಮವೂ ಬದಲಾಗುತ್ತದೆ. ಬೇಸಿಗೆಯಲ್ಲಿನ ಅತಿಯಾದ ಬೆವರು, ಸೆಕೆ, ತೇವದಂಥ ವಾತಾವರಣದಿಂದ ನಮ್ಮ ತ್ವಚೆಯೂ ಕಿರಿಕಿರಿಯನ್ನು ಅನುಭವಿಸುತ್ತದೆ. ಅದರಲ್ಲೂ ತಲೆಯ ಚರ್ಮ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುವುದನ್ನು ಕಾಣಬಹುದು. ತಲೆಯಲ್ಲಿನ ಎಣ್ಣೆ, ಜಿಡ್ಡು, ಬೆವರು, ಧೂಳು, ಬಿಸಿಲು, ಮಾಲಿನ್ಯಗಳೆಲ್ಲ ಸೇರಿ ಕೂದಲ ಬುಡವನ್ನು ತೊಂದರೆಗೆ ತಳ್ಳುತ್ತವೆ. ಇಂಥ ದಿನಗಳಲ್ಲಿ ಕೆಲವೊಮ್ಮೆ ನವೆ, ತಲೆಹೊಟ್ಟಿನ ತಲೆಹರಟೆಯೂ ಪ್ರಾರಂಭವಾಗಿ, ಕೂದಲು ವಿಪರೀತ ಎನ್ನುವಷ್ಟು ಉದುರಲು ಆರಂಭಿಸುತ್ತದೆ. ಹಾಗಾದರೆ ಬೇಸಿಗೆಯ ದಿನಗಳಲ್ಲಿ ಕಾಡುವ ತಲೆಹೊಟ್ಟನ್ನು (Dandruff) ನಿಯಂತ್ರಿಸುವುದು ಹೇಗೆ?
ಬೇಸಿಗೆಯಲ್ಲೇ ಏಕೆ?: ಬಿಸಿಲಿಗೆ ಹೊರಗೆ ಹೋಗುವಾಗ ತಾಪದಿಂದ ರಕ್ಷಿಸಿಕೊಳ್ಳುವ ಉದ್ದೇಶದಿಂದ ತಲೆಗೆ ಸ್ಕಾರ್ಫ್, ಟೋಪಿ ಇತ್ಯಾದಿಗಳನ್ನು ಹಾಕುವುದು ಮಾಮೂಲಿ. ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಹಾಕುವುದು ಅನಿವಾರ್ಯ. ಆದರೆ ಇಂಥ ಎಲ್ಲವೂ ತಲೆಗೂದಲ ಬುಡದಲ್ಲಿನ ತಾಪ ಮತ್ತು ತೇವವನ್ನು ಹೆಚ್ಚಿಸಿ, ಕೂದಲ ಆರೋಗ್ಯಕ್ಕೆ ಮಾರಕವಾಗಬಲ್ಲವು, ತಲೆ ಚರ್ಮದ ಸೂಕ್ಷ್ಮ ಸಮತೋಲನವನ್ನು ಬುಡಮೇಲು ಮಾಡಬಲ್ಲವು. ಇದರ ಪರಿಣಾಮವೆಂದರೆ, ಕೂದಲ ಬುಡದಲ್ಲಿನ ತೈಲಸ್ರಾವ ಏರುಪೇರಾಗಿ, ಯೀಸ್ಟ್ ಸಮಸ್ಯೆ ತಲೆಗಂಟಿಕೊಂಡು, ತಲೆಹೊಟ್ಟಿನ ತೊಂದರೆಯನ್ನು ನಿಯಂತ್ರಿಸಲು ಒದ್ದಾಡುವಂತಾಗುತ್ತದೆ.
ತಲೆಹೊಟ್ಟಿಗೆ ಕಾರಣವಾಗುವ ಯೀಸ್ಟ್‌ನಂಥ ಸೂಕ್ಷ್ಮಾಣು ಜೀವಿಗಳು ವರ್ಷದ ಉಳಿದ ದಿನ ಗಳಲ್ಲೂ ನಮ್ಮ ತಲೆಯ ಚರ್ಮದಲ್ಲಿ ಇರಲು ಸಾಧ್ಯವಿದೆ. ಆದರೆ ಅದು ಅತಿಯಾಗಿ ಬೆಳೆಯುವುದಕ್ಕೆ ಅವಕಾಶವಾಗುವಂಥ ವಾತಾವರಣ ಇರುವುದಿಲ್ಲವಷ್ಟೆ. ಬೇಸಿಗೆಯಲ್ಲಿ ತಲೆಗೂದಲ ಬುಡದಲ್ಲಿ ಹೆಚ್ಚಾಗುವ ತಾಪ ಮತ್ತು ತೇವದಿಂದಾಗಿ ಸೇಬಂ ಉತ್ಪಾದನೆ ಹೆಚ್ಚುತ್ತದೆ. ಕೂದಲೆಲ್ಲ ಅಂಟಂಟಾಗಿ ಯೀಸ್ಟ್ ಬೆಳವಣಿಗೆ ಹೆಚ್ಚುವುದಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ತಲೆಯ ಚರ್ಮದ ಕಿರಿಕಿರಿ ಹೆಚ್ಚಿ, ನವೆ ಪ್ರಾರಂಭವಾಗಿ ಹೊಟ್ಟಿನಂತಹ ಚರ್ಮ ಉದುರಲು ಆರಂಭಿಸುತ್ತದೆ.
ಏನು ಮಾಡಬೇಕು?: ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಬೆಲೆಯ ಹೊಟ್ಟು ನಿರೋಧಕ ಶಾಂಪೂಗಳು ತಾತ್ಕಾಲಿಕ ಪರಿಹಾರವನ್ನಷ್ಟೇ ಒದಗಿಸಬಲ್ಲವು. ಬದಲಿಗೆ, ತಲೆಯಲ್ಲಿ ಯೂಸ್ಟ್‌ನಂತಹ ಸೂಕ್ಷ್ಮಾಣುಗಳು ಬೆಳೆಯದಂತೆ ನಿಯಂತ್ರಿಸುವ ಚಿಕಿತ್ಸೆಯ ಅಗತ್ಯ ಬರಬಹುದು. ಇದಕ್ಕಾಗಿ ಚರ್ಮ ವೈದ್ಯರ ನೆರವೂ ಬೇಕಾಗಬಹುದು. ಮಾತ್ರವಲ್ಲ, ಅತಿಯಾಗಿ ಜಿಡ್ಡಿರುವಂಥ ತೈಲಗಳ ಬದಲು, ಲಘುವಾಗಿದ್ದೂ ಪೋಷಣೆ ನೀಡುವಂಥ ಎಣ್ಣೆಗಳನ್ನು ಕೂದಲಿಗೆ ಬಳಸುವುದು ಸೂಕ್ತ. ಇದರ ಜೊತೆಗೆ, ನಿತ್ಯದ ಕೆಲವು ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ದೀರ್ಘಕಾಲೀನ ಪರಿಣಾಮವನ್ನು ಕಾಣಬಹುದು.
Health Tips: ಅರಿಶಿನದ ಹಾಲಿನ ಸೇವನೆ: ಅತಿಯಾದರೆ ಅಮೃತವೂ ವಿಷ; ಈ ಆರೋಗ್ಯ ಸಮಸ್ಯೆ ಇರುವವರು ಎಚ್ಚರ!
ಅತಿಯಾಗಿ ಬೆವರುವ ಸಂದರ್ಭಗಳಲ್ಲಿ ತಲೆಸ್ನಾನ ಮಾಡಿ, ಕೂದಲ ಬುಡವನ್ನು ಸ್ವಚ್ಛವಾಗಿರಿಸಿ. ಬಳಸುವ ಬಾಚಣಿಕೆ, ಸ್ಕಾರ್ಫ್, ಟೋಪಿಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ. ಹೆಲ್ಮೆಟ್ ಹಾಕುವಾಗ ಗಾಳಿಯಾಡುವಂಥ ಸ್ವಚ್ಛ ವಸ್ತ್ರವನ್ನು ಮೊದಲು ಧರಿಸಿ, ನಂತರ ಹೆಲ್ಮೆಟ್ ಹಾಕಿ. ಕೂದಲನ್ನು ಕಟ್ಟಿಕೊಳ್ಳುವ ಮೊದಲು, ಅವುಗಳಲ್ಲಿ ತೇವ ಇಲ್ಲದಂತೆ ಒಣಗಿಸಿಕೊಳ್ಳಿ. ಸಾಕಷ್ಟು ನೀರು ಕುಡಿಯುವುದು ಸಹ ಚರ್ಮದ ಆರೋಗ್ಯ ಕಾಪಾಡುವಲ್ಲಿ ನೆರವಾಗುತ್ತದೆ. ಇಂಥ ಎಲ್ಲ ಸಣ್ಣ ಬದಲಾವಣೆಗಳು ತಲೆಗೂದಲ ಬುಡದಲ್ಲಿನ ಸೂಕ್ಷ್ಮಾಣುಗಳ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ.
ತಲೆಹೊಟ್ಟಿನ ಸಮಸ್ಯೆ ಎನ್ನುವುದು ಸಾಮಾನ್ಯವಾಗಿ ಸರ್ವರೂ ಗ್ರಹಿಸುವಂತೆ ಅಂದ-ಚಂದಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ತಲೆಯ ಚರ್ಮದ ಆರೋಗ್ಯ ಸರಿಯಿಲ್ಲ, ಅಲ್ಲಿನ ಸೂಕ್ಷ್ಮಾಣುಗಳ ಸಮತೋಲನ ತಪ್ಪಿದೆ ಎನ್ನುವುದನ್ನು ಸೂಚಿಸುವ ಸಮಸ್ಯೆ. ಹಾಗಾಗಿ ದುಬಾರಿ ಬೆಲೆಯ ಶಾಂಪೂಗಳ ಮೊರೆ ಹೋಗುವುದಕ್ಕೆ ಬದಲು, ನಿತ್ಯದ ಬದುಕಿನಲ್ಲಿ ಕೆಲವು ಸುಸ್ಥಿರವಾದ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.