ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಈ ಟಿಪ್ಸ್‌ ಫಾಲೋ ಮಾಡಿದರೆ ನಿಮ್ಮ ಫ್ರಿಜ್‌ನ ದುರ್ವಾಸನೆ ಮಾಯವಾಗುತ್ತೆ

Fridge cleaning: ಈಗಾಗಲೇ ತುಂಬಿ ತುಳುಕುತ್ತಿರುವಂಥ ಫ್ರಿಜ್‌ ಸ್ವಚ್ಛ ಮಾಡುವ ಕೆಲಸ ಸಾಧ್ಯವಿಲ್ಲ ಎನಿಸುತ್ತದೆ. ಹಾಗೆಂದು ಈ ಕೆಲಸವನ್ನು ಮುಂದೂಡಲೂ ಸಾಧ್ಯವಿಲ್ಲ. ಆದರೆ ಈಗೆರಡು ವಾರಗಳ ಹಿಂದಷ್ಟೇ ಸ್ವಚ್ಛ ಮಾಡಿದ್ದರೂ ಫ್ರಿಜ್‌ನ ಅವಸ್ಥೆ ಕಂಡು ಬೇಸರವಾಗುತ್ತದೆ. ಈಗ ಸ್ವಚ್ಛ ಮಾಡಿದರೂ ಮತ್ತೆ ಹೀಗಾಗದಂತೆ ಕಾಪಾಡಿಕೊಳ್ಳುವುದು ಹೇಗೆ? ಬರುವ ಬೇಸಗೆಯಲ್ಲಿ ಅತಿಯಾಗಿ ಬಳಕೆಯಾಗುವ ಈ ಉಪಕರಣದ ಸ್ವಚ್ಛತೆ ನಿರ್ವಹಿಸುವುದು ಹೇಗೆ? ಅದಕ್ಕೆಲ್ಲ ಇಲ್ಲಿದೆ ಕೆಲವು ಸರಳ ಪರಿಹಾರಗಳು.

ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ. 10: ನಿಮ್ಮ ಫ್ರಿಜ್‌ನ ಬಾಗಿಲು ತೆರೆಯುತ್ತೀರಿ. ಏನೋ ಕಮಟು ವಾಸನೆ… ಯಾವುದೋ ಪ್ರಾಣಿ ಸತ್ತಂತೆ, ತರಕಾರಿ ಕೊಳೆತಂತೆ, ಅಡುಗೆ ಹಳಸಿದಂತೆ… ಯಾವುದೆಂದು ಹೇಳಲಾಗದಂಥ ಏನೋ ಕೊಳಕು ವಾಸನೆ. ಈಗಾಗಲೇ ತುಂಬಿ ತುಳುಕುತ್ತಿರುವಂಥ ಫ್ರಿಜ್‌ ಸ್ವಚ್ಛ ಮಾಡುವ ಕೆಲಸ ಇವತ್ತಂತೂ ಸಾಧ್ಯವಿಲ್ಲ ಎನಿಸುತ್ತದೆ. ಹಾಗೆಂದು ಈ ಕೆಲಸವನ್ನು ಮುಂದೂಡಲೂ ಸಾಧ್ಯವಿಲ್ಲ. ಆದರೆ ಈಗೆರಡು ವಾರಗಳ ಹಿಂದಷ್ಟೇ ಸ್ವಚ್ಛ ಮಾಡಿದ್ದರೂ ಫ್ರಿಜ್‌ನ (Fridge cleaning) ಅವಸ್ಥೆ ಕಂಡು ಬೇಸರವಾಗುತ್ತದೆ. ಈಗ ಸ್ವಚ್ಛ ಮಾಡಿದರೂ ಮತ್ತೆ ಹೀಗಾಗದಂತೆ ಕಾಪಾಡಿಕೊಳ್ಳುವುದು ಹೇಗೆ? ಬರುವ ಬೇಸಗೆಯಲ್ಲಿ ಅತಿಯಾಗಿ ಬಳಕೆಯಾಗುವ ಈ ಉಪಕರಣದ ಸ್ವಚ್ಛತೆ ನಿರ್ವಹಿಸುವುದು ಹೇಗೆ? ಅದಕ್ಕೆಲ್ಲ ಇಲ್ಲಿವೆ ಕೆಲವು ಸರಳ ಪರಿಹಾರಗಳು.

ಪರಿಶೀಲಿಸಿ: ಮೊದಲಿಗೆ ಮಾಡಬೇಕಾದ ಕೆಲಸವೆಂದರೆ, ಫ್ರಿಜ್‌ ಎಂಬುದು ತಂಗಳು ಪೆಟ್ಟಿಗೆಯಾಗಿದೆಯಾ ಎಂಬುದನ್ನು ಪರಿಶೀಲಿಸಿ. ಅಂದರೆ ನಾಲ್ಕಾರು ದಿನಗಳ ಹಿಂದಿನ ಆಹಾರಗಳನ್ನೆಲ್ಲ ಪೇರಿಸಿಟ್ಟುಕೊಂಡಿದ್ದರೆ, ಅವುಗಳ ಅವಧಿ ಮುಗಿದಿರಬಹುದು… ತೆಗೆದು ಹೊರಹಾಕಿ. ಕವರ್‌ನಲ್ಲಿ ಇರಿಸಿದ್ದ ಕೊತ್ತಂಬರಿ ಸೊಪ್ಪು ಕೊಳೆತಿದ್ದರೆ ಅಥವಾ ಇನ್ನಾವುದಾದರೂ ಹಣ್ಣು-ತರಕಾರಿಗಳು ನೀರೊಡೆಯುತ್ತಿದ್ದರೆ ತೆಗೆದು ಬಿಸಾಡಿ. ಹೀಗೆ ಎಸೆಯಬೇಕಾದ ಯಾವುದನ್ನಾದರೂ ಫ್ರಿಜ್‌ನಲ್ಲಿರಿಸಿ ಮರೆತಿದ್ದೀರಾ ಎಂಬುದನ್ನು ಮೊದಲು ಪರಿಶೀಲಿಸಿ.

ಮರೆಯಬೇಡಿ: ಫ್ರಿಜ್‌ನಲ್ಲಿ ಯಾವುದೇ ಉಳಿಕೆ ಆಹಾರಗಳನ್ನು ಸರಿಯಾದ ಏರ್‌ಟೈಟ್‌ ಅಥವಾ ಗಾಳಿಯಾಡದ ಡಬ್ಬಿಗಳಲ್ಲಿ ಇರಿಸುವುದನ್ನು ಮರೆಯಬೇಡಿ. ಸಡಿಲವಾದ ಮುಚ್ಚಳಗಳಿರುವಂಥ ಪಾತ್ರೆಗಳಲ್ಲಿ ಉಳಿಕೆ ಆಹಾರಗಳನ್ನು ಇರಿಸುವುದು ಫ್ರಿಜ್‌ನ ವಾತಾವರಣವನ್ನು ಬಲು ಬೇಗ ಹದಗೆಡಿಸುತ್ತದೆ. ಆಹಾರದ ಆಯಸ್ಸನ್ನೂ ಕ್ಷೀಣಿಸುತ್ತದೆ. ನಿನ್ನೆಯ ಮೂಲಂಗಿ ಸಾಂಬಾರ್‌, ಬೆಳಗಿನ ಪುದೀನಾ ಚಟ್ನಿ, ಕಾಫಿ ಡಿಕಾಕ್ಷನ್‌, ಅರ್ಧ ಕತ್ತರಿಸಿದ ಹಣ್ಣುಗಳು… ಇಂಥ ಗಾಢವಾದ ಪರಿಮಳದ ಆಹಾರಗಳನ್ನು ಗಾಳಿಯಾಡದ ಡಬ್ಬಿಗಳಲ್ಲಿ ಇರಿಸದಿದ್ದರೆ ಫ್ರಿಜ್‌ನೊಳಗೆಲ್ಲಾ ಕಮಟು ವಾಸನೆ ತುಂಬಿಕೊಳ್ಳುವುದು ನಿಶ್ಚಿತ. ಈ ಬಗ್ಗೆ ಎಚ್ಚರವಹಿಸಿ.

ಇಲ್ಲಿವೆ ಪರಿಹಾರಗಳು: ಸ್ವಚ್ಛತೆ ನಿರ್ವಹಿಸುವ ಕೆಲಸದ ಜತೆಗೆ, ಫ್ರಿಜ್‌ನೊಳಗೆ ಕೆಲವು ಸರಳವಾದ ವಸ್ತುಗಳನ್ನು ಇರಿಸುವುದು ಸಹ ಬೇಡದ ವಾಸನೆಯನ್ನು ದೂರ ಮಾಡಲು ಸಹಾಯ ಮಾಡುತ್ತವೆ. ಮೊದಲಿಗೆ ತಾಜಾ ನಿಂಬೆ ಹಣ್ಣನ್ನು ಆರೆಂಟು ಹೋಳುಗಳಾಗಿ ಕತ್ತರಿಸಿ ಫ್ರಿಜ್‌ನ ಮೂಲೆಗಳಲ್ಲಿ ಇರಿಸಿ. ಬೇಡದ ವಾಸನೆಗಳನ್ನು ಈ ನಿಂಬೆಯ ಹಣ್ಣುಗಳನ್ನು ಹೀರಿಕೊಳ್ಳುವುದೇ ಅಲ್ಲದೆ, ತಾಜಾ ಪರಿಮಳವನ್ನೂ ಹರಡುತ್ತದೆ. ಒಂದೆರಡು ದಿನಗಳ ಬಳಿಕ ಈ ಹೋಳುಗಳನ್ನು ಬದಲಿಸಿ.

ಅರಿಶಿನದ ಹಾಲಿನ ಸೇವನೆ: ಈ ಆರೋಗ್ಯ ಸಮಸ್ಯೆ ಇರುವವರು ಎಚ್ಚರ!

ಬೇಕಿಂಗ್‌ ಸೋಡಾ: ಸಾಮಾನ್ಯವಾಗಿ ಬಹುತೇಕ ಅಡುಗೆಮನೆಗಳಲ್ಲಿ ಇರಬಹುದಾದ ಲಘುವಾದ ಈ ರಾಸಾಯನಿಕವು ಸ್ವಚ್ಛತೆಯ ವಿಷಯದಲ್ಲಿ ಬಹಳ ಉಪಕಾರಿ. ಒಂದೊಮ್ಮೆ ಯಾವುದಾದರೂ ತರಕಾರಿಗಳು ಕೊಳೆತು ಅಥವಾ ಆಹಾರ ಚೆಲ್ಲಿ ಫ್ರಿಜ್‌ನೊಳಗೆ ಕಲೆಯಾಗಿದ್ದರೆ, ಅದನ್ನು ಸ್ವಚ್ಛ ಮಾಡುವಾಗ ಬೇಕಿಂಗ್‌ ಸೋಡಾ ಬಳಸಬಹುದು. ಮಾತ್ರವಲ್ಲ, ಚಿಕ್ಕದೊಂದು ಬೌಲ್‌ನಲ್ಲಿ ಕೊಂಚ ಸೋಡಾ ಹಾಕಿ ಫ್ರಿಜ್‌ನ ಮೂಲೆಯಲ್ಲಿ ಒಂದೆರಡು ದಿನಗಳ ಕಾಲ ಇರಿಸಿದರೆ, ಬೇಡದ ವಾಸನೆಯೆಲ್ಲಾ ದೂರಾಗುತ್ತದೆ.

ಕಾಫಿ ಪುಡಿ: ಹೌದು, ಇದರದ್ದೇ ತೀಕ್ಷ್ಣವಾದ ಪರಿಮಳವಿದೆ ಎನ್ನುವುದು ನಿಜ. ಆದರೆ ಇತರ ವಾಸನೆಗಳನ್ನೂ ಕಾಫಿ ಪುಡಿ ಹೀರಿಕೊಳ್ಳಬಲ್ಲದು. ಹಾಗಾಗಿ ಅಲ್ಪ ಪ್ರಮಾಣದ ಕಾಫಿ ಪುಡಿಯನ್ನು ಸಣ್ಣ ಕಟೋರಿಯಲ್ಲಿ ಹಾಕಿ, ಫ್ರಿಜ್‌ನ ಮೂಲೆಯಲ್ಲಿಡಿ. ಒಳಗಿನ ಬೇಡದ ವಾಸನೆಯನ್ನೆಲ್ಲ ಇದು ಹೀರಿಕೊಂಡು ತಾಜಾ ಪರಿಮಳ ನೀಡಬಲ್ಲದು. ಆದರೆ ಇದನ್ನು ಒಂದೆರಡು ದಿನಗಳ ಒಳಗೆ ಫ್ರಿಜ್‌ನಿಂದ ತೆಗೆಯಿರಿ. ಹಾಗಿಲ್ಲದಿದ್ದರೆ ಕಾಫಿ ವಾಸನೆಯೇ ಫ್ರಿಜ್‌ ತುಂಬಬಹುದು.

ಇದ್ದಿಲು: ಇದಂತೂ ಅಜ್ಜಿಕಾಲದ ಉಪಾಯ. ಆಗಿನ ಕಾಲದಲ್ಲಿ ಫ್ರಿಜ್‌ ಇತ್ತೇ ಎಂದು ಕೇಳಬೇಡಿ. ಉಪಾಯ ಹಳೆಯದು ಎನ್ನುವ ಮಾತನ್ನಷ್ಟೇ ತೆಗೆದುಕೊಳ್ಳಿ. ಸಣ್ಣ ತುಂಡು ಇದ್ದಿಲೊಂದನ್ನು ಕಾಗದದಲ್ಲಿ ಕಟ್ಟಿ, ಫ್ರಿಜ್‌ನ ಮೂಲೆಯಲ್ಲಿರಿಸಿ. ಇದು ಒಳಗಿರುವ ಕಮಟು ವಾಸನೆಯನ್ನೆಲ್ಲ ಹೀರಿಕೊಳ್ಳುತ್ತದೆ. ಆದರೆ ಇಂಥ ಯಾವುದೇ ಉಪಾಯಗಳು ಫ್ರಿಜ್‌ನ ಸ್ವಚ್ಛತೆಗೆ ಪರ್ಯಾಯವಲ್ಲ ಎನ್ನುವುದನ್ನು ನೆನಪಿಡಿ.