ಬೆಂಗಳೂರು, ಡಿ. 26: ತಂತ್ರಜ್ಞಾನ ಯುಗದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು (Electranic Items) ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಟಿವಿ, ರೆಫ್ರಿಜರೇಟರ್ ಮೊದಲಾದ ವಸ್ತುಗಳನ್ನು ನಾವು ಪ್ರತಿದಿನ ಬಳಸುತ್ತೇವೆ. ಆದರೆ ಇವುಗಳನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು ಎಂಬ ವಿಚಾರವೂ ಅತ್ಯಂತ ಮಹತ್ವದ್ದು ಎಂಬುದು ಹಲವರಿಗೆ ತಿಳಿದಿಲ್ಲ. ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ವಿದ್ಯುತ್ ಉಳಿತಾಯವಾಗುವುದರ ಜತೆಗೆ ಮನೆಯ ಸಮೃದ್ಧಿ, ಸಂತೋಷ ಹಾಗೂ ಕುಟುಂಬ ಸದಸ್ಯರ ಆರೋಗ್ಯದಲ್ಲಿಯೂ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನಲಾಗುತ್ತದೆ.
ಹಾಗಾದರೆ ವಾಸ್ತು ಸಲಹೆಗಳ (Vastu Tips) ಪ್ರಕಾರ ಟಿವಿ ಮತ್ತು ಫ್ರಿಡ್ಜ್‌ಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಅದರ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ವಾಸ್ತು ಶಾಸ್ತ್ರದಂತೆ, ಟಿವಿ ಹಾಗೂ ರೆಫ್ರಿಜರೇಟರ್‌ಗಳನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡುವುದು ಅತ್ಯಂತ ಉತ್ತಮ. ಈ ದಿಕ್ಕನ್ನು ಅಗ್ನಿ ತತ್ವದ ದಿಕ್ಕು ಎಂದು ಕರೆಯಲಾಗುತ್ತದೆ. ಇಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಟ್ಟರೆ ಅವು ಬೇಗ ಹಾಳಾಗದೆ ದೀರ್ಘಕಾಲ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಜತೆಗೆ ಆ ಮನೆಯಲ್ಲಿ ಸಂತೋಷ ಮತ್ತು ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಆಗ್ನೇಯ ದಿಕ್ಕನ್ನು ಹೊರತಾಗಿ ಉತ್ತರ ದಿಕ್ಕನ್ನು ಪರ್ಯಾಯವಾಗಿ ಬಳಸಬಹುದು. ಆದರೆ ಈ ವಸ್ತುಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡುವುದು ವಾಸ್ತು ಶಾಸ್ತ್ರ ಪ್ರಕಾರ ಸಂಪೂರ್ಣವಾಗಿ ನಿಷೇಧವಾಗಿದ್ದು, ಈಶಾನ್ಯ ದಿಕ್ಕಿನಲ್ಲಿ ಟಿವಿ ಅಥವಾ ಫ್ರಿಡ್ಜ್ ಇಟ್ಟರೆ ಮನೆಯ ಸದಸ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಕುಬೇರ ದಿಕ್ಕು ಅಥವಾ ಅಗ್ನಿ ಮೂಲೆ- ಅಡುಗೆ ಮನೆ ಎಲ್ಲಿದ್ದರೆ ಒಳ್ಳೆಯದು?
ವಾಸ್ತು ನಿಯಮಗಳ ಪ್ರಕಾರ, ರೆಫ್ರಿಜರೇಟರ್‌ನ ಬಾಗಿಲು ಸದಾ ಪೂರ್ವ ದಿಕ್ಕಿನತ್ತ ತೆರೆಯುವಂತಿರಬೇಕು. ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕಾಗಿದ್ದು, ಅಲ್ಲಿಂದ ಹರಿಯುವ ಸಕಾರಾತ್ಮಕ ಶಕ್ತಿ ಫ್ರಿಡ್ಜ್‌ನೊಳಗೆ ಸಂಗ್ರಹವಾಗಿರುವ ಆಹಾರ ಪದಾರ್ಥಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.
ಆದರೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಫ್ರಿಡ್ಜ್ ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭವಾಗಿದ್ದು, ಈ ದಿಕ್ಕಿನಲ್ಲಿ ಋಣಾತ್ಮಕ ಶಕ್ತಿ ಹೆಚ್ಚಾಗಿರುವುದರಿಂದ, ಅಲ್ಲಿ ರೆಫ್ರಿಜರೇಟರ್ ಇದ್ದರೆ ಅದರೊಳಗಿನ ಆಹಾರ ಪದಾರ್ಥಗಳ ಮೇಲೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದರ ಪರಿಣಾಮವಾಗಿ ಮನೆಯ ಸದಸ್ಯರ ಮನಸ್ಸಿನಲ್ಲಿಯೂ ನಕಾರಾತ್ಮಕತೆ ಹೆಚ್ಚಾಗಬಹುದು ಎಂದು ವಾಸ್ತು ತಜ್ಞರು ತಿಳಿಸಿದ್ದಾರೆ.
ವಾಸ್ತು ಶಾಸ್ತ್ರದ ಪ್ರಕಾರ ಟಿವಿ ಒಂದು ರೀತಿಯಲ್ಲಿ ಕನ್ನಡಿ ಪ್ರತೀಕವಾಗಿದ್ದು, ಅದು ಗಾಜಿನ ಪ್ರತಿಫಲಕವಾಗಿದೆ. ಆದ್ದರಿಂದ ಟಿವಿಯನ್ನು ಮನೆಯ ಮುಖ್ಯ ಬಾಗಿಲಿನ ನೇರ ಎದುರು ಇಡುವುದು ಸೂಕ್ತವಲ್ಲ. ಟಿವಿ ಇಡುವುದಕ್ಕೆ ಉತ್ತಮ ದಿಕ್ಕುಗಳು ಎಂದರೆ ಉತ್ತರ ಮತ್ತು ಪೂರ್ವ. ಈ ದಿಕ್ಕುಗಳಿಂದ ಸಕಾರಾತ್ಮಕ ಶಕ್ತಿ ಹರಡುವುದರಿಂದ ಮನೆಯ ವಾತಾವರಣ ಸುಧಾರಿಸುತ್ತದೆ. ದಕ್ಷಿಣ ದಿಕ್ಕನ್ನು ವಾಸ್ತುಶಾಸ್ತ್ರದಲ್ಲಿ ನಕಾರಾತ್ಮಕ ದಿಕ್ಕೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಆ ದಿಕ್ಕಿನಲ್ಲಿ ಟಿವಿಯನ್ನು ಇಟ್ಟರೆ ಉಪಕರಣ ಹಾನಿಯಾಗುವುದರ ಜೊತೆಗೆ ಮನೆಯ ಶಾಂತಿ ಹಾಗೂ ನೆಮ್ಮದಿಗೂ ಧಕ್ಕೆಯಾಗಬಹುದು ಎನ್ನಲಾಗುತ್ತದೆ.