ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನ ಮಾಡಿರುವ್ ʻ45ʼ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದ್ದು, ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ವೇಳೆ ಖುಷಿ ಹಂಚಿಕೊಂಡ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ,"ಚಿತ್ರ ಬಿಡುಗಡೆಯಾಗುತ್ತಿರುವ ಈ ಸಮಯದಲ್ಲಿ ಶಿವರಾಜಕುಮಾರ್ ಅವರಿಗೆ ವಿಶೇಷ ಧನ್ಯವಾದ ಹೇಳಬೇಕು. ಅವರಿಗೆ ಆರೋಗ್ಯದ ಸಮಸ್ಯೆ ಇದ್ದರೂ ಚಿತ್ರಕ್ಕೆ ತೊಂದರೆ ಆಗಬಾರದೆಂದು ಸಿನಿಮಾ ಕೆಲಸಗಳನ್ನು ಪೂರೈಸಿ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು" ಎಂದು ಹೇಳಿದ್ದಾರೆ. ಶಿವಣ್ಣ ಅವರ ಡೆಡಿಕೇಷನ್‌ಗೆ ಇಡೀ ತಂಡ ಋಣಿಯಾಗಿದೆ.
45 Movie: ʻಶಿವಣ್ಣ ಚಿನ್ನ ಅಲ್ಲ, ಅಪರಂಜಿʼ; ಹ್ಯಾಟ್ರಿಕ್ ಹೀರೋಗೆ ಹೊಗಳಿಕೆಯ ಸುರಿಮಳೆಗೈದ ಉಪೇಂದ್ರ
ಚಿತ್ರತಂಡಕ್ಕೆ ಧನ್ಯವಾದ ಹೇಳಿದ ರಮೇಶ್ ರೆಡ್ಡಿ
"ನಮ್ಮ ಚಿತ್ರದ ಟ್ರೇಲರ್ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಕಡೆಗಳಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಮ್ಮ ಚಿತ್ರಕ್ಕೆ ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿರುವ ಎಲ್ಲರಿಗೂ ಧನ್ಯವಾದ. ನಾನು ಸಿನಿಮಾ ನೋಡಿದ್ದೇನೆ. ನಿರ್ಮಾಪಕನಾಗಿ ನನಗೆ ಬಹಳ ಸಂತೋಷವಾಗಿದೆ. ನಮ್ಮ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರ ಸಹಕಾರ ಕೂಡ ಅಪಾರ. ಅರ್ಜುನ್ ಜನ್ಯ ಅವರು ಮೂರು ವರ್ಷಗಳಿಂದ ನಮ್ಮ ಚಿತ್ರಕ್ಕಾಗಿ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಅವರ ಶ್ರಮ ಸಾರ್ಥಕ ಆಗಿದೆ" ಎನ್ನುತ್ತಾರೆ ನಿರ್ಮಾಪಕ ರಮೇಶ್ ರೆಡ್ಡಿ.
ನನಗೆ ಮೊದಲು ಕಥೆ ಹೇಳಿದ್ದು!
"ಅರ್ಜುನ್ ಜನ್ಯ ಮೊದಲು ಕಥೆ ಹೇಳಿದ್ದು ನನಗೆ. ಅಂದು ಕಥೆ ಹೇಳಿದ್ದಕ್ಕಿಂತ ಚೆನ್ನಾಗಿ ಸಿನಿಮಾವನ್ನು ಮಾಡಿದ್ದಾರೆ. ರಮೇಶ್ ರೆಡ್ಡಿ ಅವರು ಯಾವುದೇ ಕೊರತೆ ಬಾರದ ಹಾಗೆ ಸಿನಿಮಾ ಮಾಡಿದ್ದಾರೆ. ಇದು ಕೇವಲ ನನ್ನ ಸಿನಿಮಾ ಮಾತ್ರವಲ್ಲ. ನಮ್ಮ ಸಿನಿಮಾ. ಉಪೇಂದ್ರ, ರಾಜ್ ಬಿ ಶೆಟ್ಟಿ ಅವರ ಅಭಿನಯ ಹಾಗೂ ಸತ್ಯ ಹೆಗಡೆ ಅವರ ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ. ಇದೊಂದು ಜೀವನದ ಮೌಲ್ಯವನ್ನು ತಿಳಿಸುವ ಸಿನಿಮಾ" ಎನ್ನುತ್ತಾರೆ ಶಿವರಾಜಕುಮಾರ್.
ರಮೇಶ್ ರೆಡ್ಡಿ ಅನ್ನದಾತರು
"ಡಾ. ರಾಜ್‌ಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರು ಎಂದು ಕರೆಯುತ್ತಿದ್ದರು. ಆ ಮಾತು ರಮೇಶ್ ರೆಡ್ಡಿ ಅವರಿಗೆ ನಿಜವಾಗಿಯೂ ಒಪ್ಪುತ್ತದೆ. ಅರ್ಜುನ್ ಜನ್ಯ ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಇನ್ನೂ ಶಿವಣ್ಣನಿಗೆ ಶಿವಣ್ಣ ಅವರೇ ಸರಿಸಾಟಿ. ಶಿವಣ್ಣ ಹಾಗೂ ರಾಜ್ ಬಿ ಶೆಟ್ಟಿ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ಈ ಚಿತ್ರ ಡಿಸೆಂಬರ್ 25 ರಂದು ತೆರೆಗೆ ಬರುತ್ತಿದೆ. ಎಲ್ಲರೂ ನೋಡಿ" ಎಂದರು ಉಪೇಂದ್ರ.
"ತಮ್ಮ ಮೂರು ವರ್ಷಗಳ ಶ್ರಮವನ್ನು ಈ ಸಿನಿಮಾಗೆ ಹಾಕಿರುವ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಚಿತ್ರವನ್ನು ಬಹಳ ಪ್ರೀತಿಯಿಂದ ನಿರ್ಮಾಣ ಮಾಡಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅಭಿನಂದನೆ. ಆರೋಗ್ಯದ ಸಮಸ್ಯೆ ಇದ್ದಾಗಲೂ ಚಿತ್ರವನ್ನು ಪೂರ್ಣಗೊಳಿಸಿದ ಶಿವರಾಜಕುಮಾರ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದ. ನಾನು ಎಂದಿಗೂ ಶಿವರಾಜಕುಮಾರ್ ಹಾಗೂ ಉಪೇಂದ್ರ ಅವರ ಅಭಿಮಾನಿ" ಎಂದು ನಟ ರಾಜ್ ಬಿ ಶೆಟ್ಟಿ ಹೇಳಿದರು.
ಅಂದಹಾಗೆ, ಡಿಸೆಂಬರ್ 24 ರಂದೇ 45 ಸಿನಿಮಾದ ಪ್ರೀಮಿಯರ್ ಶೋ ಗಳು ನಡೆಯಲಿದೆ. 45 ಚಿತ್ರವನ್ನು ಕರ್ನಾಟಕದಲ್ಲಿ ಕೆ.ವಿ.ಎನ್ ಸಂಸ್ಥೆ ವಿತರಣೆ ಮಾಡುತ್ತಿದೆ. ತಮಿಳುನಾಡು, ಆಂದ್ರಪ್ರದೇಶ ಹಾಗೂ ಕೇರಳದಲ್ಲೂ ಜನಪ್ರಿಯ ಸಂಸ್ಥೆಗಳು ವಿತರಣೆ ಮಾಡುತ್ತಿದೆ. ಉತ್ತರ ಭಾರತದಲ್ಲಿ ಜೀ ಸ್ಟುಡಿಯೋಸ್ ವಿತರಣೆ ಮಾಡುತ್ತಿದ್ದು, ಸಿನಿಮಾದ ಸ್ಯಾಟಲೈಟ್ ರೈಟ್ಸ್ ಕೂಡ ಅದೇ ಜೀ ಸಂಸ್ಥೆಯೇ ತೆಗೆದುಕೊಂಡಿದೆ.