ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತ್ರಿಶಾ ಜತೆ ಇಂಟಿಮೇಟ್‌ ಸೀನ್‌, ಅಭಿರಾಮಿಗೆ ಲಿಪ್‌ಲಾಕ್‌ ಮಾಡಿದ 70 ವರ್ಷದ ಕಮಲ್‌ ಹಾಸನ್‌; ಟ್ರೋಲ್‌ಗೆ ಆಹಾರವಾಯ್ತು ʼಥಗ್‌ ಲೈಫ್‌ʼ ಟ್ರೈಲರ್‌

Thug Life Movie: ಈ ವರ್ಷದ ಬಹು ನಿರೀಕ್ಷಿತ ತಮಿಳು ಚಿತ್ರ ʼಥಗ್‌ ಲೈಫ್‌ʼನ ಟ್ರೈಲರ್‌ ರಿಲೀಸ್‌ ಆಗಿದೆ. ಕಮಲ್‌ ಹಾಸನ್‌ ಮತ್ತು ಮಣಿ ರತ್ನಂ ಅನೇಕ ವರ್ಷಗಳ ಬಳಿಕ ಮತ್ತೆ ಒಂದಾಗಿರುವ ಕಾರಣಕ್ಕೆ ಕುತೂಹಲ ಕೆರಳಿದ ಈ ಚಿತ್ರ ಇದೀಗ ಟ್ರೋಲಿಗೆ ಆಹಾರವಾಗುತ್ತಿದೆ. ತಮ್ಮ ಮಗಳ ವಯಸ್ಸಿನ ನಟಿಯರೊಂದಿಗೆ ಕಮಲ್‌ ತೆರೆ ರೊಮ್ಯಾನ್ಸ್‌ ಮಾಡಿದ್ದೇ ಇದಕ್ಕೆ ಕಾರಣ.

ನಟಿಯರ ಜತೆ ಕಮಲ್‌ ರೊಮ್ಯಾನ್ಸ್‌; ಟ್ರೋಲ್‌ಗೆ ಆಹಾರವಾಯ್ತು ʼಥಗ್‌ ಲೈಫ್‌ʼ

Profile Ramesh B May 18, 2025 8:05 PM

ಚೆನ್ನೈ: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ತಮಿಳಿನ ʼಥಗ್‌ ಲೈಫ್‌ʼ (Thug Life Movie) ಕೂಡ ಒಂದು. ಕಾಲಿವುಡ್‌ನ ಘಟಾನುಘಟಿಗಳಾದ ಜನಪ್ರಿಯ ನಿರ್ದೇಶಕ ಮಣಿ ರತ್ನಂ (Mani Ratnam) ಮತ್ತು ಉಳಗ ನಾಯಗನ್‌ ಕಮಲ್‌ ಹಾಸನ್‌ (Kamal Haasan) ಅನೇಕ ವರ್ಷಗಳ ಬಳಿಕ ಮತ್ತೆ ಒಂದಾದ ಸಿನಿಮಾ ಇದು. ಈ ಕಾರಣಕ್ಕೆ ʼಥಗ್‌ ಲೈಫ್‌ʼ ಆರಂಭದಿಂದಲೇ ಸದ್ದು ಮಾಡುತ್ತಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಜೂ. 5ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಅದಕ್ಕೆ ಪೂರ್ವಭಾವಿಯಾಗಿ ಚಿತ್ರತಂಡ ಮೇ 17ರಂದು ಟ್ರೈಲರ್‌ ರಿಲೀಸ್‌ ಮಾಡಿದೆ. ಇದೀಗ ಟ್ರೈಲರ್‌ ಗಮನ ಸೆಳೆಯುವುದರ ಜತೆಗೆ ಟ್ರೋಲಿಗರಿಗೆ ಆಹಾರವೂ ಆಗಿದೆ. 70 ವರ್ಷದ ಕಮಲ್‌ ಹಾಸನ್‌ ಕಿರಿಯ ನಟಿಯರೊಂದಿಗೆ ಇಂಟಿಮೇಟ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಅದನ್ನೇ ಮುಂದಿಟ್ಟುಕೊಂಡು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.

ಕಮಲ್‌ ಹಾಸನ್‌ ತಮ್ಮ ಮಗಳ ವಯಸ್ಸಿನ ತ್ರಿಶಾ ಜತೆ ಆಪ್ತ ದೃಶ್ಯದಲ್ಲಿ ಅಭಿನಯಿಸಿರುವುದು ಟ್ರೈಲರ್‌ನಲ್ಲಿ ಕಂಡು ಬಂದಿದೆ. ಜತೆಗೆ ಅಭಿರಾಮಿ ಅವರ ತುಟಿಗೆ ತುಟಿ ಒತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಕಮಲ್‌ ಹಾಸನ್‌ಗೆ ಇಂತಹ ಇಂಟಿಮೇಟ್‌ ಸೀನ್‌ ಬೇಕಿತ್ತಾ? ಎಂದು ಹಲವರು ಪ್ರಶ್ನಿಸಿದ್ದಾರೆ.

ʼಥಗ್‌ ಲೈಫ್‌ʼ ಚಿತ್ರದ ಟ್ರೈಲರ್‌:



ಮಣಿ ರತ್ನಂ ಮತ್ತು ಕಮಲ್‌ ಹಾಸನ್‌ ಕಾಂಬಿನೇಷನ್‌ ಕಾರಣಕ್ಕೆ ಅವರ ಅಭಿಮಾನಿಗಳು ʼಥಗ್ಸ್‌ ಲೈಫ್‌ʼ ಚಿತ್ರದ ಟ್ರೈಲರ್‌ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾದು ನಿಂತಿದ್ದರು. ಆದರೆ ಟ್ರೈಲರ್‌ ರಿಲೀಸ್‌ ಆದ ಬಳಿಕ ಟೀಕೆ ಕೇಳಿ ಬರುತ್ತಿದೆ. ಅದರಲ್ಲಿಯೂ ಕಮಲ್‌ ಹಾಸನ್‌ ಅತಿ ಎನ್ನುವಷ್ಟು ರೊಮ್ಯಾನ್ಸ್‌ ಮಾಡಿದ್ದಾರೆ ಎನ್ನುವುದು ಹಲವರ ಆಕ್ಷೇಪ. ತ್ರಿಶಾ ಜತೆ ಕಮಲ್‌ ಇಂಟಿಮೇಟ್‌ ಸೀನಲ್ಲಿ ಕಾಣಿಸಿಕೊಂಡಿರುವುದು ಮತ್ತು ಅಭಿರಾಮಿಗೆ ಚುಂಬಿಸುತ್ತಿರುವ ದೃಶ್ಯಗಳು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ʼʼದಯವಿಟ್ಟು ಬೇಡ ʼʼ ಎನ್ನುವ ಕ್ಯಾಪ್ಶನ್‌ನೊಂದಿಗೆ ಪೋಸ್ಟ್‌ ಹಂಚಿಕೊಳ್ಳಲಾಗುತ್ತಿದೆ. ಕಮಲ್‌ ಹಾಸನ್‌ಗೆ ಈಗ 70 ವರ್ಷವಾದರೆ ತ್ರಿಶಾ ಅವರಿಗೆ 42. ತಮ್ಮ ಅರ್ಧ ವಯಸ್ಸಿನ ನಟಿಯೊಂದಿಗೆ ಇಂಟಿಮೇಟ್‌ ಸೀನ್‌ನಲ್ಲಿ ಕಾಣಿಸಿಕೊಳ್ಳುವುದು ಎಷ್ಟು ಸರಿ ಎನ್ನುವುದು ಹಲವರ ಪ್ರಶ್ನೆ.

ʼʼಕಮಲ್‌ ಹಾಸನ್‌ ಅವರ ಪುತ್ರಿ ಶುತ್ರಿ ಹಾಸನ್‌ಗಿಂತ ತ್ರಿಶಾ ಕೇವಲ 3 ವರ್ಷ ದೊಡ್ಡವರಷ್ಟೇ. ಅಂದರೆ ಮಗಳ ವಯಸ್ಸುʼʼ ಒಂದು ಒಬ್ಬರು ಹೇಳಿದ್ದಾರೆ. ಕಮಲ್‌ ಲಿಪ್‌ಲಾಕ್‌ ಮಾಡಿರುವ ಮತ್ತೊಬ್ಬ ನಟಿ ಅಭಿರಾಮಿಗೆ ಈಗ 41 ವಯಸ್ಸು. ʼʼಸುಮಾರು 30 ವರ್ಷಗಳ ವ್ಯತ್ಯಾಸ ಹೊಂದಿರುವ ಕಮಲ್‌ ಮತ್ತು ಅಭಿರಾಮಿ ಲಿಪ್‌ಲಾಕ್‌ ಮಾಡಿದ್ದಾರೆ. ಆದಾಗ್ಯೂ ಈ ಚಿತ್ರದಲ್ಲಿ ಅವರ ವಯಸ್ಸಿನ ಅಂತರ ಗೊತ್ತಾಗಲಾರದು ಎಂದು ಭಾವಿಸುತ್ತೇನೆʼʼ ಎಂಬುದಾಗಿ ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಇನ್ನು ಕೆಲವರು ಕಮಲ್‌ ಹಾಸನ್‌ ನೆರವಿಗೆ ಧಾವಿಸಿದ್ದಾರೆ. ʼʼಇದೊಂದು ಪಾತ್ರವಷ್ಟೇ. ತೆರೆ ಮೇಲಿನ ದೃಶ್ಯ ಅಷ್ಟಕ್ಕೇ ಸೀಮಿತವಾಗಬೇಕು. ಅದನ್ನು ವೈಯಕ್ತಿನ ಜೀವನಕ್ಕೆ ಎಳೆಯಬಾರದುʼʼ ಎಂದು ಕಮಲ್‌ ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ. ʼʼಕಮಲ್‌ ಮತ್ತು ಅಭಿರಾಮಿ ಗಂಡ-ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆಗೆ ಅಗತ್ಯವೆನಿಸಿದ್ದರಿಂದ ಅವರು ಇಂತಹ ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹ ಚಿಕ್ಕ ದೃಶ್ಯವನ್ನು ವೈಭವೀಕರಿಸುವುದು ಬೇಕಿಲ್ಲʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಇದೀಗ ಟ್ರೈಲರ್‌ಗಿಂತ ರೊಮ್ಯಾಂಟಿಕ್‌ ದೃಶ್ಯಗಳ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆಯುತ್ತಿದೆ.

ಬಹು ತಾರಾಗಣ

ʼಥಗ್ಸ್‌ ಲೈಫ್‌ʼ ಚಿತ್ರದಲ್ಲಿ ಕಲಮ್‌ ಹಾಸನ್‌, ತ್ರಿಶಾ, ಅಭಿರಾಮಿ ಜತೆಗೆ ಸಿಂಬು, ಸಾನ್ಯಾ ಮಲ್ಹೋತ್ರಾ, ಅಶೋಕ್‌ ಸೆಲ್ವನ್‌, ಐಶ್ವರ್ಯಾ ಲಕ್ಷ್ಮೀ, ಜೋಜು ಜಾರ್ಜ್‌, ನಾಸರ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಇದು ತೆರೆಗೆ ಬರಲಿದೆ.