ಟಾಲಿವುಡ್‌ನ ಸ್ಟಾರ್ ನಟ ವೆಂಕಟೇಶ್ ಹಾಗೂ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ (Trivikram Shirinivas) ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಸಿನಿಮಾ ‘ಆದರ್ಶ ಕುಟುಂಬಂ – ಹೌಸ್ ನಂ: 47’ ಇದೀಗ ಒಟಿಟಿ (OTT) ಅಂಗಳಕ್ಕೆ ಬರಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ಸಿನಿಮಾ ಡಿಜಿಟಲ್ (Digital) ವೇದಿಕೆಯಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.
ನವೆಂಬರ್ 27ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಲಭ್ಯ!
123 ತೆಲುಗು ವರದಿಯ ಪ್ರಕಾರ, ಅಕ್ಟೋಬರ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಆದರ್ಶ ಕುಟುಂಬಂ’ ಸಿನಿಮಾ ನವೆಂಬರ್ 27ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ.
ವೆಂಕಟೇಶ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಮೊದಲ ಬಾರಿಗೆ ನಿರ್ದೇಶಕ-ನಟರಾಗಿ ಒಂದಾಗಿರುವ ಸಿನಿಮಾ ಇದಾಗಿದೆ. ಈ ಹಿಂದೆ ತ್ರಿವಿಕ್ರಮ್ ಅವರು ವೆಂಕಟೇಶ್ ಅಭಿನಯದ ‘ನುವ್ವು ನಾಕು ನಚ್ಚಾವ್’ ಮತ್ತು ‘ಮಲ್ಲೀಶ್ವರಿ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ: Bigg Boss Kannada 13: ಇಡೀ ಸೀಸನ್ ನಾಮಿನೇಟ್ ಆಗೋದು ಯಾರು? ಬಿಗ್ ಟ್ವಿಸ್ಟ್!
ತಾರಾಬಳಗದಲ್ಲಿ ಯಾರೆಲ್ಲ ಇದ್ದಾರೆ?
ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ನಿವೇತಾ ಪೇತುರಾಜ್, ನರ ರೋಹಿತ್, ರಾವ್ ರಮೇಶ್, ವೆನ್ನೆಲ ಕಿಶೋರ್, ಸತ್ಯ, ಬ್ರಹ್ಮಾಜಿ ಹಾಗೂ ರಾಜಾ ಪ್ರಜ್ವಲ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಹಾರಿಕಾ ಆ್ಯಂಡ್ ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ರಾಧಾಕೃಷ್ಣ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಎಸ್. ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಸಿನಿಮಾ!
ವೆಂಕಟೇಶ್ ಮತ್ತು ತ್ರಿವಿಕ್ರಮ್ ಕಾಂಬಿನೇಷನ್ ಎಂಬ ಕಾರಣಕ್ಕೆ ‘ಆದರ್ಶ ಕುಟುಂಬಂ’ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ಚಿತ್ರಮಂದಿರಗಳಲ್ಲಿ ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ವರದಿಗಳ ಪ್ರಕಾರ, ಚಿತ್ರದ ನಿರ್ಮಾಣ ಮತ್ತು ಪ್ರಚಾರಕ್ಕಾಗಿ ಸುಮಾರು 110 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೆ ಟ್ರೇಡ್ ಅಂದಾಜಿನ ಪ್ರಕಾರ, ಸಿನಿಮಾ ವಿಶ್ವಾದ್ಯಂತ ಸುಮಾರು 76 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
‘ಆದರ್ಶ ಕುಟುಂಬಂ’ ಕಥೆಯೇನು?
ಈ ಸಿನಿಮಾದಲ್ಲಿ ವೆಂಕಟೇಶ್ ಅವರು ಚಿಟ್ಟಿಬಾಬು ಎಂಬ ಮಧ್ಯಮ ವರ್ಗದ ಖಾಸಗಿ ಉದ್ಯೋಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುಟುಂಬದ ಆರ್ಥಿಕ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಚಿಟ್ಟಿಬಾಬು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿರುತ್ತಾನೆ.
ಆತನ ಪತ್ನಿ ಸ್ವರ್ಣ (ಶ್ರೀನಿಧಿ ಶೆಟ್ಟಿ) ಚಿಟ್‌ಫಂಡ್ ವ್ಯವಹಾರದಲ್ಲಿ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕುತ್ತಾಳೆ. ಮತ್ತೊಂದೆಡೆ, ಮಗಳು ಸಂಪೂರ್ಣಾಳ ವೈಯಕ್ತಿಕ ಸಂಬಂಧಗಳ ಸಮಸ್ಯೆಗಳು ಹಾಗೂ ಮಗ ಶರ್ವನ ಆರೋಗ್ಯ ಸಮಸ್ಯೆಗಳು ಕುಟುಂಬದ ಚಿಂತೆಯನ್ನು ಹೆಚ್ಚಿಸುತ್ತವೆ.
ಇದರ ನಡುವೆ ಚಿಟ್ಟಿಬಾಬು ತನ್ನ ಉದ್ಯೋಗವನ್ನೂ ಕಳೆದುಕೊಳ್ಳುತ್ತಾನೆ. ಹೀಗೆ ಒಂದರ ಹಿಂದೆ ಒಂದರಂತೆ ಎದುರಾಗುವ ಸಮಸ್ಯೆಗಳನ್ನು ಆತ ಹೇಗೆ ಎದುರಿಸುತ್ತಾನೆ? ತನ್ನ ಕುಟುಂಬವನ್ನು ಸಂಕಷ್ಟಗಳಿಂದ ಹೇಗೆ ಪಾರು ಮಾಡುತ್ತಾನೆ? ಎಂಬುದೇ ಚಿತ್ರದ ಕಥಾಹಂದರ.
ಇದನ್ನೂ ಓದಿ: Gowri Putra Serial: ವೈರಿಯ ಮನೆಯ ಮಗಳನ್ನೇ ಮದುವೆಯಾಗಿ ಇಕ್ಕಟ್ಟಿಗೆ ಸಿಲುಕಿದ್ದಾನೆ ಕಾರ್ತಿಕ್! ಯಾರು ಈ ಸೂರಪ್ಪ?
ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಪಡೆಯದ ‘ಆದರ್ಶ ಕುಟುಂಬಂ’ ಒಟಿಟಿಯಲ್ಲಿ ಪ್ರೇಕ್ಷಕರಿಂದ ಯಾವ ರೀತಿಯ ಸ್ವಾಗತ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.