Aamir Khan-Gauri Spratt: ಸಂಬಂಧ ದೃಢಪಡಿಸಿದ ಬಳಿಕ ಮೊದಲ ಬಾರಿ ಜತೆಯಾಗಿ ಕಾಣಿಸಿಕೊಂಡ ಆಮೀರ್ ಖಾನ್-ಗೌರಿ ಸ್ಪ್ರಾಟ್
Aamir Khan: ಇತ್ತೀಚೆಗಷ್ಟೇ 60ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಇದೀಗ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಮತ್ತು ಆಮೀರ್ ಖಾನ್ ಒಂದೂವರೆ ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದು, ಇದೀಗ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದಾರೆ.
ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್. -
Ramesh B
Mar 19, 2025 6:01 PM
ಮುಂಬೈ: ಇತ್ತೀಚೆಗಷ್ಟೇ 60ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ (Aamir Khan) ಇದೀಗ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರು ಮೂಲದ ಮಹಿಳೆ ಗೌರಿ ಸ್ಪ್ರಾಟ್ (Gauri Spratt) ಜತೆ ಒಂದೂವರೆ ವರ್ಷದಿಂದ ಡೇಟಿಂಗ್ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದೀಗ ಇವರಿಬ್ಬರು ಜತೆಯಾಗಿ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮಂಗಳವಾರ (ಮಾ. 19) ಮುಂಬೈಯ ಎಕ್ಸಲ್ ಕಚೇರಿ (Excel office)ಯಿಂದ ಹೊರಬರುತ್ತಿರುವ ಈ ಜೋಡಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಕಚೇರಿಯಿಂದ ಮೊದಲು ಹೊರಬಂದ ಆಮೀರ್ ಖಾನ್ ಕ್ಯಾಮೆರಾದತ್ತ ನೋಡಿ ಕೈಬೀಸಿದ್ದಾರೆ. ಬಳಿಕ ಗೌರಿಗಾಗಿ ಕಾದಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಗೌರಿ ಹೊರ ಬಂದಿದ್ದು, ಆಮೀರ್ ಖಾನ್ ಅವರ ಕೈ ಹಿಡಿದು ಕಾರು ಹತ್ತಿಸಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಆಮೀರ್ ಖಾನ್-ಗೌರಿ ಸ್ಪ್ರಾಟ್ ಜತೆಯಾಗಿ ಕಾಣಿಕೊಂಡ ವಿಡಿಯೊ ಇಲ್ಲಿದೆ:
ಮಾ. 13ರಂದು ಮಾಧ್ಯಮದವರ ಜತೆ ಮಾತನಾಡಿದ ಗೌರಿ ಅವರು ಆಮೀರ್ ಖಾನ್‌ನನ್ನು ಯಾಕಾಗಿ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಎನ್ನುವ ಪ್ರಶ್ನೆಗೆ ಉತ್ತರಿಸಿದ್ದರು. ʼʼಕಾಳಜಿ ವಹಿಸುವ ಉತ್ತಮ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದೆ. ಆಮೀರ್ ಖಾನ್ ಅವರಲ್ಲಿ ಈ ಎಲ್ಲ ಗುಣಗಳಿತ್ತು. ಹೀಗಾಗಿ ಅವರನ್ನು ಸಂಗಾತಿಯನ್ನಾಗಿ ಆರಿಸಿದೆʼʼ ಎಂದು ತಿಳಿಸಿದ್ದರು. ಇದೇ ಮೊದಲ ಬಾರಿ ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಜತೆಯಾಗಿ ಕಾಣಿಸಿಕೊಂಡಿರುವ ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಸುದ್ದಿಯನ್ನೂ ಓದಿ: Aamir Khan: 60ನೇ ವಯಸ್ಸಿನಲ್ಲಿ ಮತ್ತೊಮ್ಮೆ ಲವ್ವಲ್ಲಿ ಬಿದ್ದ ಆಮೀರ್ ಖಾನ್; ಬೆಂಗಳೂರು ಮಹಿಳೆಯೊಂದಿಗೆ ಡೇಟಿಂಗ್
ಆಮೀರ್ ಖಾನ್ ಮತ್ತು ಗೌರಿ 25 ವರ್ಷಗಳ ಹಿಂದೆಯೇ ಪರಿಚಿತರಾಗಿದ್ದರು. ಆದರೆ ಬಳಿಕ ಇವರು ಯಾವುದೇ ಸಂಪರ್ಕದಲ್ಲಿರಲಿಲ್ಲ. 2 ವರ್ಷಗಳ ಬಳಿಕ ಮತ್ತೆ ಭೇಟಿಯಾಗಿದ್ದ ಇವರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ʼʼನನಗಾಗಿ ಸಮಯ ಮೀಸಲಿಡುವ ಸಂಗಾತಿಗಾಗಿ ನಾನು ಹುಡುಕಾಡುತ್ತಿದ್ದೆ. ಗೌರಿ ಸಿಕ್ಕದರು. ಇವರು ನನ್ನ ಮನಸ್ಥಿತಿಗೆ ಹೊಂದಾಣಿಕೆಯಾಗುತ್ತಾರೆ ಎನಿಸಿತು. ಹೀಗೆ ನಮ್ಮ ನಡುವೆ ಉತ್ತಮ ಬಾಂಧವ್ಯ ಮೂಡಿತುʼʼ ಎಂದು ಆಮೀರ್ ಖಾನ್ ತಿಳಿಸಿದ್ದರು.
ಯಾರು ಈ ಗೌರಿ?
ಗೌರಿ ಮೂಲತಃ ಬೆಂಗಳೂರಿನವರು. ಆಮೀರ್ ಖಾನ್ ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ 6 ವರ್ಷದ ಮಗನಿದ್ದಾನೆ. ಗೌರಿ ಸ್ಪ್ರಾಟ್ ಆಂಗ್ಲೋ ಇಂಡಿಯನ್. ಇವರ ತಂದೆ ತಮಿಳು-ಬ್ರಿಟಿಷ್, ಇವರ ತಾಯಿ ಪಂಜಾಬಿ ಐರೀಷ್. ಸದ್ಯ ಅವರು ಮುಂಬೈಯಲ್ಲಿ ಬಿಬ್ಲಂಟ್ ಸಲೂನ್ ನಡೆಸುತ್ತಿದ್ದಾರೆ.
ಆಮೀರ್ ಖಾನ್ ಮೊದಲು ರೀನಾ ದತ್ತ ಅವರನ್ನು ವಿವಾಹವಾದರು. 1986ರಲ್ಲಿ ಆರಂಭವಾದ ಈ ಸಂಬಂಧ 2002ರಲ್ಲಿ ಕೊನೆಗೊಂಡಿತ್ತು. ಆ ಬಳಿಕ ಬೆಂಗಳೂರು ಮೂಲದ ಕಿರಣ್ ರಾವ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2005ರಲ್ಲಿ ನಡೆದ ಮದುವೆ 2021ರಲ್ಲಿ ಕೊನೆಗೊಂಡಿತ್ತು.
ಗೌರಿಯನ್ನು ಮದುವೆಯಾಗ್ತೀರಾ ಎನ್ನುವ ಪ್ರಶ್ನೆಗೆ ಇತ್ತೀಚೆಗೆ ಉತ್ತರಿಸಿದ್ದ ಆಮೀರ್ ಖಾನ್, ʼʼ60ನೇ ವಯಸ್ಸಿನಲ್ಲಿ ಮದುವೆಯಾಗುತ್ತೇನಾ ಎನ್ನುವುದು ತಿಳಿದಿಲ್ಲ. ಅದಾಗ್ಯೂ ನನ್ನ ಮಕ್ಕಳು ಸಂತಸದಿಂದಿದ್ದಾರೆ. ಅಲ್ಲದೆ ಈಗಲೂ ಮಾಜಿ ಪತ್ನಿಯರ ಜತೆ ಉತ್ತಮ ಸಂಬಂಧ ಕಾಯ್ದುಕೊಂಡಿದ್ದೇನೆ. ಈ ಗ್ಗೆ ಸಮಾಧಾನವಿದೆʼʼ ಎಂದಿದ್ದರು.